
ಚಿತ್ರ: ದಿ ಡಿಪ್ಲೊಮ್ಯಾಟ್
ಒಟಿಟಿ: ನೆಟ್ ಫ್ಲಿಕ್ಸ್
ನಿರ್ದೇಶನ: ಶಿವಂ ನಾಯರ್
ಬಿಡುಗಡೆಯ ದಿನಾಂಕ: 14.03.2025
ತಾರಾಗಣ: ಜಾನ್ ಅಬ್ರಹಾಂ, ರೇವತಿ, ಸಾದಿಯಾ ಖತೀಬ್, ಕುಮುದ್ ಮಿಶ್ರಾ, ಶರೀಬ್ ಹಶ್ಮಿ, ಅಶ್ವಥ್ ಭಟ್
ಇದು ನೈಜ ಘಟನೆಯಾಧಾರಿತ ಚಿತ್ರ. 2017 ರಲ್ಲಿ ಪಾಕಿಸ್ತಾನದಲ್ಲಿ ಭಾರತದ ರಾಯಭಾರ ಕಚೇರಿಯ ಮುಖ್ಯಸ್ಥ ಜೆಪಿ ಸಿಂಗ್ ನೇತೃತ್ವದಲ್ಲಿ ಉಜ್ಮಾ ಅಹ್ಮದ್ ಎಂಬ ಭಾರತೀಯ ಮಹಿಳೆಯನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆದುಕೊಂಡು ಬಂದ ಕಥೆ.
ಉಜ್ಮಾ ಅಹ್ಮದ್ 28 ವರ್ಷದ ವಿಚ್ಛೇದಿತ ಮಹಿಳೆ. ಅವಳ ಮೊದಲ ವಿವಾಹದಲ್ಲಿ ಒಂದು ಹೆಣ್ಣುಮಗು ಇರುತ್ತದೆ. ಅದು ಯಾವುದೋ ಒಂದು ತೀವ್ರತರ ಖಾಯಿಲೆಯಿಂದ ಬಳಲುತ್ತಿರುತ್ತದೆ. ಅದರ ವೈದ್ಯಕೀಯ ವೆಚ್ಚ ದುಬಾರಿ. ಹಾಗಾಗಿ ಉಜ್ಮಾ ನೌಕರಿಗಾಗಿ ಆಸ್ಟ್ರೇಲಿಯಾಕ್ಕೆ ಬರುತ್ತಾಳೆ. ಅಲ್ಲಿರುವ ತನ್ನ ಸ್ನೇಹಿತೆಯ ಸಹಾಯದಿಂದ ನೌಕರಿ ಹುಡುಕತೊಡಗುತ್ತಾಳೆ. ಅಲ್ಲಿ ಅವಳಿಗೆ ತಾಹಿರ್ ನ ಪರಿಚಯವಾಗುತ್ತದೆ. ಪಾಕಿಸ್ತಾನದ ತಾಹಿರ್ ತನಗೆ ದೊಡ್ಡ ಫ್ಯಾಮಿಲಿ ಇದೆಯೆಂದೂ ತನ್ನನ್ನು ಮದುವೆಯಾದರೆ ಅವಳ ಮಗಳ ವೈದ್ಯಕೀಯ ವೆಚ್ಚಕ್ಕೆ ತೊಂದರೆಯಾಗುವುದಿಲ್ಲವೆಂದು ಹೇಳುತ್ತಾನೆ. ಪಾಕಿಸ್ತಾನಕ್ಕೆ ಒಮ್ಮೆ ಬಾ ಎನ್ನುತ್ತಾನೆ. ಅವನನ್ನು ನಂಬಿ ಉಜ್ಮಾ ಪಾಕಿಸ್ತಾನಕ್ಕೆ ಹೊರಡುತ್ತಾಳೆ. ವಿಮಾನ ನಿಲ್ದಾಣಕ್ಕೆ ಬಂದು ಎದುರುಗೊಳ್ಳುವ ತಾಹಿರ್ ನ ನಡವಳಿಕೆ ಉಜ್ಮಾಗೆ ಆಶ್ಚರ್ಯ ತರಿಸುತ್ತದೆ. ಅಲ್ಲಿ ಉಜ್ಮಾಳ ಬಳಿ ಯಾರೂ ವೀಸಾ ಆಗಲಿ ಇಮಿಗ್ರೆಷನ್ ಸರ್ಟಿಫಿಕೆಟ್ ಆಗಲಿ ಕೇಳುವುದಿಲ್ಲ. ಪೊಲೀಸರ ಒಪ್ಪಿಗೆಯ ಪತ್ರವೂ ಇರುವುದಿಲ್ಲ.
