ಚಿತ್ರದ ನಾಯಕ ತಪ್ಪು ಮಾಡಿದರೂ ಸಿಕ್ಕ ಬೀಳಬಾರದೆಂದು ಮಧ್ಯಮ ವರ್ಗದ ವೀಕ್ಷಕರು ಪದೆ ಪದೇ ಪ್ರಾರ್ಥಿಸುವಂತೆ ಮಾಡುವ ಲಕ್ಕಿ ಭಾಸ್ಕರ್ ಚಿತ್ರ ನೋಡಲೇಬೇಕಾದ ಕಾರಣಗಳೇನು?
- ವೀಣಾ ರಾವ್, ಕನ್ನಡಪ್ರಭ
ಬಡತನದ ಹಿಂಸೆ, ಸಾಕು ಸಾಲದ ಸಂಬಳ, ಭುಜದ ಮೇಲಿರುವ ಸಂಸಾರದ ಹೊಣೆ, ಬಡತನದ ಕಾರಣದಿಂದ ಆಗುವ ಅವಮಾನಗಳು ಇವೆಲ್ಲವನ್ನೂ ಮೀರಿ ಭಾಸ್ಕರ್ ಶ್ರೀಮಂತನಾನದದ್ದು ಹೇಗೆ? ಅವನು ತುಳಿದ ದಾರಿ ತಪ್ಪೋ ಸರಿಯೋ? ತಪ್ಪು ದಾರಿಯಾದರೆ ಅವನು ಎಲ್ಲಿಯೂ ಸಿಕ್ಕಿಕೊಳ್ಳಲಿಲ್ಲವಾ? ಇವೆಲ್ಲವನ್ನೂ ನೋಡಬೇಕಾದರೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಲಕ್ಕಿ ಭಾಸ್ಕರ್ ಚಿತ್ರ ನೋಡಿ. ನೂರಕ್ಕೆ ನೂರು ಮನರಂಜನೆ ಒದಗಿಸುವ, ಮನೆಮಂದಿಯೆಲ್ಲ ಕುಳಿತು ನೋಡಬಹುದಾದ ಚಿತ್ರ. ದುಲ್ಕರ್ ಸಲ್ಮಾನ್ ಮುಖ್ಯ ಭೂಮಿಕೆಯಲ್ಲಿ ಇರುವ ಈ ಚಿತ್ರದ ನಿರ್ದೇಶಕ ವೆಂಕಿ ಅಟ್ಲೂರಿ. ಉಳಿದ ತಾರಾಗಣದಲ್ಲಿ ಮೀನಾಕ್ಷಿ ಚೌಧರಿ, ಟೀನೂ ಆನಂದ್, ಸಚಿನ್ ಕೆಡೆಕರ್, ಸುಧಾ, ರಘುಬಾಬು ಇದ್ದಾರೆ.
