Sanju weds Geetha 2 Review: ಅಪ್ಪನ ವಿರೋಧ, ಇಡ್ಲಿ ನೀಡುವ ಹುಡುಗ, ಸೋತ ರಾಣಿಯನ್ನು ಸೈನಿಕ ಗೆಲ್ಲಿಸುವ ಕಥೆ

Published : Jan 18, 2025, 07:23 PM IST
Sanju weds Geetha 2 Review: ಅಪ್ಪನ ವಿರೋಧ, ಇಡ್ಲಿ ನೀಡುವ ಹುಡುಗ, ಸೋತ ರಾಣಿಯನ್ನು ಸೈನಿಕ ಗೆಲ್ಲಿಸುವ ಕಥೆ

ಸಾರಾಂಶ

ಅವಳು ಬಹುದೊಡ್ಡ ಉದ್ಯಮಿಯ ಮುದ್ದಿನ ಮಗಳು ಗೀತಾ. ಬೀದಿ ಬದಿ ಸೀರೆ ಮಾರುವ, ಸೀರೆ ನೂಲುವ, ಎರಡು ಇಡ್ಲಿ ತಿಂದು ಮತ್ತೆ ಎರಡು ಇಡ್ಲಿ ದಾನ ಮಾಡುವ ಸಿಕ್ಕಾಪಟ್ಟೆ ಒಳ್ಳೆ ಹುಡುಗ ಸಂಜು ಮೇಲೆ ಮೊದಲ ನೋಟದಲ್ಲೇ ಅವಳಿಗೆ ಲವ್ವಾಗುತ್ತೆ.  

ಪ್ರಿಯಾ ಕೆರ್ವಾಶೆ

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನೂರಾರು ವರ್ಷಗಳ ಹಿಂದೆ ಒಬ್ಬ ರಾಣಿ ಇದ್ದಳು. ಅವಳ ಹೆಸರು ಸೆಲ್ವಿಕ್‌. ಅವಳು ಒಮ್ಮೆ ಜರ್ಮನರ ವಿರುದ್ಧ ಯುದ್ಧದಲ್ಲಿ ಸೋತುಬಿಟ್ಟಳು. ರಾಣಿ ಸೋಲೋದನ್ನು ನೋಡೋಕಾಗ್ದೆ ಒಬ್ಬ ಸೈನಿಕ ಜೋರಾಗಿ ಅತ್ತುಬಿಟ್ಟ. ಆ ಸೈನಿಕನಿಗೆ ರಾಣಿ ಮೇಲೆ ಇದ್ದ ಪ್ರೀತಿ ಅವನನ್ನು ಯಾವ ಲೆವೆಲ್‌ವರೆಗೂ ಕರೆದೊಯ್ದಿರಬಹುದು.. ಈ ಕಥೆ ‘ಸಂಜು ವೆಡ್ಸ್‌ ಗೀತಾ 2’ ಸಿನಿಮಾದ ಹಾಡೊಂದರಲ್ಲಿ ಬರುತ್ತೆ ಮತ್ತು ಇದೇ ಈ ಸಿನಿಮಾ ಕಥೆಯ ತಿರುಳೂ ಆಗಿದೆ. ಹೊರಗೆ ಜೋರು ಮಳೆ. 

ನಸು ಕತ್ತಲಿನ ಕೋಣೆಯಲ್ಲಿ ಒಂಟಿ ಹೆಣ್ಣು. ‘ನನ್ನ ಇನಿಯನ ನೆಲೆಯ ಬಲ್ಲೆಯೇನೆ..’ ಹಾಡಿನ ಮೂಲಕ ಆ ಹೆಣ್ಣಿನ ಕಥೆ ಶುರು.  ಅವಳು ಬಹುದೊಡ್ಡ ಉದ್ಯಮಿಯ ಮುದ್ದಿನ ಮಗಳು ಗೀತಾ. ಬೀದಿ ಬದಿ ಸೀರೆ ಮಾರುವ, ಸೀರೆ ನೂಲುವ, ಎರಡು ಇಡ್ಲಿ ತಿಂದು ಮತ್ತೆ ಎರಡು ಇಡ್ಲಿ ದಾನ ಮಾಡುವ ಸಿಕ್ಕಾಪಟ್ಟೆ ಒಳ್ಳೆ ಹುಡುಗ ಸಂಜು ಮೇಲೆ ಮೊದಲ ನೋಟದಲ್ಲೇ ಅವಳಿಗೆ ಲವ್ವಾಗುತ್ತೆ. ಇದಕ್ಕೆ ಅಪ್ಪನ ವಿರೋಧ. ಅದನ್ನೆಲ್ಲ ಲೆಕ್ಕಿಸದೇ ಜೇನು ಸುರಿದು ಇಡ್ಲಿ ನೀಡುವ ಹುಡುಗನೊಂದಿಗೆ ಬಾಳು ಕಟ್ಟಿಕೊಳ್ಳುವ ಗೀತಾ. ಬದುಕು ಮತ್ತೊಂದು ಘಟ್ಟಕ್ಕೆ ತೆರೆದುಕೊಳ್ಳುವಾಗ ಇಂಟರ್‌ವಲ್. 

