ಶಂಕರಪ್ಪನದ್ದು ಕೊಲೆ ಎಂದು ಅಷ್ಟು ಗಟ್ಟಿಯಾಗಿ ಹೇಳುವುದಕ್ಕೆ ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆ ಹುಟ್ಟಿಕೊಂಡ ಬೆನ್ನೆಲ್ಲೇ ಮಲೆನಾಡಿನ ಹಸಿರು ಪರಿಸರದಲ್ಲಿ ಸಾವು, ಬದುಕು ಮತ್ತು ಪ್ರೀತಿ ಈ ಮೂರು ತಣ್ಣಗೆ ಕಾಡುತ್ತವೆ.
ಆರ್.ಕೇಶವಮೂರ್ತಿ
ಹಸಿರಿನಿಂದ ಕೂಡಿರುವ, ಮಾರು ದೂರಕ್ಕೊಂದು ಮನೆಗಳನ್ನು ಒಳಗೊಂಡ ಪ್ರದೇಶ ಅದು. ಜನರ ಓಡಾಟ ಕೂಡ ತೀರಾ ವಿರಳ. ಇಂಥ ಊರಿಗೊಂದು ಪೊಲೀಸ್ ಠಾಣೆ ಇದೆ. ಈ ಠಾಣೆ ಆರಂಭವಾದಾಗಿನಿಂದಲೂ ಒಂದೇ ಒಂದು ಕೇಸು ಕೂಡ ದಾಖಲಾಗಿಲ್ಲ. ಈಗ ಊರಿನ ಜಮೀನ್ದಾರ ಶಂಕರಪ್ಪನ ಸಾವು ಸಂಭವಿಸುತ್ತದೆ. ಅದು ಸಹಜ ಸಾವು ಎಂದುಕೊಳ್ಳುವಾಗಲೇ ಅದು ಕೊಲೆ ಎಂದು ಘೋಷಿಸುತ್ತಾರೆ ಪೊಲೀಸ್ ಅಧಿಕಾರಿ. ಅಲ್ಲಿವರೆಗೂ ತಂಗಾಳಿಯಂತೆ ಸಾಗುತ್ತಿದ್ದ ಕತೆಯಲ್ಲಿ ಕೊಲೆ ಘಾಟು ಸೇರಿಕೊಂಡು ಹಲವು ಪದರುಗಳಾಗಿ ಸಿನಿಮಾ ತೆರೆದುಕೊಳ್ಳುತ್ತದೆ.
ಒಂದೇ ಒಂದು ಪ್ರಕರಣವನ್ನೂ ಕೈಗೆತ್ತಿಕೊಂಡು ವಿಚಾರಣೆ ಮಾಡದ ಪೊಲೀಸ್ ಅಧಿಕಾರಿ, ಶಂಕರಪ್ಪನದ್ದು ಕೊಲೆ ಎಂದು ಅಷ್ಟು ಗಟ್ಟಿಯಾಗಿ ಹೇಳುವುದಕ್ಕೆ ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆ ಹುಟ್ಟಿಕೊಂಡ ಬೆನ್ನೆಲ್ಲೇ ಮಲೆನಾಡಿನ ಹಸಿರು ಪರಿಸರದಲ್ಲಿ ಸಾವು, ಬದುಕು ಮತ್ತು ಪ್ರೀತಿ ಈ ಮೂರು ತಣ್ಣಗೆ ಕಾಡುತ್ತವೆ. ಹೀಗೆ ಕಾಡುವ 90ರ ದಶಕದ ಕೊನೆಯ ಕತೆಗೆ 70ರ ದಶಕದ ಫ್ಲ್ಯಾಷ್ ಬ್ಯಾಕ್ ಜತೆಯಾಗುತ್ತದೆ. ಇದರ ನಡುವೆ ಇ-ಮೇಲ್ ಪ್ರೀತಿಯೂ ಬರುತ್ತದೆ. ತಪ್ಪು ಮಾಡಿ ಆರೋಪ ಸಾಬೀತಾದಾರೆ ಶಿಕ್ಷೆ ಅನುಭವಿಸೋದು ಒಂದು ಕಡೆಯಾದರೆ, ಮಾಡಿದ ತಪ್ಪು ಗೊತ್ತೇ ಆಗದಂತೆ ಇರೋವರಿಗೆ ಎಂಥ ಶಿಕ್ಷೆ ಕೊಡಲು ಸಾಧ್ಯ ಎನ್ನುವ ತರ್ಕದ ಪ್ರಶ್ನೆಯನ್ನು ಈ ಚಿತ್ರ ಪ್ರೇಕ್ಷಕನ ಮುಂದಿಡುತ್ತದೆ.
