Viratapura Viragi Film Review: ಅಂತರಂಗ ತಾಕುವ ಮಮತಾಮಯಿ ಶಿವಯೋಗಿ

By Kannadaprabha NewsFirst Published Jan 14, 2023, 1:00 AM IST
Highlights

ಲಿಂಗದೇವರು ಕಟ್ಟಿರುವ ಕಥನಕ್ರಮ ಕೂಡ ಈ ಸಿನಿಮಾದ ಘನತೆಯನ್ನು ಮೇಲೆತ್ತಿದೆ. ಮೊದಲಾರ್ಧದಲ್ಲಿ ಕುಮಾರಸ್ವಾಮಿಗಳ ಆರಂಭದ ಬದುಕು ಇದೆ. ದ್ವಿತೀಯಾರ್ಧದಲ್ಲಿ ಅವರು ತೋರಿದ ಬೆಳಕಿನ ದಾರಿ ಗೋಚರಿಸುತ್ತದೆ.

ರಾಜೇಶ್ ಶೆಟ್ಟಿ

ಸದ್ದು ಗದ್ದಲವಿಲ್ಲದ, ನುಗ್ಗುವ ರಭಸವಿಲ್ಲದ, ಬಗ್ಗಿಸುವ ಆಸೆ ಇಲ್ಲದ, ಶಾಂತ ಸರೋವರದಂತೆ ನಗುತ್ತಾ ಹರಸುತ್ತಾ ನಿಂತಂತೆ ಇರುವ ಸಿನಿಮಾ ವಿರಾಟಪುರ ವಿರಾಗಿ. ಹಾನಗಲ್‌ ಕುಮಾರ ಶಿವಯೋಗಿಯವರ ಜೀವನ ಆಧರಿತ ಚಿತ್ರ. ಸ್ವಾಮೀಜಿ ಹೇಗಿರಬೇಕು ಅನ್ನುವುದಕ್ಕೆ ಮಾರ್ಗಸೂಚಿಯಂತೆ, ಮಠ ಮತ್ತು ಸಮಾಜ ಹೇಗೆ ಜತೆಯಾಗಿ ಸಾಗಬೇಕು ಅನ್ನುವುದಕ್ಕೆ ಮಾದರಿಯಂತೆ, ಸಾಮಾನ್ಯ ವ್ಯಕ್ತಿ ಹೇಗೆ ಜೀವಿಸಬೇಕು ಅನ್ನುವುದಕ್ಕೆ ದಾರಿದೀಪದಂತೆ ಇರುವ ಸಿನಿಮಾ. ಹಾಗಾಗಿ ಇದೊಂದು ಸಿನಿಮಾ ಪಠ್ಯಪುಸ್ತಕ. 

ಸಮಾಜಕ್ಕೆ ಒಳಿತು ಮಾಡುವ ಮನಸ್ಸಿನ ಹಾಲಯ್ಯನವರು ಕುಮಾರ ಶಿವಯೋಗಿಯಾಗುವ ಮನಸ್ಸು ಮಾಡಿ ಜೀವನ ಪಥದಲ್ಲಿ ಸಾಗುತ್ತಾ ಹಾನಗಲ್‌ ವಿರಕ್ತ ಮಠದ ಸ್ವಾಮಿಗಳಾಗಿ ಸಮುದಾಯಕ್ಕೆ, ಸಮಾಜಕ್ಕೆ ಗುರುವಿನಂತೆ, ತಾಯಿಯಂತೆ, ದೇವರಂತೆ ನಿಂತು ಪೊರೆದ ಕತೆ ಇದು. ಈ ಕತೆಯನ್ನು ಧಾವಂತವಿಲ್ಲದೆ, ಯಾರಿಗೂ ನೋವುಂಟು ಮಾಡದೆ, ತಾಳ್ಮೆಯಿಂದ ಪ್ರೀತಿಯಿಂದ ನಿರಾಳವಾಗಿ ಹೇಳಿರುವುದು ನಿರ್ದೇಶಕ ಬಿಎಸ್‌ ಲಿಂಗದೇವರು ಅವರ ಹೆಗ್ಗಳಿಕೆ. ಹಾನಗಲ್‌ ಮಠಕ್ಕೆ ಬಂದು ಕುಮಾರ ಶಿವಯೋಗಿಯಾಗುವಲ್ಲಿಂದ ಶುರುವಾಗುವ ಕತೆ ಒಮ್ಮೆ ಹಿಂದಕ್ಕೆ ಹೋಗಿ ಮತ್ತೆ ಮುಂದಕ್ಕೆ ಚಲಿಸುತ್ತದೆ. 