ಮುಂದೆ ಸೋತ ರಾಣಿಯನ್ನು ಸೈನಿಕ ಗೆಲ್ಲಿಸುವ ಕಥೆ. ಕಥೆಗೆ ಪೂರಕವಾಗಿ ಸ್ವಿಟ್ಜರ್‌ಲ್ಯಾಂಡ್‌ನ ಪ್ರಕೃತಿ ಸೌಂದರ್ಯ ಅದ್ಭುತವಾಗಿ ಬಂದಿದೆ. ವಿಷಾದ, ನೋವು, ಖುಷಿಗೆ ಪೂರಕವಾಗಿ ಪ್ರಕೃತಿಯನ್ನು ಪ್ರಸ್ತುತಪಡಿಸಿರುವ ರೀತಿ ಚೆನ್ನಾಗಿದೆ. ನೇಕಾರರ ಬದುಕಿನ ಕಥೆ ಇದೆ ಅಂದರೂ ಮನಸ್ಸಲ್ಲುಳಿಯುವುದು ಪ್ರೇಮಕಥೆಯೇ. ಮೊದಲ ಭಾಗದಲ್ಲಿ ಸಹಜತೆ ಬೇಕಿತ್ತು. ಯಾಂತ್ರಿಕವಾಗಿ ಸಾಗುವ ಕಥೆಯಲ್ಲಿ ಜೀವಂತಿಕೆ ತರುವ ಪ್ರಯತ್ನವನ್ನು ನಾಗಶೇಖರ್‌ ಮಾಡಬಹುದಿತ್ತು. ಆದರೆ ಎರಡನೇ ಭಾಗದಲ್ಲಿ ಅವರು ದಟ್ಟ ಅನುಭವ ಕಟ್ಟಿಕೊಟ್ಟಿದ್ದಾರೆ. 

ಚಿತ್ರ: ಸಂಜು ವೆಡ್ಸ್‌ ಗೀತಾ 2
ತಾರಾಗಣ: ಶ್ರೀನಗರ ಕಿಟ್ಟಿ, ರಚಿತಾ ರಾಮ್‌, ಸಂಪತ್‌ ರಾಜ್‌, ತಬಲಾ ನಾಣಿ, ಸಾಧು ಕೋಕಿಲ
ನಿರ್ದೇಶನ: ನಾಗಶೇಖರ್‌
ರೇಟಿಂಗ್‌: 3

ಇದಕ್ಕೆ ಪೂರಕವಾಗಿ ಗೀತಾ ಪಾತ್ರದ ನೋವು, ದಟ್ಟ ವಿಷಾದವನ್ನು ರಚಿತಾ ಜೀವಿಸಿದ್ದಾರೆ. ತಬಲಾ ನಾಣಿ ಶಿಡ್ಲಘಟ್ಟದ ತೆಲುಗು ಮಿಶ್ರಿತ ಕನ್ನಡ ಮಾತಾಡುವ ಕುಡುಕನಾಗಿ ನಗೆ ಉಕ್ಕಿಸುತ್ತಾರೆ. ಉಳಿದವರ ನಟನೆಯೂ ಕಥೆಗೆ ಪೂರಕವಾಗಿದೆ. ಸಿನಿಮಾ ಕಥೆ ನಮ್ಮ ಊಹೆಯಂತೇ ಸಾಗಿದರೂ ಅನನ್ಯ ಅನುಭವ ಕಟ್ಟಿಕೊಡುವುದು ಸುಳ್ಳಲ್ಲ. ಪರಿಣಾಮ ಸಿನಿಮಾ ಮುಗಿಸಿ ಹೊರಬರುವಾಗ ಮನಸ್ಸಲ್ಲಿ ಉಳಿಯುವುದು ಕಾಡುವ ಹಾಡುಗಳು, ಪ್ರಕೃತಿ ಮತ್ತು ತೀರದ ಮೌನ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?