ತಾಹಿರ್ ಅವಳನ್ನು ಬುನೇರ್ ಎಂಬ ಜಾಗಕ್ಕೆ ಕರೆದುಕೊಂಡು ಹೋಗುತ್ತಾನೆ. ದಾರಿಯುದ್ದಕ್ಕೂ ಬೆಟ್ಟಗುಡ್ಡ ಹಸಿರು ನೋಡುವ ಉಜ್ಮಾಳ ಸಂತೋಷ ಬಹಳಕಾಲ ಉಳಿಯುವುದಿಲ್ಲ. ತಾಹಿರನ ಸ್ಥಳಕ್ಕೆ ಬಂದಿಳಿಯುವ ಅವಳಿಗೆ ಆಘಾತ ಕಾದಿರುತ್ತದೆ. ಅವನ ಮನೆಯೇ ಒಂದು ಊರಿನಂತೆ ಇರುತ್ತದೆ. ಅಲ್ಲಿ ಅವನ ಸಹೋದರರು ಅವರ ಸಂಸಾರ ಅವರ ಅನಾಗರೀಕ ನಡವಳಿಕೆ ಎಲ್ಲವನ್ನೂ ನೋಡುತ್ತಾ ಅವಳಿಗೆ ಎಲ್ಲೋ ತಾನು ಆಯ್ದುಕೊಂಡ ದಾರಿ ತಪ್ಪಾಗಿದೆ ಎನಿಸುತ್ತದೆ. ತಾಹಿರ್ ಪಠಾಣ್ ಮನೆತನಕ್ಕೆ ಸೇರಿದವನು. ಅವನಿಗೆ ಈಗಾಗಲೇ ಮೂವರು ಹೆಂಡತಿಯರಿರುತ್ತಾರೆ. ಇವಳು ಅವನನ್ನು ಮದುವೆಯಾದರೆ ನಾಲ್ಕನೇ ಹೆಂಡತಿ. ಉಜ್ಮಾ ತಾನು ಮೋಸಹೋದೆ ಎಂದು ಹಳಹಳಿಸುತ್ತಾಳೆ. ಅಲ್ಲಿಂದ ತಪ್ಪಿಸಿಕೊಂಡು ಬರಲು ಯಾವ ಮಾರ್ಗವೂ ಇಲ್ಲ. ಬಲವಂತದಿAದ ತಾಹಿರ್ ಅವಳನ್ನು ಮದುವೆಯಾಗುತ್ತಾನೆ. ಅವಳ ಪ್ರಶ್ನೆಗಳಿಗೆ ಯಾವ ಉತ್ತರ ಕೊಡುವುದಿಲ್ಲ. ಅವಳಿಗೆ ಹೊಡೆತ ಬಡಿತ ಬಲವಂತದ ಕ್ರೂರವಾದ ಸೆಕ್ಸ್ ಅಷ್ಟೇ ಲಭ್ಯ. ಅವಳ ಮೊಬೈಲನ್ನೂ ಕಿತ್ತುಕೊಂಡಿರುತ್ತಾರೆ.
