ಗೂಗಲ್ ಸಿಇಒ ಸುಂದರ್ ಪಿಚೈ ಬಾಲ್ಯದ ಮನೆ ಮಾರಾಟ: ತಮಿಳು ನಟ, ನಿರ್ಮಾಪಕನಿಂದ ಆಸ್ತಿ ಖರೀದಿ

By BK Ashwin  |  First Published May 20, 2023, 8:18 PM IST

ಗೂಗಲ್ ಸಿಇಒ ಸುಂದರ್ ಪಿಚೈ ಅವರು 20 ವರ್ಷ ವಯಸ್ಸಿನವರೆಗೆ ಚೆನ್ನೈನಲ್ಲಿದ್ದಾಗ ತಮ್ಮ ಪೂರ್ವಜರ ಮನೆಯಲ್ಲಿ ವಾಸಿಸುತ್ತಿದ್ದರು. ಅವರು 1989 ರಲ್ಲಿ ಐಐಟಿ ಖರಗ್‌ಪುರದಲ್ಲಿ ಮೆಟಲರ್ಜಿಕಲ್ ಎಂಜಿನಿಯರಿಂಗ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನಗರವನ್ನು ತೊರೆದಿದ್ದರು.


ಚೆನ್ನೈ (ಮೇ 20, 2023): ಗೂಗಲ್ ಸಿಇಒ ಸುಂದರ್ ಪಿಚೈ ಭಾರತ ಮೂಲದವರು ಅನ್ನೋದು ಬಹುತೇಕರಿಗೆ ಗೊತ್ತಿರೋ ವಿಚಾರ. ಈಗ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಬಾಲ್ಯದಲ್ಲಿ ಬೆಳೆದ ತಮಿಳುನಾಡು ರಾಜಧಾನಿ ಚೆನ್ನೈ ಮನೆಯನ್ನು ಮಾರಾಟ ಮಾಡಲಾಗಿದೆ. ಚೆನ್ನೈನ ಅಶೋಕ್ ನಗರದಲ್ಲಿ ನೆಲೆಗೊಂಡಿರುವ ಪೂರ್ವಜರ ಮನೆಯನ್ನು ತಮಿಳು ಸಿನಿಮಾ ನಟ ಮತ್ತು ನಿರ್ಮಾಪಕ ಸಿ ಮಣಿಕಂದನ್ ಅವರು ಕೊಂಡುಕೊಂಡಿದ್ದಾರೆ.

ಇನ್ನು, ಮಣಿಕಂದನ್ ಅವರು ತಾವು ಕೊಂಡುಕೊಳ್ಳಬೇಕಿರೋ ಆಸ್ತಿ ಸುಂದರ್‌ ಪಿಚೈಗೆ ಸೇರಿದ್ದು ಎಂದು ಕಂಡುಕೊಂಡಾಗ, ಅವರು ಅದನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲು ಯಾವುದೇ ಸಮಯವನ್ನು ವ್ಯರ್ಥ ಮಾಡಲಿಲ್ಲ ಎಂದಿದ್ದಾರೆ. ಈ ಒಪ್ಪಂದವನ್ನು ಅಂತಿಮಗೊಳಿಸುವ ಪ್ರಕ್ರಿಯೆಯು ಸರಿಸುಮಾರು ನಾಲ್ಕು ತಿಂಗಳುಗಳನ್ನು ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ಈ ಮಧ್ಯೆ, ಆಸ್ತಿ ಹಸ್ತಾಂತರದ ಸಂದರ್ಭದಲ್ಲಿ, ಸುಂದರ್‌ ಪಿಚೈ ತಂದೆ ಆರ್.ಎಸ್.ಪಿಚೈ ಭಾವೋದ್ವೇಗಕ್ಕೆ ಒಳಗಾಗಿದ್ದರು ಎಂದು ತಿಳಿಸಿದ್ದಾರೆ. 

