ಈಗ ವೆಬ್ ಸೀರಿಸ್‌ನದ್ದೇ ಜಮಾನ. ಮೂವಿಗಿಂತಲೂ ಒಂದು ಪಟ್ಟು ಹೆಚ್ಚು ಲಕ್ಸುರಿಯಸ್ ಆಗಿ ತೆಗೆಯುವ ವೆಬ್ ಸೀರಿಸ್‌ನಲ್ಲಿ ಸದ್ಯಕ್ಕೆ ನೋಡಬೇಕಾಗಿದ್ದು ಪ್ರೈಮ್ ವೀಡಿಯೋ ನಲ್ಲಿ ಪ್ರದರ್ಶಿತವಾಗಿತ್ತಿರುವ ಪಂಚಾಯತ್!
ಈಗ ಒಟಿಟಿ ಯಲ್ಲಿ ಸದ್ದು ಮಾಡುತ್ತಿರುವ ವೆಬ್ ಸೀರೀಸ್ ಎಂದರೆ ಪ್ರೈಮ್ ವೀಡಿಯೋ ನಲ್ಲಿ ಪ್ರದರ್ಶಿತವಾಗಿತ್ತಿರುವ ಟಿವಿಎಫ್ ಕ್ರಿಯೇಷನ್ಸ್ ಅವರ ಪಂಚಾಯತ್ ವೆಬ್ ಸೀರೀಸ್. ಮೂರು ಸರಣಿಗಳಲ್ಲಿ 24 ಎಪಿಸೋಡ್ ಇರುವ ಈ ವೆಬ್ ಸೀರೀಸ್ ಅಪಾರ ಜನಮನ್ನಣೆ ಗಳಿಸಿದೆ. ಚಂದನ್ ಕುಮಾರ್ ಚಿತ್ರಕಥೆ ಬರೆದು ದೀಪಕ್ ಕುಮಾರ್ ಮಿಶ್ರಾ ನಿರ್ದೇಶಿಸಿರುವ ಈ ಸರಣಿಯ ಮುಖ್ಯ ಭೂಮಿಕೆಯಲ್ಲಿ ನೀನಾ ಗುಪ್ತಾ, ರಘುವೀರ್ ಯಾದವ್, ಜಿತೇಂದ್ರ ಕುಮಾರ್, ಫೈಸಲ್ ಮಲ್ಲಿಕ್, ಚಂದನ್ ರಾಯ್ ಸಾನ್ವಿಕಾ, ದುರ್ಗೇಶ್ ಕುಮಾರ್, ಪಂಕಜ್ ಝಾ, ಆಸಿಫ್ ಖಾನ್, ಕುಸುಮ್ ಶಾಸ್ತ್ರಿ ನಟಿಸಿದ್ದಾರೆ.
ಅಭಿಷೇಕ್ ತ್ರಿಪಾಟಿ ಎಂಬ ಇಂಜಿನಿಯರಿಂಗ್ ಪದವೀಧರ ತನ್ನ ಅರ್ಹತೆಗೆ ತಕ್ಕ ಉದ್ಯೋಗ ಸಿಗದೆ ಹತಾಶನಾಗಿ ಉತ್ತರಪ್ರದೇಶದ ಒಂದು ಮೂಲೆಯಲ್ಲಿರುವ ಫುಲ್ಹೇರಾ ಎಂಬ ಹಳ್ಳಿಯ ಪಂಚಾಯತ್ ಸೆಕ್ರೆಟರಿಯಾಗಿ ಆಯ್ಕೆಯಾಗಿ ಬರುತ್ತಾನೆ. ನಗರದಲ್ಲೇ ಓದಿ ಬೆಳೆದ ಅವನಿಗೆ ಹಳ್ಳಿಯ ವಾತಾವರಣದ ಗಂಧವೇ ತಿಳಿದಿರುವುದಿಲ್ಲ. ಇಂಥ ಅಭಿಷೇಕ್ ತ್ರಿಪಾಟಿ ಹಳ್ಳಿಗೆ ಪಂಚಾಯತ್ ಸೆಕ್ರೆಟರಿ ಆಗಿ ಬಂದು ಆ ಹಳ್ಳಿಯಲ್ಲಿ ಹೇಗೆ ಕೆಲಸ ಮಾಡುತ್ತಾನೆ? ಅವನು ಆ ಹಳ್ಳಿಯ ವಾತಾವರಣಕ್ಕೆ ಹೇಗೆ ಹೊಂದಿಕೊಳ್ಳುತ್ತಾನೆ ಹಳ್ಳಿಯ ರಾಜಕೀಯಗಳನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತಾನೆ, ಅವನು ಪಂಚಾಯತ್ ಸೆಕ್ರೆಟರಿಯಾಗೇ ಉಳಿಯುತ್ತಾನಾ ಅಥವಾ ಬೇರೆ ರೀತಿಯಲ್ಲಿ ಬದುಕು ಕಟ್ಟಿಕೊಳ್ಳುತ್ತಾನಾ ಎಂಬುದೇ ಈ ಮೂರೂ ಸರಣಿಗಳ ಕಥಾ ಸಾರಾಂಶ.