90ರ ದಶಕದ ಕಾಲಮಾನದ ಒಂದು ಕಾಲ್ಪನಿಕ ಕಥಾವಸ್ತು. ಭಾಸ್ಕರ್ ಒಬ್ಬ ಸಾಧಾರಣ ಮಧ್ಯಮ ದರ್ಜೆಯ ಸಂಸಾರಸ್ಥ. ಪಾರ್ಶ್ವವಾಯು ಪೀಡಿತ ತಂದೆ, ಓದುವ ತಮ್ಮ-ತಂಗಿ, ಪ್ರೀತಿಸಿ ಮದುವೆಯಾದ ಹೆಂಡತಿ ಸುಮತಿ, ಮಗ ಕಾರ್ತೀಕ್ ಇಷ್ಟು ಅವನ ಸಂಸಾರ. ಮಗಧ ಬ್ಯಾಂಕಿನಲ್ಲಿ ಕ್ಯಾಶಿಯರ್ ಆಗಿರುವ ಭಾಸ್ಕರ್ ಅವನ ಅವಶ್ಯಕತೆಗಳಿಗೆಲ್ಲ ಅಲ್ಲಿ ಬರುವ ಸಂಬಳ ಮಾತ್ರ. ತಂದೆ ಯಾವುದೋ ಕಾಲದಲ್ಲಿ ಕಟ್ಟಿದ ಮನೆಯೊಂದು ಬಿಟ್ಟರೆ, ಅವನ ಆಸ್ತಿ ಏನೂ ಇಲ್ಲ. ಬ್ಯಾಂಕ್ ಕೆಲಸ, ಒಂದು ಸ್ಕೂಟರ್ ಇಷ್ಟೇ ಭಾಸ್ಕರನ ಆಸ್ತಿ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಭಾಸ್ಕರ್ ಸದಾ ಹಸನ್ಮುಖಿ. ಏನು ಮಾಡಿದರೆ ತನ್ನ ಸಂಸಾರದ ಕಷ್ಟ ತೀರಬಹುದು ಎಂಬ ಯೋಚನೆಯೇ ಸದಾ ಅವನಿಗೆ. ಅವನ ಬಾಲ್ಯದ ಗೆಳೆಯ ಸೂರಿ ಅವನದೇ ಬಾಂಕಿನಲ್ಲಿ ನಾಲ್ಕನೇ ದರ್ಜೆ ಗುಮಾಸ್ತ. ಭಾಸ್ಕರನ ಸಂಬಳ ಅವನ ಅವಶ್ಯಕತೆಗಳೆಲ್ಲವನ್ನೂ ಪೂರೈಸುವುದಿಲ್ಲ. ತಿಂಗಳ ಕೊನೆಯಲ್ಲಿ ಸಾಲ ಮಾಡುವುದು, ಆ ಸಾಲ ಸಮಯಕ್ಕೆ ತೀರಿಸಲಾಗದೆ ಬಡ್ಡಿ ಕಟ್ಟುವುದು ನಡೆದೇ ಇರುತ್ತದೆ. ಸಾಲಗಾರರ ಕಾಟ ಅವರ ಬೈಯ್ಗುಳ, ಅವರೊಡನೆ ಜಗಳ ಅಥವಾ ಗೋಗರೆಯುವಿಕೆ ಎಲ್ಲವೂ ಇರುತ್ತದೆ. ಅವನ ಹೆಂಡತಿ ಸುಮತಿಗೆ ಫುಡ್ ಪ್ರಾಡಕ್ಟ್ಸ್ ವ್ಯವಹಾರ ಮಾಡಬೇಕೆಂಬ ಆಸೆ, ಆದರೆ ಅದಕ್ಕೆ ಬಂಡವಾಳ ಇಲ್ಲ. ಸುಮತಿಯ ತಾಯಿಯ ಮನೆಯಲ್ಲಂತೂ ಭಾಸ್ಕರನಿಗೆ ಕಿಲುಬು ಕಾಸಿನ ಗೌರವವೂ ಇಲ್ಲ. ಅಲ್ಲಿಗೆ ಹೋದಾಗಲೆಲ್ಲ ಸದಾ ಒಂದಲ್ಲೊಂದು ಅವಮಾನ, ಅದಕ್ಕಾಗಿ ಸುಮತಿಯ ಕಣ್ಣೀರು.
