
ಮತ್ತೆ ಕ್ಯಾಮೆರಾ ಮುಂದೆ ಬರಲಿದ್ದಾರೆ ಸಿಎಂ ವಿಜಯ್! ನಿರ್ದೇಶಕ ಯಾರು ಗೊತ್ತಾ?
ಸಿನಿಮಾ ರಂಗಕ್ಕೆ ಗುಡ್‌ಬೈ ಹೇಳಿ ರಾಜಕೀಯ ಅಖಾಡಕ್ಕೆ ಪ್ರವೇಶಿಸಿದ್ದ ದಳಪತಿ ವಿಜಯ್ ಇದೀಗ ಮತ್ತೊಮ್ಮೆ ಕ್ಯಾಮೆರಾ ಎದುರಿಸಲು ಸಜ್ಜಾಗಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಡಳಿತದ ಜವಾಬ್ದಾರಿ ಹೊತ್ತಿರುವ ವಿಜಯ್, ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಆದರೆ, ಇಲ್ಲಿ ಒಂದು ಟ್ವಿಸ್ಟ್ ಇದೆ. ವಿಜಯ್ ಯಾವುದೇ ಹೊಸ ಸಿನಿಮಾದಲ್ಲಿ ನಟಿಸುತ್ತಿಲ್ಲ. ಬದಲಾಗಿ ತಮಿಳುನಾಡು ಸರ್ಕಾರದ ಜನಕಲ್ಯಾಣ ಯೋಜನೆಗಳ ಪ್ರಚಾರಕ್ಕಾಗಿ ವಿಶೇಷ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ದಳಪತಿ ವಿಜಯ್ ರಾಜಕೀಯ ಪ್ರವೇಶಿಸುವ ಸಂದರ್ಭದಲ್ಲಿ ತಮ್ಮ ಸಿನಿಮಾ ವೃತ್ತಿಜೀವನಕ್ಕೆ ವಿದಾಯ ಹೇಳುವ ನಿರ್ಧಾರ ಪ್ರಕಟಿಸಿದ್ದರು. ನಟನೆಯಿಂದ ದೂರ ಸರಿದು ಸಂಪೂರ್ಣವಾಗಿ ರಾಜಕೀಯ ಮತ್ತು ಜನಸೇವೆಯತ್ತ ಗಮನ ಹರಿಸುವುದಾಗಿ ತಿಳಿಸಿದ್ದರು. ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಬಳಿಕವೂ ಯಾವುದೇ ಹೊಸ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಹೀಗಾಗಿ ವಿಜಯ್ ಅವರನ್ನು ಮತ್ತೆ ತೆರೆಮೇಲೆ ನೋಡುವ ಅವಕಾಶ ಸಿಗುವುದಿಲ್ಲ ಎಂದುಕೊಂಡಿದ್ದ ಅಭಿಮಾನಿಗಳಿಗೆ ಇದೀಗ ಹೊಸ ಸುದ್ದಿ ಸಿಕ್ಕಿದೆ.
ಆದರೆ ಈ ಬಾರಿ ವಿಜಯ್ ಅವರ ಪಾತ್ರ ಸಿನಿಮಾದ ನಾಯಕನದ್ದಲ್ಲ. ಸರ್ಕಾರದ ಯೋಜನೆಗಳನ್ನು ಜನರಿಗೆ ಪರಿಚಯಿಸುವ ಜಾಹೀರಾತಿನ ಮೂಲಕ ಅವರು ಮತ್ತೆ ಕ್ಯಾಮೆರಾ ಎದುರಿಸಲಿದ್ದಾರೆ ಎಂದು ವರದಿಯಾಗಿದೆ. ಸಾಮಾನ್ಯವಾಗಿ ಸರ್ಕಾರಗಳು ತಮ್ಮ ವಿವಿಧ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜನಪ್ರಿಯ ನಟ-ನಟಿಯರನ್ನು ರಾಯಭಾರಿಗಳನ್ನಾಗಿ ಬಳಸಿಕೊಳ್ಳುತ್ತವೆ. ಆದರೆ ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿರುವ ವಿಜಯ್ ಅವರೇ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಯೋಜನೆಯ ಮತ್ತೊಂದು ವಿಶೇಷವೆಂದರೆ, ಇದು ಸಾಮಾನ್ಯ ಸರ್ಕಾರಿ ಜಾಹೀರಾತಿನ ರೀತಿಯಲ್ಲಿ ಇರಲಿದೆಯಂತೆ. ಬದಲಾಗಿ ಸಿನಿಮಾ ಮಾದರಿಯಲ್ಲಿ ಅದ್ಧೂರಿಯಾಗಿ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದಕ್ಕಾಗಿ ಚಿತ್ರರಂಗದ ಅನುಭವಿ ತಾಂತ್ರಿಕ ವರ್ಗವನ್ನೂ ಬಳಸಿಕೊಳ್ಳಲು ಯೋಜಿಸಲಾಗಿದೆ.
