Champion Film Review: ಫೇಕ್‌ ಕರೆನ್ಸಿ ವ್ಯೂಹದಲ್ಲಿ ಕ್ರೀಡಾಪಟುವಿನ ಸಮರ

By Govindaraj SFirst Published Oct 15, 2022, 2:15 AM IST
Highlights

ಹೀರೋ ಕ್ರೀಡೆಯಲ್ಲಿ ಗೆಲ್ಲುತ್ತಾನೆಯೇ, ನಕಲಿ ನೋಟುಗಳ ಜಾಲದ ಗ್ಯಾಂಗಿನಿಂದ ನಾಯಕಿ ಕುಟುಂಬ ಉಳಿಯುತ್ತದೆ ಎಂಬುದನ್ನು ನೀವು ಸಿನಿಮಾ ನೋಡಿ ತಿಳಿಯುವುದು ಅತ್ಯುತ್ತಮ.

ಆರ್‌ ಕೇಶವಮೂರ್ತಿ

ಕ್ರೀಡೆ, ನಕಲಿ ನೋಟುಗಳ ಚಲಾವಣೆಯ ಜಾಲ ಮತ್ತು ಕನಸುಗಳನ್ನು ಕಟ್ಟಿಕೊಂಡಿರುವ ಯುವ ಪ್ರತಿಭೆ ಈ ಅಂಶಗಳ ಸುತ್ತ ‘ಚಾಂಪಿಯನ್‌’ ಮೂಡಿ ಬಂದಿರುವ ಈ ಚಿತ್ರವು ಕನ್ನಡಕ್ಕೆ ಮತ್ತೊಬ್ಬ ಪಕ್ಕಾ ಮಾಸ್‌ ಹೀರೋ ಪರಿಚಯಿಸಿದೆ. ನಿರ್ದೇಶಕ ಶಾಹುರಾಜ್‌ ಸಿಂಧೆ ಈಗಿಲ್ಲ. ತಮ್ಮ ಸಿನಿಮಾ ಬಿಡುಗಡೆಗೂ ಮೊದಲೇ ಅಗಲಿದ ಅವರ ಈ ಸಿನಿಮಾ ಮಾಸ್‌ ಪ್ರೇಕ್ಷಕರನ್ನು ಅಪ್ಪಿಕೊಳ್ಳುತ್ತದೆ. ಅನುಭವಿ ಪೋಷಕ ನಟರು, ನವ ನಟರ ಹಾಸ್ಯದ ಕಮಾಲು, ಹೊಸ ನಟನ ಹೀರೋಯಿಸಂ ಸೇರಿಕೊಂಡು ‘ಚಾಂಪಿಯನ್‌’ ನೋಡುವಂತಹ ಸಿನಿಮಾ ಆಗಿದೆ. 

ಚಿತ್ರದ ನಾಯಕ ಸಚಿನ್‌ ಧನ್‌ಪಾಲ್‌ ಅವರ ಡ್ಯಾನ್ಸ್‌, ಆ್ಯಕ್ಷನ್‌ ಹಾಗೂ ಸ್ಕ್ರೀನ್‌ ಪ್ರೆಸೆನ್ಸ್‌ ಸೂಪರ್‌. ಸ್ನೇಹಿತನ ಚಿತ್ರವನ್ನು ನಿರ್ಮಾಪಕ ಶಿವಾನಂದ್‌ ಎಸ್‌ ನೀಲನ್ನವರ್‌ ಅದ್ದೂರಿಯಾಗಿಯೇ ನಿರ್ಮಿಸಿದ್ದಾರೆ. ಒಬ್ಬ ಸಾಮಾನ್ಯ ಕಾನ್‌ಸ್ಟೇಬಲ್‌ ಮಗ ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಲು ಹೊರಡುತ್ತಾನೆ. ತನ್ನ ಮಗ ಕ್ರೀಡೆಯಲ್ಲಿ ಗೆದ್ದರೆ ಸರ್ಕಾರಿ ಉದ್ಯೋಗ ಬರುತ್ತದೆಂಬ ಅಪ್ಪನ ಕನಸು, ತನ್ನ ಶಿಷ್ಯ ಇಲ್ಲಿ ಮೆಡಲ್‌ ಗೆದ್ದರೆ ತನ್ನ ಗುರಿ ಈಡೇರಿದಂತೆ ಎಂದುಕೊಳ್ಳುವ ಕೋಚ್‌. ಅಪ್ಪನ ಆಸೆ, ಗುರುವಿನ ಗುರಿ ಎರಡನ್ನೂ ಹೊತ್ತು ಬೆಂಗಳೂರಿಗೆ ಬರುವ ನಾಯಕ. ಅಲ್ಲೊಂದು ಫೇಕ್‌ ಕರೆನ್ಸಿ ನೋಟುಗಳ ಜಾಲ. 

