ಕೊರಿಯನ್ ಮೂಲದ ಮಾರ್ಷಲ್ ಆರ್ಟ್, ಸ್ಫೂರ್ತಿ ತುಂಬುವ ಚಿತ್ರ ಟೇಕ್ವಾಂಡೋ ಗರ್ಲ್

By Kannadaprabha NewsFirst Published Aug 31, 2024, 11:08 AM IST
Highlights

ಕೊಳೆಗೇರಿಯ ಹುಡುಗಿಯನ್ನು ಆರ್‌ಟಿಇ ಮೂಲಕ ಪ್ರತಿಷ್ಠಿತ ಶಾಲೆಗೆ ಸೇರಿಸಿದಾಗ ಎದುರಾಗುವ ಸಮಸ್ಯೆಗಳ ಬಗೆಗೂ ಬೆಳಕು ಚೆಲ್ಲಲಾಗಿದೆ. ಜೊತೆಗೆ ಟೆಕ್ವಾಂಡೋ ಎಂಬ ಕೊರಿಯನ್ ಮೂಲದ ಮಾರ್ಷಲ್ ಆರ್ಟ್ ಬಗೆಗೂ ಈ ಸಿನಿಮಾದಲ್ಲಿ ವಿವರಗಳಿವೆ.

• ಪೀಕೆ

ಈ ಸಿನಿಮಾದ ಶೀರ್ಷಿಕೆಯೇ ಹೇಳುವಂತೆ ಇದು ಸಾಮಾನ್ಯ ಹುಡುಗಿಯೊಬ್ಬಳು 'ಟೇಕ್ವಾಂಡೋ ಗರ್ಲ್' ಆಗಿ ಔನ್ನತ್ಯ ಸಾಧಿಸುವ ಕಥೆ. ಈ ಸಿನಿಮಾದ ಪ್ರಧಾನ ಪಾತ್ರ ಋತು ಬಡತನ, ಅನಕ್ಷರತೆ, ಹಿಂಸೆಯ ಪರಿಸರದಲ್ಲಿ ಬೆಳೆಯುವ ಹುಡುಗಿ. ಮಗಳಿಗೆ ಶಿಕ್ಷಣ ನೀಡಬೇಕು ಎಂಬ ತಾಯಿಯ ಒತ್ತಾಸೆಯೇ ಅವಳನ್ನ ನಗರದ ಪ್ರತಿಷ್ಠಿತ ಶಾಲೆ ಸೇರುವಂತೆ ಮಾಡುತ್ತದೆ. ಸಂಕುಚಿತ ಮನಸ್ಸುಗಳ ಜೊತೆ ನೇರ ನಡೆಯ ಹುಡುಗಿ ಎದುರಿಸುವ ಸಂಘರ್ಷಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ. 

Latest Videos

ಕೊಳೆಗೇರಿಯ ಹುಡುಗಿಯನ್ನು ಆರ್‌ಟಿಇ ಮೂಲಕ ಪ್ರತಿಷ್ಠಿತ ಶಾಲೆಗೆ ಸೇರಿಸಿದಾಗ ಎದುರಾಗುವ ಸಮಸ್ಯೆಗಳ ಬಗೆಗೂ ಬೆಳಕು ಚೆಲ್ಲಲಾಗಿದೆ. ಜೊತೆಗೆ ಟೆಕ್ವಾಂಡೋ ಎಂಬ ಕೊರಿಯನ್ ಮೂಲದ ಮಾರ್ಷಲ್ ಆರ್ಟ್ ಬಗೆಗೂ ಈ ಸಿನಿಮಾದಲ್ಲಿ ವಿವರಗಳಿವೆ. ಈ ಮಾರ್ಷಲ್ ಆರ್ಟ್‌ನ ತರಬೇತಿ ಸೂಕ್ತ ಪ್ರತಿಭೆಗಳಿಗೆ ಯಾಕೆ ಸಿಗುತ್ತಿಲ್ಲ ಎನ್ನುವ ಬಗೆಗೂ ಅರಿವು ಮೂಡಿಸುವ ಅಂಶಗಳು ಸಿನಿಮಾದಲ್ಲಿವೆ. ಇನ್ನೊಂದು ಮುಖ್ಯವಾದ ಅಂಶ ಅಂದರೆ 'ಬಡವ ನೀ ಮಡ್ಡಿದಂಗಿರು' ಅನ್ನುವ ಆಡುಮಾತು ವಾಸ್ತವದಲ್ಲೂ ಹೇಗೆ ಕೆಲಸ ಮಾಡುತ್ತೆ ಅನ್ನೋದನ್ನು ನಿರ್ದೇಶಕರಿಲ್ಲಿ ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. 

ಚಿತ್ರ: ಟೇಕ್ವಾಂಡೋ ಗರ್ಲ್
ತಾರಾಗಣ: ಋತು ಸ್ಪರ್ಶ, ಪಲ್ಲವಿ ರಾವ್, ರವೀಂದ್ರ ವೆಂಶಿ
ನಿರ್ದೇಶನ: ರವೀಂದ್ರ ವೆಂಶಿ

ಪುಟ್ಟ ಹುಡುಗಿ ಋತು ಸ್ಪರ್ಶ ಲವಲವಿಕೆಯಿಂದ ಅಭಿನಯಿಸಿದ್ದಾಳೆ. ಕಥೆಯಲ್ಲಿ ಹೊಸತನ ಏನಿಲ್ಲ. ಇಂಥಾ ಸಿನಿಮಾಗಳಲ್ಲಿರಬೇಕಾದ ಫೋಕಸ್ ಕೊರತೆಯೂ ಎದ್ದು ಕಾಣುತ್ತದೆ. ಸ್ಲಂ ಹುಡುಗಿ ಅನ್ನೋದು ಬಾಯಿ ಮಾತಿನಲ್ಲಷ್ಟೇ ಕಾಣಿಸಿದೆ. ಇಂಥಾ ಒಂದಿಷ್ಟು ಕೊರತೆಗಳಿದ್ದರೂ, ಈ ಸಿನಿಮಾ ಪ್ರತಿಭಾನ್ವಿತೆಯೊಬ್ಬಳ ಪ್ರತಿಭೆಗೆ ವೇದಿಕೆಯಂತೆ ಸಿದ್ಧಗೊಂಡಿರುವ ಕಾರಣ ಈ ಅಂಶಗಳೆಲ್ಲ ಗೌಣವೆನಿಸಬಹುದು.

click me!