ಈ ಪ್ರಶ್ನೆಗೆ ಉತ್ತರ ಮತ್ತು ಇಲ್ಲಿ ಯಾರು ಅಜ್ಞಾತವಾಸಿ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು. ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಅವರಿಗೆ ಒಂದು ಸ್ಟ್ರಾಂಗ್ ಕಂಟೆಂಟ್ ಅನ್ನು ಯಾವುದೇ ವೈಭವೀಕರಣ ಇಲ್ಲದೆ ಮೌನದಲ್ಲೇ ಹೇಳುವ ಕಲೆ ಸಿದ್ದಿಸಿ ಎಂಬುದು ಈ ಚಿತ್ರದ ಮೂಲಕ ಮತ್ತೊಮ್ಮೆ ಸಾಬೀತು ಆಗಿದೆ. ಕತೆಗೆ ಹೆಚ್ಚು ಮಹತ್ವ ಕೊಟ್ಟಂತೆ ವೇಗದ ನಿರೂಪಣೆಗೂ ಇನ್ನಷ್ಟು ಗಮನ ಕೊಡಬೇಕಿತ್ತು. ನಿರ್ದೇಶಕನ ಕಥನಕ್ಕೆ ಸಾಥ್ ಕೊಟ್ಟಿರುವುದು ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಹಾಗೂ ಚರಣ್ ರಾಜ್ ಹಿನ್ನೆಲೆ ಸಂಗೀತ.
ಚಿತ್ರ: ಅಜ್ಞಾತವಾಸಿ
ತಾರಾಗಣ: ರಂಗಾಯಣ ರಘು, ಪಾವನಾ ಗೌಡ, ಶರತ್ ಲೋಹಿತಾಶ್ವ, ಸಿದ್ದು ಮೂಲಿಮನಿ, ರವಿಶಂಕರ್ ಗೌಡ, ಯಮುನಾ ಶ್ರೀನಿಧಿ, ಅರವಿಂದ್ ಕುಪ್ಲಿಕರ್
ನಿರ್ದೇಶನ: ಜನಾರ್ದನ್ ಚಿಕ್ಕಣ್ಣ
ರೇಟಿಂಗ್: 3
ಕಲಾವಿದರೂ ಕೂಡ ತಮ್ಮ ಪಾತ್ರ ಪೋಷಣೆಯಲ್ಲಿ ಗಮನ ಸೆಳೆಯುತ್ತಾರೆ. ‘ಶಾಖಾಹಾರಿ’ ನಂತರ ರಂಗಾಯಣ ರಘು ಮತ್ತೆ ಗಂಭೀರವಾಗಿ ನಟಿಸಿದ್ದಾರೆ. ಮಲೆನಾಡಿನ ಹೆಣ್ಣುಮಗಳಾಗಿ ಪಾವನಾ ಗೌಡ, ಕಂಪ್ಯೂಟರ್ ಹುಡುಗ ಸಿದ್ದು ಮೂಲಿಮನಿ, ಊರಿನ ಜಮೀನ್ದಾರನಾಗಿ ಶರತ್ ಲೋಹಿತಾಶ್ವ, ಪೊಲೀಸ್ ಪಾತ್ರಧಾರಿ ರವಿಶಂಕರ್ ಗೌಡ, ಯಮುನಾ ಶ್ರೀನಿಧಿ ಚಿತ್ರದ ಜೀವಾಳಗಳು. ಕ್ರೈಮ್ ಥ್ರಿಲ್ಲರ್ ಕತೆ ಇಷ್ಟಪಡುವವರಿಗೆ ‘ಅಜ್ಞಾತವಾಸಿ’ ಬಹು ಮೆಚ್ಚುಗೆಗೆ ಕಾರಣವಾಗುತ್ತದೆ.