
ಒಬ್ಬ ಸ್ಮಾರ್ಟ್ ಹ್ಯಾಕರ್, ಇಡೀ ಜಗತ್ತನ್ನೇ ತನ್ನ ಡಿಜಿಟಲ್ ಜಗತ್ತಿನಲ್ಲಿ ಬಂಧಿಸುತ್ತೇನೆಂದು ಹೊರಡುವ ಮತ್ತೊಬ್ಬ ವಂಚಕ, ಜನರಿಗೆ ವೆಲ್‌ನೆಸ್ ಬಗ್ಗೆ ಪಾಠ ಮಾಡುವ ಇನ್ನೊಬ್ಬಳು. ಈ ಮೂವರ ನಡುವೆ ಜಿಯಾ ಹೆಸರಿನ ರೋಬೋಟ್. ಇಷ್ಟೇ ಪಾತ್ರಗಳ ಮೂಲಕ ನಿರ್ದೇಶಕ ಸಿಂಪಲ್ ಸುನಿ ಅವರು ನಮಗೆ ಗೊತ್ತಿರುವ ಸ್ಮಾರ್ಟ್ ಜಗತ್ತಿನ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದಾರೆ. ‘ಲಂಬೋದರ 2.0’ ಚಿತ್ರ ಸೈನ್ಸ್ ಫಿಕ್ಸ್ ಕತೆಯಾದರೂ ಅಲ್ಲಲ್ಲಿ ತಮ್ಮ ಎಂದಿನ ಸೆನ್ಸ್‌ನಿಂದ ಹ್ಯೂಮರ್ ಕ್ರಿಯೇಟ್ ಮಾಡಿದ್ದಾರೆ ಸಿಂಪಲ್ ಸುನಿ. ಹೀಗಾಗಿ ಇದು ಸೆನ್ಸ್ ಆಫ್ ಹ್ಯೂಮರ್ ಸಿನಿಮಾ.
ಚಿತ್ರದ ನಾಯಕ ಅವ್ಯಕ್ತ ಹ್ಯಾಕರ್ ಆಗಿದ್ದರೂ ಆತನಿಗೆ ದೊಡ್ಡ ಮೊತ್ತದಲ್ಲಿ ದೋಚುವ ಉದ್ದೇಶ ಇರಲ್ಲ. ದೊಡ್ಡ ಮೊತ್ತ ಕದ್ದರೆ ಸಿಕ್ಕಿ ಬೀಳುತ್ತೇನೆಂಬ ಭಯ ಮತ್ತು ಮುಂದಾಲೋಚನೆಯಿಂದ ಕೇವಲ 1180 ರು. ಮಾತ್ರ ಅಕೌಂಟ್‌ಗಳಿಂದ ಎಗರಿಸುತ್ತಿರುತ್ತಾನೆ. ಇಂಥವ ಜೀವನಕ್ಕೆ ನಾಯಕಿ ಸಮಯ ಎಂಟ್ರಿ ಕೊಡುತ್ತಾಳೆ. ಜೊತೆಗೆ ಹ್ಯಾಪಿನೆಸ್ ಬ್ಯಾಂಡ್ ಕೂಡ. ಯಾರು ಹೆಚ್ಚು ಹ್ಯಾಪಿ ಸ್ಕೋರ್ ಮಾಡುತ್ತಾರೋ ಅವರಿಗೆ ಒಂದು ಕೋಟಿ ರುಪಾಯಿ ಬಹುಮಾನ ಘೋಷಿಸಿರುತ್ತಾನೆ ಸ್ಮಾರ್ಟ್ ಉದ್ಯಮಿ ರಾಘವ್ ಕಶ್ಯಪ್.
