Vani Jairam: 3 ದಶಕ ಕನ್ನಡದ ಇಂಪಿಗೆ ದನಿಯಾಗಿದ್ದ ಗಾಯಕಿ ವಾಣಿ ಜಯರಾಮ್

By Kannadaprabha NewsFirst Published Feb 5, 2023, 7:08 AM IST
Highlights

ಗಾಯಕಿ ವಾಣಿ ಜಯರಾಮ್‌ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು 1973ರಲ್ಲಿ. ವಿಜಯಭಾಸ್ಕರ್‌ ಸಂಗೀತ ನಿರ್ದೇಶನದ ‘ಕೆಸರಿನ ಕಮಲ’ ಅವರು ಹಾಡಿದ ಮೊದಲ ಕನ್ನಡ ಚಿತ್ರ. ಈ ಸಿನಿಮಾದಲ್ಲಿ ಎರಡು ಹಾಡುಗಳನ್ನು ಹಾಡಿದ್ದರು.

ಬೆಂಗಳೂರು (ಫೆ.05): ಗಾಯಕಿ ವಾಣಿ ಜಯರಾಮ್‌ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು 1973ರಲ್ಲಿ. ವಿಜಯಭಾಸ್ಕರ್‌ ಸಂಗೀತ ನಿರ್ದೇಶನದ ‘ಕೆಸರಿನ ಕಮಲ’ ಅವರು ಹಾಡಿದ ಮೊದಲ ಕನ್ನಡ ಚಿತ್ರ. ಈ ಸಿನಿಮಾದಲ್ಲಿ ಎರಡು ಹಾಡುಗಳನ್ನು ಹಾಡಿದ್ದರು. ನಂತರ ತೆರೆಕಂಡ ‘ಉಪಾಸನೆ’ ಚಿತ್ರದ ‘ಭಾವವೆಂಬ ಹೂವು ಅರಳಿ’ ಗೀತೆ ಮೂಲಕ ವಾಣಿ ಜಯರಾಮ್‌ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾದರು. ಅಂದಿನಿಂದ ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗ ಅವರ ಸುಶ್ರಾವ್ಯ ಗಾಯನದ ಇಂಪಿಗೆ ಮನಸೋತಿದೆ.

ಜಿ.ಕೆ. ವೆಂಕಟೇಶ್‌, ಎಂ. ರಂಗರಾವ್‌, ರಾಜನ್‌-ನಾಗೇಂದ್ರ, ಸತ್ಯಂ, ಉಪೇಂದ್ರ ಕುಮಾರ್‌, ಟಿ.ಜಿ.ಲಿಂಗಪ್ಪ, ಎಲ್‌. ವೈದ್ಯನಾಥನ್‌ ಮತ್ತು ಹಂಸಲೇಖ ಅವರಂತಹ ಖ್ಯಾತ ಸಂಗೀತ ನಿರ್ದೇಶಕರ ಜೊತೆ ವಾಣಿ ಜಯರಾಮ್‌ ಕೆಲಸ ಮಾಡಿದ್ದಾರೆ. ವಿಶೇಷ ಅಂದರೆ ವಾಣಿ ಜಯರಾಮ್‌ ಕನ್ನಡದಲ್ಲಿ ಮೊದಲು ಹಾಡಿದ್ದು ವಿಜಯ ಭಾಸ್ಕರ್‌ ಸಂಗೀತ ನಿರ್ದೇಶನದ ಚಿತ್ರಕ್ಕೆ. ಅವರ ಗಾಯನದ ಕೊನೆಯ ಕನ್ನಡ ಹಾಡಿಗೂ ವಿಜಯ ಭಾಸ್ಕರ್‌ ಅವರ ಸಂಗೀತ ನಿರ್ದೇಶನವಿತ್ತು.

ದಕ್ಷಿಣ ಭಾರತದ ಖ್ಯಾತ ಗಾಯಕಿ ವಾಣಿ ಜಯರಾಂ ನಿಧನ!

‘ಕೌಬಾಯ್‌ ಕುಳ್ಳ’, ‘ಶುಭಮಂಗಳ’, ‘ದೀಪ’, ಅಪರಿಚಿತ’, ‘ಕಸ್ತೂರಿ ವಿಜಯ’, ‘ಚಿರಂಜೀವಿ’, ‘ಬೆಸುಗೆ’, ‘ಬಿಳೀ ಹೆಂಡ್ತಿ’ ಸೇರಿದಂತೆ ಹಲವಾರು ಕನ್ನಡ ಚಿತ್ರಗಳ ಹಾಡುಗಳಿಗೆ ವಾಣಿ ದನಿಯಾಗಿದ್ದರು. ಒಂದು ಕಾಲಘಟ್ಟದಲ್ಲಿ ಪುಟ್ಟಣ್ಣ ಕಣಗಾಲ್‌ - ವಿಜಯ ಭಾಸ್ಕರ್‌ - ವಾಣಿ ಜಯರಾಮ್‌ ಅವರ ಕಾಂಬಿನೇಶನ್‌ ಬಹಳ ಜನಪ್ರಿಯವಾಗಿತ್ತು. ಎಸ್‌ಪಿ ಬಾಲಸುಬ್ರಹ್ಮಣ್ಯಂ, ಡಾ ರಾಜ್‌ಕುಮಾರ್‌, ಪಿಬಿ ಶ್ರೀನಿವಾಸ್‌ ಜೊತೆಗೆ ಜೊತೆ ವಾಣಿ ಜಯರಾಂ ಹಾಡಿರುವ ಡ್ಯುಯೆಟ್‌ ಹಾಡುಗಳು ಹೆಚ್ಚು ಪ್ರಸಿದ್ಧಿಗೆ ಬಂದವು.

ವಾಣಿ ಜಯರಾಂ ಹಾಡಿದ ಹಾಡು ಕನ್ನಡಿಗರು ಮರೆಯಲು ಸಾಧ್ಯವೇ..!

‘ಈ ಶತಮಾನದ ಮಾದರಿ ಹೆಣ್ಣು’, ‘ಬೆಸುಗೆ ಬೆಸುಗೆ’, ‘ಬೆಳ್ಳಿ ಮೋಡವೆ ಎಲ್ಲಿ ಓಡುವೆ’, ‘ಜೀವನ ಸಂಜೀವನ’, ‘ದೇವ ಮಂದಿರದಲ್ಲಿ’, ‘ಹಾಡು ಹಳೆಯದಾದರೇನು’, ‘ಕನ್ನಡ ನಾಡಿನ ಕರಾವಳಿ’, ‘ಪ್ರಿಯತಮಾ.. ಕರುಣೆಯ ತೋರೆಯಾ’ ಮೊದಲಾದ ವಾಣಿ ಜಯರಾಂ ಕಂಠಸಿರಿಯಲ್ಲಿ ಮೂಡಿಬಂದ ಹಾಡುಗಳನ್ನು ಕನ್ನಡಿಗರು ಇಂದೂ ಗುನುಗುತ್ತಾರೆ. ವಿಜಯಭಾಸ್ಕರ್‌ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ‘ನೀಲಾ’ ಇವರು ಹಾಡಿದ ಇತ್ತೀಚಿನ ಕನ್ನಡ ಚಿತ್ರ. ವಾಣಿ ಜಯರಾಂ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

click me!