ಇನ್ನು ಈ ವಿಶೇಷ ಜಾಹೀರಾತಿಗೆ ನಿರ್ದೇಶನದ ಜವಾಬ್ದಾರಿಯನ್ನು ಖ್ಯಾತ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ವಹಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ‘ವಿನ್ನೈತಾಂಡಿ ವರುವಾಯಾ’, ‘ಕಾಕ್ಕ ಕಾಕ್ಕ’ ಸೇರಿದಂತೆ ಹಲವು ಸಿನಿಮಾಗಳ ಮೂಲಕ ತಮ್ಮದೇ ಆದ ನಿರ್ದೇಶನ ಶೈಲಿಯಿಂದ ಗುರುತಿಸಿಕೊಂಡಿರುವ ಗೌತಮ್ ಮೆನನ್, ವಿಜಯ್ ಅವರನ್ನು ಈ ಜಾಹೀರಾತಿನಲ್ಲಿ ಹೇಗೆ ತೋರಿಸಲಿದ್ದಾರೆ ಎಂಬ ಕುತೂಹಲವೂ ಹೆಚ್ಚಾಗಿದೆ.
ಎರಡು ದಿನಗಳ ಕಾಲ್‌ಶೀಟ್ ನೀಡಿದ ಸಿಎಂ!
ಮೂಲಗಳ ಪ್ರಕಾರ, ಈ ಜಾಹೀರಾತಿನ ಚಿತ್ರೀಕರಣಕ್ಕಾಗಿ ಮುಖ್ಯಮಂತ್ರಿ ವಿಜಯ್ ಎರಡು ದಿನಗಳ ಕಾಲ್‌ಶೀಟ್ ನೀಡಿದ್ದಾರೆ ಎನ್ನಲಾಗಿದೆ. ತಮಿಳುನಾಡಿನ ಐದು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಳು ಮುಗಿದ ಬಳಿಕ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ. ಸರ್ಕಾರಿ ಯೋಜನೆಗಳ ಉದ್ದೇಶ ಮತ್ತು ಪ್ರಯೋಜನಗಳನ್ನು ಜನರಿಗೆ ತಲುಪಿಸುವುದು ಈ ಜಾಹೀರಾತಿನ ಪ್ರಮುಖ ಗುರಿಯಾಗಿರಲಿದೆ.
ಅಭಿಮಾನಿಗಳಿಗೆ ಮತ್ತೆ ಸಿಗಲಿದೆ ವಿಜಯ್ ದರ್ಶನ!
ವಿಜಯ್ ಸಿನಿಮಾಗಳಿಂದ ದೂರ ಉಳಿದಿರುವುದರಿಂದ ಅವರ ಅಭಿಮಾನಿಗಳು ಹೊಸ ಸಿನಿಮಾಗಾಗಿ ಕಾಯುತ್ತಿದ್ದಾರೆ. ಅದರಲ್ಲೂ ಕೊನೆಯ ಸಿನಿಮಾ ಬಳಿಕ ಮತ್ತೆ ಅವರನ್ನು ಬಣ್ಣದ ಲೋಕದಲ್ಲಿ ನೋಡುವ ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಇದೀಗ ಸರ್ಕಾರಿ ಜಾಹೀರಾತಿನ ಮೂಲಕವಾದರೂ ವಿಜಯ್ ಮತ್ತೆ ಕ್ಯಾಮೆರಾ ಮುಂದೆ ಬರಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.
ಆದರೆ ಇದು ವಾಣಿಜ್ಯ ಸಿನಿಮಾ ಅಲ್ಲ ಎಂಬುದನ್ನು ಅಭಿಮಾನಿಗಳು ಗಮನಿಸಬೇಕಿದೆ. ಒಟ್ಟಿನಲ್ಲಿ, ರಾಜಕೀಯ ಪ್ರವೇಶದ ಬಳಿಕ ನಟನೆಯಿಂದ ದೂರ ಉಳಿದಿದ್ದ ದಳಪತಿ ವಿಜಯ್ ಮತ್ತೆ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಜಾಹೀರಾತು ಯಾವ ರೀತಿಯಲ್ಲಿ ಮೂಡಿಬರಲಿದೆ ಮತ್ತು ವಿಜಯ್ ಅವರ ಹೊಸ ಲುಕ್ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.