ರಾಜ್ ಬಿ ಶೆಟ್ಟಿ, ಚೈತ್ರಾ ಜೆ ಆಚಾರ್, ರಾಜ್ ದೀಪಕ್ ಶೆಟ್ಟಿ, ಸಂಯುಕ್ತಾ ಹೊರನಾಡು, ಸ್ನಿಗ್ಧಾ ಶೆಟ್ಟಿ, ಭರತ್ ಬಿ.ಜೆ ನಟನೆಯ ಟೋಬಿ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ?
ರಾಜೇಶ್ ಶೆಟ್ಟಿ
‘ಹರಕೆಯ ಕುರಿ ತಪ್ಪಿಸಿಕೊಂಡಿದೆ. ಅದು ಮರಳಿ ಬರಬಾರದು. ಬಂದರೆ ಮಾರಿಯಾಗಿರುತ್ತದೆ’ ಎಂದು ಮಾರಮ್ಮ ಹೇಳುವಾಗಲೇ ನಾವು ಮಾರಿಯ ಆಗಮನಕ್ಕೆ ಮನಸ್ಸು ತಯಾರು ಮಾಡಿಕೊಂಡು ಕಾದು ಕುಳಿತಿರುತ್ತೇವೆ. ಯಾಕೆಂದರೆ ಕುರಿ ಮಾರಿಯಾಗಬೇಕು ಎಂಬುದು ಒಳಗಿನ ಆಸೆ.
undefined
ಅನ್ಯಾಯಕ್ಕೆ ಒಳಗಾದವರು ಕುರಿಯ ರೂಪಕ. ಅನ್ಯಾಯ ಮಾಡಿದವನನ್ನು ಧ್ವಂಸ ಮಾಡಬೇಕು ಅನ್ನುವುದೇ ಒಂದಲ್ಲ ಒಂದು ಅನ್ಯಾಯಕ್ಕೆ ಒಳಗಾದವರ, ಅನ್ಯಾಯ ಸಹಿಸಿಕೊಂಡಿರುವವರ ಭರವಸೆ. ಅದಕ್ಕೆ ತಕ್ಕಂತೆ ಎಲ್ಲವೂ ಇಲ್ಲಿ ನಡೆಯುತ್ತದೆ. ಕುರಿಯನ್ನು ಕುಣಿಸಲಾಗುತ್ತದೆ. ಕುರಿಯನ್ನು ಬಳಸಲಾಗುತ್ತದೆ. ಕುರಿಯನ್ನು ಕುಯ್ಯುವ ಎಲ್ಲಾ ಪ್ರಯತ್ನಗಳೂ ನಡೆಯುತ್ತದೆ. ಆದರೆ ಇಲ್ಲಿರುವುದು ಹರಕೆಯ ಕುರಿ. ದೇವರಿಗೆ ಬಿಟ್ಟ ಕುರಿ. ಅದು ಏನಾಗುತ್ತದೆ, ಏನಾಗಬೇಕು ಅನ್ನುವುದು ಪರಿಸ್ಥಿತಿಗೆ ಬಿಟ್ಟಿದ್ದು. ಆದರೆ ಅದು ಎಲ್ಲಿದ್ದರೂ ಹೇಗಿದ್ದರೂ ದೇವರಿಗೆ ಸಂದಿದ್ದು, ಪರಿಸ್ಥಿತಿಗೆ ಸಂದಿದ್ದು ಎಂಬುದು ಹಳೆಯ ನಂಬಿಕೆ. ಆ ನಂಬಿಕೆಗೆ ಪೂರಕವಾಗಿ ಕಟ್ಟಿರುವ ಕಥನ ಕಾವ್ಯ ಟೋಬಿ.
ನಿರ್ದೇಶನ: ಬಾಸಿಲ್ ಅಲ್‌ಚಲಕ್ಕಲ್
ತಾರಾಗಣ: ರಾಜ್ ಬಿ ಶೆಟ್ಟಿ, ಚೈತ್ರಾ ಜೆ ಆಚಾರ್, ರಾಜ್ ದೀಪಕ್ ಶೆಟ್ಟಿ, ಸಂಯುಕ್ತಾ ಹೊರನಾಡು, ಸ್ನಿಗ್ಧಾ ಶೆಟ್ಟಿ, ಭರತ್ ಬಿ.ಜೆ.
ರೇಟಿಂಗ್: 3
ಇದೊಂದು ವಿಶಿಷ್ಟ ಸಿನಿಮಾ. ಗಟ್ಟಿ ಪಾತ್ರಗಳ ಮೂಲಕ ಕಟ್ಟಿಕೊಟ್ಟಿರುವ, ವಿಷಾದವೇ ಸ್ಥಾಯಿಭಾವವಾಗಿರುವ ವಿಭಿನ್ನ ಅನುಭವ. ಸಿನಿಮಾ ಅನ್ನುವುದೇ ವೇಗವಾಗಿರುವ ಹೊತ್ತಿನಲ್ಲಿ ಇಲ್ಲಿ ಬದುಕಿನಂಥ ನಿಧಾನವಿದೆ. ಮಾತಿನ ಸದ್ದಿನಲ್ಲಿ ಗೆಲ್ಲುವ ಬದಲಿಗೆ ಸಹಜ ಮೌನವಿದೆ. ಸರಳತೆಯ ಜೊತೆಗೆ ಗಾಢತೆ ಮಿಳಿತಗೊಂಡಿದೆ.