ಚಿತ್ರ: ಚಾಂಪಿಯನ್‌

ತಾರಾಗಣ: ಸಚಿನ್‌ ಧನ್‌ಪಾಲ್‌, ಅದಿತಿ ಪ್ರಭುದೇವ, ಅವಿನಾಶ್‌, ದೇವರಾಜ್‌, ಆದಿ ಲೋಕೇಶ್‌, ಪ್ರದೀಪ್‌ ರಾವತ್‌, ಚಿಕ್ಕಣ್ಣ, ರಂಗಾಯಣ ರಘು, ಧಡಿಯ ಗಿರಿ

ನಿರ್ದೇಶನ: ಶಾಹುರಾಜ್‌ ಸಿಂಧೆ

ರೇಟಿಂಗ್‌: 3

ಈ ಅಕ್ರಮ ಜಾಲಕ್ಕೆ ನಾಯಕಿ ಅಣ್ಣ ಲಿಂಕ್‌ ಆಗುತ್ತಾನೆ. ಸತ್ಯ, ನ್ಯಾಯ ಎಂದುಕೊಳ್ಳುವ ನಾಯಕಿ ಅಣ್ಣ, ನಕಲಿ ನೋಟುಗಳನ್ನು ಚಲಾವಣೆ ಮಾಡುವ ಗ್ಯಾಂಗಿನ ಹುಡುಗ, ನಾಯಕಿಯನ್ನು ಪ್ರೀತಿಸುತ್ತಾನೆ. ಈ ಹಂತದಲ್ಲಿ ಬೆಂಗಳೂರಿಗೆ ಬರುವ ನಾಯಕನಿಗೆ ಈ ಮೂರು ತಿರುವುಗಳು ಹೇಗೆ ಕನೆಕ್ಟ್ ಆಗುತ್ತವೆ ಎಂಬುದನ್ನು ನಿರ್ದೇಶಕರು ತುಂಬಾ ರೋಚಕವಾಗಿಯೇ ನಿರೂಪಿಸಿದ್ದಾರೆ. ಆ್ಯಕ್ಷನ್‌ ನೆರಳಿನಲ್ಲಿ ಚಿತ್ರಕಥೆಯನ್ನು ಮುಂದುವರಿಸುತ್ತಲೇ ಹೋಗುವ ನಿರ್ದೇಶಕರು, ನಾಯಕನಿಗೆ ಇರುವ ಒಂದು ವೀಕ್ನೆಸ್‌ ಹೇಳುವ ಮೂಲಕ ಕತೆಗೆ ಹೊಸ ಟ್ವಿಸ್ಟ್‌ ಕೊಡುತ್ತಾರೆ. 

ಬೆಂಗಳೂರಿನಲ್ಲಿ ಸೇಸಮ್ಮನ ಸಂಭ್ರಮ: ಮಳೆಯ ಮಧ್ಯೆ ಹಾಟ್ ಆಗಿ ಕಂಡ ಸನ್ನಿ ಲಿಯೋನ್!

ಹೀರೋ ಕ್ರೀಡೆಯಲ್ಲಿ ಗೆಲ್ಲುತ್ತಾನೆಯೇ, ನಕಲಿ ನೋಟುಗಳ ಜಾಲದ ಗ್ಯಾಂಗಿನಿಂದ ನಾಯಕಿ ಕುಟುಂಬ ಉಳಿಯುತ್ತದೆ ಎಂಬುದನ್ನು ನೀವು ಸಿನಿಮಾ ನೋಡಿ ತಿಳಿಯುವುದು ಅತ್ಯುತ್ತಮ. ಚಿತ್ರಕಥೆ, ರಘು ನಿಡುವಳ್ಳಿ ಸಂಭಾಷಣೆಗಳು ಚಿತ್ರದ ಕ್ರಿಯೇಟಿವ್‌ ವಿಭಾಗವನ್ನು ಉತ್ತಮಗೊಳಿಸುತ್ತದೆ. ಅಜನೀಶ್‌ ಬಿ ಲೋಕನಾಥ್‌ ಸಂಗೀತ, ಸರ್ವಣನ್‌ ನಟರಾಜನ್‌ ಕ್ಯಾಮೆರಾ ಚಿತ್ರಕ್ಕೆ ಬೆನ್ನೆಲುಬಾಗಿ ನಿಲ್ಲುತ್ತದೆ. ಇಂಥದ್ದೊಂದು ಗಂಭೀರ ಕತೆಯಲ್ಲಿ ಸನ್ನಿ ಲಿಯೋನ್‌ ಬಂದು ‘ಡಾಬರ ಬಿಲ್ಲಿ’ ಎಂದು ಹೆಜ್ಜೆ ಹಾಕಿ, ನೋಡುಗರಿಗೆ ಹೊಸ ಕಿಕ್‌ ಕೊಡುತ್ತಾರೆ. ಮೊದಲ ಪ್ರಯತ್ನದಲ್ಲೇ ಸಚಿನ್‌ ಧನ್‌ಪಾಲ್‌ ಫಸ್ಟ್‌ ಕ್ಲಾಸ್‌ನಲ್ಲಿ ಪಾಸಾಗಿದ್ದಾರೆ. ಚಿತ್ರದ ನಾಯಕಿ ಅದಿತಿ ಪ್ರಭುದೇವ, ಹಿಂದಿನ ಚಿತ್ರಗಳಿಗಿಂತಲೂ ಮುದ್ದಾಗಿ ಕಾಣುತ್ತಾರೆ. ಒಮ್ಮೆ ನೋಡಬಹುದಾದ ಸಿಂಪಲ್‌ ಆ್ಯಕ್ಷನ್‌ ಸಿನಿಮಾ ‘ಚಾಂಪಿಯನ್‌’.

click me!