ಒಮ್ಮೆ ಅವಳ ಕೋಣೆಯ ಬಾಗಿಲು ತೆರೆದಿದೆ ಎಂದು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಾಳೆ. ಆಗ ಅಲ್ಲಿನ ಒಂದು ಹೆಣ್ಣು ಇವಳಿಗೆ ಇಲ್ಲಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಾಗದು. ಇಲ್ಲಿ ಹೊರಬಂದ ಕೂಡಲೇ ಆಟೋ ಕ್ಯಾಬ್ ಏನೂ ಸಿಗುವುದಿಲ್ಲ. ಎನ್ನುತ್ತಾಳೆ. ಅವಳ ಕೈಯಲ್ಲಿ ಮೊಬೈಲ್ ನೋಡಿದ ಉಜ್ಮಾ ಆ ಮೊಬೈಲಿಂದ ತನ್ನ ಗೆಳತಿಗೆ ಫೋನ್ ಮಾಡಿ ತಾನು ಮೋಸಹೋಗಿ ಪಾಕಿಸ್ತಾನದಲ್ಲಿ ಸಿಕ್ಕಿಕೊಂಡಿರುವುದು ತಿಳಿಸುತ್ತಾಳೆ. ಆ ಸ್ನೇಹಿತೆಯ ಗಂಡ ಒಂದು ಸಲಹೆ ಕೊಡುತ್ತಾನೆ. ಅಲ್ಲಿ ಇಂಡಿಯನ್ ಎಂಬಸಿಗೆ ಹೇಗಾದರೂ ಮಾಡು ಹೋಗು. ಅಲ್ಲಿ ನಿನ್ನ ಸಮಸ್ಯೆ ಹೇಳಿಕೋ. ಸ್ವಲ್ಪ ಕಷ್ಟವಾದರೂ ಅಲ್ಲಿ ನಿನಗೆ ಸಹಾಯ ಸಿಕ್ಕೇ ಸಿಗುತ್ತದೆ ಎನ್ನುತ್ತಾನೆ.
ಒಂದು ದಿನ ತಾಹಿರ್ ಬಂದಾಗ ಉಜ್ಮಾ ತನ್ನನ್ನು ಭಾರತದ ದೂತಾವಾಸ ಕಚೇರಿಗೆ ಕರೆದುಕೊಂಡು ಹೋದರೆ ಅಲ್ಲಿ ತನಗೆ 10 ಲಕ್ಷದಷ್ಟು ಹಣ ಕೊಡುತ್ತಾರೆ. ಎಂದು ಹೇಳಿ ನಂಬಿಸುತ್ತಾಳೆ. ಹಣವೆಂದರೆ ಹೆಣವೂ ಬಾಯಿ ಬಿಡುವುದಲ್ಲ! ತಾಹಿರ್ ಗೆ ಹತ್ತು ಲಕ್ಷ ಸಿಗುತ್ತದೆ ಎಂದಾಕ್ಷಣ ಕಣ್ಣು ಹೊಳೆಯುತ್ತದೆ. ಒಪ್ಪಿಕೊಳ್ಳುತ್ತಾನೆ. ತಾಹಿರ್ ಮತ್ತು ಅವನ ಅಣ್ಣ ಬಷೀರ್ ಇಬ್ಬರೂ ಅವಳನ್ನು ಸಾಕಷ್ಟು ದೂರ ಪ್ರಯಾಣ ಮಾಡಿಸಿ ಭಾರತದ ದೂತಾವಾಸ ಕಚೇರಿಗೆ ಕರೆತರುತ್ತಾರೆ. ಇನ್ನೂ ಕಚೇರಿಯ ಬಾಗಿಲು ತೆರೆದಿರುವುದಿಲ್ಲ. ಅಲ್ಲಿಯೇ ಲೌಂಜ್ ನಲ್ಲಿ ಕುಳಿತು ಕಾಯುತ್ತಿರುತ್ತಾರೆ. ಉಜ್ಮಾಗೆ ಇವರಿಂದ ತಪ್ಪಿಸಿಕೊಂಡು ದೂತಾವಾಸ ಕಚೇರಿಯೊಳಗೆ ಹೇಗೆ ಹೋಗುವುದು ಎಂಬುದೇ ತಿಳಿಯದೆ ಭೀತಳಾಗಿರುತ್ತಾಳೆ. ಅವಳ ಉಪಾಯ ಉಲ್ಟಾ ಆದರೆ ಅವರಿಂದ ಪಡುವ ಚಿತ್ರಹಿಂಸೆ ನೆನೆದು ಅವಳ ಎದೆ ನಡುಗುತ್ತದೆ. ಅವಳ ಪುಣ್ಯವೋ ಎಂಬಂತೆ ತಾಹಿರ್ ಮತ್ತು ಬಷೀರ್ ಸಿಗರೇಟ್ ಸೇದಲು ಹೊರಹೋಗುತ್ತಾರೆ. ಅದೇ ಸಮಯಕ್ಕೆ ದೂತಾವಾಸದ ಬಾಗಿಲು ತೆರೆಯುತ್ತದೆ.
