ಪ್ರಮೋದ್ ಶೆಟ್ಟಿಯವರನ್ನು ಪೊಲೀಸ್ ಪಾತ್ರದಲ್ಲಿ ನೋಡಿ ನೋಡಿ ಅಭ್ಯಾಸ ಆದವರಿಗೆ, ಇದು ಅವರ ದ್ವಿತೀಯಾರ್ಧದ ಕತೆಯಂತೆಯೇ ಕಾಣುತ್ತದೆ. ಹೀಗಾಗಿ ಅವರು ಈ ಪಾತ್ರಕ್ಕೆ ಹೇಳಿ ಮಾಡಿಸಿದ ನಟ.
ಜೋಗಿ
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಳ್ಳ ಪರಾರಿ! ಈ ಶೀರ್ಷಿಕೆ ಓದಿದಾಗ ಪೊಲೀಸರ ಮೇಲೆ ಸಿಟ್ಟು ಬರುತ್ತದೆಯಾದರೂ, ಚುರುಕಾದ ಕಳ್ಳರ ಹಿಂದೆ ಓಡಿ ಅವರನ್ನು ಹಿಡಿಯುವುದು ಸುಲಭವಲ್ಲ. ಅದಕ್ಕೆ ಕಾರಣ ಪೊಲೀಸರು ಹೊಟ್ಟೆ ಬೆಳೆಸಿಕೊಂಡು ತೂಕ ಹೆಚ್ಚಿಸಿಕೊಂಡು ಡುಮ್ಮಣ್ಣರಾಗಿರುವುದು ಕೂಡ ಕಾರಣ. ಬಹಳ ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಪೊಲೀಸರ ಫಿಟ್‌ನೆಸ್ ಬಗ್ಗೆ ಸರಣಿ ಬರಹ ಬಂದು, ಅನೇಕ ಪೊಲೀಸರು ಮುಜುಗರ ಅನುಭವಿಸಬೇಕಾಗಿ ಬಂದಿತ್ತು. ನಿರ್ದೇಶಕ ಭರತ್‌ರಾಜ್ ದಢೂತಿ ಪೊಲೀಸ್ ಕಾನ್‌ಸ್ಟೇಬಲ್ ಕತೆಯನ್ನು ಚಾಪ್ಲಿನ್ ಶೈಲಿಯಲ್ಲಿ ಹೇಳಿದ್ದಾರೆ. ಸಿನಿಮಾ ನಗಿಸುತ್ತಾ ಹೋಗುತ್ತದೆ. ನಂತರ ಅವರ ಬಗ್ಗೆ ಸಹಾನುಭೂತಿ ಮೂಡುತ್ತದೆ.
ಪೊಲೀಸರು ಪಡುವ ಪಡಿಪಾಟಲು, ಎದುರಿಸುವ ಸಂದಿಗ್ಧಗಳನ್ನೆಲ್ಲ ಭರತ್, ಸಹಜವಾಗಿ ತೋರಿಸುತ್ತಾ ಹೋಗಿದ್ದಾರೆ. ತಿಂಡಿಪೋತ ಗೋವರ್ಧನ, ರೋಷತಪ್ತ ಮೇಲಧಿಕಾರಿ, ನಿವೃತ್ತಿಯ ಅಂಚಲ್ಲಿರುವ ಸಹೋದ್ಯೋಗಿ, ಲವಲವಿಕೆಯ ಸಿಬ್ಬಂದಿ, ಇವರೆಲ್ಲರ ನೊಂದ ಕುಟುಂಬವನ್ನಿಟ್ಟುಕೊಂಡು ಕತೆ ಹೇಳುತ್ತಾ ಹೋಗುವ ಭರತ್, ಇದ್ದಕ್ಕಿದ್ದಂತೆ ಒಬ್ಬ ಚುರುಕಾದ ಕಳ್ಳನನ್ನು ಅವರ ನಡುವೆ ತಂದುಬಿಡುತ್ತಾರೆ. ಅಲ್ಲಿಂದ ಸಿನಿಮಾ ಮತ್ತೊಂದು ತಿರುವು ತೆಗೆದುಕೊಳ್ಳುತ್ತದೆ. ಅವರೆಲ್ಲರ ನಿಜವಾದ ಸತ್ವಪರೀಕ್ಷೆ ಶುರುವಾಗುತ್ತದೆ.