ಚಿತ್ರ: ವಿರಾಟಪುರ ವಿರಾಗಿ

ನಿರ್ದೇಶನ: ಬಿಎಸ್‌ ಲಿಂಗದೇವರು

ತಾರಾಗಣ: ಸುಚೇಂದ್ರಪ್ರಸಾದ್‌, ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ

ರೇಟಿಂಗ್‌: 4

ಲಿಂಗದೇವರು ಕಟ್ಟಿರುವ ಕಥನಕ್ರಮ ಕೂಡ ಈ ಸಿನಿಮಾದ ಘನತೆಯನ್ನು ಮೇಲೆತ್ತಿದೆ. ಮೊದಲಾರ್ಧದಲ್ಲಿ ಕುಮಾರಸ್ವಾಮಿಗಳ ಆರಂಭದ ಬದುಕು ಇದೆ. ದ್ವಿತೀಯಾರ್ಧದಲ್ಲಿ ಅವರು ತೋರಿದ ಬೆಳಕಿನ ದಾರಿ ಗೋಚರಿಸುತ್ತದೆ. ಸಮುದಾಯವನ್ನು, ಮಾನವತ್ವವನ್ನು ಮೀರಿ ಬೆಳೆದ ಅವರು ತೋರಿದ ಬೆಳಕು ಸೂಕ್ಷ್ಮವಾಗಿ ಅಂತರಂಗಕ್ಕೆ ತಾಕಿದರೆ ಅದೇ ಈ ಸಿನಿಮಾದ ಸಾರ್ಥಕತೆ. ಇದೊಂದು ಮಹತ್ವದ ಸಿನಿಮಾ ಆಗಲು ದೊಡ್ಡ ಕಾರಣ ಮಣಿಕಾಂತ್‌ ಕದ್ರಿ ಸಂಗೀತ. ಇಡೀ ಸಿನಿಮಾವನ್ನು ಆವರಿಸಿದ ಸಂಗೀತದ ಮಾಧುರ್ಯ ಆಚೆ ಬಂದ ನಂತರವೂ ಉಳಿದಿರುತ್ತದೆ. ಅಶೋಕ್‌ ರಾಮನ್‌ ಛಾಯಾಗ್ರಹಣದಲ್ಲಿ ಹಲವಾರು ಚಿತ್ರಗಳು ಮನಸ್ಸಲ್ಲಿ ಹಾಗೇ ಉಳಿದುಬಿಡುತ್ತವೆ.

Vijayanand Film Review: ಸಾಧನೆಯ ವಿಜಯ, ಗೆಲುವಿನ ಆನಂದ

ಇಲ್ಲಿ ಶಿವಯೋಗಿಗಳ ಕತೆಯನ್ನು ಹೇಳುವುದರ ಜೊತೆಗೆ ಸಮಾಜದ ಕತೆಯನ್ನು, ಕಾಲಘಟ್ಟದ ಕತೆಯನ್ನು, ಮನುಷ್ಯರ ದುರಾಸೆ, ಹತಾಶೆಯ ಕತೆಯನ್ನೂ ಹೇಳಿರುವುದು ಬರವಣಿಗೆಯ ಹೆಚ್ಚುಗಾರಿಕೆ. ಒಂದು ಜೀವ ಸಮಾಜದ ಏಳ್ಗೆಗಾಗಿ ತುಡಿದು, ದುಡಿದು, ಮುಂದಿನ ಪೀಳಿಗೆಯ ಒಳ್ಳೆಯದನ್ನೇ ಬಯಸಿ ದೂರಾಗುವ ಈ ಕಥನ ಈ ಹೊತ್ತಿನ ಅಂತಃಕರಣ ಮಿಡಿಯುವ ಪ್ರಯತ್ನ. ಮಾವಿನ ಎಲೆಯ ತೋರಣ ಕಟ್ಟಿರುವ, ತೆಂಗು ಬಾಳೆ ಬಾಗುತ್ತಾ ಸ್ವಾಗತಿಸುವ ಚಪ್ಪರದ ಕೆಳಗೆ ನಿಂತಾಗ ಉಂಟಾಗುವ ದೈವಿಕ ಅನುಭೂತಿ ಒದಗಿಸುವುದು ಈ ಸಿನಿಮಾದ ಶ್ರೇಷ್ಠತೆ.

click me!