Love Li Film Review: ಒಲವಿನ ಗಾಲಿಯ ಮೇಲೆ ಒರಟನ ಪಯಣ
undefined
ಮಂಜು ದೇವಿ (ನೀನಾ ಗುಪ್ತ) ಫುಲ್ಹೇರಾ ಹಳ್ಳಿಯ ಗ್ರಾಮಪಂಚಾಯತಿ ಪ್ರಧಾನ್. ಆದರೆ ಆಕೆಯ ಗಂಡ ಬ್ರಿಜ್ ಭೂಷಣ್ ದುಬೆಯ ಕೈಯಲ್ಲೇ ಪಂಚಾಯತ್ ಪ್ರಧಾನ್ ಅಧಿಕಾರ ಇರುತ್ತದೆ. ಹೆಸರಿಗೆ ಮಂಜುದೇವಿಯಾದರೆ, ಅಧಿಕಾರ ಚಲಾಯಿಸುವುದು ಗಂಡ ಬ್ರಿಜ್ ಭೂಷಣ್. ಇಲ್ಲಿ ಉಪಪ್ರಧಾನ ಪ್ರಹ್ಲಾದ್ ಪಾಂಡೆಯಾಗಿ ಫೈಸಲ್ ಮಲ್ಲಿಕ್, ಕಚೇರಿಯ ಸಹಾಯಕನಾಗಿ ಚಂದನ್ ರಾಯ್ ಅಭಿನಯಿಸಿದ್ದಾರೆ. ಮಂಜುದೇವಿ ಮತ್ತು ಆಕೆಯ ಪತಿ ಬ್ರಿಜ್ ಭೂಷಣ್‌ಗೆ ರಿಂಕಿ ಎಂಬ ಒಬ್ಬ ಮಗಳಿರುತ್ತಾಳೆ (ಸಾನ್ವಿಕಾ). ಆ ಪ್ರದೇಶದ ಎಂಎಲ್‌ಎ ಚಂದು ಆಗಿ ಪ್ರಕಾಶ್ ಝಾ ಉತ್ತಮವಾಗಿ ಅಭಿನಯಿಸಿದ್ದಾರೆ. ಎಂಎಲ್‌ಎ ಆಗಿ ಅವರ ನಟನೆಯ ಗತ್ತು ಅಹಂಕಾರ ಗಮನ ಸೆಳೆಯುತ್ತದೆ.
ಅಭಿನಯನಕ್ಕೆ ಕೊಡಬಹುದು ಸರ್ಟಿಫಿಕೇಟ್:
ಇಷ್ಟವಿಲ್ಲದೆ ಬರುವ ಪಂಚಾಯತ್ ಸೆಕ್ರೆಟರಿಯಾಗಿ ಅಭಿಷೇಕ್ ಪಾತ್ರದ ಜಿತೇಂದ್ರ ಕುಮಾರ್ ಅಭಿನಯ ಮನೋಜ್ಞ, ಹೊಸಬರಾದರೂ ಬಹಳ ಅನುಭವಿ ಕಲಾವಿದನಂತೆ ತನ್ನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಪಂಚಾಯತ್ ಪ್ರಧಾನ್ ಆಗಿ ಹಿರಿಯ ನಟಿ ನೀನಾಗುಪ್ತಾ, (ನಟಿ, ನಿರ್ದೇಶಕಿ) ಆಕೆಯ ಗಂಡನಾಗಿ ರಘುವೀರ್ ಯಾದವ್ (ಮುಂಗೇರಿ ಲಾಲ್ ಕಿ ಹಸೀನ್ ಸಪ್ನೆ ಖ್ಯಾತಿಯ ನಟ) ತನ್ನ ಹೆಂಡತಿ ಪಂಚಾಯತ್ ಪ್ರಧಾನ್ ಆದರೂ ತನ್ನನ್ನೇ ಪ್ರಧಾನ್ ಎಂದು ಹಳ್ಳಿಯವರ ಬಾಯಲ್ಲಿ ಕರೆಸಿಕೊಳ್ಳುವ ರಘುವೀರ್ ಅಕ್ಷರಶಃ ಪ್ರಧಾನ್ ಪಾತ್ರದಲ್ಲಿ ಮುಳುಗಿ ಹೋಗಿದ್ದಾರೆ. ನೀನಾ ಗುಪ್ತ, ಉಪಪ್ರಧಾನನಾಗಿ ಫೈಸಲ್ ಖಾನ್, ಸಹಾಯಕನಾಗಿ ಚಂದನ್ ರಾಯ್, ಪ್ರತಿಯೊಂದು ವಿಷಯದಲ್ಲೂ ಅಡ್ಡಗಾಲು ಹಾಕುತ್ತಾ ವಿಘ್ನಸಂತೋಷಿಯಂತೆ ನಟಿಸಿರುವ ಭೂಷಣ್ ಪಾತ್ರದ ದುರ್ಗೇಶ್ ಕುಮಾರ್ ಹಾಗೂ ಆತನ ಹೆಂಡತಿ ಕ್ರಾಂತಿ ಕುಮಾರಿಯಾಗಿ ಅಭಿನಯಿಸಿರುವ ಸುನೀತಾ ರಾಜ್ವರ್ ಎಲ್ಲರೂ ತಮ್ಮ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಪಂಚಾಯತ್ ಸೀರೀಸ್ ಅನ್ನು ನಮ್ಮ ನಿಮ್ಮ ಹಳ್ಳಿಯ ಕತೆಯಂತೆ ಫೀಲ್ ಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಮೂರೂ ಸರಣಿಗಳು ಎಲ್ಲೂ ಬೇಸರ ತರಿಸುವುದಿಲ್ಲ. ಮೊದಲ ಸರಣಿಯಲ್ಲಿ ಅಭಿಷೇಕ್ ಸೆಕ್ರೆಟರಿಯಾಗಿ ಫುಲ್ಹೇರಾ ಹಳ್ಳಿಗೆ ಬರುವುದು ಹಳ್ಳಿಯವರ ಜೀವನಕ್ಕೆ ತಕ್ಕಂತೆ ತಾನೂ ಹೊಂದಾಣಿಕೆ ಮಾಡಿಕೊಳ್ಳುವುದು, ಏನೂ ಆಕರ್ಷಣೆ ಇಲ್ಲದ ಆ ಹಳ್ಳಿಯಲ್ಲಿ ಬದುಕು ಸವೆಸಲು ಹೆಣಗುವುದು ಅವನ ಒಂಟಿತನ, ಏನೋ ಆಗಬೇಕಿದ್ದ ತಾನು ಈ ಹಳ್ಳಿಗೆ ಬರುವಂತಾಯ್ತಲ್ಲ ಎಂಬ ನಿರಾಶೆ ಬಿಂಬಿಸುವಲ್ಲಿ ಜಿತೇಂದ್ರ ಕುಮಾರ್ ಅಭಿನಯ ಸೂಪರ್, ಅವರ ಮುಖದ ಕವಳಿಕೆಗಳು ಆಂಗಿಕ ಅಭಿನಯ ಲಾ ಜವಾಬ್. ಪಂಚಾಯತ್ ಪ್ರಧಾನ್ ಹೆಸರಿನಲ್ಲಿ ಅಧಿಕಾರ ಚಲಾಯಿಸುವ ಆಕೆಯ ಗಂಡನ ಆಮೆಯಂಥ ನಿಧಾನ ಜೀವನ ಬೇಸರ ತರಿಸಿದರೂ ಅವನ ಒಳ್ಳೆಯತನಕ್ಕೆ ಅಭಿಷೇಕ್ ಮಾರು ಹೋಗುತ್ತಾನೆ. ಅಭಿಷೇಕ್ ಎಂದು ಉಚ್ಛಾರಣೆ ಮಾಡಲೂ ಬರದ ಅವನ ಸಹಾಯಕ ವಿಕಾಸ್‌ನ ಮುಗ್ಧ ಪೆದ್ದುತನ, ಉಪಪ್ರಧಾನ್ ಪ್ರಹ್ಲಾದನ ಆದರೆ ಆಯಿತು ಹೋದರೆ ಹೋಯಿತು ಎಂಬ ಧೋರಣೆ ಈಸಿ ಗೋಯಿಂಗ್ ಜೀವನ ಶೈಲಿ ಖಡಕ್ ಆಗಿ ಮಾತನಾಡುವ ಮಂಜುದೇವಿ ಇವರೆಲ್ಲರ ಮಧ್ಯೆ ಹೈರಾಣಾಗಿ ಮತ್ತೆ ಅದೇ ಬದುಕನ್ನು ಪ್ರೀತಿಸಲು ಪ್ರಯತ್ನ ಪಡುತ್ತಾ ಅಲ್ಲೇ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ.
Chilli Chicken Review: ನಾನ್ ವೆಜ್ ಮೆನುವಿನಲ್ಲಿ ಎಲ್ಲೂ ಮಿಸ್ ಆಗದ ಚಿಲ್ಲಿ ಚಿಕನ್!
