
Ramayana Movie Special News: ಕಲಿಯುಗದಲ್ಲಿ ಕಣ್ಮುಂದೆ ನಿಂತ ತ್ರೇತಾಯುಗದ ಅಸಲಿ ಕಥೆ!
ಸಿನಿಪ್ರಿಯರು ಬಹುನಿರೀಕ್ಷೆಯಿಂದ ಕಾಯ್ತಾ ಇದ್ದ, ಇಡೀ ಚಿತ್ರಜಗತ್ತು ಕಾತುರದಿಂದ ಎದುರುನೋಡ್ತಾ ಇದ್ದ ರಾಮಾಯಣ ಸಿನಿಮಾ ವರ್ಲ್ಡ್ ವೈಡ್ ತೆರೆಗೆ ಬಂದಿದೆ. ರಣಬೀರ್ ಕಪೂರ್ ರಾಮನಾಗಿ ನಟಿಸಿರೋ-ನಮ್ಮ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಮಿಂಚಿರೋ, ಬಹುತಾರಾಗಣದ - ಬಹುಕೋಟಿ ವೆಚ್ಚದ ರಾಮಾಯಣ ಮೂವಿ ಥಿಯೇಟರ್ ಅಂಗಳಕ್ಕೆ ಕಾಲಿಟ್ಟಿದೆ. ನೀರಿಕ್ಷೆಯಂತೆಯೇ ಸಿನಿಮಾಗೆ ಮೆಗಾಓಪನಿಂಗ್ ಸಿಕ್ಕಿದೆ. ಆದ್ರೆ ರಾಮಾಯಣ ಸಿನಿಮಾ ಹೇಗೆ ಮೂಡಿಬಂದಿದೆ. ಕಲಾವಿದರ ಪರ್ಫಾರ್ಮೆನ್ಸ್ ಹೇಗಿದೆ. 'ವಿಎಫ್ಎಕ್ಸ್' ಜಾದೂವಿನಲ್ಲಿ ರಾಮಾಯಣ ಅದೆಷ್ಟು ಮೋಡಿ ಮಾಡ್ತಿದೆ ನೋಡಿ..
ಹೌದು, ಈ ವರ್ಷದ ಬಹುನಿರೀಕ್ಷೆಯ ರಾಮಾಯಣ ಸಿನಿಮಾ ತೆರೆಗೆ ಬಂದಿದೆ. ಯುಗಗಳು ಉರುಳಿದರೂ ಭಾರತೀಯರ ಎದೆಬಡಿತದಲ್ಲಿ ಅಚ್ಚಳಿಯದೆ ಉಳಿದಿರುವ ಪರಮ ಪವಿತ್ರ ಕಾವ್ಯ 'ರಾಮಾಯಣ'. ಅಜ್ಜಿಯ ಮಡಿಲಲ್ಲಿ ಕೇಳಿದ ಕಥೆ, ಧಾರಾವಾಹಿಗಳಲ್ಲಿ ಕಣ್ತುಂಬಿಕೊಂಡ ದೃಶ್ಯ, ನಾಟಕ-ಯಕ್ಷಗಾನಗಳಲ್ಲಿ ಆವಾಹಿಸಿಕೊಂಡ ಪುರಾಣ.. ಇದೀಗ ಜಾಗತಿಕ ಬೆಳ್ಳಿಪರದೆ ಮೇಲೆ ಹೊಸದೊಂದು ಅವತಾರ ತಾಳಿದೆ. ಸಾವಿರಾರು ಕೋಟಿ ರೂಪಾಯಿಗಳ ಕಲ್ಪನೆಗೂ ಮೀರಿದ ಬೃಹತ್ ಬಜೆಟ್.. ಭಾರತೀಯ ಚಿತ್ರರಂಗ ಮಾತ್ರವಲ್ಲದೆ ಹಾಲಿವುಡ್ ಅಂಗಳದ ತಂತ್ರಜ್ಞರ ದಂಡು.. ದೇಶದ ಅತ್ಯುನ್ನತ ತಾರಾಗಣವನ್ನ ಒಂದೇ ಚೌಕಟ್ಟಿನಲ್ಲಿ ತಂದು ನಿಲ್ಲಿಸಿದ ಹೆಮ್ಮೆಯ ಸಿನಿಮಾ 'ರಾಮಾಯಣ: ಭಾಗ-1' ಕೊನೆಗೂ ಚಿತ್ರಮಂದಿರಗಳ ಬಾಗಿಲು ತಟ್ಟಿ ಒಳಗೆ ಬಂದು ಅಬ್ಬರಿಸುತ್ತಿದೆ. ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೊಸ ಲೋಕ ಸೃಷ್ಟಿಸುವತ್ತ ಹೆಜ್ಜೆ ಇಟ್ಟಿದೆ.
ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕರಾದ ನಮಿತ್ ಮಲ್ಹೋತ್ರಾ ಮತ್ತು ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಜಂಟಿಯಾಗಿ ಕಟ್ಟಿಕೊಟ್ಟಿರುವ ಈ ಮಹಾ ದೃಶ್ಯವೈಭವ 2D, 3D ಹಾಗೂ ಅಂತರರಾಷ್ಟ್ರೀಯ ಐಮ್ಯಾಕ್ಸ್ ಪರದೆಗಳಲ್ಲಿ ಅಬ್ಬರಿಸ್ತಾ ಇದೆ. ಈ ಹಿಂದೆ ಬಂದ 'ಆದಿಪುರುಷ್' ಚಿತ್ರ ಮಾಡಿದ ಮಹಾ ಎಡವಟ್ಟುಗಳನ್ನ ನೋಡಿ ಕಂಗಾಲಾಗಿದ್ದ ಭಾರತೀಯ ಸಿನಿರಸಿಕರಿಗೆ, ಈ ಚಿತ್ರ ಸಮಾಧಾನ ತಂದಿದೆಯಾ? ಅಥವಾ ಕೇವಲ ಗ್ರಾಫಿಕ್ಸ್ ಗದ್ದಲದಲ್ಲೇ ಕಥೆ ಕಳೆದುಹೋಗಿದೆಯಾ? ಶ್ರೀರಾಮನಾಗಿ ರಣ್‌ಬೀರ್ ಕಪೂರ್ ಜನರ ಮನಸ್ಸಿಗೆ ಇಳಿದ್ರಾ? ಲಂಕೇಶ್ವರನಾಗಿ ಯಶ್ ಅಟ್ಟಹಾಸ ಹೇಗಿದೆ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ..
ರಾಮಾಯಣದ ಕಥೆಯನ್ನ ಭಾರತೀಯರಿಗೆ ಹೊಸದಾಗಿ ಪರಿಚಯಿಸಬೇಕಿಲ್ಲ. ಆದರೆ ಈ ಚಿತ್ರದಲ್ಲಿ ನಿತೇಶ್ ತಿವಾರಿ ಯಾವ ಭಾಗವನ್ನ ಹೇಗೆ ತೆರೆಗೆ ತಂದಿದ್ದಾರೆ ಅನ್ನೋದು ಮುಖ್ಯವಾಗುತ್ತದೆ. ಚಿತ್ರ ಆರಂಭವಾಗುವುದೇ ದೇವತೆಗಳು ಹಾಗೂ ಅಸುರರ ನಡುವಿನ ಘೋರ ಮಹಾಯುದ್ಧದಿಂದ. ಆರಂಭದಲ್ಲೇ ರಾವಣನ ಹಿನ್ನೆಲೆ, ಬ್ರಹ್ಮನನ್ನ ಒಲಿಸಿಕೊಳ್ಳಲು ಮಾಡಿದ ಘೋರ ತಪಸ್ಸು, ವರ ಬಲದಿಂದ ಮೂರು ಲೋಕಗಳನ್ನ ನಡುಗಿಸಿದ ಅಟ್ಟಹಾಸದ ಅನಾವರಣವಾಗುತ್ತದೆ. ನಮ್ಮ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಅವರ 'ರಾವಣ'ನ ಆರ್ಭಟ ತೆರೆದುಕೊಳ್ಳುತ್ತದೆ.
ಇಡೀ ಸಿನಿಮಾದ ಕಥೆಯನ್ನು ಇಲ್ಲಿ ಹೇಳಲಾಗದು ಮತ್ತು ಹೇಳಬಾರದು. ಆದರೆ, 'ರಾಮಾಯಣ' ಎಂಬ ಮಹಾಕಾವ್ಯದ ಬೆರಗುಗೊಳಿಸುವ ಅಚ್ಚರಿಯನ್ನು ಜಗತ್ತಿನ ತುಂಬಾ ಸಿನಿಪ್ರೇಕ್ಷಕರು ಬೆಳ್ಳಿಪರದೆಯಲ್ಲಿ ನೋಡಿ ಕಣ್ತುಂಬಿಕೊಳ್ಳಬೇಕು ಎಂಬುದು ಈ ಚಿತ್ರತಂಡದ ಹೆಬ್ಬಯಕೆ. ಅದನ್ನು ವಿಶ್ವಾದ್ಯಂತ ಪ್ರೇಕ್ಷಕರು ಮೆಚ್ಚಿ ಒಪ್ಪಿಕೊಂಡಿದ್ದಾರೆ. ಈ ಸಿನಿಮಾವನ್ನು ಜಗತ್ತಿನಾದ್ಯಂತ ಪ್ರೇಕ್ಷಕರು ಹಾಡಿ ಹೊಗಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.