Divorce: 1800 ಕೋಟಿ ಆಸ್ತಿಯ ಒಡತಿ ಅನ್ನಾ ಲೆಜ್ನೆವಾ ಯಾರು? ಪವನ್ ಕಲ್ಯಾಣ್ ಜೊತೆ ಲವ್ ಆಗಿದ್ದು ಹೇಗೆ?

Published : Nov 10, 2026, 04:16 PM ISTUpdated : Nov 10, 2026, 04:20 PM IST
Anna Lezhneva Pawan Kalyan

ಸಾರಾಂಶ

ಪವನ್ ಕಲ್ಯಾಣ್ ಹಾಗೂ ಅನ್ನಾ ಕೊನಿಡೆಲಾ ಡಿವೋರ್ಸ್ ಬೆಳವಣಿಗೆಯ ಬೆನ್ನಲ್ಲೇ ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ ಅನ್ನಾ ಲೆಜಿನೋವಾ ಯಾರು? ಅವರ ಹಿನ್ನೆಲೆ ಏನು? ಇಬ್ಬರ ನಡುವೆ ಪ್ರೀತಿ ಚಿಗುರಿದ್ದು ಹೇಗೆ? ಅನ್ನಾ ಅವರ ಆಸ್ತಿ ಮೌಲ್ಯ ಎಷ್ಟು? ಈ ಎಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ..

ವಿಶೇಷ ಸ್ಪಷ್ಟನೆ: ಪವನ್ ಕಲ್ಯಾಣ್ ಅವರ ಪತ್ನಿಯ ಮೂಲ ಹೆಸರು ಅನ್ನಾ ಲೆಜ್ನೆವಾ (Anna Lezhneva). ಆದರೆ ಅವರು 2013ರಲ್ಲಿ ಪವನ್ ಕಲ್ಯಾಣ್ ಅವರನ್ನು ವಿವಾಹವಾದ ನಂತರ ತಮ್ಮ ಉಪನಾಮವನ್ನು ಬದಲಾಯಿಸಿಕೊಂಡು ಅನ್ನಾ ಕೊನಿಡೇಲಾ (Anna Konidala) ಎಂದು ಕರೆಯಲ್ಪಡುತ್ತಿದ್ದರು. ಈಗ ಡಿವೋರ್ಸ್ ಘೋಷಿಸಿದ ಬಳಿಕ ಮತ್ತೆ ಮೊದಲಿನ ಹೆಸರೇ ಚಾಲ್ತಿಯಲ್ಲಿದೆ.

ಟಾಲಿವುಡ್‌ನ ಪವರ್ ಸ್ಟಾರ್ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನ ಇದೀಗ ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿದೆ. ಬರೋಬ್ಬರಿ 13 ವರ್ಷಗಳ ದಾಂಪತ್ಯ ಜೀವನದ ಬಳಿಕ ಪತ್ನಿ ಅನ್ನಾ ಲೆಜಿನೋವಾ ಅವರಿಂದ ಬೇರೆಯಾಗುವ ನಿರ್ಧಾರ ಕೈಗೊಂಡಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಪವನ್ ಕಲ್ಯಾಣ್ ಅವರ ಮೂರನೇ ಪತ್ನಿ ಅನ್ನಾ ಲೆಜಿನೋವಾ ಯಾರು? ಅವರ ಹಿನ್ನೆಲೆ ಏನು? ಇಬ್ಬರ ನಡುವೆ ಪ್ರೀತಿ ಚಿಗುರಿದ್ದು ಹೇಗೆ? ಅನ್ನಾ ಅವರ ಆಸ್ತಿ ಮೌಲ್ಯ ಎಷ್ಟು? ಎಂಬ ಕುತೂಹಲಕಾರಿ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜಿನೋವಾ ಒಂದು ಕಾಲದಲ್ಲಿ ಟಾಲಿವುಡ್‌ನ ಗಮನ ಸೆಳೆದ ಜೋಡಿಗಳಲ್ಲಿ ಒಂದಾಗಿದ್ದರು. ಆದರೆ ಇದೀಗ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾದ ಸುದ್ದಿ ಹರಿದಾಡುತ್ತಿದೆ. ನವೆಂಬರ್ 9ರ ರಾತ್ರಿ 11 ಗಂಟೆಯ ನಂತರ ಈ ಬೆಳವಣಿಗೆ ಕುರಿತ ಮಾಹಿತಿ ಹೊರಬಿದ್ದಿದ್ದು, ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ. ಆದರೆ ಇವರಿಬ್ಬರು ಬೇರೆಯಾಗಲು ನಿರ್ಧರಿಸಿರುವುದಕ್ಕೆ ನಿಖರವಾದ ಕಾರಣವೇನು ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಯಾರು ಈ ಅನ್ನಾ ಲೆಜಿನೋವಾ?