ಉಜ್ಮಾ ಚಕ್ಕನೆ ಒಳನುಗ್ಗುತ್ತಾಳೆ. ಅಲ್ಲಿ ಕಾಣಿಸಿದ ಸಿಬ್ಬಂದಿ ಎದುರು ಕೈಜೋಡಿಸಿ ಭೀತಳಾಗಿ ತನ್ನ ಕತೆ ಅಳುತ್ತ ಹೇಳಿಕೊಳ್ಳುತ್ತಾಳೆ. ಅಲ್ಲಿನ ಸಿಬ್ಬಂದಿಗೆ ಏನೂ ಅರ್ಥವಾಗುವುದಿಲ್ಲ. ಇವಳು ಯಾರೋ ಗೂಢಚಾರಿಣಿ ಎಂದು ತಿಳಿದು ಸಾಯಿಸ ಬೇಕು ಅಥವಾ ಬಂಧಿಸಬೇಕು ಎಂದುಕೊಳ್ಳುತ್ತಾರೆ ಅಷ್ಟರಲ್ಲಿ ಅಲ್ಲಿನ ಆಫೀಸರ್ ಜೆ.ಪಿ ಸಿಂಗ್ ಬರುತ್ತಾರೆ. ಅವರ ಬಳಿ ಓಡುವ ಉಜ್ಮಾ ತನ್ನನ್ನು ರಕ್ಷಿಸಿ ಎಂದು ಮೊರೆಯಿಡುತ್ತಾಳೆ. ಅವಳ ಬಳಿ ಪಾಸ್‌ಪೋರ್ಟ್ ಮಾತ್ರ ಇರುತ್ತದೆ. ವೀಸಾ ಆಗಲಿ ಯಾವುದೇ ಇಮಿಗ್ರೆಷನ್ ಸರ್ಟಿಫಿಕೆಟ್ ಆಗಲಿ ಇರುವುದಿಲ್ಲ. ಇವಳನ್ನು ನಂಬುವುದು ಹೇಗೆ? ಜೆಪಿ ಸಿಂಗ್ ಗೊಂದಲಕ್ಕೊಳಗಾಗುತ್ತಾರೆ. ಅವರ ಸಿಬ್ಬಂದಿ ಸರ್ ಈಕೆ ಉಗ್ರಳಿರಬಹುದು ಅಥವಾ ಗೂಢಚಾರಿಣಿ ಇರಬುದು ನಮಗೇಕೆ ಉಸಾಬರಿ ಬಂಧಿಸೋಣ ಎನ್ನುತ್ತಾರೆ. ಆದರೆ ಜೆಪಿ ಸಿಂಗ್ ದುಡುಕುವುದಿಲ್ಲ. ತಮ್ಮ ಮಹಿಳಾ ಸಿಬ್ಬಂದಿಗೆ ಹೇಳಿ ಅವಳನ್ನು ಪರೀಕ್ಷೆ ಮಾಡಿಸುತ್ತಾರೆ. ಎರಡುಮೂರು ದಿನ ಗಮನಿಸುತ್ತಾರೆ. ಅವಳ ಬ್ಯಾಗ್ ಚೆಕ್ ಮಾಡಿಸುತ್ತಾರೆ. ಅದರಲ್ಲಿ ಅನುಮಾನಾಸ್ಪದವಾಗಿ ಏನೂ ಸಿಗುವುದಿಲ್ಲ.
ಈಗ ಅವರು ಅವಳ ಕತೆಯನ್ನು ಸಾವಧಾನವಾಗಿ ಕೇಳುತ್ತಾರೆ. ಅವರಿಗೆ ಅವಳ ಮೇಲೆ ನಂಬಿಕೆ ಬರುತ್ತದೆ. ಭಾರತದ ವಿದೇಶಾಂಗ ಮಂತ್ರಿಯೊಡನೆ ಮಾತನಾಡುತ್ತಾರೆ. ವಿದೇಶಾಂಗ ಮಂತ್ರಿಗಳಿAದ ಉಜ್ಮಾಳನ್ನು ಬಿಡಿಸಿಕೊಂಡು ಭಾರತಕ್ಕೆ ಕಳಿಸುವ ಬಗ್ಗೆ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ಕಾರ್ಯಪ್ರವೃತ್ತನಾಗುತ್ತಾರೆ. ಅಲ್ಲಿನ ವಿದೇಶಾಗ ವ್ಯವಹಾರಗಳ ಕಾರ್ಯದರ್ಶಿ ಫರಾಜ್ ಹಾಗೂ ಇಂಟಲಿಜೆನ್ಸ್ ಸರ್ವಿಸ್ ನ ನಿರ್ದೇಶಕ ಮಲಿಕ್ ನೊಡನೆ ಮಾತುಕತೆ ಮಾಡುತ್ತಾರೆ. ಹಿರಿಯ ರಾಜತಾಂತ್ರಿಕ ವಕೀಲ ಸಯದ್ ನೊಡನೆ ಕಾನೂನು ತೊಡಕುಗಳ ಬಗ್ಗೆ ಸಮಾಲೋಚಿಸುತ್ತಾರೆ.