ಗಣರಾಜ್ಯೋತ್ಸವದ ದಿನ ಮಂಜುದೇವಿಯ ಕೈಯಲ್ಲೇ ತಿರಂಗಾ ಹಾರಿಸಬೇಕೆಂಬ ಅವನ ಇಚ್ಛೆ ಕಷ್ಟಪಟ್ಟು ಆಕೆಗೆ ರಾಷ್ಟ್ರಗೀತೆ ಕಲಿಸುವ ಅವನ ಉತ್ಸಾಹ, ಕಷ್ಟ ಎಂಥವರಿಗೂ ನಗು ಹಾಗೂ ಕನಿಕರ ಎರಡೂ ಮೂಡಿಸುತ್ತದೆ. ಕೊನೆಗೂ ಆಕೆಗೆ ರಾಷ್ಟ್ರಗೀತೆ ಕಲಿಸಿ ಆಕೆಯ ಕೈಯಲ್ಲೇ ರಾಷ್ಟ್ರಧ್ವಜ ಹಾರಿಸುವುದರಲ್ಲಿ ಜಯಶೀಲನಾಗುವ ಅಭಿಷೇಕ್ ಎಲ್ಲರ ಕೈಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಾನೆ. ಶಿಸ್ತಿನ ಡಿಎಂ ಸಾಹೇಬರ ಬಾಯಲ್ಲಿ ಭೇಷ್ ಎನಿಸಿಕೊಳ್ಳುವ ಆ ಕ್ಷಣ ನೋಡುಗರ ಕಣ್ಣಲ್ಲಿ ಮೆಚ್ಚುಗೆ ಮೂಡಿಸುತ್ತದೆ. ಆಗಾಗ ಪ್ರಧಾನರ ಮನೆಗೆ ಊಟಕ್ಕೆ ಹೋದರೂ ಅವರ ಮಗಳನ್ನು ಕಾಣದೆ ಅವಳ ಬಗ್ಗೆ ಕುತೂಹಲ. ಆಗಾಗ ಆವರಿಸುವ ಒಂಟಿತನ, ಕಂಪ್ಯೂಟರ್ ಕಳೆದು ಹೋದಾಗ ಪೊಲೀಸಿನವನ ಜೊತೆ ವಾಗ್ವಾದ, ಪೊಲೀಸ್ ಅಧಿಕಾರಿ ಇವನನ್ನೇ ಸಂಶಯಿಸಿದಾಗ ಅಭಿಷೇಕನ ಬೆಂಬಲಕ್ಕೆ ನಿಲ್ಲುವ ಪ್ರಧಾನ್, ಉಪಪ್ರಧಾನ್, ವಿಕಾಸ್ ಎಲ್ಲರೂ ತಮ್ಮವರೇ ಎನಿಸಿಬಿಡುತ್ಥಾರೆ ಅಭಿಷೇಕ್‌ಗೆ. ತನ್ನ ಬೇಸರ ನೀಗಿಸಲು ಇವರೆಲ್ಲರೂ ಸೇರಿ ಆಯೋಜಿಸುವ ಪ್ರತಿವಾರದ ಗುಂಡು ಪಾರ್ಟಿ ಅವನ ಮನಸ್ಸನ್ನು ಆರ್ದ್ರಗೊಳಿಸುತ್ತದೆ. ಹೀಗೆ ಪ್ರತಿಯೊಂದೂ ವಿಷಯವನ್ನೂ ಕೂಲಂಕಷವಾಗಿ ವಿವೇಚಿಸಿ ನಿರ್ದೇಶಿಸಿರುವ ನಿರ್ದೇಶಕರ ಜಾಣ್ಮೆ ಮೆಚ್ಚುಗೆಯಾಗುತ್ತದೆ. ಅಲ್ಲಲ್ಲಿ ತಿಳಿಹಾಸ್ಯ, ಆಗಾಗ ಭಾವುಕತೆ ಕೊಂಚ ಕೋಪ ಕೊನೆಗೆ ಸುಖಾಂತ ಹೀಗೆ ನಡೆಯುವ ಮೊದಲ ಸರಣಿ ಅಭಿಷೇಕ್ ಮಂಜುದೇವಿಯ ಮಗಳನ್ನು ಮೊದಲ ಸಲ ಕಂಡಾಗ ಆಗುವ ಅಚ್ಚರಿಯೊಂದಿಗೆ ಮುಗಿಯುತ್ತದೆ.
