ಈ ಭಾವನೆಗಳ ರಸ್ತೆಯಲ್ಲಿ ಸಾಗುವ ಭಾರವಾದ ಪಯಣದಲ್ಲಿ ದೀಪಿಕಾ ದಾಸ್ ಸೋಲೋ ನಾಯಕಿಯಾಗಿ ಕಾಣಿಸಿಕೊಂಡು ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಅವರು ಚೆನ್ನಾಗಿ ಕಾಣಿಸುತ್ತಾರೆ ಕೂಡ.
ಆರ್. ಕೇಶವಮೂರ್ತಿ
ಇದು ರೋಡ್ ಜರ್ನಿ ಕಥನ. ಊರು, ಕೇರಿ, ನಗರ, ಪಟ್ಟಣ, ಜನಸಂದಣಿ ಹೀಗೆ ಎಲ್ಲವನ್ನೂ ದಾಟಿ ಬೆಟ್ಟ-ಗುಡ್ಡ, ರಸ್ತೆ, ಮಣ್ಣು, ಬಯಲನ್ನು ಒಳಗೊಳ್ಳುತ್ತಾ ಸಾಗುವ ಕತೆಯಲ್ಲಿ ಎರಡು ಪ್ರಧಾನ ಪಾತ್ರಧಾರಿಗಳು. ಒಬ್ಬಳು ಈ ಜನರೇಷನ್ ಹುಡುಗಿ. ಮತ್ತೊಬ್ಬರು ಹಿರಿಯ ಮಹಿಳೆ. ಇವರದ್ದೇ ಕತೆಯನ್ನು ರಸ್ತೆ ಉದ್ದಕ್ಕೂ ಹೇಳುತ್ತಾ ಹೋಗುತ್ತಾರೆ ನಿರ್ದೇಶಕ ರೋಹಿತ್ ಕೀರ್ತಿ. ಇವರ ಕತೆ, ನೆನಪುಗಳು ಆಗಾಗ ಪ್ರೇಕ್ಷಕನ ಕತೆ-ವ್ಯಥೆಯಾಗಿ ಎಚ್ಚರಿಸುತ್ತದೆ. ಹೀಗೆ ಗಾಢವಾಗಿ ಕಾಡುವ ಪರಿಚಿತ ನೆನಪುಗಳನ್ನು ಹೊತ್ತು, ಅಪರಿಚತ ಜನ, ಪ್ರದೇಶಗಳನ್ನು ನೋಡುತ್ತಾ, ಪ್ರೇಕ್ಷಕನಿಗೂ ತೋರಿಸುತ್ತಾ ಕೂತಲ್ಲೇ ಒಂದು ಸಣ್ಣ ಟ್ರಿಪ್ ಮಾಡಿಸುತ್ತದೆ ‘#ಪಾರು ಪಾರ್ವತಿ’ ಚಿತ್ರ.
ಜೀವನದಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ ಒಂಟಿತನದಲ್ಲಿ ಕಾಲ ದೂಡುತ್ತಿರುವ ಪಾರು ಮತ್ತು ಸೋಲೋ ಟ್ರಿಪ್ ಮಾಡುವ ಈಗಿನ ಜನರೇಷನ್‌ನ ಪಾಯಲ್ ಒಂದು ಹಂತದಲ್ಲಿ ಜತೆಯಾಗುತ್ತಾರೆ. ಇಲ್ಲಿಂದ ಕತೆ ಕೂಡ ಪ್ರೇಕ್ಷಕನಿಗೆ ಜತೆಗೂಡಿ, ಮುಂದೇನು ಎನ್ನುವ ಕುತೂಹಲ ಆಗಾಗ ಮೂಡಿಸುತ್ತಾ, ನಾವು ಹೀಗೆ ಎಲ್ಲವನ್ನೂ ತೊರೆದು ಒಮ್ಮೆ ಹೋದರೆ ಹೇಗಿರುತ್ತದೆ ಎನ್ನುವ ಕ್ರೇಜಿ ಆಲೋಚನೆ ಹುಟ್ಟಿಕೊಳ್ಳುವ ಹೊತ್ತಿಗೆ ಸಿನಿಮಾ ಮುಗಿದು ಪ್ರಯಾಣದ ದಾರಿ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ.
ಚಿತ್ರ: #ಪಾರು ಪಾರ್ವತಿ
ತಾರಾಗಣ: ದೀಪಿಕಾ ದಾಸ್, ಪೂನಂ ಸರ್‌ನಾಯಕ್, ಸಿದ್ಲಿಂಗು ಶ್ರೀಧರ್, ಫವಾಜ್ ಅಶ್ರಾಫ್, ವೈಭವಿ ನಾಗರಾಜ್
ನಿರ್ದೇಶನ: ರೋಹಿತ್ ಕೀರ್ತಿ
ರೇಟಿಂಗ್: 3
ಈ ಭಾವನೆಗಳ ರಸ್ತೆಯಲ್ಲಿ ಸಾಗುವ ಭಾರವಾದ ಪಯಣದಲ್ಲಿ ದೀಪಿಕಾ ದಾಸ್ ಸೋಲೋ ನಾಯಕಿಯಾಗಿ ಕಾಣಿಸಿಕೊಂಡು ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಅವರು ಚೆನ್ನಾಗಿ ಕಾಣಿಸುತ್ತಾರೆ ಕೂಡ. ಪೂನಂ ಸರ್ ನಾಯಕ್ ಸಹಜ ನಟನೆ ಇಷ್ಟವಾಗುತ್ತದೆ. ಫವಾಜ್ ಅಶ್ರಫ್ ಮನರಂಜನೆ ನೀಡುತ್ತಾರೆ. ವೈಭವಿ ನಾಗರಾಜ್ ಚಿತ್ರಕ್ಕೆ ಆ್ಯಕ್ಷನ್ ಇಮೇಜ್ ಕೊಟ್ಟರೆ, ಸಿದ್ಲಿಂಗು ಶ್ರೀಧರ್ ಕೊನೆಯಲ್ಲಿ ಬಂದು ಪಾರು ಪ್ರಶ್ನೆಗಳಿಗೆ ಉತ್ತರವಾಗುವ ಪ್ರಯತ್ನ ಮಾಡುತ್ತಾರೆ.