ಅನ್ನಾ ಲೆಜಿನೋವಾ ರಷ್ಯಾದ ಮಾಜಿ ಮಾಡೆಲ್. ಪವನ್ ಕಲ್ಯಾಣ್ ಅವರಿಗಿಂತ ಸುಮಾರು ಒಂಬತ್ತು ವರ್ಷ ಹಿರಿಯರು ಎನ್ನಲಾಗಿದೆ. 2011ರಲ್ಲಿ ಬಿಡುಗಡೆಯಾದ 'ತೀನ್ಮಾರ್' ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಇವರಿಬ್ಬರ ಮೊದಲ ಭೇಟಿ ನಡೆದಿತ್ತು. ಪರಿಚಯ ಸ್ನೇಹವಾಗಿ ಬೆಳೆದು, ನಂತರ ಪ್ರೀತಿಗೆ ತಿರುಗಿತ್ತು. ಕೊನೆಗೆ 2013ರ ಸೆಪ್ಟೆಂಬರ್ 30ರಂದು ಇಬ್ಬರೂ ವಿವಾಹ ಬಂಧನಕ್ಕೆ ಒಳಗಾಗಿದ್ದರು.

ಪವನ್ ಕಲ್ಯಾಣ್ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಅನ್ನಾ ಅವರಿಗೆ ಮತ್ತೊಂದು ಮದುವೆಯಾಗಿತ್ತು ಎನ್ನಲಾಗಿದೆ. ಮೊದಲ ಮದುವೆಯಿಂದ ಪೋಲೆನಾ ಅಂಜನಾ ಪವನೋವಾ ಎಂಬ ಮಗಳಿದ್ದಾರೆ. ಪವನ್ ಕಲ್ಯಾಣ್ ಆಕೆಯನ್ನು ದತ್ತು ಪಡೆದಿದ್ದರು. ಬಳಿಕ 2017ರಲ್ಲಿ ಈ ದಂಪತಿಗೆ ಮಾರ್ಕ್ ಶಂಕರ್ ಪವನೋವಿಚ್ ಎಂಬ ಗಂಡು ಮಗು ಜನಿಸಿತ್ತು. ಹೀಗೆ ಇಬ್ಬರು ಮಕ್ಕಳೊಂದಿಗೆ ಕುಟುಂಬ ಜೀವನ ನಡೆಸುತ್ತಿದ್ದ ಈ ಜೋಡಿ ಈಗ ಬೇರೆಯಾಗುತ್ತಿದೆ ಎಂಬ ಸುದ್ದಿ ಅಭಿಮಾನಿಗಳಿಗೆ ಬೇಸರ ತಂದಿದೆ.

ಅನ್ನಾ ಆಸ್ತಿ ಮೌಲ್ಯ ಬರೋಬ್ಬರಿ 1800 ಕೋಟಿ ರೂ.?

ಅನ್ನಾ ಲೆಜಿನೋವಾ ಅವರ ಬಗ್ಗೆ ಮತ್ತೊಂದು ಕುತೂಹಲಕಾರಿ ವಿಚಾರವೆಂದರೆ ಅವರ ಆರ್ಥಿಕ ಹಿನ್ನೆಲೆ. ಅವರು ಕೇವಲ ಮಾಜಿ ಮಾಡೆಲ್ ಮಾತ್ರವಲ್ಲದೆ, ಉದ್ಯಮ ಹಿನ್ನೆಲೆಯ ಕುಟುಂಬಕ್ಕೆ ಸೇರಿದವರು ಎನ್ನಲಾಗಿದೆ. ಸಿಂಗಾಪುರದಲ್ಲಿ ಹೋಟೆಲ್ ಉದ್ಯಮ ಸೇರಿದಂತೆ ಹಲವು ವ್ಯವಹಾರಗಳಲ್ಲಿ ಅವರಿಗೆ ಪಾಲಿದೆ ಎಂಬ ವರದಿಗಳಿವೆ. ರಷ್ಯಾ ಮತ್ತು ಸಿಂಗಾಪುರದಲ್ಲಿಯೂ ಆಸ್ತಿಗಳನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ.

ಕೆಲವು ಮಾಧ್ಯಮ ವರದಿಗಳ ಪ್ರಕಾರ, ಅನ್ನಾ ಲೆಜಿನೋವಾ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 1,800 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮತ್ತೊಂದೆಡೆ ಪವನ್ ಕಲ್ಯಾಣ್ ಅವರ ಆಸ್ತಿ ಮೌಲ್ಯ ಸುಮಾರು 164 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಆದರೆ ಈ ಅಂಕಿಅಂಶಗಳಿಗೆ ಅಧಿಕೃತ ದೃಢೀಕರಣವಿಲ್ಲ ಎಂಬುದನ್ನು ಗಮನಿಸಬೇಕು.

ಪವನ್ ಕಲ್ಯಾಣ್‌ಗಾಗಿ ಬದಲಾಯಿಸಿಕೊಂಡಿದ್ದರಾ ಜೀವನಶೈಲಿ?