ಹಳಿಯ ಪುಢಾರಿಗಳು ಕಾಟ ತಪ್ಪೋಲ್ಲ:
ಪಂಚಾಯತ್ ಸೆಕ್ರೆಟರಿಯಾಗಿ ಅಭಿಷೇಕ್ ಮಾಡುವ ಕೆಲಸಗಳು ಅದಕ್ಕೆ ಹಳ್ಳಿಯ ಪುಢಾರಿಗಳಿಂದ ಬರುವ ವಿಘ್ನಗಳು ಪ್ರಧಾನ್ ಹಾಗೂ ಉಪಪ್ರಧಾನ ಮತ್ತು ಸಹಾಯಕ ವಿಕಾಸ್ ಇವರ ಬೆಂಬಲದಿಂದ ಸೆಕ್ರೆಟರಿಯಾಗಿ ಯಶಸ್ಸು ಗಳಿಸುವುದು, ಮಧ್ಯೆ ಮಧ್ಯೆ ಎಂಬಿಎ ಪರೀಕ್ಷೆ ಬರೆಯಲು ಎಂಟ್ರೆನ್ಸ್ ಎಕ್ಸಾಂ ತೆಗೆದುಕೊಳ್ಳುತ್ತಾ, ಓದನ್ನು ಮುಂದುವರೆಸುವುದು ಹೀಗೆ ಎರಡನೇ ಸರಣಿ ಪ್ರಾರಂಭವಾಗುತ್ತದೆ. ಮನೆಗೊಂದು ಶೌಚಾಲಯ ಯೋಜನೆಯಲ್ಲಿ ಎಲ್ಲರ ಮನೆಗೂ ಶೌಚಾಲಯ ಮಾಡಿಸಿದರೂ, ಹೊಲಗಳಲ್ಲಿ ಶೌಚಕ್ಕೆ ಕೂತು ಸೆಕ್ರೆಟರಿಗೆ ಕೆಟ್ಟ ಹೆಸರು ತರಬೇಕೆಂಬ ಜನಕ್ಕೇನೂ ಕೊರತೆ ಇರುವುದಿಲ್ಲ. ಇಂಥ ಸೂಕ್ಷ್ಮಗಳನ್ನು ನಿಭಾಯಿಸುವಲ್ಲಿ ಉಪಪ್ರಧಾನಿ ಪ್ರಹ್ಲಾದ್ ಹಾಗೂ ಸಹಾಯಕ ವಿಕಾಸ್ ಅಭಿಷೇಕ್‌ಗೆ ಬೆಂಬಲವಾಗಿ ನಿಲ್ಲುವುದು, ಪುಲ್ಹೇರಾ ಗ್ರಾಮಕ್ಕೆ ರಸ್ತೆ ಮಾಡಿಸಲು ಎಂಎಲ್ ಎ ಪ್ರಕಾಶ್ ಝಾನನ್ನು ಭೇಟಿ ಮಾಡುವ ಸಂದರ್ಭದಲ್ಲಿ ಅವನು ತೋರುವ ದರ್ಪ ಅಹಂಕಾರದ ಮಾತುಗಳಿಗೆ ಬ್ರಿಜ್ ಭೂಷಣ್ ಕೋಪಗೊಂಡು ಶಾಸಕನಿಗೇ ಧಮಕಿ ಹಾಕಿ ಬರುವುದು, ಯಾವುದೇ ಸಂದರ್ಭದಲ್ಲೂ ಸೆಕ್ರೆಟರಿಯನ್ನು ಬಿಟ್ಟು ಕೊಡದೇ ಅವನನ್ನು ಮನೆಯವರ ರೀತಿ ಪ್ರೀತಿಯಿಂದ ನೋಡಿಕೊಳ್ಳುವುದು ಹೀಗೆ ನಡೆಯುತ್ತದೆ. ಎರಡನೇ ಸರಣಿಯಲ್ಲಿ ಅಭಿಷೇಕನ ಜೊತೆ ಮಂಜುದೇವಿ, ಆಕೆಯ ಗಂಡ ಬ್ರಿಜ್ ಭೂಷಣ್, ಪ್ರಹ್ಲಾದ್, ವಿಕಾಸ್, ವಿಕಾಸನ ಪತ್ನಿ, ಮಂಜುದೇವಿಯ ಮಗಳು ರಿಂಕಿ ಇವರೆಲ್ಲರ ಜೊತೆ ಬಾಂಧವ್ಯ ಗಟ್ಟಿಯಾಗುತ್ತಾ ಹೋಗುತ್ತದೆ. ಸಿಪಾಯಿಯಾಗಿದ್ದ ಪ್ರಹ್ಲಾದನ ಮಗ ರಜಾಕ್ಕೆ ಊರಿಗೆ ಬರುವುದು, ಪ್ರಹ್ಲಾದನ ಸಂತಸ ಎಲ್ಲವೂ ತೀರಾ ಸಹಜ ಎನಿಸುತ್ತದೆ. ಈ ಸರಣಿಯ ಕೊನೆಯಲ್ಲಿ ಪ್ರಹ್ಲಾದನ ಸಿಪಾಯಿ ಮಗ ಕಾರ‍್ಯಾಚರಣೆಯಲ್ಲಿ ಸಾವನ್ನಪ್ಪುವುದು ಆ ಸಂಕಟ ಸಮಯ ವಿಷಮ ಪರಿಸ್ಥಿತಿ ಪ್ರಹ್ಲಾದನ ಪುತ್ರ ಶೋಕ, ಗ್ರಾಮದ ಎಲ್ಲರೂ ಕಣ್ಣೀರು ಹಾಕುವುದು ಪ್ರೇಕ್ಷಕರ ಕಣ್ಣಲ್ಲೂ ನೀರು ತರಿಸುತ್ತದೆ. ಶವಕ್ಕೆ ಗೌರವ ತೋರಿಸಲು ಬಂದ ದರ್ಪಿಷ್ಠ ಶಾಸಕ ಪ್ರಕಾಶ ಝಾನನ್ನು ಗ್ರಾಮಸ್ಥರು ಬಹಿಷ್ಕಾರ ಹಾಕಿ ಹಿಂದೆ ಕಳಿಸುವ ದೃಶ್ಯವಂತೂ ಮನದಲ್ಲಿ ನಿಂತು ಬಿಡುತ್ತದೆ. ಸೈನಿಕನ ಶವಕ್ಕೆ ಅಂತಿಮ ಸಂಸ್ಕಾರ ಮಾಡುವಾಗಿನ ತಂದೆಯಾಗಿ ಪ್ರಹ್ಲಾದನ ಅಭಿನಯ ಅದು ನಟನೆ ಎಂದು ಯಾರೂ ಹೇಳಲಾರರು. ನಮ್ಮ ಕಣ್ಣಲ್ಲೂ ಧಾರಾಕಾರ ನೀರು ತರಿಸುತ್ತಾರೆ.
