
ಪ್ರಿಯಾ ಕೆರ್ವಾಶೆ
‘ಫುಲ್ ಫೈಟ್’ ಈ ಸಿನಿಮಾಕ್ಕೆ ಹೀಗೊಂದು ಟ್ಯಾಗ್‌ಲೈನ್ ಇಡೋದಕ್ಕೆ ಅವಕಾಶ ಇತ್ತು. ಏಕೆಂದರೆ ಫೈಟಿಂದಲೇ ಶುರುವಾಗುವ ಸಿನಿಮಾಕ್ಕೆ ಫೈಟೇ ಜೀವಾಳ. ಏಟಿನ ರಭಸಕ್ಕೆ ಕತೆಯೂ ಅರೆಜೀವವಾಗಿದೆ. ಇನ್ನೊಂದು ವಿಶೇಷ ಅಂದರೆ ಕ್ಯಾಮರಾ ಲೆನ್ಸಿಗೆ ಎಕ್ಸ್‌ರೇ ಮೆಶಿನ್ ಅಳವಡಿಸಿದ್ದಾರೇನೋ ಅಂತ ಡೌಟು ಬರುವ ಹಾಗೆ ಕೆಲವೊಂದು ಸೀನ್‌ಗಳಿವೆ. ಹೀರೋ ಮುಷ್ಠಿಯಲ್ಲಿ ಎದೆಗೆ ಗುದ್ದಿದಾಗ ಒಳಗೆ ಯಾವೆಲ್ಲ ಮೂಳೆಗಳು ಮುರಿದವು, ಕತ್ತಿಗೆ ಕೈಹಾಕಿದಾಗ ನರಗಳ ಕತೆ ಏನಾಯ್ತು,
ಹೀರೋನ ಪಂಚ್‌ಗೆ ಕಾಲಿನ ಮೂಳೆ ಯಾವ ಆ್ಯಂಗಲ್‌ನಿಂದ ಮುರಿಯಿತು ಅನ್ನೋದನ್ನೆಲ್ಲ ದೇಹದೊಳಗಿನ ಬದಲಾವಣೆಗಳ ಸಮೇತ ಕಲರ್ ಎಕ್ಸ್‌ರೇ ಮೋಡ್‌ನಲ್ಲಿ ತೋರಿಸಿದ್ದಾರೆ. ರೌಡಿಗಳನ್ನು ಸದೆ ಬಡಿಯುತ್ತಲೇ ಹೀರೋ ಪೃಥ್ವಿಯ ಎಂಟ್ರಿ. ಜಗತ್ತಿಗೆ ಆತ ಹೇಗೆ ಕಾಣ್ತಾನೆ ಅನ್ನೋದೆಲ್ಲಾ ಮುಖ್ಯ ಆಗಲ್ಲ, ನಾಯಕಿಯ ಪಾಲಿಗೆ ಮಾತ್ರ ಆತ ಸಖತ್ ಹ್ಯಾಂಡ್‌ಸಮ್. ಬೇರೆ ಬೇರೆ ವೇಷದಲ್ಲಿ ಬಂದು ಭೂಗತ ಪಾತಕಿ ಧನರಾಜ್‌ನ ಪಡೆಯನ್ನು ಮಟ್ಟ ಹಾಕುವ ಈ ಪೃಥ್ವಿ ನಿಜಕ್ಕೂಯಾರು, ಆತ ಯಾಕೆ ಧನರಾಜ್ ಸಹಚರರನ್ನು ಟಾರ್ಗೆಟ್ ಮಾಡುತ್ತಾನೆ ಅನ್ನೋದು ಕಥೆಯ ಒನ್‌ಲೈನ್.
ಕ್ಯಾಪಿಟಲ್ ಸಿಟಿ
ನಿರ್ದೇಶನ: ಎ ಅನಂತರಾಜು
ತಾರಾಗಣ: ರಾಜೀವ್, ಪ್ರೇರಣಾ ಕಂಬಂ, ರವಿಶಂಕರ್, ಶರತ್ ಲೋಹಿತಾಶ್ವ
ವಿಲನ್ ಆಗಿ ರವಿಶಂಕರ್ ಎಂದಿನಂತೆ ಮನರಂಜನೆ ಕೊಡುತ್ತಾರೆ. ಹೀರೋ ಬುಲೆಟ್ ಹಾರಿಸುವಾಗ ತಾನೇ ಬೆಚ್ಚಿಬಿದ್ದು ಆ್ಯಕ್ಷನ್‌ಗೆ ಕಾಮಿಡಿಯ ಟಚ್ ಕೊಡುತ್ತಾರೆ. ಪಂಚಿಂಗ್ ಮೇಲೆ ಪಂಚಿಂಗ್ ಇರುವ ಕೆಲವು ಡೈಲಾಗ್‌ಗಳು ಸಂಭಾಷಣೆ ಬರೆದವರ ಅತ್ಯುತ್ಸಾಹಕ್ಕೆ ಉದಾಹರಣೆಯಾಗಿ ಸಿಗುತ್ತದೆ. ಅದನ್ನು ಹೀರೋ ಹೇಗೆ ಹೇಳಿದ ಅನ್ನೋದನ್ನೆಲ್ಲ ನೋಡದೆ ಡೈಲಾಗನ್ನಷ್ಟೇ ಎನ್‌ಜಾಯ್ ಮಾಡಬೇಕು. ಇಂಥಾ ಕಾಮಿಡಿ ಆ್ಯಕ್ಷನ್‌ಗಳ ಸಮಾಗಮವಾಗಿ ಕ್ಯಾಪಿಟಲ್ ಸಿಟಿ ಸಿನಿಮಾವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.