ಪವನ್ ಕಲ್ಯಾಣ್ ಅವರ ಸಿನಿಮಾ ಹಾಗೂ ರಾಜಕೀಯ ಜೀವನದ ಏಳುಬೀಳುಗಳಲ್ಲಿ ಅನ್ನಾ ಬೆಂಬಲವಾಗಿ ನಿಂತಿದ್ದರು ಎನ್ನಲಾಗಿದೆ. ಭಾರತೀಯ ಸಂಪ್ರದಾಯಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಅವರು ಹಿಂದೂ ಧಾರ್ಮಿಕ ಆಚರಣೆಗಳಲ್ಲಿಯೂ ಭಾಗವಹಿಸುತ್ತಿದ್ದರು. ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ಸಲ್ಲಿಸಿದ್ದ ವಿಚಾರವೂ ಈ ಹಿಂದೆ ಸುದ್ದಿಯಾಗಿತ್ತು.

ಇನ್ನು ಜುಲೈ 2024ರಲ್ಲಿ ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂಬ ಮಾಹಿತಿಯೂ ವರದಿಗಳಲ್ಲಿ ಪ್ರಕಟವಾಗಿತ್ತು. ಮಕ್ಕಳ ಶಿಕ್ಷಣ ಮತ್ತು ಕುಟುಂಬದ ಜವಾಬ್ದಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು ಎನ್ನಲಾಗಿದೆ.

ಪವನ್ ಕಲ್ಯಾಣ್‌ಗೆ ಇದು ಮೂರನೇ ವಿಚ್ಛೇದನವೇ?

ಪವನ್ ಕಲ್ಯಾಣ್ ಅವರ ವೈವಾಹಿಕ ಜೀವನದಲ್ಲಿ ಈ ಹಿಂದೆಯೂ ಹಲವು ಏಳುಬೀಳುಗಳು ಎದುರಾಗಿವೆ. 1997ರಲ್ಲಿ ನಂದಿನಿ ಅವರನ್ನು ಮೊದಲ ಬಾರಿಗೆ ವಿವಾಹವಾಗಿದ್ದರು. ಸುಮಾರು 11 ವರ್ಷಗಳ ದಾಂಪತ್ಯದ ಬಳಿಕ 2008ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದರು.

ನಂತರ 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಅಕಿರಾ ನಂದನ್ ಮತ್ತು ಆದ್ಯ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ 2012ರಲ್ಲಿ ಇಬ್ಬರೂ ಬೇರೆಯಾಗಿದ್ದರು. ಇದೀಗ ಅನ್ನಾ ಲೆಜಿನೋವಾ ಜೊತೆಗಿನ ದಾಂಪತ್ಯಕ್ಕೂ ಅಂತ್ಯ ಹಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಒಂದು ಕಡೆ ಸಿನಿಮಾ, ಮತ್ತೊಂದು ಕಡೆ ರಾಜಕೀಯ ಜವಾಬ್ದಾರಿಗಳ ನಡುವೆ ಸದಾ ಸುದ್ದಿಯಲ್ಲಿರುವ ಪವನ್ ಕಲ್ಯಾಣ್ ಅವರ ವೈಯಕ್ತಿಕ ಬದುಕು ಈಗ ಮತ್ತೆ ಚರ್ಚೆಗೆ ಬಂದಿದೆ. ಅನ್ನಾ ಲೆಜಿನೋವಾ ಅವರ ಹಿನ್ನೆಲೆ, ಆಸ್ತಿ ಹಾಗೂ ಪವನ್ ಜೊತೆಗಿನ ಪ್ರೇಮಕಥೆ ಬಗ್ಗೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಆದರೆ ವಿಚ್ಛೇದನದ ಹಿಂದಿನ ನಿಜವಾದ ಕಾರಣವೇನು ಎಂಬುದರ ಬಗ್ಗೆ ಸದ್ಯಕ್ಕೆ ಅಧಿಕೃತ ಸ್ಪಷ್ಟನೆ ಇಲ್ಲ. ಹೀಗಾಗಿ ಊಹಾಪೋಹಗಳಿಗೆ ಕಿವಿಗೊಡುವ ಬದಲು, ಸಂಬಂಧಪಟ್ಟವರ ಅಧಿಕೃತ ಹೇಳಿಕೆಗಾಗಿ ಕಾಯುವುದು ಸೂಕ್ತ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಮಾಯಣದ 'ಸೀತೆ' ಪಾತ್ರದ ಕುರಿತು ಹೊಸ ವಿವಾದ; ಯಾಮಿ ಗೌತಮ್ ವಿರುದ್ಧ ಸಾಯಿ ಪಲ್ಲವಿ ಫ್ಯಾನ್ಸ್ ಭಾರೀ ಆಕ್ರೋಶ
'ಆಯುಷ್' ವಿವಾದ: ನಿರ್ದೇಶಕರ ವಿರುದ್ಧ ಫಿಲಂ ಚೇಂಬರ್‌ಗೆ ಪತ್ರ ಬರೆದ ಪ್ರಿಯಾಂಕಾ ಉಪೇಂದ್ರ!