Hebbuli Cut Review: ಇಲ್ಲಿ ಕನಸು ಕಾಣುವುದು ಕೂಡ ಅಪರಾಧ, ಗೌರವ ಮೊದಲೇ ಇಲ್ಲ!

Kannadaprabha News   | Kannada Prabha
Published : Jul 05, 2025, 01:03 PM IST
Hebbuli Cut

ಸಾರಾಂಶ

ಊರಲ್ಲೊಬ್ಬ ಗೌಡ. ಅವನಿಗೆ ಗೌರವ, ಸರದಿಯಲ್ಲಿ ಮೊದಲ ಸಾಲು, ಅವನ ಅಬ್ಬರದ ಮುಂದೆ ಎಲ್ಲರೂ ಮೌನ. ಅವನು ಬೇಕಾದ್ದು ಮಾಡಬಹುದು ಎಂಬ ಅಲಿಖಿತ ನಿಯಮ.

- ಜೋಗಿ

ಒಂದು ಬಿಳಿಯ ಹೂವು ಹರಿಯುವ ನೀರಿಗೆ ಬಿದ್ದು ತೇಲುತ್ತಾ ಹೋಗುತ್ತಿದೆ. ಗುರಿಯೇ ಇಲ್ಲದೇ ಸುಖವಾಗಿ ಸಾಗುತ್ತಿರುವ ಅದರ ಮೇಲೆ ಸಾಗುವ ಮೋಟರ್ ಬೈಕಿನ ಚಕ್ರ, ಅದರ ಪ್ರಯಾಣವನ್ನು ಕೊನೆಗೊಳಿಸುತ್ತದೆ. ಅವನಿಗೆ ಅವಳನ್ನು ನೋಡಿದಾಗೆಲ್ಲ ಮುಗುಳುನಗೆ. ಮಧುರವಾದ ಕನಸು. ಅವಳನ್ನು ಮೆಚ್ಚಿಸುವ ಆಸೆ. ಅದಕ್ಕಾಗಿ ಆತ ಮಾಡದ ಕೆಲಸವಿಲ್ಲ. ಚಿಂದಿ ಆಯುವುದು, ಮಟ್ಕಾ ಆಡುವುದು, ಕದಿಯುವುದು- ಅವಳ ಕಣ್ಣೋಟಕ್ಕಾಗಿ ಎಷ್ಟೊಂದು ಯಾತನೆ. ಅವನು ಚಪ್ಪಲಿ ಹೊಲಿಯುತ್ತಾನೆ. ದುಡಿಮೆಗೆ ತಕ್ಕ ಪ್ರತಿಫಲ ಇಲ್ಲ. ಗೌರವ ಮೊದಲೇ ಇಲ್ಲ. ಬಾಡಿಗೆ ಮನೆ. ಜೀತದ ಜೀವ, ನೋವಿನಲ್ಲೂ ನಗುವ ಹೆಂಡತಿ.

ಊರಲ್ಲೊಬ್ಬ ಗೌಡ. ಅವನಿಗೆ ಗೌರವ, ಸರದಿಯಲ್ಲಿ ಮೊದಲ ಸಾಲು, ಅವನ ಅಬ್ಬರದ ಮುಂದೆ ಎಲ್ಲರೂ ಮೌನ. ಅವನು ಬೇಕಾದ್ದು ಮಾಡಬಹುದು ಎಂಬ ಅಲಿಖಿತ ನಿಯಮ. ಅಲ್ಲೊಬ್ಬ ಮೆಕ್ಯಾನಿಕ್. ಕನಸುಗಾರ. ದುಡಿಮೆಗಾರ, ಸೊಗಸುಗಾರ. ಅವನ ಮೇಲೆ ಎಲ್ಲರಿಗೂ ಕಣ್ಣು. ಅವನ ಬದುಕು, ಜಾತಿ, ನೀತಿ ಎಲ್ಲವೂ ಪ್ರಶ್ನಾರ್ಹ. ಅವನನ್ನು ಮಟ್ಟ ಹಾಕಲು ಕಾಯುತ್ತಿರುವ ಹಳ್ಳಿಜನ. ಮಿಕ್ಕಂತೆ ಭಾರತದ ಎಲ್ಲೂ ಊರುಗಳಂಥ, ಇನ್ನೂ ಸಂವಿಧಾನ ಪೂರ್ತಿ ಜಾರಿಯಾಗದ ಊರು. ಸುದ್ದಿಪತ್ರಿಕೆಗಳಲ್ಲಿ ಆಗಾಗ ಸುದ್ದಿಯಾಗುವ ಅಸ್ಪಶ್ಯತೆಯನ್ನು ಯಾವ ಮುಜುಗರವೂ ಇಲ್ಲದೇ ಆಚರಿಸುವ ಜನ. ಅದನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯದ ಜೀವನ.