Latest Videos

ಇದನ್ನು ಓದಿ: ಗೂಗಲ್‌ ಸರ್ಚ್‌ನಲ್ಲಿ ಕೃತಕ ಬುದ್ಧಿಮತ್ತೆ ಸೇರ್ಪಡೆ; ಚಾಟ್‌ಬಾಟ್‌ನಿಂದ ಅವಕಾಶ ಸೃಷ್ಟಿ: ಸುಂದರ್ ಪಿಚೈ

ಈ ಆಸ್ತಿ ಖರೀದಿ ಪ್ರಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ತಮಿಳು ನಟ, ನಿರ್ಮಾಪಕ, "ಸುಂದರ್ ಪಿಚೈ ಅವರು ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ ಮತ್ತು ಅವರು ವಾಸಿಸುತ್ತಿದ್ದ ಮನೆಯನ್ನು ಖರೀದಿಸುವುದು ನನ್ನ ಜೀವನದ ಹೆಮ್ಮೆಯ ಸಾಧನೆಯಾಗಿದೆ" ಎಂದು ಸಿ. ಮಣಿಕಂದನ್ ಹೇಳಿದ್ದಾರೆಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಗೂಗಲ್ ಸಿಇಒ ಅವರ ತಂದೆ ಆರ್‌ಎಸ್ ಪಿಚೈ ಅವರು ಕೆಲವು ಸಮಯ ಯುಎಸ್‌ನಲ್ಲಿದ್ದ ಕಾರಣ ತಾನು ಮನೆ ಖರೀದಿಸಲು ನಾಲ್ಕು ತಿಂಗಳು ಕಾಯಬೇಕಾಯಿತು ಎಂದೂ ಹೇಳಿದ್ದಾರೆ.

ರಿಯಲ್ ಎಸ್ಟೇಟ್ ಡೆವಲಪರ್ ಕೂಡ ಆಗಿರುವ ಮಣಿಕಂದನ್, ತಾನು ಸುಂದರ್‌ ಪಿಚೈ ಅವರ ಆಸ್ತಿ ಖರೀದಿಸುತ್ತಿದ್ದೇನೆ ಎನ್ನುವುದಕ್ಕಿಂತ, ಅವರ ಹೆತ್ತವರ ವಿನಮ್ರತೆಯು ತನ್ನನ್ನು ಆಶ್ಚರ್ಯಚಕಿತಗೊಳಿಸಿತು ಎಂದೂ ಹೇಳಿದ್ದಾರೆ. ಅವರ ನಮ್ರತೆ ಮತ್ತು ವಿನಮ್ರ ವಿಧಾನದಿಂದ ನಾನು ಮಂತ್ರಮುಗ್ಧನಾಗಿದ್ದೆ. ಗೂಗಲ್‌ ಸಿಇಒ ಅವರ ತಾಯಿ ಸ್ವತಃ ಫಿಲ್ಟರ್ ಕಾಫಿ ಮಾಡಿದರು ಮತ್ತು ಅವರ ತಂದೆ ನನಗೆ ಮೊದಲ ಮೀಟಿಂಗ್‌ನಲ್ಲೇ ಸರಿಯಾದ ದಾಖಲೆಗಳನ್ನು ನೀಡಿದ್ದರು ಎಂದು ಸ್ಮರಿಸಿದ್ದಾರೆ. ಹಾಗೆ,  ಇದು ಅವರ ಮೊದಲ ಆಸ್ತಿಯಾಗಿರುವುದರಿಂದ ದಾಖಲೆಗಳನ್ನು ಹಸ್ತಾಂತರಿಸುವಾಗ ಕೆಲವು ನಿಮಿಷಗಳ ಕಾಲ ಸುಂದರ್‌ ಪಿಚೈ ಅವರ ತಂದೆ ಕಣ್ಣೀರಿಟ್ಟಿದ್ದರು" ಎಂದೂ ನಟ, ನಿರ್ಮಾಪಕ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಸಲ್ಮಾನ್‌ ಖಾನ್‌, ಸುಂದರ್‌ ಪಿಚೈ ಸೇರಿ 40 ಕೋಟಿ ಟ್ವಿಟ್ಟರ್‌ ಗ್ರಾಹಕರ ಮಾಹಿತಿ ಸೋರಿಕೆ..!

