ಸಿದ್ಧಾರ್ಥ ಪಾತ್ರದ ಮನಸ್ಸಿನಲ್ಲಾಗುವ ಬದಲಾವಣೆಗೆ ತಕ್ಕಂತೆ ದೇಹವೂ ಬದಲಾಗುತ್ತಾ ಹೋಗುತ್ತದೆ. ಕಥೆಯೇ ಪ್ರಧಾನವಾದ ಚಿತ್ರವೊಂದಕ್ಕೆ ಅವರು ಮಾಡಿಕೊಂಡಿರುವ ದೈಹಿಕ ಬದಲಾವಣೆ ಮತ್ತು ದೇಹದಂಡನೆ ಅವರ ಬಗ್ಗೆ ಮೆಚ್ಚುಗೆ ಮೂಡುವಂತೆ ಮಾಡುತ್ತದೆ.
ಜೋಗಿ
ನವ್ಯಸಾಹಿತ್ಯ ಚಳವಳಿಯ ಕಾಲಘಟ್ಟದಲ್ಲಿ ಬಂದ ಕಥಾಸಂಕಲನದ ಸಣ್ಣಕತೆಯ ತೀವ್ರತೆ, ದಟ್ಟ ವಿವರ ಮತ್ತು ಖಾಸಗಿ ಜಗತ್ತಿನ ಚಿತ್ರಣವಿರುವ ನೋಡಿದವರು ಏನಂತಾರೆ ಅನೇಕ ಕಾರಣಗಳಿಗೆ ಸಿನಿಮಾಪ್ರಿಯರಿಗೆ ಇಷ್ಟವಾಗಬಹುದು. ಕುಲದೀಪ್ ಕಾರಿಯಪ್ಪ ಕತೆ ಬರೆದು ನಿರ್ದೇಶಿಸಿದ ಚಿತ್ರದ ಪ್ರಧಾನ ಪಾತ್ರವಾಗಿ ನವೀನ್ ಶಂಕರ್ ಜೀವಿಸಿದ್ದಾರೆ. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದು ತನ್ನನ್ನು ದುಡಿಮೆಗೆ ಹಚ್ಚಿಕೊಂಡು ಒದ್ದಾಡುವ ಈ ಕಾಲದ ಟೆಕ್ಕಿಗಳ ಆತ್ಮವನ್ನು ಕುಲದೀಪ್ ಕಾರಿಯಪ್ಪ ಈ ಕತೆಯ ಮೂಲಕ ಹಿಡಿಯಲು ಯತ್ನಿಸಿದ್ದಾರೆ. ಬರಡಾಗುತ್ತಿರುವ ನಾಳೆ, ಸಾರವಿಲ್ಲದ ಸಂಜೆ ಮತ್ತು ಉಸಿರುಕಟ್ಟಿರುವ ಕಚೇರಿಯ ಕೆಲಸದ ನಡುವೆಯೇ ತನ್ನ ಅಸ್ತಿತ್ವದ ಹುಡುಕಾಟದಲ್ಲಿರುವ ಕಥಾನಾಯಕ ಸಿದ್ಧಾರ್ಥ ಕೂಡ ಬುದ್ಧನಾಗುವ ಹೊರಳು ಹಾದಿಯಲ್ಲಿದ್ದಾನೆ.
ಆತನ ವೈಯಕ್ತಿಕ ಬದುಕಿನ ಸಂಕಟ, ಪ್ರೇಮವೈಫಲ್ಯ, ಸಿಟ್ಟಿನ ಪರಿಣಾಮದಿಂದಾಗಿ ಆಗುವ ಅವಮಾನ ಮತ್ತು ತನಗೆ ಬಾಲ್ಯದಲ್ಲಾದ ಗಾಯಕ್ಕೆ ಕಾರಣ- ಅವನನ್ನು ಇನ್ನಿಲ್ಲದಂತೆ ಬಾಧಿಸುವ ಹೊತ್ತಲ್ಲಿ ಆತ ಎಲ್ಲವನ್ನೂ ಬಿಟ್ಟು ಹೊರಟು ನಿಲ್ಲುತ್ತಾನೆ. ಅಲ್ಲಿಗೆ ಕತೆ ಮುಗಿದು ಹುಡುಕಾಟ ಶುರುವಾಗುತ್ತದೆ. ಸಿದ್ಧಾರ್ಥನಿಗೆ ಎದುರಾಗುವ ಕುರಿಗಾಹಿಯ ಮೂಲಕ ಸಾಗುವ ಬದುಕು, ಸಿದ್ಧಾರ್ಥನ ಜ್ಞಾನೋದಯಕ್ಕೆ ಕಾರಣವಾಗುತ್ತದೆ. ಅಂತಿಮವಾಗಿಮನುಷ್ಯ ಏನನ್ನು ಪಡೆದುಕೊಳ್ಳುತ್ತಾನೆ ಮತ್ತು ಏನನ್ನು ಕಳೆದುಕೊಳ್ಳುತ್ತಾನೆ ಅನ್ನುವುದು ಜಗತ್ತಿಗೆ ಸಂಬಂಧಿಸಿದ ಸಂಗತಿಯಲ್ಲ, ಅದೊಂದು ಖಾಸಗಿಯಾದ ಅನುಭವ ಅನ್ನುವುದನ್ನು ಪ್ರೇಕ್ಷಕನಿಗೆ ಮುಟ್ಟಿಸುವ ಮಹತ್ವಾಕಾಂಕ್ಷಿ ಉದ್ದೇಶ ಹೊಂದಿರುವ ಸಿನಿಮಾ ಇದು.
