ನೆಹರು-ಗಾಂಧಿ ಅವಹೇಳನ: ನಟಿ ಪಾಯಲ್‌ ಬಂಧನ!

By Kannadaprabha NewsFirst Published Dec 17, 2019, 8:24 AM IST
Highlights

ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್| ನೆಹರು-ಗಾಂಧಿ ಅವಹೇಳನ: ನಟಿ ಪಾಯಲ್‌ ಬಂಧನ

ಕೋಟಾ(ಡಿ.17): ನೆಹರೂ-ಗಾಂಧಿ ಕುಟುಂಬದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಮೇರೆಗೆ ಭಾನುವಾರ ರಾಜಸ್ಥಾನದ ಪೊಲೀಸ್‌ ವಶಕ್ಕೆ ಒಳಗಾಗಿದ್ದ ಹಿಂದಿ ನಟಿ ಪಾಯಲ್‌ ರೋಹಟಗಿ ಅವರನ್ನು ಸೋಮವಾರ ಬಂಧಿಸಲಾಗಿದೆ.

ರೋಹಟಗಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕಾರ ಮಾಡಿದ ಇಲ್ಲಿನ ಬುಂಡಿ ನ್ಯಾಯಾಲಯ, ಅವರನ್ನು 8 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶ ನೀಡಿತು. ರಾಜಸ್ಥಾನದ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಚರ್ಮೇಶ್‌ ಶರ್ಮಾ ಎಂಬುವರು ಸಲ್ಲಿಸಿದ ದೂರಿನ ಮೇರೆಗೆ, ರಾಜಸ್ಥಾನದ ಪೊಲೀಸರು ಪಾಯಲ್‌ ರೋಹಟಗಿ ಅವರನ್ನು ವಶಕ್ಕೆ ಪಡೆದಿದ್ದರು.

ಏನಿದು ವಿವಾದ?

‘ಪಾಯಲ್‌ ಅವರು ಮೋತಿಲಾಲ್‌ ನೆಹರು, ಜವಾಹರಲಾಲ್‌ ನೆಹರು, ಇಂದಿರಾ ಗಾಂಧಿ ಹಾಗೂ ಅವರ ಕುಟುಂಬದ ಇತರರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದರು’ ಎಂದು ಆರೋಪಿಸಿ, ಅವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ರಾಜಸ್ಥಾನದ ಬುಂದಿ ಠಾಣಾ ಪೊಲೀಸರು ಅಕ್ಟೋಬರ್‌ 10ರಂದೇ ಪ್ರಕರಣ ದಾಖಲಿಸಿದ್ದರು. ‘ಈ ಹಿನ್ನೆಲೆಯಲ್ಲಿ ವಿಚಾರಣೆಗೆಂದು ಪಾಯಲ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಬಂಧಿಸಿಲ್ಲ. ಈಗ ಬುಂದಿ ಠಾಣೆಗೆ ಅವರನ್ನು ಕರೆತರಲಾಗುತ್ತಿದೆ. ಆದರೆ ವಿಚಾರಣೆಗೆ ಅವರು ಸಹಕರಿಸುತ್ತಿಲ್ಲ’ ಎಂದು ಬುಂದಿ ಜಿಲ್ಲಾ ಪೊಲೀಸ್‌ ವರಿಷ್ಠೆ ಮಮತಾ ಗುಪ್ತಾ ಹೇಳಿದ್ದಾರೆ.

ಪಾಯಲ್‌ ಆಕ್ರೋಶ:

ಈ ಬಗ್ಗೆ ಟ್ವೀಟ್‌ ಮಾಡಿರುವ ಪಾಯಲ್‌, ‘ಮೋತಿಲಾಲ್‌ ನೆಹರು ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ಪಡೆದು ನಾನು ವಿಡಿಯೋ ಮಾಡಿದ್ದಕ್ಕೆ ರಾಜದ್ಥಾನ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ಪ್ರಧಾನಿ ಹಾಗೂ ಗೃಹ ಸಚಿವರೇ, ವಾಕ್‌ ಸ್ವಾತಂತ್ರ್ಯ ಅನ್ನೋದೇನು ಕೇವಲ ತಮಾಷೆಯಾ?’ ಎಂದು ಪ್ರಶ್ನಿಸಿದ್ದಾರೆ.

click me!