ತೆಲುಗು ಸಿನಿಮಾ ರಂಗದ ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅವರು ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತರಾಗಿದ್ದರು. ವಿಚಾರಣೆ ವೇಳೆ ತಾನು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಂತ್ರಸ್ತೆ ನೀಡಿರುವ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ತೆಲುಗು ಸಿನಿಮಾ ರಂಗದ ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ತಾನು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದು, ಹೌದು ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ತೆಲುಗಿನ ಶೇಕ್ ಜಾನಿ ಬಾಷಾ ಅಲಿಯಾಸ್ ಜಾನಿ ಮಾಸ್ಟರ್ ತನ್ನ ಕಿರಿಯ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ ಎಂದು ಅಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
42 ವರ್ಷದ ಜಾನಿ ಮಾಸ್ಟರ್ ಅವರನ್ನು ಪೋಸ್ಕೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದರು. ಈಗ 21 ವರ್ಷದವಳಾಗಿರುವ ಸಂತ್ರಸ್ತೆ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ನೀಡಿದ್ದ ವೇಳೆ 16 ವರ್ಷದ ಅಪ್ರಾಪ್ತೆಯಾಗಿದ್ದಳು. 2017ರಲ್ಲಿ ಈಕೆ ಡಾನ್ಸ್ ರಿಯಾಲಿಟಿ ಶೋದಲ್ಲಿ ಜಾನಿ ಮಾಸ್ಟರ್‌ರನ್ನು ಭೇಟಿಯಾಗಿದ್ದಳು. ಇದಾದ ನಂತರ ಆಕೆಗೆ ಜಾನಿ ಮಾಸ್ಟರ್ ಆಕೆಗೆ ಅಸಿಸ್ಟೆಂಟ್ ಕೊರಿಯೋಗ್ರಾಫರ್ ಕೆಲಸ ನೀಡಿದ್ದರು.
ಇತ್ತ ಆಕೆ ಪೊಲೀಸರಿಗೆ ಹಾಗೂ ತೆಲಂಗಾಣದ ರಾಜ್ಯ ಮಹಿಳಾ ಆಯೋಗಕ್ಕೆ ನೀಡಿದ ದೂರಿನಲ್ಲಿ ಆಕೆ, ಕಳೆದ ಆರು ವರ್ಷಗಳಿಂದಲೂ ಜಾನಿ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಔಟ್‌ಡೋರ್ ಶೂಟ್‌ಗಾಗಿ ಬೇರೆ ಬೇರೆ ಸ್ಥಳಗಳಲ್ಲಿ ಇದ್ದಾಗ ಹಲ್ಲೆ ನಡೆದಿದೆ. ಹಾಗೂ ಆತ ಹೈದರಾಬಾದ್‌ನಲ್ಲಿದ್ದ ಸಂತ್ರಸ್ತೆಯ ಮನೆಗೂ ಬಂದಿದ್ದ. ಮುಂಬೈನಲ್ಲಿ 2020ರಲ್ಲಿ ಹೊಟೇಲೊಂದರಲ್ಲಿ ಕೆಲಸದ ನಿಮಿತ್ತ ವಾಸ್ತವ್ಯ ಹೂಡಿದಾಗಿನಿಂದ ಈ ಕಿರುಕುಳ ಆರಂಭವಾಯ್ತು. ಈ ವೇಳ ಸಂತ್ರಸ್ತೆ ಶೋವೊಂದಕ್ಕಾಗಿ ಇತರ ಡಾನ್ಸರ್‌ಗಳ ಜೊತೆ ಇದ್ದರು.
ಇದಕ್ಕೂ ಮೊದಲು ಹೆಚ್ಚಿನ ಸಂದರ್ಭಗಳಲ್ಲಿ ತಾಯಿ ನನ್ನ ಜೊತೆಯೇ ಇರುತ್ತಿದ್ದರು. ಆದರೆ 2020ರ ಮುಂಬೈ ಟ್ರಿಪ್ ವೇಳೆ ತಾಯಿಗೆ ರೈಲು ಟಿಕೆಟ್ ಬುಕ್ ಆಗಿರಲಿಲ್ಲ, ಘಟನೆಯ ನಂತರ ಈ ವಿಚಾರವನ್ನು ಯಾರಿಗಾದರು ಹೇಳಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ದೂರಿದ್ದ. ಅಲ್ಲದೇ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಹಾಗೂ ಅವಕಾಶ ಕಳೆದುಕೊಳ್ಳುವುದಾಗಿಯೂ ಬೆದರಿಸಿದ್ದ.
