Chilli Chicken Review: ನಾನ್ ವೆಜ್ ಮೆನುವಿನಲ್ಲಿ ಎಲ್ಲೂ ಮಿಸ್ ಆಗದ ಚಿಲ್ಲಿ ಚಿಕನ್!

By Kannadaprabha News  |  First Published Jun 22, 2024, 4:25 PM IST

ಆದರ್ಶ ಮಹತ್ವಾಕಾಂಕ್ಷೆಯ ಅವಕಾಶವಾದೀ ಮಿಡಲ್ ಕ್ಲಾಸ್ ಯುವಕ. ದೊಡ್ಡ ಮಟ್ಟದ ಹೊಟೇಲ್ ಬ್ಯುಸಿನೆಸ್ ಮಾಡಬೇಕು ಅನ್ನೋದು ಆತನ ಕನಸು. 
 


ಪ್ರಿಯಾ ಕೆರ್ವಾಶೆ

ಎಂಜಿ ರೋಡ್, ಬ್ರಿಗೇಡ್ ರೋಡ್‌ನ ಅತ್ಯಾಧುನಿಕ ಹೋಟೆಲ್, ಬ್ಯೂಟಿ ಸಲೂನ್‌ಗಳಿಂದ ಹಿಡಿದು ಕಲಾಸಿಪಾಳ್ಯ ಗಲ್ಲಿಗಳವರೆಗೂ ಪುಟ್ಟ ಉಬ್ಬು ಕಣ್ಣು, ಹಾಲು ಬಿಳುಪು ಮೈಬಣ್ಣದ ಈಶಾನ್ಯ ಭಾರತದ ಹುಡುಗ ಹುಡುಗಿಯರನ್ನು ಗಮನಿಸಿಯೇ ಇರುತ್ತೇವೆ. ಆದರೆ ಈ ಮಹಾನಗರದಲ್ಲಿ ಅವರ ಬದುಕು ಹೇಗಿರುತ್ತದೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿರುವುದಿಲ್ಲ. ನಾವು ಈ ನೋಡಿಲ್ಲದ ಈ ಅಪರಿಚಿತ ಜಗತ್ತಿನತ್ತ ಕಿಟಕಿಯಿಂದ ಇಣುಕಿ ನೋಡುವ ಸಹಜ ಪ್ರಯತ್ನ ಚಿಲ್ಲಿ ಚಿಕನ್. ನಾನ್ ವೆಜ್ ಮೆನುವಿನಲ್ಲಿ ಎಲ್ಲೂ ಮಿಸ್ ಆಗದ ಚಿಲ್ಲಿ ಚಿಕನ್ ಈಶಾನ್ಯ ಭಾರತೀಯರ ಬದುಕಿನ ರೂಪಕವಾಗಿ ಈ ಸಿನಿಮಾದಲ್ಲಿ ಬಂದಿದೆ. 

Latest Videos

undefined

ತಮ್ಮೂರು, ತಮ್ಮ ಜನರನ್ನು ಬಿಟ್ಟು ಬೆಂಗಳೂರಿನಂಥ ಮಹಾನಗರಗಳಲ್ಲಿ ಬದುಕುವ ಈ ಜನ ಇಲ್ಲಿನ ಶ್ರೀಮಂತರ ಜೇಬು ಬರಿದಾಗದಂತೆ ಕೆಲಸ ಮಾಡುತ್ತಾರೆ. ತಾವು ಮಾತ್ರ ಇಲಿ ಬಿಲಗಳಂಥಾ ಗಾಳಿ ಬೆಳಕಿಲ್ಲದ ಸೂರುಗಳಲ್ಲಿ ಆಶ್ರಯ ಪಡೆಯುತ್ತ ತೂತು ಜೇಬುಗಳಲ್ಲೇ ದಿನ ತಳ್ಳುತ್ತಾರೆ. ಸಿನಿಮಾ ಇಂಥ ಸಂಗತಿಗಳನ್ನು ಸಣ್ಣ ಸಣ್ಣ ಇಮೇಜ್‌ಗಳ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಆದರ್ಶ ಮಹತ್ವಾಕಾಂಕ್ಷೆಯ ಅವಕಾಶವಾದೀ ಮಿಡಲ್ ಕ್ಲಾಸ್ ಯುವಕ. ದೊಡ್ಡ ಮಟ್ಟದ ಹೊಟೇಲ್ ಬ್ಯುಸಿನೆಸ್ ಮಾಡಬೇಕು ಅನ್ನೋದು ಆತನ ಕನಸು. 

ಚಿತ್ರ: ಚಿಲ್ಲಿ ಚಿಕನ್
ತಾರಾಗಣ: ಶೃಂಗ, ಬೈಜೊ ತಾಜಾಂ, ಹೈರಾಕ್ ಸೋನೋವಾಲ್, ಜಿಂಪಾ ಸಾಂಪೊ ಭುಟಿಯೊ
ನಿರ್ದೇಶನ: ಪ್ರತೀಕ್ ಪ್ರಜೋಶ್
ರೇಟಿಂಗ್: 3.5

ಉತ್ತರ ಭಾರತ, ಈಶಾನ್ಯ ಭಾರತದ ಹುಡುಗರನ್ನಿಟ್ಟು ಸಣ್ಣ ಮಟ್ಟಿನ ಹೋಟೆಲ್ ಬಿಸಿನೆಸ್ ಮಾಡುತ್ತಿರುತ್ತಾನೆ. ಅಮಾಯಕನೊಬ್ಬನ ಸಾವಿನ ಹಿನ್ನೆಲೆಯಲ್ಲಿ ಈತನ ಹಾಗೂ ಈತ ಕೆಲಸಕ್ಕಿಟ್ಟುಕೊಂಡಿರುವ ಈಶಾನ್ಯ ಭಾರತದ ಹುಡುಗರ ವ್ಯಕ್ತಿತ್ವ ಹೇಗೆ ತೆರೆದುಕೊಳ್ಳುತ್ತಾ ಹೋಗುತ್ತದೆ, ದೇಶ, ಕಾಲ ಮೀರಿದ ಸ್ಥಿತ್ಯಂತರವೊಂದು ಹೇಗೆ ಕೆಲಸ ಮಾಡುತ್ತದೆ ಎಂಬುದು ಸಿನಿಮಾದ ಕಥಾಹಂದರ. ಇಡೀ ಸಿನಿಮಾ ಕಟ್ಟಿಕೊಡುವ ಅನುಭವ ದೊಡ್ಡದು. ಮೊದಲನೇ ಭಾಗ ತೀವ್ರವಾಗಿ ಮೂಡಿಬಂದಿದೆ. ಎರಡನೇ ಭಾಗದಲ್ಲಿ ಸಿನಿಮಾದ ಜನಪ್ರಿಯ ಫಾರ್ಮ್ಯಾಟ್ ಇದೆ. ಒಟ್ಟಾರೆ ಹೊಸತನ, ತಾಜಾ ಕಥೆ, ನಟನೆ ಎಲ್ಲದರಿಂದ ಗಮನಸೆಳೆಯೋ ಸಿನಿಮಾ ಚಿಲ್ಲಿ ಚಿಕನ್.

click me!