Auron Mein Kaha Dum Tha Movie Review:ಒಂದು ಮಾಗಿದ-ತ್ಯಾಗದ ಪ್ರೇಮಕಥೆ
ಭಾಸ್ಕರ್ ತನ್ನ ಕೆಲಸದಲ್ಲಿ ಬಹಳ ಶಿಸ್ತು ಅಚ್ಚಕಟ್ಟು ರೂಢಿಸಿಕೊಂಡಿರುತ್ತಾನೆ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದು, ತನ್ನ ಕೆಲಸ ತಾನು ಮಾಡುವುದು, ಎಲ್ಲರೊಡನೆ ಸ್ನೇಹದಿಂದ ಇರುವುದು, ಎಷ್ಟೇ ಒತ್ತಡವಿದ್ದರೂ ನಗು ನಗುತ್ತಾ ಕೆಲಸ ಮಾಡುವುದು ಅವನ ಅಭ್ಯಾಸ. ಪ್ರಮೋಷನ್ ಸಮಯದಲ್ಲಿ ಈ ಬಾರಿಯ ಪ್ರಮೋಷನ್ ಅವನಿಗೇ ಎಂದು ಎಲ್ಲರೂ ನಂಬಿರುತ್ತಾರೆ. ಭಾಸ್ಕರ್‌ಗೂ ಬಹಳ ನಿರೀಕ್ಷೆ ಇರುತ್ತದೆ. ಪ್ರಮೋಷನ್ ಸಿಕ್ಕರೆ ಸಂಬಳ 12000 ಆಗುತ್ತದೆ. ಮನೆಯ ಕಷ್ಟ ಸ್ವಲ್ಪವಾದರೂ ತಹಬದಿಗೆ ಬರುತ್ತದೆಂಬ ಆಸೆ ಅವನದು. ಆದರೆ ಅದೃಷ್ಟ ಕೈಕೊಟ್ಟು ಪ್ರಮೋಷನ್ ಬೇರೆಯವರ ಪಾಲಾಗುತ್ತದೆ. ಭಾಸ್ಕರ್ ನಿರಾಶನಾಗುತ್ತಾನೆ. ಮ್ಯಾನೇಜರ್ ಬಳಿ ಜಗಳವಾಡಿದರೂ ಏನೂ ಪ್ರಯೋಜನವಾಗುವುದಿಲ್ಲ.
undefined
ಒಮ್ಮೆ ಆಂಟೋನಿ ಎಂಬ ವ್ಯಕ್ತಿ ಬ್ಯಾಂಕಿಗೆ ಬಂದು ಭಾಸ್ಕರನಿಗೆ ತನ್ನ ಬಿಸಿನೆಸ್ಸಿಗೆ ಎರಡು ಲಕ್ಷ ಲೋನ್ ಬೇಕೆಂದು ಹೇಳುತ್ತಾನೆ. ಆಧಾರವಾಗಿ ಇಡಲು ತನ್ನ ಬಳಿ ಏನೂ ಇಲ್ಲ, ಟ್ರೇಡಿಂಗ್ ಲೈಸನ್ಸ್ ಇದೆ ಎನ್ನುತ್ತಾನೆ. ಆದರೆ ಭಾಸ್ಕರ್ ಅದನ್ನು ಒಪ್ಪುವುದಿಲ್ಲ. ಹಾಗೆ ಲೋನ್ ಕೊಡಲು ಆಗುವುದಿಲ್ಲ ಎಂದು ಬಿಡುತ್ತಾನೆ. ಸಂಜೆ ಅವನ ಸ್ನೇಹಿತ ಸೂರಿಯೊಡನೆ ಹೊಟೇಲಲ್ಲಿ ಕಾಫಿ ಕುಡಿಯುತ್ತಿದ್ದಾಗ ಆಂಟನಿ ಮತ್ತೆ ಬಂದು ಕೇಳಿಕೊಳ್ಳುತ್ತಾನೆ. ಒಪ್ಪಿಕೊಳ್ಳದ ಭಾಸ್ಕರನಿಗೆ ಸೂರಿ, ನೀನೇ ಕ್ಯಾಶಿಯರ್. ಏನಾದರೂ ಉಪಾಯ ಮಾಡು ಎಂದು ಹೇಳುತ್ತಾನೆ. ಪಾಪ ಆಂಟನಿ ಒಳ್ಳೆಯವನು ಎಂದೂ ಹೇಳುತ್ತಾನೆ. ಆಂಟನಿ ಕೂಡ ನನ್ನ ಸರಕುಗಳು ಪೋರ್ಟ್‌ನಲ್ಲಿ ಸಿಕ್ಕಿಕೊಂಡಿದೆ. ಬಿಡಿಸಲು ಎರಡು ಲಕ್ಷ ಬೇಕೇ ಬೇಕು. ಬಂದ ಲಾಭದಲ್ಲಿ ನಿನಗೂ ಶೇರ್ ಕೊಡುತ್ತೇನೆ ಎನ್ನುತ್ತಾನೆ. ಭಾಸ್ಕರನಿಗೂ ಸೂರಿಗೂ ಭಾಗ ಕೊಡುತ್ತೇನೆ ಎಂದಾಗ ಭಾಸ್ಕರನಿಗೆ ಸರಿ ಲಾಭ ಬರುವ ಹಾಗಿದ್ದರೆ ರಿಸ್ಕ್ ಯಾಕೆ ತೆಗೆದುಕೊಳ್ಳಬಾರದು ಎನಿಸುತ್ತದೆ. ನಾಳೆ ಎರಡು ಲಕ್ಷ ತಂದು ಕೊಡುತ್ತೇನೆ ಎನ್ನುತ್ತಾನೆ. ಇಲ್ಲಿಂದ ಭಾಸ್ಕರನ ಹಣೆ ಬರಹವೇ ಬದಲಾಗಿ ಬಿಡುತ್ತದೆ. ಹೇಗೂ ಕ್ಯಾಶಿಯರ್ ಭಾಸ್ಕರನೇ ತಾನೆ? ಕ್ಯಾಶಿನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಎರಡು ಲಕ್ಷ ತೆಗೆದು ಆಂಟನಿಗೆ ಕೊಡುತ್ತಾನೆ. ಆಂಟನಿ ಪೋರ್ಟಿಗೆ ಹೋಗಿ ತನ್ನ ಸರಕುಗಳನ್ನು ಬಿಡಿಸಿಕೊಂಡು ಮಾರುತ್ತಾನೆ, ಅವೆಲ್ಲ ಎಲೆಕ್ಟ್ರಾನಿಕ್ ಉಪಕರಣಗಳು. ಒಂದಕ್ಕೆರಡು ಲಾಭ ಬರುತ್ತದೆ ಆಂಟನಿ ಭಾಸ್ಕರ್ ಕೊಟ್ಟ ಎರಡು ಲಕ್ಷದ ಜೊತೆಗೆ ಭಾಸ್ಕರನ ಪಾಲೆಂದು ಐವತ್ತು ಸಾವಿರ ಹೆಚ್ಚಿಗೆ ಕೊಡುತ್ತಾನೆ. ಭಾಸ್ಕರ ಅವಕ್ಕಾಗುತ್ತಾನೆ. ತಿಂಗಳ ಕೊನೆಯಲ್ಲಿ ಕಾಫಿ ಟೀ ಕುಡಿಯಲೂ ಗತಿಯಿಲ್ಲದಂಥ ಸಂದರ್ಭದಲ್ಲಿ ಐವತ್ತು ಸಾವಿರ ಸಿಕ್ಕರೆ? ಭಾಸ್ಕರನ ತಲೆ ಚುರುಕಾಗಿ ಓಡುತ್ತದೆ. ಹೀಗೇ ಆಂಟನಿಗೆ ಆಗಾಗ ಸಾಲ ಕೊಡುತ್ತಿರುತ್ತಾನೆ. ಬೇಕಾದಷ್ಟು ಹಣ ಇವನೂ ಮಾಡುತ್ತಾನೆ. ಯಾರಿಗೂ ಅನುಮಾನ ಬರುವುದಿಲ್ಲ. ಸುಮತಿ ಕೇಳಿದಾಗ ಒಂದು ಪ್ರೈವೇಟ್ ಬಿಸಿನೆಸ್ ಮಾಡುತ್ತಿದ್ದೇನೆ, ಅದು ಚೆನ್ನಾ ಲಾಭ ಮಾಡುತ್ತಿದೆ ಎನ್ನುತ್ತಾನೆ. ಅವಳೂ ನಂಬಿ ಬಿಡುತ್ತಾಳೆ. ಬ್ಯಾಂಕಿನಿಂದ ಗೊತ್ತಾಗದ ಹಾಗೆ ಹಣ ತೆಗೆಯುವುದು ಮತ್ತೆ ಅದೇ ಹಣ ತಂದು ವಾಪಸ್ ಇಟ್ಟು ಬಿಡುವುದು. ಲಾಭ ತನ್ನ ಜೇಬಿಗೆ ಇಳಿಸಿಕೊಳ್ಳುವುದು ಹೀಗೇ ಮುಂದುವರೆಯುತ್ತದೆ. ಬ್ಯಾಂಕಿನ ಲೂಪ್ ಹೋಲ್ಸ್ ಭಾಸ್ಕರ ತನ್ನ ಲಾಭಕ್ಕಾಗಿ ಬಳಸಿಕೊಳ್ಳುವುದರಲ್ಲಿ ಪ್ರವೀಣನಾಗುತ್ತಾನೆ.
