777 Charlie film review: ಸದ್ದುಗದ್ದಲದ ಜಗತ್ತಲ್ಲಿ ಒಂದು ಆಹ್ಲಾದಕರ ಮೌನ

By Kannadaprabha NewsFirst Published Jun 10, 2022, 9:13 AM IST
Highlights

ಕೆಲವು ಸಿನಿಮಾಗಳನ್ನು ಕಟ್ಟಲಾಗುತ್ತದೆ. ಇನ್ನು ಕೆಲವು ಹುಟ್ಟುತ್ತದೆ. ಹುಟ್ಟುವ ಸಿನಿಮಾಗಳಲ್ಲಿ ಎಲ್ಲವೂ ತನ್ನಿಂದ ತಾನೇ ಸರಿಯಾಗಿ ಕುಳಿತುಕೊಂಡಿರುತ್ತವೆ. ಅದಕ್ಕೆ ಸಾಕ್ಷಿ ಈ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು. ಚಾರ್ಲಿ ಈ ಸಿನಿಮಾದ ಆತ್ಮ ಮತ್ತು ಹೃದಯ.

ರಾಜೇಶ್‌ ಶೆಟ್ಟಿ

ನೆತ್ತಿ ಸುಡುವ ರಣಬಿಸಿಲಲ್ಲಿ ಹಾಯಾದ ಗಾಳಿ ಸವರಿಹೋದಂತೆ, ಚಳಿ ಕೊರೆಯುವ ಹೊತ್ತಲ್ಲಿ ಕೆಂಡದೆದುರು ಕುಳಿತಾಗಿನ ಬೆಚ್ಚಗಿನ ಭಾವದಂತೆ, ಕಿವಿಗಡಚಿಕ್ಕುವ ಸಂತೆ ಸದ್ದಿನ ಮಧ್ಯೆ ಕುಳಿತಾಗ ಕಾಡಬಹುದಾದ ಆಹ್ಲಾದಕರ ಮೌನದಂತೆ ಮನಸ್ಸಲ್ಲೇ ಉಳಿದುಹೋಗುವ ಸಿನಿಮಾ 777 ಚಾರ್ಲಿ.

ಹೃದಯದಲ್ಲಿ ಅಗ್ನಿ ಪರ್ವತ ಹೊತ್ತುಕೊಂಡಿರುವ ವ್ಯಕ್ತಿಯಲ್ಲಿ ಸಿಟ್ಟಲ್ಲದೆ ಮತ್ತೇನು ಇದ್ದೀತು. ಇಡೀ ಜಗತ್ತಲ್ಲಿ ತಾನೊಬ್ಬನೇ ಎಂಬಂತೆ ಬದುಕುತ್ತಿರುವ ಒಬ್ಬ ವ್ಯಕ್ತಿ ಧರ್ಮ. ತಾನಾಯಿತು, ತನ್ನ ಪಾಡಾಯಿತು. ಎದುರಿಗೆ ಯಾರೇ ಇದ್ದರೂ ಒಂದು ಸ್ಮೈಲು ಕೂಡ ಇಲ್ಲದ, ಎಷ್ಟೇ ನೋವಿದ್ದರೂ ಒಂದು ತೊಟ್ಟು ಕಣ್ಣೀರು ಬರದ ಕಲ್ಲೆದೆಯ ಜೀವಕ್ಕೆ ಯಾವುದೋ ಒಂದು ಗಳಿಗೆಯಲ್ಲಿ ನಾಯಿಯೊಂದು ಸಿಗುತ್ತದೆ. ಕೆಲವೊಮ್ಮೆ ನಾವು ಬಯಸದೇ ಇದ್ದಾಗಲೂ ಯಾವುದೋ ಒಂದು ನಮ್ಮ ಹಿಂಬಾಲಿಸಿ ಬರುತ್ತದೆ. ನಾವು ಬೇಡವೆಂದರೂ ನಮ್ಮ ಜೊತೆಯೇ ಉಳಿದುಹೋಗುತ್ತದೆ. ಅಂಥದ್ದೊಂದು ಸಿಹಿ ಪಾತ್ರ ಚಾರ್ಲಿ.

ಈ ಸಿನಿಮಾದಿಂದ ಒಳ್ಳೆಯ ಬ್ಯುಸಿನೆಸ್ ಹೇಗೆ ಮಾಡಬಹುದೆಂದು ಕಲಿತೆ: ರಕ್ಷಿತ್ ಶೆಟ್ಟಿ

ನಿರ್ದೇಶನ: ಕಿರಣ್‌ರಾಜ್‌ ಕೆ.

ತಾರಾಗಣ: ರಕ್ಷಿತ್‌ ಶೆಟ್ಟಿ, ಚಾರ್ಲಿ, ಸಂಗೀತಾ ಶೃಂಗೇರಿ, ರಾಜ್‌ ಬಿ ಶೆಟ್ಟಿ, ಬಾಬ್ಬಿ ಸಿಂಹ, ಗೋಪಾಲಕೃಷ್ಣ ದೇಶಪಾಂಡೆ, ಅಭಿಜಿತ್‌ ಮಹೇಶ್‌

ರೇಟಿಂಗ್‌- 4

ಅವರಿಬ್ಬರ ಬದುಕಿನ ಜರ್ನಿ ಈ ಸಿನಿಮಾ. ಈ ಪ್ರಯಾಣದಲ್ಲಿ ಕೊನೆಗೆ ಯಾರು ಬದಲಾಗುತ್ತಾರೆ, ಯಾರು ಏನು ಕಲಿಸುತ್ತಾರೆ, ನೋಡುಗನ ಮನಸ್ಸಲ್ಲಿ ಏನು ಉಳಿಸುತ್ತಾರೆ ಅನ್ನುವುದಷ್ಟೇ ಇಲ್ಲಿ ಮುಖ್ಯ. ಒಬ್ಬ ವ್ಯಕ್ತಿಯನ್ನು ಸ್ವಲ್ಪ ಒಳ್ಳೆಯವನನ್ನಾಗಿ ಮಾಡುವುದಕ್ಕೆ ಮನುಷ್ಯನಿಂದ ಸಾಧ್ಯವಾಗುತ್ತದೋ ಇಲ್ಲವೋ, ನಾಯಿಯಿಂದ ಸಾಧ್ಯ ಎನ್ನುವುದನ್ನು ಬರಹಗಾರ ಕಿರಣ್‌ರಾಜ್‌ ಸುಂದರವಾಗಿ ನಿರೂಪಿಸಿದ್ದಾರೆ. ಚಾರ್ಲಿ, ಧರ್ಮನ ಜೊತೆಯಲ್ಲಿಯೇ ಇಡ್ಲಿ ಅಂಗಡಿಯ ಅಜ್ಜ, ಅಜ್ಜಿಯ ಪಾತ್ರ ಇಟ್ಟಿದ್ದಾರೆ ಕಿರಣ್‌. ಸಿನಿಮಾ ಮುಗಿದ ಮೇಲೂ ಅವರಿಬ್ಬರು ಒಳ್ಳೆಯತನದ ಕುರುಹಾಗಿ ನಿಮ್ಮ ಜತೆಗಿರುತ್ತಾರೆ.