ಇವರುಗಳಲ್ಲಿ ಮಲಿಕ್ ಡಬಲ್ ಗೇಮ್ ಆಡುತ್ತಾನೆ. ಸರ್ಕಾರದ ಆಜ್ಞೆಗೆ ಒಪ್ಪಿಗೆ ತೋರಿದರೂ ಒಳಗೊಳಗೆ ತಾಹಿರ್ ನನ್ನು ಭೇಟಿಯಾಗಿ ಎಲ್ಲ ವಿಷಯ ತಿಳಿಸುತ್ತಾನೆ. ಭಾರತ ಹಾಗೂ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ನಿರ್ದೇಶಕರು ಮಾತುಕತೆ ಮಾಡಿ ಉಜ್ಮಾಳನ್ನು ಭಾರತಕ್ಕೆ ಕಳುಹಿಸಲು ಒಪ್ಪುತ್ತಾರೆ. ಆದರೆ ಮಲಿಕ್ ನ ಚಿತಾವಣೆಯಿಂದ ತಾಹಿರ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತಾನೆ. ತನ್ನ ಹೆಂಡತಿಯನ್ನು ತನಗೆ ಕೊಡಿಸಿ ಎಂದು ಕೇಳುತ್ತಾನೆ. ಜೆಪಿ ಸಿಂಗ್ ಕೂಡಾ ಉಜ್ಮಾಳಿಂದ ಪ್ರತಿದಾವೆ ಹಾಕಿಸುತ್ತಾರೆ. ಉಜ್ಮಾಳ ಪರವಾಗಿ ಸಯದ್ ವಾದ ಮಾಡುತ್ತಾರೆ. ಉಜ್ಮಾ ಭಾರತೀಯಳು ಅವಳು ಅವಳ ದೇಶಕ್ಕೆ ಹೋಗಲು ಇಷ್ಟಪಡುತ್ತಾಳೆ ಎಂದು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಡುತ್ತಾರೆ. ತಾಹಿರ್ ಪರ ವಕೀಲರು ಉಜ್ಮಾ ತಾಹಿರ್ ನನ್ನು ಮದುವೆಯಾದ ಹೆಂಡತಿ ಅವಳು ತನ್ನ ಗಂಡನ ಬಳಿ ಇರುವುದೇ ಸೂಕ್ತ ಎನ್ನುತ್ತಾರೆ. ಎರಡೂ ಪರ ವಾದ ಆಲಿಸಿದ ನ್ಯಾಯಾಧೀಶರು ಮುಂದಿನ ಹಿಯರಿಂಗ್ ನಲ್ಲಿ ಉಜ್ಮಾ ಹಾಜರಿರಬೇಕೆಂದು ಹೇಳುತ್ತಾರೆ.