ಅಲ್ಲದೆ, ನೋಂದಣಿ ಅಥವಾ ವರ್ಗಾವಣೆ ಪ್ರಕ್ರಿಯೆಯನ್ನು ವೇಗಗೊಳಿಸಲು ಗೂಗಲ್ ಸಿಇಒ ಹೆಸರನ್ನು ಬಳಸದಿರಲು ಸುಂದರ್‌ ಪಿಚೈ ಅವರ ತಂದೆ ನಿರ್ಧರಿಸಿದ್ದರು ಎಂದೂ ಮಣಿಕಂದನ್ ಹೇಳಿದ್ದಾರೆ. ವಾಸ್ತವವಾಗಿ, ಅವರ ತಂದೆ ನೋಂದಣಿ ಕಚೇರಿಯಲ್ಲಿ ಗಂಟೆಗಳ ಕಾಲ ಕಾಯುತ್ತಿದ್ದರು, ದಾಖಲೆಗಳನ್ನು ನನಗೆ ಹಸ್ತಾಂತರಿಸುವ ಮೊದಲು ಎಲ್ಲಾ ಅಗತ್ಯ ತೆರಿಗೆಗಳನ್ನು ಪಾವತಿಸಿದರು’’ ಎಂದೂ ಅವರು ಹೇಳಿದರು.

ಗೂಗಲ್ ಸಿಇಒ ಸುಂದರ್ ಪಿಚೈ ಅವರು 20 ವರ್ಷ ವಯಸ್ಸಿನವರೆಗೆ ಚೆನ್ನೈನಲ್ಲಿದ್ದಾಗ ತಮ್ಮ ಪೂರ್ವಜರ ಮನೆಯಲ್ಲಿ ವಾಸಿಸುತ್ತಿದ್ದರು. ಅವರು 1989 ರಲ್ಲಿ ಐಐಟಿ ಖರಗ್‌ಪುರದಲ್ಲಿ ಮೆಟಲರ್ಜಿಕಲ್ ಎಂಜಿನಿಯರಿಂಗ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನಗರವನ್ನು ತೊರೆದರು. ಪದವಿಯ ನಂತರ, ಸುಂದರ್ ಪಿಚೈ ಅವರಿಗೆ ಸ್ಟ್ಯಾನ್‌ಫೋರ್ಡ್‌ನಲ್ಲಿ ವಿದ್ಯಾರ್ಥಿವೇತನವನ್ನು ನೀಡಲಾಯಿತು.

ಇದನ್ನೂ ಓದಿ: ಪ್ರಧಾನಿ ಮೋದಿಯ ಡಿಜಿಟಲ್‌ ಇಂಡಿಯಾ ದೃಷ್ಟಿಕೋನವನ್ನು ಕೊಂಡಾಡಿದ ಗೂಗಲ್‌ ಸಿಇಒ ಸುಂದರ್ ಪಿಚೈ

ಇನ್ನೊಂದೆಡೆ, ಡಿಸೆಂಬರ್‌ನಲ್ಲಿ ಚೆನ್ನೈಗೆ ಭೇಟಿ ನೀಡಿದ ಸಂದರ್ಭದಲ್ಲಿ, ಗೂಗಲ್ ಸಿಇಒ ಭದ್ರತಾ ಸಿಬ್ಬಂದಿಗೆ ಹಣ ಮತ್ತು ಮನೆಯಿಂದ ಕೆಲವು ಗೃಹೋಪಯೋಗಿ ವಸ್ತುಗಳನ್ನು ವಿತರಿಸಿದ್ದರು. ಹಾಗೆ, ಸುಂದರ್‌ ಪಿಚೈ ತಮ್ಮ ಕುಟುಂಬ ಸದಸ್ಯರೊಂದಿಗೆ ಬಾಲ್ಕನಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ನೆರೆಹೊರೆಯವರು ನೆನಪಿಸಿಕೊಂಡಿದ್ದಾರೆ. ಇನ್ನು, ಮಾರಾಟ ಮಾಡಿದರೂ, ಇಡೀ ಆಸ್ತಿಯನ್ನು ಸುಂದರ್‌ ಪಿಚೈ ಅವರ ತಂದೆ ಅವರ ವೆಚ್ಚದಲ್ಲೇ ಮನೆ ಡೆಮಾಲಿಷ್‌ ಮಾಡ್ಸಿದ್ದು, ಈ ಖಾಲಿ ಜಾಗದಲ್ಲಿ ವಿಲ್ಲಾ ನಿರ್ಮಿಸಲು ಮಣಿಕಂದನ್‌ ಪ್ಲ್ಯಾನ್‌ ಮಾಡಿದ್ದಾರೆ.

ಇದನ್ನೂ ಓದಿ: ಭಾರತದ ಡಿಜಿಟಲ್‌ ಭವಿಷ್ಯಕ್ಕೆ ಗೂಗಲ್‌ ಬದ್ಧ: Sundar Pichai

click me!