ಜಾನಿ ಆರು ವರ್ಷಗಳಲ್ಲಿ ಆಕೆಯ ಮೇಲೆ ಹಲವು ಬಾರಿ ಅತ್ಯಾ*ಚಾರ ಎಸಗಿದ್ದು, ಮಾತ್ರವಲ್ಲದೇ ಆಕೆಯನ್ನು ತನ್ನ ಧರ್ಮಕ್ಕೆ ಮತಾಂತರಗೊಳ್ಳುವಂತೆ ಹಾಗೂ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದ, ತಿಂಗಳುಗಳ ಕಾಲ ನಿರಂತರ ಕಿರುಕುಳ ಅನುಭವಿಸಿದ ಈಕೆ ತಿಂಗಳುಗಳ ಕಾಲ ಮನೆಯಲ್ಲೇ ಇದ್ದಳು. ಆದರೆ ಆರ್ಥಿಕ ಸಂಕಷ್ಟ ಕಾಡಿದಾಗ ಮತ್ತೆ ಜಾನಿಯ ಸಹಾಯ ಕೇಳುವಂತಾಗಿದೆ. ಹೀಗೆ ತನ್ನ ಬಳಿ ಮತ್ತೆ ಬಂದ ಆಕೆಯ ಮೇಲೆ ಜಾನಿ ಮತ್ತೆ ದೌರ್ಜನ್ಯವೆಸಗಿದ್ದಾನೆ. ಸಂತ್ರಸ್ತೆಯ ಮಾತಿಗೆ ಪುಷ್ಠಿ ನೀಡುವಂತೆ ಆಕೆಯ ಮನೆ ಪಕ್ಕದಲ್ಲಿ ವಾಸ ಮಾಡುತ್ತಿದ್ದ ನೆರೆಮನೆಯವರು ಕೂಡ ಸಾಕ್ಷ್ಯ ಹೇಳಿದ್ದು, ಸಂತ್ರಸ್ತೆಯ ತಾಯಿ ಮನೆಯಲ್ಲಿ ಇಲ್ಲದೇ ಇದ್ದಾಗ ಜಾನಿ ಅಲ್ಲಿಗೆ ಹಲವು ಬಾರಿ ಭೇಟಿ ನೀಡಿದ್ದನು ಆಕೆಯ ಜೊತೆ ದೀರ್ಘಾಕಾಲ ಸಮಯ ಕಳೆಯುತ್ತಿದ್ದನ್ನು ನೋಡಿದ್ದಾಗಿ ಹೇಳಿದ್ದಾರೆ.
ಪುನೀತ್ ರಾಜ್‌ಕುಮಾರ್ ಯುವರತ್ನ ಡ್ಯಾನ್ಸ್ ಕೋರಿಯೋಗ್ರಾಫರ್ ಮೇಲೆ ಬಲಾತ್ಕಾರ ಕೇಸ್!
ಜಾನಿ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 376(2) ಲೈಂಗಿಕ ಹಲ್ಲೆಗೆ ಶಿಕ್ಷೆ, ಸೆಕ್ಷನ್ 506 ಕ್ರಿಮಿನಲ್ ಬೆದರಿಕೆ, ಸೆಕ್ಷನ್ 323 ಉದ್ದೇಶಪೂರ್ವಕವಾಗಿ ನೋವನ್ನುಂಟು ಮಾಡುವುದಕ್ಕೆ ಶಿಕ್ಷೆ, ಹಾಗೂ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಪ್ರಸ್ತುತ ಜಾನಿ 14 ದಿನಗಳ ಪೊಲೀಸ್ ಕಸ್ಟಡಿಯಲ್ಲಿ ಇದ್ದಾನೆ. ಸೆಪ್ಟೆಂಬರ್ 19ರಂದು ಜಾನಿಯನ್ನು ಗೋವಾದಲ್ಲಿ ಪೊಲೀಸರು ಬಂಧಿಸಿದ್ದರು. ಸಂತ್ರಸ್ತೆಯು ತನಗಾದ ಕರಾಳ ಅನುಭವವನ್ನು 40 ಪೇಜ್‌ಗಳಲ್ಲಿ ದಾಖಲಿಸಿದ್ದು, ವಕೀಲರ ಗುಂಪು ಆಕೆಗೆ ಬೆಂಬಲ ಸೂಚಿಸಿವೆ.