‘ಯೋಗದಾ’: ನವರಾತ್ರಿಯಲ್ಲಿ ಓದಲೇಬೇಕಾದ ಶ್ರೀಚಕ್ರ ಉಪಾಸನೆಯ ಕಾದಂಬರಿ!

By Suvarna NewsFirst Published Sep 26, 2024, 12:25 PM IST
Highlights

‘ಯೋಗದಾ’ ಕಾದಂಬರಿಯು ಶ್ರೀಚಕ್ರ ಪೂಜೆ ಮತ್ತು ಒಂದು ಕುಟುಂಬದ ಸಾಮಾನ್ಯ ಬದುಕಿನ ಸುತ್ತ ಹೆಣೆಯಲ್ಪಟ್ಟಿದೆ. ದೇವಿ ಮಹಾತ್ಮೆ ಅಥವಾ ಪವಾಡಗಳ ಬದಲು, ಶ್ರದ್ಧೆ ಮತ್ತು ಭಕ್ತಿಯ ಜೀವನವನ್ನು ಕೇಂದ್ರೀಕರಿಸುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಈ ಕಾದಂಬರಿಯು ಓದುಗರಿಗೆ ಉತ್ತಮ ಆಯ್ಕೆಯಾಗಿದೆ.

 -ರಜನಿ.ಎಂ.ಜಿ.  ಮೆಟ್ರೋ ಬ್ಯೂರೋ ಹೆಡ್​​. ಏಷ್ಯಾನೆಟ್​​​ ಸುವರ್ಣ ನ್ಯೂಸ್​

ಯೋಗದಾ  ಒಂದು ವಿಶಿಷ್ಠ ಕಾದಂಬರಿ. ಶ್ರೀಚಕ್ರ ಪೂಜೆ, ದೇವಿ ಸಪ್ತಶತಿ, ಲಲಿತಾ ಸಹಸ್ರನಾಮದಂಥ ವಿಷಯಗಳಲ್ಲೇ ಸುತ್ತುವ ಈ ಕಾದಂಬರಿ ದೇವಿ ಮಹಾತ್ಮೆ ಹೇಳುವ ಪುಸ್ತಕವಲ್ಲ. ದೇವಿಯ ಪವಾಡಗಳಿಲ್ಲ, ದೈವೀಶಕ್ತಿಯ ವೈಭವೀಕರಣವೂ ಇಲ್ಲ. ಬದಲಾಗಿ ದೇವಿ ಪೂಜೆಯಲ್ಲಿ ನಂಬಿಕೆ ಇಟ್ಟ ಕುಟುಂಬದ ಸಾಮಾನ್ಯ ಬದುಕು,  ಶ್ರದ್ಧೆ, ಭಕ್ತಿ ನಂಬಿಕೆಯೇ ಜೀವಾಳವಾಗಿಸಿಕೊಂಡವರ ಶಾಂತಿಯುತ ಜೀವನವೇ ವಸ್ತು. 

ತಾಂತ್ರಿಕ ಪೂಜೆ ಎಂದರೆ ವಾಮಾಚಾರ, ದುಷ್ಟಶಕ್ತಿಗಳ ಅರಾಧನೆಗಳೇ ರಾರಾಜಿಸುವಾಗ ‘ಯೋಗದಾ’ ಕೌಟುಂಬಿಕ ವಿದ್ಯಮಾನಗಳ ಜೊತೆಜೊತೆಯಲ್ಲೆ ಸಾಗುವ ಶ್ರೀಚಕ್ರದ ಉಪಾಸನೆ ಸಾತ್ವಿಕ ಜೀವನ ಶೈಲಿಯನ್ನು ಕಟ್ಟಿಕೊಟ್ಟಿದೆ. ಈಗಿನ ಕಾಲದಲ್ಲೂ ಅಗ್ನಿಹೋತ್ರ ನಿರ್ವಹಿಸುವ ಕುಟುಂಬಗಳು, ಆ ಮನೆಯ ಹೆಣ್ಣುಮಕ್ಕಳ ಕಷ್ಟಗಳನ್ನು ಇಂದಿನ ಕಾಲಘಟ್ಟದಲ್ಲೇ ಇಟ್ಟು ತೋರಿಸಿರುವುದು ವಿಶೇಷವೆನಿಸಿತು.

Latest Videos

ದಸರೆಯ ಹಿಂದಿನ ದಿನ ಅಮಾವಸ್ಯೆಯಿಂದ  ಪ್ರಾರಂಭವಾಗುವ ಕಾದಂಬರಿ ನವರಾತ್ರಿ ಪೂರೈಸಿ ವಿಜಯದಶಮಿಗೆ ಕೊನೆಯಾಗುತ್ತದೆ. ಇನ್ನೊಂದು ಅರ್ಥದಲ್ಲಿ ದುಗುಡದಿಂದ ಶುರುವಾಗಿ ಹೊಸ ಅರಿವಿನ ನೆಮ್ಮದಿಯಲ್ಲಿ ಕೊನೆಯಾಗುತ್ತದೆ. 