ಉಜ್ಮಾ ಕೋರ್ಟಿಗೆ ಹಾಜರಾದರೆ ಹೇಗಾದರೂ ಅವಳನ್ನು ಅಲ್ಲಿಂದ ಕರೆದುಕೊಂಡು ಹೋಗಬಹುದು ಎಂದು ತಾಹಿರನ ಹಾಗೂ ಮಲಿಕ್ ನ ತಂತ್ರ. ಜೆಪಿ ಸಿಂಗರು ಉಜ್ಮಾಳ ಬಳಿ ಮಾತನಾಡುತ್ತಾರೆ. ಅವಳಿಗೆ ಧೈರ್ಯ ಹೇಳುತ್ತಾರೆ. ನ್ಯಾಯಾಧೀಶರ ಮುಂದೆ ಧೈರ್ಯದಿಂದ ನಡೆದದ್ದು ಹೇಳು ಎನ್ನುತ್ತಾರೆ. ಉಜ್ಮಾ ಎಷ್ಟೇ ಧೈರ್ಯ ತಂದುಕೊಂಡರೂ ತಾಹಿರ್ ನನ್ನು ನೆನೆದರೆ ಅವಳಿಗೆ ಕೈಕಾಲು ನಡುಕ. ಅವಳು ಜೆಪಿ ಸಿಂಗರಿಗೆ ತಾನು ವಾಪಸ್ ತಾಹಿರನ ಬಳಿ ಹೋಗಬೇಕಾದರೆ ತನಗೆ ವಿಷ ಕೊಟ್ಟು ಸಾಯಿಸಿಬಿಡಿ ಆದರೆ ನಾನು ಮಾತ್ರ ಅವನ ಬಳಿ ಮರಳಿ ಹೋಗಲಾರೆ ಎನ್ನುತ್ತಾಳೆ.
ನ್ಯಾಯಾಲಯಕ್ಕೆ ಅವಳು ಹಾಜರಾಗುವ ದಿನ ಅಲ್ಲಿಗೆ ಹೊರಡುವಾಗ ತಾಹಿರ್ ನ ಗುಂಪಿನವರು ಬಂದು ಅವಳಿಗೆ ನಾನಾತರದ ಧಮಕಿ ಹಾಕಿ ಹೆದರಿಸುತ್ತಾರೆ. ಅವಳು ಕುಳಿತಿರುವ ಕಾರಿಗೆ ಅಡ್ಡ ಹಾಕಿ ಘೋಷಣೆಗಳನ್ನು ಕೂಗುತ್ತಾರೆ. ಅವಳ ಮನಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಾರೆ. ಮಲಿಕ್ ಇದರ ಹಿಂದೆ ಬೆಂಬಲವಾಗಿದ್ದಾನೆ ಎಂದು ಎಲ್ಲರಿಗೂ ಗೊತ್ತು. ಜೆಪಿ ಸಿಂಗರು ಪಾಕಿಸ್ತಾನದ ವಿದೇಶಾಂಗ ಕಚೇರಿಗೆ ಫೋನ್ ಮಾಡಿ ಮಾತನಾಡಿ ತಾಹಿರ್ ಗುಂಪನ್ನು ಚದುರಿಸುತ್ತಾರೆ. ರಕ್ತಪಾತ ಮಾಡಿದರೆ ನಾವೂ ಮಾಡಬೇಕಾಗುತ್ತದೆ ಎಂದು ಗರ್ಜಿಸುತ್ತಾರೆ.
ಅಂತೂ ಇಂತೂ ಉಜ್ಮಾಳನ್ನು ಕೋರ್ಟಿಗೆ ಕರೆತರುವಲ್ಲಿ ಸಫಲರಾಗುತ್ತಾರೆ. ಅಲ್ಲಿ ಉಜ್ಮಾ ನ್ಯಾಯಾಧೀಶರೆದುರು ತಾನು ಭಾರತೀಯಳು, ತನ್ನನ್ನು ಮೋಸದಿಂದ ಇಲ್ಲಿ ಕರೆತರಲಾಗಿತ್ತು. ತಾಹಿರನೊಂದಿಗೆ ಮೋಸದಿಂದ ಮದುವೆ ಮಾಡಲಾಯಿತು ಅವನಿಂದ ಬಹಳ ಹಿಂಸೆ ಅನುಭವಿಸಿದ್ದೇನೆ, ನನ್ನ ಮೇಲೆ ಬಲಾತ್ಕಾರ ಮಾಡಿದ್ದಾನೆ ಎಂದು ಎಲ್ಲವನ್ನೂ ಹೇಳಿ ನಾನು ನನ್ನ ದೇಶಕ್ಕೆ ಹೋಗಬೇಕು ಎನ್ನುತ್ತಾಳೆ. ನ್ಯಾಯಾಲಯ ಅವಳ ಅಹವಾಲನ್ನು ಪುರಸ್ಕರಿಸುತ್ತದೆ. ಉಜ್ಮಾಳನ್ನು ಗೌರವದಿಂದ ಭಾರತಕ್ಕೆ ಕಳುಹಿಸಬೇಕು ಮತ್ತು ವಾಘಾ ಗಡಿಯವರೆಗೂ ಪೊಲೀಸ್ ಬಂದೋಬಸ್ತಿನಲ್ಲಿ ಕಳಿಸಿಕೊಡಬೇಕು ಎಂದು ಹುಕುಂ ಮಾಡುತ್ತದೆ. ತಾಹಿರ್ ಎಷ್ಟೇ ಅಬ್ಬರಿಸಿ ಬೊಬ್ಬಿರಿದರೂ ನ್ಯಾಯಾಲಯ ಅವನ ಮಾತನ್ನು ಪುರಸ್ಕರಿಸುವುದಿಲ್ಲ.