ಒಮ್ಮೆ ತನ್ನ ಬ್ಯಾಂಕಿನ ಎಜಿಎಂ ಹಾಗೂ ಇವನ ಪ್ರಮೋಷನ್ ತನ್ನದಾಗಿಸಿಕೊಂಡ ಹರ್ಷ ಇಬ್ಬರೂ ಬ್ಯಾಂಕಿನಿಂದ ದುಡ್ಡು ಹೊಡೆದು ಸಿಕ್ಕಿಬಿದ್ದು, ಪೊಲೀಸರ ಅಥಿತಿಯಾಗುತ್ತಾರೆ, ಆಗ ಬ್ಯಾಂಕಿನ ಅಧ್ಯಕ್ಷ ರಾಜಬೀರ್ ಲೋಖಂಡೆ ಮತ್ತು ಜಿಎಂ ವಿಓದ್ ಭೊಸ್ಲೆ ಇಬ್ಬರೂ ಚರ್ಚಿಸಿ ಭಾಸ್ಕರನನ್ನು ಎಜಿಎಂ ನನ್ನಾಗಿ ಮಾಡುತ್ತಾರೆ, ಹಾಗೂ ಕೆಲವು ಅವ್ಯವಹಾರಗಳನ್ನು ರಿಸರ್ವ್ ಬ್ಯಾಂಕಿಗೆ ಗೊತ್ತಾಗದಂತೆ ಭಾಸ್ಕರನಿಂದ ಮಾಡಿಸಿ ಕೊಡುತ್ತಾರೆ. ಭಾಸ್ಕರ ತನ್ನ ಮೇಲಾಧಿಕಾರಿ ಹೇಳಿದಂತೆ ಮಾಡುವುದರ ಜೊತೆಗೆ ತನ್ನ ಬೇಳೆಯನ್ನೂ ಬೇಯಿಸಿಕೊಳ್ಳುತ್ತಾನೆ. ಈಗ ಭಾಸ್ಕರನ ಬಳಿ ಲಕ್ಷ ಲಕ್ಷ ಹಣ ಇರುತ್ತದೆ. ಮಗನ ಬರ್ತ್ ಡೇ, ತಂಗಿ ಮದುವೆ ಎಲ್ಲವನ್ನೂ ಗ್ರಾಂಡ್ ಆಗಿ ಮಾಡುತ್ತಾನೆ. ತಮ್ಮನನ್ನು ವಿದೇಶಕ್ಕೆ ಕಳಿಸುತ್ತಾನೆ. ಇವೆಲ್ಲಕ್ಕೂ ಹಣ ಎಲ್ಲಿಂದ ಬಂತು ಎಂದರೆ ಲಾಟರಿ ಹೊಡೆಯಿತು ಎನ್ನುತ್ತಾನೆ. ಆ ಲಾಟರಿಯೂ ಒಂದು ಕಥೆ. ತನ್ನ ಕಪ್ಪು ಹಣವನ್ನ ಕ್ರಮಬದ್ಧ ಮಾಡಬೇಕೆಂದು ಆಂಟನಿಯ ಸಲಹೆಯಂತೆ ಒಂದು ಸೀರೀಸ್ ಲಾಟರಿ ಟಿಕೆಟ್ ಖರೀದಿಸುತ್ತಾನೆ. ಅದರಲ್ಲಿ ಬಹುಮಾನ ಬರುತ್ತದೆ. ಇವನ ಕಪ್ಪು ಹಣವೆಲ್ಲ ಬಿಳಿ ಆಗುತ್ತದೆ. ಇವನು ಮಾಡುವ ಕೆಲಸಗಳು ಕುತ್ತಿಗೆಗೆ ಬಂದಂಥ ಸಂದರ್ಭಗಳಲ್ಲಿ ಚಾಕಚಕ್ಯತೆಯಿಂದ ಪಾರಾಗುತ್ತಾ, ನಿಟ್ಟುಸಿರು ಬಿಡುತ್ತಾ ನೋಡುವ ನಮಗೂ ಬೆವರಿಳಿಸುತ್ತಾ ಚಿತ್ರ ರೋಚಕವಾಗಿ ಸಾಗುತ್ತದೆ.