ರಾಘವ್ ಕಶ್ಯಪ್‌ಗೂ, ಸಮಯಗೂ ಇರುವ ನಂಟೇನು, ಹಾಪಿನೆಸ್ ಬ್ಯಾಂಡ್ ಮೂಲಕ ರಾಘವ್ ಕಶ್ಯಪ್ ಮಾಡುತ್ತಿರುವ ಡಿಜಿಟಲ್ ಸಂಚು ಏನೆಂಬುದನ್ನು ತಿಳಿಯುವುದಕ್ಕೆ ಈ ಸಿನಿಮಾ ನೋಡಬೇಕು. ಪ್ರತಿ ದಿನ ಮಾರುಕಟ್ಟೆಗೆ ಬರುತ್ತಿರುವ ಡಿಜಿಟಲ್ ಉಪಕರಣಗಳು ನಮ್ಮ ಜೀವನದ ಪ್ರತಿ ಕ್ಷಣವನ್ನು ಹೇಗೆ ರೂಪಿಸುತ್ತಿವೆ, ನಿಯಂತ್ರಿಸುತ್ತಿವೆ ಎನ್ನುವ ಪ್ರಸ್ತುತ ಕಾಲಘಟ್ಟ ಅತ್ಯಂತ ಗಂಭೀರವಾದ ವಿಷಯವನ್ನು ನಗಿಸುತ್ತಲೇ ಚಿತ್ರದಲ್ಲಿ ಹೇಳಲಾಗಿದೆ. ಐಎ ರೂಪದ ಕೃಷ್ಣ, ನಾಯಕನಿಗೆ ಅಸಿಸ್ಟೆಂಟ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವುದು ಕತೆಯ ನಿರೂಪಣೆಗೆ ಹೊಸತನ ನೀಡಿದೆ. ಜಿಯಾಗಿಂತಲೂ ಆ ಎಐ ಕೃಷ್ಣನೇ ಚಿತ್ರದಲ್ಲಿ ಹೈಲೈಟ್ ಆಗಿದ್ದಾನೆ.
ಚಿತ್ರ: ಲಂಬೋದರ 2.0
ತಾರಾಗಣ: ಅನಿಲ್ ಶೆಟ್ಟಿ, ಕುನಾಲ್ ಕಪೂರ್, ಸಾಚಿ ಬಿಂದ್ರಾ ರೋಬೋಟ್ ಜಿಯಾ
ನಿರ್ದೇಶನ: ಸಿಂಪಲ್ ಸುನಿ
ರೇಟಿಂಗ್: 3
ಇನ್ನೂ ರಾಘವ್ ಕಶ್ಯಪ್ ಪಾತ್ರಧಾರಿ ಕುನಾಲ್ ಕಪೂರ್ ಅವರ ಆಯ್ಕೆ ಅತ್ಯಂತ ಸೂಕ್ತ ಮತ್ತು ಸಮಂಜಸ. ಕುನಾಲ್ ಎಲ್ಲೂ ಬಾಲಿವುಡ್ ನಟನಂತೆ ಕಾಣಿಸಲ್ಲ. ಸಾಚಿ ಬಿಂದ್ರಾ ಹಾಗೂ ಅನೀಲ್ ಶೆಟ್ಟಿ ಜೋಡಿ ತೆರೆ ಮೇಲೆ ನೋಡಲು ಚಂದ. ಜೀವನದ ಎಲ್ಲಾ ಕ್ಷಣಗಳನ್ನು ಸೋಷಿಯಲ್ ಮೀಡಿಯಾ, ಡಿಜಿಟಲ್‌ಗೆ ಅಡವಿಟ್ಟ ಎಲ್ಲರು ನೋಡಲೇಬೇಕಾದ ಸಿನಿಮಾ. ಸಂತೋಷ್ ರೈ ಪತಾಜೆ ಛಾಯಾಗ್ರಾಹಣ, ವೀರ್ ಸಮರ್ಥ್ ಸಂಗೀತ, ವಿನಯ್ ಕುಮಾರ್ ಸಂಕಲನ ಚಿತ್ರದ ತಾಂತ್ರಿಕತೆ ಸೊಬಗು ಹೆಚ್ಚಿಸುವಲ್ಲಿ ಮಹತ್ವ ಪಾತ್ರ ವಹಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.