ಶ್ರೀಚಕ್ರ ಪೂಜೆಯ ವಾರಸುದಾರಿಕೆ ಕುರಿತು ‘ಅಯ್ಯೋ, ನಾವೇನೋ ಮಾಡುತ್ತೇವೆ, ಮಕ್ಕಳು ಮಾಡುತ್ತಾರಾ?’ ‘ಗಂಡು ಮಕ್ಕಳಿಲ್ಲ, ಮುಂದೆ ಯಾರು ನಡೆಸುತ್ತಾರೆ?’ ಅನ್ನೋ ಪ್ರಶ್ನೆಗಳಿಗೆ ಕಾದಂಬರಿ ಕೊಟ್ಟ ಉತ್ತರ ಸಮಂಜಸವಾಗಿದೆ. ಕೇವಲ ಶ್ರೀಚಕ್ರದ ವಾರಸುದಾರಿಕೆಗೆ ಮಾತ್ರವಲ್ಲ, ಪ್ರತಿ ಜವಾಬ್ಧಾರಿಗೂ ಅದೇ ಉತ್ತರವನ್ನು ಅನ್ವಯಿಸಿಕೊಳ್ಳಬಹುದು.

ಕಣಿವೆಯ ಹಾಡು: ಹಳ್ಳಿ-ನಗರಗಳ ನಡುವೆ ಮೊಮ್ಮಗಳ ಕನಸಿನ ಹಾರಾಟ, ನೋಡಲೇಬೇಕಾದ ನಾಟಕ

ರೋಹಿತ್ ಚಕ್ರತೀರ್ಥ ಅವರು ಪುಸ್ತಕದ ಬೆನ್ನುಡಿಯಲ್ಲಿ ಗ್ರಹಿಸಿದಂತೆ ಶ್ರೀಚಕ್ರದ ಪೂಜೆ-ಉಪಾಸನೆಗಳು ಹರಿಯುವುದು ವಂಶವೃಕ್ಷದ ದಾರಿಯಲ್ಲಲ್ಲ; ಯಾರಿಗೆ ಅದರಲ್ಲಿ ಶ್ರದ್ಧೆ, ನಂಬಿಕೆ, ವಿಶ್ವಾಸ, ಸಮರ್ಪಣಭಾವಗಳಿರುತ್ತವೋ ಅಂಥವರಿಗೆ ಸೂಕ್ತ ಕಾಲದಲ್ಲಿ ಶ್ರೀಚಕ್ರಯಂತ್ರ ತಾನೇ ತಾನಾಗಿ ಮನೆಸೇರುತ್ತದೆಂಬ ಉದಾತ್ತ ಕಲ್ಪನೆಯೊಂದಿಗೆ ಕಥೆ ಸಾಗುತ್ತದೆ. ಭಾರತೀಯ ಸಂದರ್ಭದಲ್ಲಿ "ಪರಂಪರಾನುಗತ" ಎಂಬುದರ ಅರ್ಥವೇ ಹಾಗೆ. ಇಲ್ಲಿ ವಿದ್ಯೆ, ಪದವಿಗಳು ರಾಜಪದವಿಯನ್ನೂ ಒಳಗೊಂಡು ಯಾವೊಂದೂ ಅನುವಂಶೀಯವಲ್ಲ. ಯೋಗ, ಯೋಗ್ಯತೆಗಳಿದ್ದಾಗಷ್ಟೇ ಶ್ರೀಚಕ್ರವನ್ನು ಪೂಜಿಸುವ ಅರ್ಹತೆಯೊಂದು ಕೈಗೂಡುತ್ತೆ. ಇಂಥದೊಂದು ವಸ್ತುವನ್ನು ಕಾದಂಬರಿಗೆ ಆರಿಸಿಕೊಂಡ ಲೇಖಕಿ ಕೆ.ಎನ್​ ವಿದ್ಯಾ​ ಬಗ್ಗೆಯೇ ನನಗೆ ಕುತೂಹಲವಿದೆ. ಬಹುಶಃ ಅವರ ಊರಿನ ಹತ್ತಿರ ಶ್ರೀಚಕ್ರ ಪೂಜಿಸುವ ಸೋಂದಾ ಸ್ವರ್ಣವಲ್ಲಿ ಮಠ ಇರುವುದೂ ಇದಕ್ಕೆ ಕಾರಣವಿರಬಹುದು.  ಶ್ರೀಚಕ್ರ ಪೂಜೆಯ ಕುರಿತು ಇರಬಹುದಾದ ಕೆಲವು ತಪ್ಪು ಕಲ್ಪನೆ ನೀಗಿಸಲೆಂದೇ ಕಾದಂಬರಿ ಬರೆದಂತಿದೆ. 

‘ಯೋಗದಾ’ ಉಪದೇಶ, ಉಪಾಸನೆ, ಉತ್ತರದಾಯಿತ್ವದ ಅನಂತ ಕಥೆ ಎಂದು ಶೀರ್ಷಿಕೆಯಲ್ಲೇ ಹೇಳಿಕೊಂಡಿದೆ. ದೇವರು, ಧಾರ್ಮಿಕತೆಯ ಬಗ್ಗೆ  ಆಸಕ್ತಿ ಇದ್ದವರಿಗೆ ನವರಾತ್ರಿಯಲ್ಲಿ ಓದಲು ಹೇಳಿಮಾಡಿಸಿದ ಕಾದಂಬರಿ. 

ಪುಸ್ತಕ: ಯೋಗದಾ (ಕಾದಂಬರಿ)
ಲೇಖಕಿ: ವಿದ್ಯಾ ಕೆ.ಎನ್​​
ಪ್ರಕಾಶನ - ಅಯೋಧ್ಯಾ
ಪುಟಗಳು: 196, ಬೆಲೆ: 230/-

click me!