ನೆಟ್‌ಫ್ಲಿಕ್ಸ್ ಚಿತ್ರ ಕ್ರ್ಯೂ ರಿವ್ಯೂ: ಚಿನ್ನ ಕಳ್ಳ ಸಾಗಣೆಯಲ್ಲಿ ಫ್ಲೈಟ್ ಓನರೇ ಭಾಗಿ!
ಮೂರನೇ ಸರಣಿಯಲ್ಲಿ ಹಳ್ಳಿಯವರು ಬಹಿಷ್ಕಾರ ಹಾಕಿ ಕೋಪಗೊಂಡ ಎಂಎಲ್‌ಎ ಸೆಕ್ರೆಟರಿಯಿಂದಲೇ ಇಷ್ಟೆಲ್ಲ ಆಗಿದ್ದು ಎಂದು ಅಭಿಷೇಕ್‌ನನ್ನು ವರ್ಗಾವಣೆ ಮಾಡಿಸುವುದು, ಅಭಿಷೇಕನ ವರ್ಗಾವಣೆ ರದ್ದಿಗಾಗಿ ಪ್ರಧಾನ್ ಉಪಪ್ರಧಾನ್ ತೀವ್ರ ಕಸರತ್ತು ಮಾಡುವುದು, ಎಂಎಲ್‌ಎ ಯಾವುದೋ ಕೇಸಿನಲ್ಲಿ ಸಿಕ್ಕು ಜೈಲಿಗೆ ಹೋಗಿ ಅಭಿಷೇಕನ ವರ್ಗಾವಣೆ, ರದ್ದಾಗುವುದು ಇವೆಲ್ಲ ಘಟನೆಗಳು ನಡೆಯುತ್ತದೆ. ಈ ಸರಣಿಯಲ್ಲಿ ರಿಂಕಿ ಹಾಗೂ ಅಭಿಷೇಕ್ ಮತ್ತೂ ಹತ್ತಿರವಾಗುತ್ತಾರೆ. ಪ್ರೀತಿಸುವ ವಿಷಯ ಹೇಳಿಕೊಳ್ಳದಿದ್ದರೂ ಅವರ ಆಂಗಿಕ ಅಭಿನಯ ಒಬ್ಬರನ್ನೊಬ್ಬರು ಕಂಡಾಗ ತುಟಿಯಲ್ಲಿ ಮೂಡುವ ಮುಗುಳ್ನಗೆ, ಕಣ್ಣಲ್ಲಿ ಮಿಂಚು ಪ್ರೇಕ್ಷಕನಿಗೂ ಕಚಗುಳಿ ಇಡುತ್ತದೆ. ಇವರಿಬ್ಬರೂ ತಮ್ಮ ಪ್ರೇಮ ನಿವೇದನೇ ಯಾವಾಗ ಮಾಡಿಕೊಳ್ಳುತ್ತಾರೆ ಎನಿಸುವಂತೆ ಪ್ರೇಕ್ಷಕನ ತವಕ ಕಾಯ್ದುಕೊಳ್ಳುವಲ್ಲಿ ನಿರ್ದೇಶಕನಿಗೆ ಫುಲ್ ಮಾರ್ಕ್ಸ್. ಮತ್ತೆ ಎಂಬಿಎ ಪರೀಕ್ಷೆಗೆ ತಯಾರಿ ಹಳ್ಳಿಯ ರಾಜಕಾರಣ, ಕುತಂತ್ರಗಳು ಅವುಗಳನ್ನು ದಾಟಿಕೊಂಡು ಮುನ್ನಡೆವ ಅಭಿಷೇಕ್. ಈ ಮಧ್ಯೆ ವಿಕಾಸನ ಪತ್ನಿ ಗರ್ಭವತಿಯಾಗುವುದು ಎಲ್ಲರ ಸಂಭ್ರಮ, ಪ್ರಹ್ಲಾದ ವಿಕಾಸನನ್ನು ತನ್ನ ಮಗನಂತೇ ತಿಳಿಯುವುದು, 'ಚಾಚಾ ಆಪ್ ದಾದಾ ಬನ್ ರಹೇಹೋ' ಎಂದು ವಿಕಾಸ್ ಪ್ರಹ್ಲಾದನನ್ನು ಅಪ್ಪಿಕೊಳ್ಳುವುದು, ಪ್ರಹ್ಲಾದ ವಿಕಾಸನ ಬೆನ್ನು ತಲೆ ಸವರಿ ಆಪ್ಯಾಯತೆ ತೋರಿಸುವುದು ನಮಗೂ ನೋಡಲು ಆಪ್ಯಾಯಮಾನವಾಗುವಂತೆ ಇದೆ. ಪ್ರಧಾನಮಂತ್ರಿ ಆವಾಸ ಯೋಜನಾದಲ್ಲಿ ಮನೆಗಳನ್ನು ಕಟ್ಟಿಸಿಕೊಡುವುದು ಆದರಲ್ಲಿ ದಮಯಂತಿ ಎನ್ನು ಅಜ್ಜಿಯ ಮುಗ್ಧತೆ ತನಗೂ ಒಂದು ಮನೆ ಬೇಕೆನ್ನುವ ಅವಳ ಆಸೆ ಇವೆಲ್ಲವೂ ಬಹಳ ಇಷ್ಟವಾಗಿ, ನೋಡಿಸಿಕೊಂಡು ಹೋಗುತ್ತದೆ.