ಇದು ನಿರ್ದೇಶಕ ಮತ್ತು ಕಲಾವಿದರ ಚಿತ್ರ. ಪ್ರಮೋದ್ ಶೆಟ್ಟಿಯವರನ್ನು ಪೊಲೀಸ್ ಪಾತ್ರದಲ್ಲಿ ನೋಡಿ ನೋಡಿ ಅಭ್ಯಾಸ ಆದವರಿಗೆ, ಇದು ಅವರ ದ್ವಿತೀಯಾರ್ಧದ ಕತೆಯಂತೆಯೇ ಕಾಣುತ್ತದೆ. ಹೀಗಾಗಿ ಅವರು ಈ ಪಾತ್ರಕ್ಕೆ ಹೇಳಿ ಮಾಡಿಸಿದ ನಟ. ಇನ್ಸ್‌ಪೆಕ್ಟರ್ ಪಾತ್ರಧಾರಿ ವಿಜಯ್ ಹರಿ, ಲೇಡಿ ಕಾನ್‌ಸ್ಟೇಬಲ್ ಪಾತ್ರದಲ್ಲಿ ಸ್ನೇಹಶ್ರೀ, ನಿವೃತ್ತಿಯ ಅಂಚಿನಲ್ಲಿರುವ ಕಾನ್‌ಸ್ಟೇಬಲ್ ರಂಜನ್ ಶೆಟ್ಟಿ, ಗೋವರ್ಧನ್ ಮನೆಯಾಕೆಯಾಗಿ ತೇಜು, ಆಕೆಯ ಅಪ್ಪನಾಗಿ ಸುಂದರ್‌ರಾಜ್, ಅವನ ಗೆಳೆಯರ ಬಳಗ ಮತ್ತು ಅಚ್ಚರಿ ಹುಟ್ಟಿಸುವಂತೆ ನಟಿಸಿರುವ ಎಸ್ ಕೆ ಉಮೇಶ್- ಚಿತ್ರವನ್ನು ರಸವತ್ತಾಗಿಸುತ್ತಾರೆ.
ಚಿತ್ರ: ಲಾಫಿಂಗ್ ಬುದ್ಧ
ನಿರ್ದೇಶನ: ಭರತ್ ರಾಜ್
ತಾರಾಗಣ: ಪ್ರಮೋದ್ ಶೆಟ್ಟಿ, ತೇಜು ಬೆಳವಾಡಿ, ದಿಗಂತ್, ವಿಜಯ್ ಹರಿ, ಸುಂದರ್‌ರಾಜ್, ಉಮೇಶ್ ಎಸ್‌ಕೆ-
ರೇಟಿಂಗ್: 4
ಹಾಸ್ಯ ಸನ್ನಿವೇಶಗಳು ಸಹಜವಾಗಿ ಹುಟ್ಟುವುದರಿಂದ ಇಡೀ ಸಿನಿಮಾ ಒಂದು ಅನುಭವವಾಗಿ ನಮ್ಮನ್ನು ತಲುಪುತ್ತದೆ. ಪೊಲೀಸ್ ಸ್ಟೇಷನ್ನು, ಪುಟ್ಟ ಊರು, ಅಲ್ಲಿನ ಮಂದಿ ಕೂಡ ಚಿತ್ರದೊಳಗೆ ಸೇರಿಕೊಂಡು ಅನುಭವವನ್ನು ಮತ್ತಷ್ಟು ಗಾಢವಾಗಿಸುತ್ತಾರೆ. ಭರತ್ ರಾಜ್ ಕತೆ ಹೇಳುವುದಿಲ್ಲ, ತೋರಿಸುತ್ತಾರೆ. ಯಾವುದೇ ಸನ್ನಿವೇಶವನ್ನು ಕೂಡ ಅವರು ಹೈಲೈಟ್ ಮಾಡಲು ಹೋಗಿಲ್ಲ. ಇದರಿಂದಾಗಿಯೇ ಈ ಚಿತ್ರಕ್ಕೆ ಸಿಂಗೀತಂ ಶ್ರೀನಿವಾಸರಾವ್ ಶೈಲಿಯ ನಿರೂಪಣೆ ಅನಾಯಾಸವಾಗಿ ದಕ್ಕಿದೆ. ರಿಷಬ್ ಶೆಟ್ಟಿ ನಿರ್ಮಾಣದ ಈ ಚಿತ್ರ ಇದು. ಅವರು ನಿರ್ದೇಶಕರಿಗೆ ಕೊಟ್ಟ ಸ್ವಾತಂತ್ರ್ಯ ಕೂಡ ಈ ಚಿತ್ರಕ್ಕೆ ನೆರವಾಗಿದೆ. ಕೊನೆಯ ದೃಶ್ಯವನ್ನು ಭರತ್ ಮುರಿದು ಕಟ್ಟಬಹುದಿತ್ತು ಅಂತ ಅನ್ನಿಸಿದರೂ, ಅದು ಚಿತ್ರ ಕೊಡುವ ಸಂತೋಷವನ್ನೇನೂ ಕಸಿದುಕೊಳ್ಳುವುದಿಲ್ಲ.