ಪೈಥಾಣಿ: ಒಂದು ತಾಯಿ ಮಗಳ ಭಾವನಾತ್ಮಕ ಕಥೆ
1991 ನ ಹವಾಲಾ ಹಗರಣವನ್ನು ಈ ಚಿತ್ರದಲ್ಲಿ ಸೂಕ್ತವಾಗಿ ಬಳಸಿ ಕೊಂಡಿದ್ದಾರೆ. ಮುಕ್ಕಾಲುವಾಸಿ ಬ್ಯಾಂಕುಗಳು ಈ ಹವಾಲ ದಂಧೆಗೆ ಬೇನಾಮಿಯಾಗಿ ಹಣ ಕೊಡುತ್ತಿರುತ್ತದೆ. ಬ್ಯಾಂಕಿನ ಹಣ ಶೇರ‍್ಸಿನಲ್ಲಿ ಹೂಡುವುದು ಬೆಲೆ ಬಂದಾಗ ಮಾರುವುದು, ಮತ್ತೆ ಬ್ಯಾಂಕಿನ ಹಣ ಬ್ಯಾಂಕಿಗೆ ಯಾರಿಗೂ ಗೊತ್ತಾಗದ ಹಾಗೆ ಸರಿ ಮಾಡುವುದು ಇವೆಲ್ಲ ಹವಾಲಾ ದಂಧೆಯಲ್ಲಿ ನಡೆದಂಥದ್ದೇ. ಅದನ್ನೇ ಇಲ್ಲಿ ರೋಚಕವಾಗಿ ತೋರಿಸಿದ್ದಾರೆ.
ಭಾಸ್ಕರನ ಬಳಿ ಹಣ ಸೇರಿದಂತೆಲ್ಲ ಅವನ ಸ್ವಭಾವವೂ ಬದಲಾಗುತ್ತಾ ಹೋಗುತ್ತದೆ. ಸರಳವಾಗಿದ್ದವನು ಈಗ ಸಂಕೀರ್ಣವಾಗುತ್ತಾನೆ. ಅಹಂ ಮನೆ ಮಾಡುತ್ತದೆ. ಇದರಿಂದ ಹೆಂಡತಿ ಜೊತೆ ಆಗಾಗ ಮನಸ್ತಾಪ ಆಗುತ್ತದೆ. ಹೆಂಡತಿಗೆ ಬೇಕಾದ ಹೋಮ್ ಫುಡ್ ಪ್ರಾಡಕ್ಟ್ಸ್ ನ ಮಳಿಗೆ ಮಾಡಿಕೊಡುತ್ತಾನೆ. ಒಡವೆ ವಸ್ತುಗಳು ಮನೆಗೆ ಬರುತ್ತವೆ. ದುಬಾರಿ ಬೆಲೆಯ ಮನೆಗೆ ಬೇಕಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರಿಸುತ್ತಾನೆ. ಅವನ ಗೆಳೆಯ ಸೂರಿಯನ್ನು ಮರೆಯುವುದಿಲ್ಲ. ತನ್ನ ಪ್ರತಿ ಲಾಭಾಂಶದಲ್ಲೂ ಸೂರಿಗೆ ಪಾಲು ಇದ್ದೇ ಇರುತ್ತದೆ.
