
ಬಾಕ್ಸ್ ಆಫೀಸ್‌ನಲ್ಲಿ ರಾಮಾಯಣದ ಅಬ್ಬರ; ಮೊದಲ ಸೋಮವಾರವೇ 107 ಕೋಟಿ ರೂ. ಗಳಿಕೆ, ಮುರಿದುಹೋಯ್ತು ಧುರಂಧರ್ 2 ದಾಖಲೆ!
ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಿಡುಗಡೆಯಾದ ಕೇವಲ ಐದು ದಿನಗಳಲ್ಲೇ ಭಾರತೀಯ ಚಿತ್ರರಂಗದ ಹಲವು ದಾಖಲೆಗಳನ್ನು ಅಳಿಸಿಹಾಕಿದೆ. ಅದರಲ್ಲೂ ಮೊದಲ ಸೋಮವಾರದ ಗಳಿಕೆ ಈಗ ಸಿನಿರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ನವೆಂಬರ್ 9ರ ಸೋಮವಾರದಂದು ‘ರಾಮಾಯಣ’ ಸಿನಿಮಾ ಭಾರತದಲ್ಲಿ ಬರೋಬ್ಬರಿ 107.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಒಂದೇ ದಿನ ದೇಶಾದ್ಯಂತ 23,911 ಪ್ರದರ್ಶನಗಳನ್ನು ಕಂಡಿರುವ ಚಿತ್ರ, ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಹೆಸರಿನಲ್ಲಿದ್ದ ಮೊದಲ ಸೋಮವಾರದ ಗರಿಷ್ಠ ಗಳಿಕೆಯ ದಾಖಲೆಯನ್ನು ಹಿಂದಿಕ್ಕಿದೆ. ಈ ಹಿಂದೆ ‘ಧುರಂಧರ್ 2’ ಮೊದಲ ಸೋಮವಾರ 60 ಕೋಟಿ ರೂಪಾಯಿ ಗಳಿಸಿತ್ತು. ಆದರೆ ‘ರಾಮಾಯಣ’ ಅದಕ್ಕಿಂತಲೂ ಭಾರೀ ಮೊತ್ತವನ್ನು ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ.
ಐದು ದಿನಗಳ ಬಾಕ್ಸ್ ಆಫೀಸ್ ಲೆಕ್ಕಾಚಾರವೂ ಅಚ್ಚರಿ ಮೂಡಿಸುವಂತಿದೆ. ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 346.35 ಕೋಟಿ ರೂಪಾಯಿಗೆ ತಲುಪಿದ್ದರೆ, ಗ್ರಾಸ್ ಕಲೆಕ್ಷನ್ 413.90 ಕೋಟಿ ರೂಪಾಯಿಯಾಗಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರದ ಅಬ್ಬರ ಮುಂದುವರಿದಿದೆ. ಸೋಮವಾರವೊಂದರಲ್ಲೇ ವಿದೇಶಗಳಿಂದ 25 ಕೋಟಿ ರೂಪಾಯಿ ಗಳಿಸಿರುವ ಸಿನಿಮಾ, ಒಟ್ಟು ವಿದೇಶಿ ಗಳಿಕೆಯನ್ನು 250 ಕೋಟಿ ರೂಪಾಯಿಗೆ ಏರಿಸಿಕೊಂಡಿದೆ. ಈ ಮೂಲಕ ಐದು ದಿನಗಳ ಅಂತ್ಯಕ್ಕೆ ವಿಶ್ವಾದ್ಯಂತ ಚಿತ್ರದ ಒಟ್ಟು ಗ್ರಾಸ್ ಕಲೆಕ್ಷನ್ ಬರೋಬ್ಬರಿ 663.90 ಕೋಟಿ ರೂಪಾಯಿ ತಲುಪಿದೆ.
ಚಿತ್ರದ ಹಿಂದಿ ಆವೃತ್ತಿಗೆ ಪ್ರೇಕ್ಷಕರ ಬೆಂಬಲ ಎಷ್ಟಿದೆ ಎನ್ನುವುದಕ್ಕೆ ಥಿಯೇಟರ್ ಆಕ್ಯುಪೆನ್ಸಿ ಅಂಕಿಅಂಶಗಳೇ ಸಾಕ್ಷಿ. ಸೋಮವಾರ ಹಿಂದಿ ಆವೃತ್ತಿಯ ಒಟ್ಟಾರೆ ಆಕ್ಯುಪೆನ್ಸಿ ಶೇಕಡಾ 73.6ರಷ್ಟಿತ್ತು. ಚೆನ್ನೈನಲ್ಲಿ 83 ಪ್ರದರ್ಶನಗಳ ಪೈಕಿ ಶೇಕಡಾ 94ರಷ್ಟು ಆಸನಗಳು ಭರ್ತಿಯಾಗಿದ್ದರೆ, ಬೆಂಗಳೂರಿನಲ್ಲಿ 262 ಪ್ರದರ್ಶನಗಳಿಗೆ ಶೇಕಡಾ 90.8ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಶೇಕಡಾ 72.5, ಹೈದರಾಬಾದ್‌ನಲ್ಲಿ ಶೇಕಡಾ 77.5 ಹಾಗೂ ಮುಂಬೈನಲ್ಲಿ ಶೇಕಡಾ 69.3ರಷ್ಟು ಪ್ರೇಕ್ಷಕರ ಹಾಜರಾತಿ ಕಂಡುಬಂದಿದೆ.
ಸುಮಾರು 4,000 ಕೋಟಿ ರೂಪಾಯಿ ನಿರ್ಮಾಣ ವೆಚ್ಚದಲ್ಲಿ ಸಿದ್ಧವಾಗಿರುವ ಈ ಮಹತ್ವಾಕಾಂಕ್ಷೆಯ ಸಿನಿಮಾ ಈಗಾಗಲೇ 2026ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. 1,852 ಕೋಟಿ ರೂಪಾಯಿ ಗಳಿಸಿರುವ ‘ಧುರಂಧರ್: ದಿ ರಿವೇಂಜ್’ ಮತ್ತು 821 ಕೋಟಿ ರೂಪಾಯಿ ಗಳಿಸಿರುವ ‘ಜೈಲರ್ 2’ ನಂತರ ‘ರಾಮಾಯಣ’ ಸ್ಥಾನ ಪಡೆದಿದೆ.
ಅಂದಹಾಗೆ, ರಾವಣನ ಪಾತ್ರದಲ್ಲಿ ಯಶ್ ಹಾಗೂ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಂಡಿರುವ ‘ರಾಮಾಯಣ’ ಬಾಕ್ಸ್ ಆಫೀಸ್‌ನಲ್ಲಿ ತನ್ನ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದೆ. ಆರಂಭದ ಐದು ದಿನಗಳಲ್ಲೇ 663 ಕೋಟಿ ರೂಪಾಯಿಗೂ ಅಧಿಕ ಗಳಿಸಿರುವ ಚಿತ್ರ, ಮುಂದಿನ ದಿನಗಳಲ್ಲಿ ಯಾವ ಹೊಸ ದಾಖಲೆಗಳನ್ನು ಬರೆಯಲಿದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಹೆಚ್ಚಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.