ನವೀನ್ ಶಂಕರ್ ಇಡೀ ಚಿತ್ರವನ್ನು ಬದುಕಿ ತೋರಿಸಿದ್ದಾರೆ. ಸಿದ್ಧಾರ್ಥ ಪಾತ್ರದ ಮನಸ್ಸಿನಲ್ಲಾಗುವ ಬದಲಾವಣೆಗೆ ತಕ್ಕಂತೆ ದೇಹವೂ ಬದಲಾಗುತ್ತಾ ಹೋಗುತ್ತದೆ. ಕಥೆಯೇ ಪ್ರಧಾನವಾದ ಚಿತ್ರವೊಂದಕ್ಕೆ ಅವರು ಮಾಡಿಕೊಂಡಿರುವ ದೈಹಿಕ ಬದಲಾವಣೆ ಮತ್ತು ದೇಹದಂಡನೆ ಅವರ ಬಗ್ಗೆ ಮೆಚ್ಚುಗೆ ಮೂಡುವಂತೆ ಮಾಡುತ್ತದೆ. ಸಂಕಟ, ಅವಮಾನ, ಸಂತೋಷ, ಕ್ಷೋಭೆ ಎಲ್ಲವನ್ನೂ ತೀವ್ರವಾಗಿ ವ್ಯಕ್ತಪಡಿಸುವ ಪಾತ್ರವನ್ನು ನವೀನ್ ಅಷ್ಟೇ ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದಾರೆ. ಕುಲದೀಪ್ ಕಾರಿಯಪ್ಪ ಕತೆಯಲ್ಲೆಲ್ಲೂ ರಾಜಿ ಮಾಡಿಕೊಂಡಿಲ್ಲ. ತಾನು ಹೇಳಬೇಕಾದ ಕತೆಯ ವೇಗ, ಲಯ, ಸನ್ನಿವೇಶ ಮತ್ತು ಕಲಾತ್ಮಕತೆಯನ್ನು ಒಂದೇ ಒಂದು ಕ್ಷಣದಲ್ಲೂ ಬಿಟ್ಟುಕೊಟ್ಟಿಲ್ಲ. ಹೀಗೆ ವ್ಯಕ್ತಿಯೊಬ್ಬನ ಅಂತರಂಗದ ತೊಳಲಾಟಗಳನ್ನು ಹೇಳುವ ಕತೆಗಳು ಕನ್ನಡದಲ್ಲಿ ತೀರಾ ಅಪರೂಪ.
ಚಿತ್ರ: ನೋಡಿದವರು ಏನಂತಾರೆ
ನಿರ್ದೇಶನ: ಕುಲದೀಪ್ ಕಾರಿಯಪ್ಪ
ತಾರಾಗಣ: ನವೀನ್ ಶಂಕರ್, ಅಪೂರ್ವ ಭಾರದ್ವಾಜ್, ಪದ್ಮಾವತಿ ರಾವ್
ರೇಟಿಂಗ್: 4
ಹೀಗಾಗಿ ಈ ಕತೆ ಮತ್ತು ಚಿತ್ರ ಗಾಢವಾಗಿ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಕಾರಿಯಪ್ಪ ತೋರಿಸುವ ಅರೆಗತ್ತಲ ಪರಿಸರದಲ್ಲಿ ಮೌನವಾಗಿಯೇ ರೋಧಿಸುವ ಸಿದ್ಧಾರ್ಥನ ಚಿತ್ರ ಮತ್ತು ಅವನ ಬದುಕಲ್ಲಿ ಅಚಾನಕ್ ಸಂತೋಷದಂತೆ ಬಂದು ಹೋಗುವ ಅಪೂರ್ವ ಭಾರದ್ವಾಜ್ ಉಲ್ಲಾಸದ ಜತೆಗೇ ಸಂಸ್ಕಾರ ಚಿತ್ರದಲ್ಲಿ ಬರುವ ಪುಟ್ಟನ ಪಾತ್ರವನ್ನು ನೆನಪಿಸುವ ಮಲ್ಲಪ್ಪ ಕೂಡ ಕತೆಯಲ್ಲಿ ಕರಗಿಹೋಗಿದ್ದಾರೆ. ಕಾರಿಯಪ್ಪ ಅವರ ಕತೆಯನ್ನು ಕಟ್ಟುವಲ್ಲಿ ಛಾಯಾಗ್ರಾಹಕ ಅಶ್ವಿನ್ ಕೆನೆಡಿ, ಸಂಗೀತ ನಿರ್ದೇಶಕ ಮಯೂರೇಶ್ ಅಧಿಕಾರಿ, ಸಂಕಲನಕಾರ ಮನು ಶೆಡ್ಗಾರ್ ಕೂಡ ತಮ್ಮ ಪ್ರತಿಭೆ ಬೆರೆಸಿದ್ದಾರೆ.