ನೋಡಲು ಎಲ್ಲರೂ ಒಂದೇ ಥರ. ಅಂತರಂಗದಲ್ಲಿ ಅಗಾಧ ಅಂತರ. ಒಳಗೆ ಅವಿತು ಕೂತಿದೆ ಜಾತಿ, ನೀತಿ, ಮೇಲು, ಕೀಳು, ಜಾತೀಯತೆ. ತನ್ನೊಳಗೇ ಕುದಿಯುತ್ತಿರುವ ಊರನ್ನು ಕಂಡಾಗಲೇ ಆತಂಕ ಶುರುವಾಗುವಂಥ ಪರಿಸ್ಥಿತಿಯನ್ನು ನಿರ್ದೇಶಕ ಭೀಮರಾವ್ ಕಟ್ಟಿಕೊಡುತ್ತಾ ಹೋಗುತ್ತಾರೆ. ತಾನು ಇಷ್ಟಪಡುವ ಹುಡುಗಿಗಾಗಿ ಹೆಬ್ಬುಲಿ ಹೇರ್ ಕಟ್ ಮಾಡಿಸಿಕೊಳ್ಳಲು ಐನೂರು ರುಪಾಯಿ ಹೊಂದಿಸುವ ಹುಡುಗನ ಕತೆ ಏನಾಗುತ್ತದೆ ಎಂಬುದು ಚಿತ್ರ ಜೀವಾಳ. ಈ ಕತೆ ಹೀಗೇ ಕೊನೆಯಾಗುತ್ತದೆ ಅಂತ ಅನ್ನಿಸುತ್ತದಲ್ಲ, ಅದೇ ದುರಂತ. ಯಾಕೆಂದರೆ ಅವರ ಕತೆಗೆ ಬೇರೊಂದು ಕೊನೆ ಸಾಧ್ಯವೇ ಇಲ್ಲ ಎಂದು ಅನ್ನಿಸುವುದರಲ್ಲೇ ಭಾರತದ ಇಂದಿನ ಚಿತ್ರಣ ಇದೆ.

ಹೆಬ್ಬುಲಿ ಕಟ್
ನಿರ್ದೇಶನ: ಭೀಮರಾವ್ ಪಿ
ತಾರಾಗಣ: ಮಹಾದೇವ ಹಡಪದ, ಮೌನೇಶ್ ನಟರಂಗ, ಮಹಾಂತೇಶ್, ಅನನ್ಯಾ, ಉಮಾ ವೈಜಿ, ಪುನೀತ್ ಶೆಟ್ಟಿ
ರೇಟಿಂಗ್: 4

ಮಹಾದೇವ ಹಡಪದ, ಮೌನೇಶ್ ನಟರಂಗ, ಮಹಾಂತೇಶ್, ಅನನ್ಯಾ, ಉಮಾ ವೈಜಿ, ಪುನೀತ್ ಶೆಟ್ಟಿ -ಹೆಸರಿಸಿದ ಇವರು, ಹೆಸರಿಸದ ಅನೇಕರು ತಮ್ಮ ತಮ್ಮ ಪಾತ್ರಗಳನ್ನು ಬದುಕಿದ್ದಾರೆ. ನವನೀತ್ ಹಿನ್ನೆಲೆ ಸಂಗೀತ ಈ ಚಿತ್ರವನ್ನು ಗಾಢವಾಗಿಸಿದೆ. ಇಡೀ ಊರಿನ ರಾಜಕಾರಣವನ್ನು ಕ್ಯಾಮರಾದಲ್ಲಿ ಹಿಡಿದಿಟ್ಟಿದ್ದಾರೆ ದೀಪಕ್ ಯರಗೇರ. ಚಿತ್ರಕತೆ ಮತ್ತು ಸಂಭಾಷಣೆ ಕೂಡ ಕತೆಯ ಪರಿಣಾಮ ಹೆಚ್ಚಿಸಿವೆ. ಆರಂಭದಲ್ಲಿ ನಗಿಸುವ ಸಿನಿಮಾ ಬರಬರುತ್ತಾ ಸಿಟ್ಟು ಉಕ್ಕುವಂತೆ ಮಾಡುತ್ತದೆ. ಕಣ್ಣಂಚು ಒದ್ದೆಯಾಗಿಸುತ್ತವೆ. ಮೌನವಾಗಿಸುತ್ತವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?
ಪ್ರೇಮವೋ, ದ್ವೇಷವೋ, ಥ್ರಿಲ್ಲರೋ?: ಇಲ್ಲಿದೆ ಅನೇಕ ತಿರುವುಗಳ 'ಫ್ಲರ್ಟ್' ಸಿನಿಮಾ ವಿಮರ್ಶೆ