ಇದೆಲ್ಲ ಎಲ್ಲಿಯವರೆಗೆ? ಭಾಸ್ಕರನು ಮಾಡುವ ಗೋಲ್ ಮಾಲ್ ಗೊತ್ತಾಗದೆ ಇರುವವರೆಗೆ. ಅವನು ಮಾಡುವ ಅವ್ಯವಹಾರ ಗೊತ್ತಾದಾಗ? ಬ್ಯಾಂಕಿನ ಮೇಲಾಧಿಕಾರಿಗಳು ಏನು ಮಾಡುತ್ತಾರೆ? ಸಿಬಿಐ ಅಧಿಕಾರಿಗಳು ರೈಡ್ ಮಾಡಿದಾಗ ಭಾಸ್ಕರ ಅವರ ಕಣ್ಣೆಗೆ ಹೇಗೆ ಮಣ್ಣೆರಚುತ್ತಾನೆ? ಅವನ ಪಾಸ್ ಶೀಟಿನಲ್ಲಿ ಲಕ್ಷ ಲಕ್ಷ ಹಣ ವ್ಯವಹಾರ ನಡೆದಿದ್ದರೂ, ಅವನು ಅದನ್ನು ಸಿಬಿಐ ಕಣ್ಣಿಂದ ಹೇಗೆ ಮುಚ್ಚುತ್ತಾನೆ? ಕೋಟಿಗಟ್ಟಲೆ ಹಣವನ್ನು ಯಾವ ಕುತ್ತೂ ಬಾರದಂತೆ ತಾನೂ ಪೊಲೀಸರ ಕೈಗೆ ಸಿಗದಂತೆ ಭಾಸ್ಕರ ಎಲ್ಲಿ ಮಾಯವಾಗುತ್ತಾನೆ? ಎಲ್ಲವನ್ನೂ ನೀವೇ ತೆರೆ ಮೇಲೆ ನೋಡಿ ಆನಂದಿಸಿ. ರೋಚಕತೆ ನೀವೂ ಅನುಭವಿಸಿ. ಭಾಸ್ಕರನ ಮಾತುಗಳು ಅವನ ಬಾಯಲ್ಲೇ ಕೇಳುವುದಾದರೆ 'ಆಟ ಆಡುವುದು ಗೆಲ್ಲುವುದು ಮುಖ್ಯವಲ್ಲ. ಆಟವನ್ನು ಎಲ್ಲಿಗೆ ನಿಲ್ಲಿಸಬೇಕು ಎಂಬುದು ಆಟಗಾರನಿಗೆ ತಿಳಿದಿರಬೇಕು.' ಹೀಗೇ ಹೇಳುತ್ತಲೇ ಆಟವನ್ನೂ ಯಶಸ್ವಿಯಾಗಿ ಆಡಿ, ಬೇಕಾದಷ್ಟು ಲಾಭ ಪಡೆದು ಯಾರಿಗೂ ಸಿಗದಂತೆ ಪರಾರಿಯಾಗುವ ಭಾಸ್ಕರ ವೀಕ್ಷಕರಿಗೆ ವಿಸ್ಮಯವಾಗುತ್ತಾನೆ. ಚಿತ್ರ ನೋಡುವಾಗ ನಮ್ಮೊಳಗೆ ಭಾಸ್ಕರ ಪರಕಾಯ ಪ್ರವೇಶ ಮಾಡಿದಂತೆ ಅನಿಸುತ್ತದೆ. ಅವನು ಮಾಡುವುದು ತಪ್ಪೆಂದು ನಮಗೆ ಅನಿಸುವುದೇ ಇಲ್ಲ. ಅವನು ಎಲ್ಲಿಯೂ ಸಿಕ್ಕಿಕೊಳ್ಳಬಾರದು, ಸಿಕ್ಕಿ ಕೊಳ್ಳುವ ಹಂತ ಬಂದಾಗ ಅವನು ಪಾರಾಗಿ ಬಿಡಲಿ ಎಂದು ವೀಕ್ಷಕ ಬಯಸುವಂತೆ ಮಾಡುವ ಜಾಣ್ಮೆ ನಿರ್ದೇಶಕರದ್ದು. ದುಲ್ಕರ್ ಸಲ್ಮಾನ್ ನಟನೆಯ ಬಗ್ಗೆ ಎರಡು ಮಾತಿಲ್ಲ. ತಮ್ಮ ಲವಲವಿಕೆಯ ಅಭಿನಯದಿಂದ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಪೋಷಕ ಪಾತ್ರಗಳು ಕೂಡ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿವೆ.