ಜೆಪಿ ಸಿಂಗರು ಉಜ್ಮಾಳನ್ನು ಭಾರತಕ್ಕೆ ಕಳಿಸಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಪೊಲೀಸ್ ಬೆಂಗಾವಲು ವಾಹನದೊಡನೆ ವಾಘಾ ಗಡಿಗೆ ಪ್ರಯಾಣ ಬೆಳೆಸುತ್ತಾರೆ. ತಾಹಿರ್ ಸಹ ತನ್ನ ಸೇನೆಯೊಡನೆ ಇವರ ಬೆನ್ನಟ್ಟುತ್ತಾನೆ. ದಾರಿಯ ಮಧ್ಯೆ ಸಾಕಷ್ಟು ರಂಪಾಟಗಳಾಗುತ್ತದೆ. ಕೊನೆಯ ಇಪ್ಪತ್ತು ನಿಮಿಷ ಉಸಿರು ಬಿಗಿ ಹಿಡಿದು ನೋಡಬೇಕು. ಅಂತೂ ಕೊನೆಗೆ ವಾಘಾ ಗಡಿ ತಲುಪಿ ಅಲ್ಲಿ ಕೋರ್ಟ್ ಆರ್ಡರ್ ತೋರಿಸಿ ಪಾಕಿಸ್ತಾನದ ಹೆಬ್ಬಾಗಿಲು ತೆರೆಸಿ ಭಾರತದ ಗಡಿಯೊಳಗೆ ಪ್ರವೇಶಿಸುತ್ತಾರೆ. ಅದೊಂದು ಮಹತ್ವದ ಕ್ಷಣ. ಎಲ್ಲರಿಗೂ ಕಣ್ಣು ಹಸಿಯಾಗುವ ದೃಶ್ಯ. ಉಜ್ಮಾ ಕ್ಷೇಮವಾಗಿ ಭಾರತದೊಳಗೆ ಪ್ರವೇಶ ಮಾಡುತ್ತಾಳೆ ಅವಳನ್ನು ಸ್ವಾಗತಿಸಲು ಸ್ವತಃ ವಿದೇಶಾಂಗ ಮಂತ್ರಿಗಳೇ ಬಂದಿರುತ್ತಾರೆ. 'ಬಾ ಮಗಳೇ ಬಾ' ಎಂದು ಅವರು ಅವಳನ್ನು ಅಪ್ಪಿಕೊಂಡು ಸ್ವಾಗತಿಸುವಾಗ ನೋಡುವ ಎಲ್ಲರಿಗೂ ಕಣ್ಣು ಹನಿಯಾಗುವುದು ಸುಳ್ಳಲ್ಲ. ಅಲ್ಲಿ ಹೆಮ್ಮೆಯಿಂದ ಹಾರಾಡುವ ಭಾರತದ ಧ್ವಜಕ್ಕೆ ಎದ್ದು ನಿಂತು ಸಲ್ಯೂಟ್ ಮಾಡಬೇಕೆನಿಸುವುದಂತೂ ನಿಜ.
ಚಿತ್ರದ ಕೊನೆಯಲ್ಲಿ ನಿಜವಾದ ಉಜ್ಮಾಳ ಸಂದರ್ಶನ ಮತ್ತು ಆಗಿನ ವಿದೇಶಾಂಗ ಮಂತ್ರಿ ಸುಷ್ಮಾಸ್ವರಾಜ್ ಅವರ ಮಾತುಗಳನ್ನೂ ತೋರಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.