ಪಂಚಾಯತ್ ಸದಸ್ಯರ ಆಸೆಯಂತೆ ಹಳ್ಳಿಗೆ ರಸ್ತೆ ಹಾಕಿಸಲು ಎಂಎಲ್‌ಎ ಪ್ರಕಾಶ್ ಝಾ ನೊಂದಿಗೆ ರಾಜಿ ಮಾಡಿಕೊಳುವ ಸಲುವಾಗಿ ಹಳ್ಳಿಗೆ ಕರೆಸುವುದು ಈ ಸಂದರ್ಭದಲ್ಲಿ ಹಳ್ಳಿಯ ರಾಕ್ಷಸ ಎಂದು ಹೆಸರಾದ ಭೂಷಣ ಅವನ ಪತ್ನಿ ಕ್ರಾಂತಿದೇವಿ ಹಾಗೂ ಅವನ ಇಬ್ಬರು ಚೇಲಾಗಳು ಮಾಡುವ ಕುತಂತ್ರ ಕೊನೆಗೆ ಶ್ರೀಕೃಷ್ಣ ರಾಯಭಾರದಂತೆ ಈ ಸಂಧಾನ ವಿಫಲವಾಗುವುದು, ರೋಷಗೊಂಡ ಎಂಎಲ್‌ಎ ತನ್ನ ಸೈನ್ಯದೊಡನೆ ಯುದ್ಧಕ್ಕೆ ಬರುವುದು ಹಳ್ಳಿಗರು ಒಗ್ಗಟ್ಟಾಗಿ ಶಾಸಕನನ್ನು ಎದುರಿಸುವುದು ಎಲ್ಲವೂ ಬಹಳ ಅಚ್ಚುಕಟ್ಟಾಗಿದೆ. ಈ ಸರಣಿಯ ಕೊನೆ ಭಾಗದಲ್ಲಿ ಅಭಿಷೇಕ್ ತನ್ನ ಎಂಬಿಎ ಎಂಟ್ರೆನ್ಸ್ ಪರೀಕ್ಷೆಗಾಗಿ ವಾರಣಾಸಿಗೆ ಹೋಗುವಾಗ ಅವನನ್ನು ಬೀಳ್ಕೊಡಲು ಪ್ರಧಾನ್, ಉಪಪ್ರಧಾನ್, ವಿಕಾಸ್ ಎಲ್ಲರೂ ಬಸ್ ಸ್ಟಾಂಡಿಗೆ ಬಂದಾಗ ಎಂಎಲ್‌ಎ ಕಡೆಯವರು ಬಂದೂಕುಧಾರಿಗಳಾಗಿ ಬಂದು ಇವರ ಮೇಲೆ ಗುಂಡು ಹಾರಿಸುವುದು, ಮಿಂಚಿನಂತೆ ಇವರೆಲ್ಲ ತಪ್ಪಿಸಿಕೊಂಡು ಓಡುವುದು ಭಯದೊಂದಿಗೆ ನಗೆಯನ್ನೂ ಉಕ್ಕಿಸುತ್ತದೆ. ಅಭಿಷೇಕ್ ನನ್ನು ಹೇಗೋ ಪಾರುಮಾಡಿ ಪರೀಕ್ಷೆಗೆ ಕಳಿಸುವ ಈ ಮೂವರೂ ಅವನು ಬಸ್ ಹತ್ತಿದ ನಂತೆರ ಮತ್ತೆ ಶಾಸಕನ ಚೇಲಾಗಳ ಗುಂಡಿನ ದಾಳಿಗೆ ತುತ್ತಾಗುತ್ತಾರೆ. ಕೂದಲೆಳೆಯಲ್ಲಿ ತಪ್ಪಿಸಿಕೊಂಡರೂ ಒಂದು ಗುಂಡು ಪ್ರಧಾನ್ ಬ್ರಿಜ್ ಭೂಷಣ್ ಭುಜದಲ್ಲಿ ಹೊಕ್ಕು ಬಿಡುತ್ತದೆ. ಪರೀಕ್ಷೆ ಮುಗಿಸಿ ಬರುವ ಅಭಿಷೇಕ್ ಸೀದಾ ಅಸ್ಪತ್ರೆಗೆ ಬರುತ್ತಾನೆ. ಗಾಯಗೊಂಡ ಪ್ರಧಾನ್‌ನನ್ನು ನೋಡಿ ವ್ಯಥೆಯಾಗುತ್ತದೆ. ಪ್ರಧಾನ್ ನೋಡಲು ಬರುವ ಶಾಸಕ ಮತ್ತು ಅವನ ಚೇಲಾಗಳೊಂದಿಗೆ ಅಭಿಷೇಕ್, ಪ್ರಹ್ಲಾದ್ ಹಾಗೂ ವಿಕಾಸ್ ಮಾರಾಮಾರಿಗೆ ಇಳಿಯುತ್ತಾರೆ. ಈ ಹೊಡೆದಾಟವೂ ಯಾವ ಉತ್ಪ್ರೇಕ್ಷೆ ಇಲ್ಲದೆಯೂ ಅತ್ಯಂತ ಸಹಜವಾಗಿ ಮೂಡಿಬಂದಿದೆ.
Silence 2 Movie Review: ನೈಟ್ ಕ್ಲಬ್‌ನಲ್ಲಿ ಹೆಣವಾದ ಕಾಲ್ ಗರ್ಲ್ ಕೊಲೆ ಜಾಡು ಹಿಡಿದು ಹೋದಾಗ?
ಪೊಲೀಸರು ಬಂದು ಇವರನ್ನೆಲ್ಲ ಬಂಧಿಸಿ ಠಾಣೆ ಕರೆದೊಯ್ಯುವುದು, ಠಾಣೆಯಲ್ಲಿ ಅಂಥ ಉದ್ರಿಕ್ತ ಸಮಯದಲ್ಲೂ ವಿಕಾಸ್ ಅಭಿಷೇಕ್ ನನ್ನು ‘ಪರೀಕ್ಷೆ ಹೇಗೆ ಬರೆದಿದೀರಾ?’ ಎಂದು ಕೇಳುವುದು ಪ್ರೇಕ್ಷಕನಿಂದ ಚಪ್ಪಾಳೆ ಗಿಟ್ಟಿಸುತ್ತದೆ. ಈ ಸಲದ ಪರೀಕ್ಷೆಯಲಿ ಪಾಸಾಗಿ ಎಂಬಿಎಗೆ ಸೀಟು ಸಿಗುವ ನಿರೀಕ್ಷೆ ಇದ್ದರೂ ಪೊಲೀಸರಿಂದ ಬಂಧಿತನಾಗಿರುವ ಅಭಿಷೇಕ್ ಮುಂದೆ ಹೇಗೆ ಎಂದು ತನ್ನ ಭವಿಷ್ಯದ ಬಗ್ಗೆ ಚಿಂತಿತನಾಗುತ್ತಾನೆ. ಇಷ್ಟರಲ್ಲಿ ಅದೇ ದಿನ ಮತ್ತೆ ಪಂಚಾಯತ್ ಚುನಾವಣೆ ಘೋಷಣೆಯಾಗುತ್ತದೆ ಎಂಬಲ್ಲಿಗೆ ಈ ಮೂರನೇ ಸರಣಿ ಮುಕ್ತಾಯವಾಗೂತ್ತದೆ. ಆದರೂ ನಾಲ್ಕನೇ ಸರಣಿ ಇದೆ ಎನ್ನುವ ಸುಳಿವು ಕೊಡುತ್ತದೆ. ನಾಲ್ಕನೇ ಸರಣಿಗೂ ಪ್ರೇಕ್ಷಕರನ್ನು ತವಕದಿಂದ ಕಾಯುವಂತೆ ಮಾಡುವ ಜಾಣ್ಮೆ ನಿರ್ದೇಶಕರಿಗೆ ಸಿದ್ಧಿಸಿದೆ. ಇದರಲ್ಲಿ ಅಭಿನಯಿಸಿರುವ ಎಲ್ಲ ಕಲಾವಿದರೂ ತಮ್ಮ ಸಹಜಾಭಿನಯದಿಂದ ನಾಲ್ಕನೇ ಸರಣಿಗೂ ಪ್ರೇಕ್ಷಕರು ತವಕದಿಂದ ಕಾಯುವಂತೆ ಮಾಡಿದ್ದಾರೆ.