
ಪೀಕೆ
‘ಟಕಿಲಾ’ ಅಂದರೆ ಹೆಚ್ಚಿನವರಿಗೆ ಡ್ರಿಂಕ್ ನೆನಪಾಗಬಹುದು. ವಾಸ್ತವದಲ್ಲಿ ಇದು ಮೆಕ್ಸಿಕೋದ ಸಣ್ಣ ಊರು. ಇಲ್ಲಿನ ಅಗೇವ್ ಅಥವಾ ಕತ್ತಾಳೆ ಗಿಡಗಳ ಮದ್ಯ ಫೇಮಸ್. ಇದಕ್ಕೂ ಟಕಿಲಾ ಹೆಸರಿನ ಸಿನಿಮಾಕ್ಕೂ ಸಂಬಂಧ ಇಲ್ಲ. ಆದರೆ ಇಡೀ ಸಿನಿಮಾದ ಒಳ ಹರಿವಿನಲ್ಲಿ ನಶೆ ಇದೆ. ಆ ನಶೆಗೆ ತದ್ವಿರುದ್ಧವಾದ ಎರಡು ಅವಸ್ಥಾಂತರಗಳಿವೆ. ಅವು ಮುಖಾಮುಖಿಯಾಗುವುದೇ ಸಿನಿಮಾದ ಹೈಲೈಟ್.
ಸಿನಿಮಾದ ಅರ್ಧ ಭಾಗ ಪ್ರೇಮ, ಕಾಮಕ್ಕೆ ಮೀಸಲು. ಶ್ರೀಮಂತ, ಒಳ್ಳೆಯವ, ಹೆಂಡತಿಯನ್ನು ಹುಚ್ಚನಂತೆ ಪ್ರೇಮಿಸುವ ವ್ಯಕ್ತಿ ರವಿ. ಈತನಿಗೆ ಅನುರೂಪಳಾದ ಪತ್ನಿ ಅಪ್ಸರಾ. ಈ ಗಂಡ ಹೆಂಡತಿ ಮಾತಾಡುವುದಕ್ಕಿಂತ ಹೆಚ್ಚು ರೊಮ್ಯಾನ್ಸ್ ಮಾಡುತ್ತಾರೆ. ಪ್ರೇಮ, ಕಾಮವನ್ನು ಅಧ್ಯಾತ್ಮದ ಲೆವೆಲ್‌ಗೂ ಏರಿಸುತ್ತಾರೆ. ‘ತಾಂತ್ರಿಕ್ ಮಸಾಜ್’ ಕಾನ್ಸೆಪ್ಟ್‌ಗಳೆಲ್ಲ ಸಿನಿಮಾದಲ್ಲಿ ಬರುತ್ತವೆ. ಆದರೆ ಅಪ್ಸರಾಗೆ ಆಗಾಗ ಯಾರೋ ತನ್ನನ್ನು ಕದ್ದು ನೋಡುವಂತೆ ಭಾಸವಾಗುತ್ತಿರುತ್ತದೆ. ಗಂಡನಿಗೂ ಈ ವಿಷಯ ಹೇಳುತ್ತಾಳೆ. ಹೊರಬಂದರೆ ಯಾರೊಬ್ಬರೂ ಕಾಣಿಸುವುದಿಲ್ಲ. ಆದರೆ ವೀಕ್ಷಕರಿಗೆ ಅಲ್ಲೊಬ್ಬ ಸ್ಟಾಕರ್ ಕಾಣುತ್ತಾನೆ.
ಇನ್ನೊಂದೆಡೆ ಈ ರವಿಯ ಪಕ್ಕದ ಮನೆಯಾತ ಹೆಣ್ಣುಬಾಕ ದುರುಳ ವರುಣ್. ಆತನ ಕಣ್ಣು ಅಪ್ಸರಾ ಮೇಲೆ ಬೀಳುತ್ತದೆ. ಇವೆಲ್ಲದರ ಪರಿಣಾಮವನ್ನು ಸಿನಿಮಾ ಮತ್ತೊಂದಿಷ್ಟು ನಶೆಯ ಹಿನ್ನೆಲೆಯಲ್ಲಿ ಕಟ್ಟಿಕೊಡುತ್ತದೆ. ಒಟ್ಟಿನಲ್ಲಿ ನಶೆಯ ತಂಗಾಳಿ, ಬಿರುಗಾಳಿ ಮೇಲೆ ಸಿನಿಮಾ ಸ್ಟ್ರಕ್ಚರ್ ನಿಂತಿದೆ. ಸಂದೇಶವನ್ನೂ ಹೇಳುವ ಪ್ರಯತ್ನವಿದೆ. ಪ್ರವೀಣ್ ನಾಯಕ್ ಭಿನ್ನ ಬಗೆಯ ಕಥೆ ಹೇಳಲು ಪ್ರಯತ್ನ ಮಾಡಿದ್ದಾರೆ. ಕಲಾವಿದರು ನ್ಯಾಯ ಒದಗಿಸುವ ರೀತಿ ಅಭಿನಯಿಸಿದ್ದಾರೆ.
ಚಿತ್ರ: ಟಕಿಲಾ
ತಾರಾಗಣ: ಧರ್ಮಕೀರ್ತಿ ರಾಜ್, ನಿಕಿತಾ ಸ್ವಾಮಿ, ಸುಮನ್ ಶರ್ಮಾ
ನಿರ್ದೇಶನ: ಕೆ ಪ್ರವೀಣ್ ನಾಯಕ್
ಮನುಷ್ಯ ಯಾವುದಾದರೂ ಒಂದು ಚಟಕ್ಕೆ ಅಂಟಿಕೊಂಡು ಅದು ಅತಿಯಾದಾಗ ಅದರಿಂದ ಏನಾಗಬಹುದು ಎಂಬುದನ್ನು ಹೇಳುತ್ತಿರುವ ಚಿತ್ರವಿದು. ಜೀವನದಲ್ಲಿ ಹೂವಿನ ಹಾದಿ, ಮುಳ್ಳಿನ ಹಾದಿ ಎರಡೂ ಇರುತ್ತದೆ. ಆದರೆ, ಆಯ್ಕೆಮಾತ್ರ ನಮ್ಮದಾಗಿರುತ್ತದೆ. ಚಿತ್ರ ನೋಡುವಾಗ ನಮ್ಮ ಸುತ್ತ ಎಲ್ಲೋ ನಡೆದಿರಬಹುದಾದ ಕಥೆ ಅನಿಸುತ್ತದೆ. ರೊಮ್ಯಾನ್ಸ್, ಆ್ಯಕ್ಷನ್, ಮರ್ಡರ್ ಮಿಸ್ಟ್ರಿ, ಹಾರರ್ ಹೀಗೆ ನವರಸಗಳ ಮಿಶ್ರಣ ಈ ಚಿತ್ರದಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.