ಮುಂದೆ ಏನಾಗುತ್ತದೆ ಎಂಬುದನ್ನು ಊಹಿಸುವುದು ಕೆಲವೊಮ್ಮೆ ಕಷ್ಟವೇನಲ್ಲ. ಪ್ರವಾಸದಲ್ಲಿ ನಮ್ಮ ಗುರಿ ಮೊದಲೇ ನಿಶ್ಚಿತವಾಗಿರುತ್ತದೆ. ಆದರೆ ಆ ದಾರಿಯಲ್ಲಿ ಎದುರಾಗುವ ಮ್ಯಾಜಿಕ್‌ಗಳೇ ಆ ಪ್ರಯಾಣವನ್ನು ನಿರ್ಧರಿಸುತ್ತದೆ. ಟೋಬಿ ಪ್ರಯಾಣದಲ್ಲೇ ಎಲ್ಲವನ್ನೂ ಕಟ್ಟಿಕೊಡುವ, ಬಿಟ್ಟುಕೊಡುವ, ಅಸ್ಪಷ್ಟತೆಯ ಚಿತ್ರವೊಂದನ್ನು ಉಳಿಸಿಹೋಗುವ ದೃಶ್ಯ ಕಥನ.
ಇಲ್ಲಿ ಮನಸ್ಸಲ್ಲಿ ತೀವ್ರವಾಗಿ ಉಳಿಯುವುದು ಕೆಂಪು ತುಂಬಿರುವ ಕಣ್ಣು ಮತ್ತು ಶಕ್ತಿ ತುಂಬಿರುವ ಹೆಣ್ಣು. ಇಲ್ಲಿ ಒಬ್ಬ ಮೃಗದಂಥ ವ್ಯಕ್ತಿಯನ್ನು ಒಂದು ಹೆಣ್ಣು ಮನುಷ್ಯನನ್ನಾಗಿ ರೂಪಿಸುತ್ತಾಳೆ. ಇನ್ನೊಂದು ಹೆಣ್ಣು ದುರುದ್ದೇಶವಿಲ್ಲದೆಯೇ ಆ ಮನುಷ್ಯ ಮೃಗವಾಗುವುದಕ್ಕೆ ಕಾರಣವಾಗುತ್ತಾಳೆ. ದುರದೃಷ್ಟವೆಂದರೆ ಆ ಎರಡಕ್ಕೂ ಕಾರಣವಾಗುವುದು ಪ್ರೀತಿಯೇ.
ಮನುಷ್ಯನ ಸಣ್ಣತನ, ಆಸೆ, ದುರಾಸೆ, ಕ್ರೋಧ, ಅಸಹಾಯಕತೆ ಎಲ್ಲವೂ ತಾಕುವಂತೆ ದಾಟಿಸುವುದು ಇಲ್ಲಿನ ಪಾತ್ರಗಳು. ರಾಜ್ ಬಿ ಶೆಟ್ಟಿ, ಚೈತ್ರಾ ಆಚಾರ್ ಪ್ರಧಾನ ಪಾತ್ರವಾಗಿ ಕೊಂಚ ಮುಂಚೂಣಿಯಲ್ಲಿ ನಿಂತರೆ ಅವರ ಹಿಂದೆ ಇರುವ ಪ್ರತಿಯೊಂದು ಪಾತ್ರಗಳೂ ಟೋಬಿಯ ಪರಿಸರವನ್ನು ಜೀವಿಸಿದ್ದಾರೆ. ಛಾಯಾಗ್ರಾಹಕ ಪ್ರವೀಣ್ ಶ್ರೀಯಾನ್ ಕ್ಯಾಮೆರಾ ಮೂಲಕ ಮತ್ತು ಸಂಗೀತ ನಿರ್ದೇಶಕ ಮಿದುನ್ ಮುಕುಂದನ್ ಸಂಗೀತದ ಮೂಲಕ ಭಾವಗಳನ್ನು ದಾಟಿಸಿ ಮನಸ್ಸು ಗೆಲ್ಲುತ್ತಾರೆ.
ಬರಹಗಾರ ರಾಜ್ ಬಿ ಶೆಟ್ಟಿ ಪರಿಪೂರ್ಣ ಮಾಸ್ ಸಿನಿಮಾದಲ್ಲಿ ಭಾವಪೂರ್ಣ ಕಂಟೆಂಟ್ ಕೊಟ್ಟಿದ್ದಾರೆ. ಇಲ್ಲಿ ನಾಯಕ ವಿಜೃಂಭಿಸುತ್ತಾನೆ. ಕತೆಯೂ ವಿಜೃಂಭಿಸುತ್ತದೆ. ಪಾತ್ರಗಳೂ ಉರಿಯುತ್ತವೆ. ಎಲ್ಲವೂ ಉರಿದುರಿದ ನಂತರ ಕಟ್ಟಕಡೆಗೆ ಬೆಳ್ಳಿತೆರೆ ಕಪ್ಪಾದಾಗ ಮೌನ ಆವರಿಸುತ್ತದೆ. ಕತೆ ಅಲ್ಲಿಂದ ಬೆಳೆಯಬೇಕಿತ್ತು ಅನ್ನಿಸುತ್ತದೆ. ಒಂದು ವೇಳೆ ಆ ಪಾತ್ರಗಳು ಮನಸ್ಸಲ್ಲಿ ಜಾಗ ಪಡೆದಿದ್ದರೆ ಮಾತ್ರ ಕತೆ ಬೆಳೆಯುತ್ತದೆ. ಇಲ್ಲದಿದ್ದರೆ, ನೀರವ ಮೌನ.