90ರ ದಶಕದ ಹವಾಲ ಹಗರಣ ಇಲ್ಲಿ ದಟ್ಟವಾಗಿ ಅನುಭವಕ್ಕೆ ಬರುತ್ತದೆ. ಹರ್ಷದ್ ಮೆಹತಾನ ಹೆಸರು ಬೇರೆ ರೂಪದಲ್ಲಿ ಚಿತ್ರದಲ್ಲಿ ಹಲವಾರು ಸಲ ಬಂದು ಹೋಗುತ್ತದೆ. ಆಗ ನಡೆದ ಚಿತ್ರಣ, ಘಟನೆಗಳು ಪತ್ರಿಕೆಯೆ ಮುಖಪುಟ ಸುದ್ದಿಗಳು ನೆನಪಿರುವವರಿಗೆ ಅವೆಲ್ಲ ಸಿನಿಮಾ ರೀಲುಗಳಂತೆ ಕಣ್ಣ ಮುಂದೆ ಬಂದು ಹೋಗುತ್ತದೆ. ಚಿತ್ರದಲ್ಲಿ ಒಂದೂ ಫ್ರೇಮ್ ಮಿಸ್ ಮಾಡದಂತೆ ನೋಡಬೇಕಾದ ರೋಚಕತೆ ಕಾಯ್ದು ಕೊಂಡಿದೆ. ಆದರೆ ಚಿತ್ರ ಜನರಿಗೆ ರೋಚಕತೆ ಕೊಡುವ ನೆಪದಲ್ಲಿ ತಪ್ಪು ಸಂದೇಶ ಕೊಡುವ ಸಾಧ್ಯತೆ ಕೂಡ ತಳ್ಳಿ ಹಾಕುವಂತಿಲ್ಲ. ಕಥಾ ಕಾಲ 90ರ ದಶಕದ್ದಾದರೂ ಬ್ಯಾಂಕುಗಳಿಗೆ ಮೋಸ ಮಾಡುವವರು, ಬ್ಯಾಂಕಿನಲ್ಲೇ ಇದ್ದು ಬ್ಯಾಂಕು ದಿವಾಳಿಯಾಗುವಂತೆ ಮಾಡುವ ಉದ್ಯೋಗಿಗಳು ಈಗಲೂ ಇದ್ದಾರೆ. ಭಾಸ್ಕರ್ ಅಷ್ಟು ಹಣ ಸಂಪಾದಿಸಿದ್ದು ಅಕ್ರಮವಾಗಿಯೇ ಆದರೂ ತನ್ನ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳುತ್ತಾನೆ, ತನ್ನ ಸಂಪಾದನೆಯ ಕಪ್ಪು ಹಣ ಎಲ್ಲವೂ ವೈಟ್ ಮನಿ ಮಾಡುವುದು ಅವನ ತಂತ್ರಗಾರಿಕೆಯ ನಿಪುಣತೆಯೇ ವಿನಾ ಪ್ರಾಮಾಣಿಕತೆ ಅಲ್ಲ. ಕಾನೂನು ಕೈಯಿಂದ ತಪ್ಪಿಸಿಕೊಂಡರೂ ಮನಸ್ಸಾಕ್ಷಿಗಾದರೂ ಅಂಜಬೇಕಲ್ಲವೇ? ಸಿನಿಮಾ ಆಗಿ ನೋಡಲು ಚೆಂದ ಅಷ್ಟೆ.