ಕೆಲವು ಸಿನಿಮಾಗಳನ್ನು ಕಟ್ಟಲಾಗುತ್ತದೆ. ಇನ್ನು ಕೆಲವು ಹುಟ್ಟುತ್ತದೆ. ಹುಟ್ಟುವ ಸಿನಿಮಾಗಳಲ್ಲಿ ಎಲ್ಲವೂ ತನ್ನಿಂದ ತಾನೇ ಸರಿಯಾಗಿ ಕುಳಿತುಕೊಂಡಿರುತ್ತವೆ. ಅದಕ್ಕೆ ಸಾಕ್ಷಿ ಈ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು. ಚಾರ್ಲಿ ಈ ಸಿನಿಮಾದ ಆತ್ಮ ಮತ್ತು ಹೃದಯ. ನೋವನ್ನೇ ಧರಿಸಿರುವ, ಮತ್ತೊಂದು ಜೀವಿಯ ನೋವಿಗಾಗಿ ಕಣ್ಣೀರಾಗುವ ಪಾತ್ರವಾಗಿ ರಕ್ಷಿತ್‌ ಶೆಟ್ಟಿಯದು ಮೇರು ಅಭಿನಯ. ಭಾರ್ಗವಿ ನಾರಾಯಣ್‌, ಸೋಮಶೇಖರ್‌ ರಾವ್‌, ರಾಜ್‌ ಶೆಟ್ಟಿ, ಅಭಿಜಿತ್‌ ಮಹೇಶ್‌, ಬಾಬ್ಬಿ ಸಿಂಹ ಪ್ರತಿಯೊಬ್ಬರೂ ಚಾರ್ಲಿ ಪ್ರಪಂಚದ ಉಸಿರು. ಸಂಗೀತಾ ಶೃಂಗೇರಿಯ ಲವಲವಿಕೆಯೇ ತೆರೆಗೆ ಘನತೆ. ಡಿಓಪಿ ಅರವಿಂದ್‌ ಕಶ್ಯಪ್‌, ಸಂಗೀತ ನಿರ್ದೇಶಕ ನೊಬಿನ್‌ ಪೌಲ್‌ ಇಬ್ಬರೂ ಸೇರಿಕೊಂಡು ಮ್ಯಾಜಿಕ್‌ ಮೊಮೆಂಟ್‌ಗಳನ್ನೇ ಸೃಷ್ಟಿಸಿದ್ದಾರೆ. ಅಷ್ಟರ ಮಟ್ಟಿಗೆ ಇದೊಂದು ಟೀಮ್‌ ಸಿನಿಮಾ.

Rakshith shettyಗೆ ನಾಯಿಗಿಂತ ಬೆಕ್ಕೇ ಇಷ್ಟವಂತೆ! ಬೆಕ್ಕಿನ ಸಿನಿಮಾ ಮಾಡ್ತಾರಾ?

ಮೊದಲಾರ್ಧದಲ್ಲಿ ತಮಾಷೆ ಸ್ಥಾಯಿ. ದ್ವಿತೀಯಾರ್ಧದಲ್ಲಿ ಭಾವನಾತ್ಮಕತೆಯೇ ಜೀವಾಳ. ಅಲ್ಲಲ್ಲಿ ಫಿಲಾಸಫಿಕಲ್‌ ಸ್ಪರ್ಶ ಕೊಟ್ಟುಕೊಂಡು ತಣ್ಣನೆ ನದಿಯಂತೆ ಕತೆ ಸಾಗುವುದು ಸಿನಿಮಾದ ಬರವಣಿಗೆಯ ಶಕ್ತಿ. ತಾನು ಕಲ್ಪಿಸಿಕೊಂಡಿದ್ದನ್ನು ಅಷ್ಟೇ ಪ್ರೀತಿಯಿಂದ ಕಟ್ಟಿಕೊಟ್ಟು ವಿಸ್ಮಯ ಅನುಭವಕ್ಕೆ ಪಾತ್ರವಾಗುವಂತೆ ಮಾಡುವ ನಿರ್ದೇಶಕ ಕಿರಣ್‌ರಾಜ್‌ ಮೆಚ್ಚುಗೆಗೆ ಅರ್ಹರು. ಅವರ ಈ ಕೆಲಸವೇ ಕನ್ನಡಲ್ಲೊಬ್ಬ ಅತ್ಯುತ್ತಮ ನಿರ್ದೇಶಕ ಹುಟ್ಟಿಕೊಂಡಿದ್ದನ್ನು ಸಾರುತ್ತದೆ.

ಮನಸ್ಸಲ್ಲಿ ಬೆಳೆಯುವುದಕ್ಕೆ ಎಳೆಯೊಂದು ಬಾಕಿ ಉಳಿದು ಹೋಗಿದ್ದರೆ ಎನ್ನುವ ವಿಚಾರವೊಂದನ್ನು ಬಿಟ್ಟರೆ ಸಿನಿಮಾ ನೋಡಿ ಆಚೆ ಬಂದ ಮೇಲೆ ಕಾಡುವುದಕ್ಕೆ ಹತ್ತಾರು ಸಂಗತಿಗಳಿವೆ. ಆದರೆ ಮಾತನಾಡುವುದಕ್ಕೆ ಮನಸ್ಸಿರುವುದಿಲ್ಲ. ಕೊನೆಗೆ ಉಳಿಯುವುದು ಒಂದು ಸುದೀರ್ಘ ಮೌನ.

"

click me!