ಚಿತ್ರ ವಿಮರ್ಶೆ: ಕೋಟಿಗೊಬ್ಬ 3

By Kannadaprabha NewsFirst Published Oct 16, 2021, 9:46 AM IST
Highlights

ಯಾರೊಬ್ಬರೂ ನುಗ್ಗದ ಸುಲ್ತಾನ್‌ಪಾಳ್ಯ ಎಂಬ ಬಶೀರ್‌ ಭಾಯ್‌ ಕೋಟೆಯೊಳಗೆ ಅಮಿತಾಬ್‌ ಬಚ್ಚನ್‌ ಸ್ಟೈಲಲ್ಲಿ ನುಗ್ಗಿ ಭೂಮಿಯನ್ನೇ ಅದುರಿಸಿ, ಕಲ್ಲು ಗೋಡೆ ನಡುಗಿಸಿ, ಸಿಕ್ಕಸಿಕ್ಕವರನ್ನೆಲ್ಲಾ ಅಪ್ಪಚ್ಚಿ ಮಾಡಿ ಸೈಡಿಗೆ ಬಿಸಾಕಿ ಬಶೀರ್‌ ಭಾಯ್‌ಗೆ ಮೂರು ಲೋಕ ತೋರಿಸಿ ಆಚೆಗಟ್ಟುವ ವೇಳೆಗೆ ಥಿಯೇಟರ್‌ ಪೂರ್ತಿ ಶಿಳ್ಳೆ ಚಪ್ಪಾಳೆ ಬೊಬ್ಬೆ. 

ರಾಜೇಶ್‌ ಶೆಟ್ಟಿ

ಉರಿಉರಿಯುವ ಬೆಂಕಿ ಚೆಂಡಿನಂತೆ ಪುಟಿಯುತ್ತಾ ಇದ್ದು ಆರಂಭದಿಂದ ಕಡೆಯವರೆಗೂ ಅದೇ ಎನರ್ಜಿಯನ್ನು ಉಳಿಸಿಕೊಂಡು ಹೋಗುವ ಸುದೀಪ್‌ ಅಭಿನಯ, ಲವಲವಿಕೆ, ಮಕ್ಕಳನ್ನು ಮರುಳುಗೊಳಿಸುವ ಜಾಣ್ಮೆ ಈ ಎಲ್ಲವುಗಳಿಂದ ಮನಸ್ಸು ಕದಿಯುತ್ತಾರೆ, ಗೆಲ್ಲುತ್ತಾರೆ, ಕಾಡುತ್ತಾರೆ.

ಪವರ್‌ಫುಲ್‌ ಶಿವ ಮತ್ತು ಅಮಾಯಕ ಸತ್ಯ ಎಂಬ ಎರಡು ಪಾತ್ರಗಳ ಐಡಿಯಾದಿಂದ ಹುಟ್ಟಿದ ಕತೆಯ ಮುಂದುವರಿದ ಭಾಗ ಇದು. ಶಿವ ಸತ್ತಿದ್ದಾನೆ ಎಂಬುದು ಎರಡನೇ ಭಾಗದಲ್ಲಿ ಜನಜನಿತವಾಗಿದೆ. ಹಾಗಾದರೆ ಸತ್ಯನನ್ನೂ ಗೊಂದಲಗೊಳಿಸುವ ಮತ್ತೊಬ್ಬ ಯಾರು ಎಂಬ ಪ್ರಶ್ನೆಗೆ ಐದು ಅಂಕದ ಉತ್ತರ ಸಿಗುವುದು ಎರಡನೇ ಭಾಗದಲ್ಲಿ. ಲೈಟಾಗಿ ಲೈವ್ಲಿಯಾಗಿ ಸಾಗುವ ಕತೆಯಲ್ಲಿ ಎಮೋಷನಲ್‌ ಭಾಗವೊಂದು ಸಿಕ್ಕಿ ಕೊಂಚ ಎದೆ ಭಾರವಾಗುತ್ತದೆ. ಹೊರುವುದು ಸ್ವಲ್ಪ ಕಷ್ಟ, ಆದರೆ ಅನಿವಾರ್ಯ. ಹಳೇ ಋುಷಿಗಳ ಪ್ರಾಣ ಗಿಳಿಯಲ್ಲಿ ಅಡಗಿರುವಂತೆ, ಈ ಕತೆಯ ಜೀವ ಇರುವುದೇ ಪುಟ್ಟದೊಂದು ಫ್ಲಾಶ್‌ಬ್ಯಾಕಲ್ಲಿ.

ತಾರಾಗಣ: ಕಿಚ್ಚ ಸುದೀಪ್‌, ಮಡೋನಾ ಸೆಬಾಸ್ಟಿಯನ್‌, ರವಿಶಂಕರ್‌, ಆಫ್ತಾಬ್‌ ಶಿವದಾಸಿನಿ, ಶ್ರದ್ಧಾ ದಾಸ್‌, ನವಾಬ್‌ ಶಾ

ನಿರ್ದೇಶನ: ಶಿವಕಾರ್ತಿಕ್‌

ರೇಟಿಂಗ್‌- 4

ಒಂದೊಳ್ಳೆಯ ಉದ್ದೇಶ ಇರುವ ನಾಯಕ, ಜಗತ್ತನ್ನೇ ನಾಶ ಮಾಡಬೇಕೆಂದಿರುವ ವಿಲನ್‌ ಮಧ್ಯದ ಜಟಾಪಟಿಯ ಕತೆ ಎಲ್ಲೂ ಬೋರ್‌ ಹೊಡೆಸುವುದಿಲ್ಲ ಅನ್ನುವುದು ಈ ಸಿನಿಮಾದ ಶಕ್ತಿ. ಕೆಲವು ಪಾತ್ರಗಳ ಬಗ್ಗೆ ಸ್ವಲ್ಪ ಜಾಸ್ತಿ ವಿವರಣೆ ಬೇಕಿತ್ತು ಅನ್ನಿಸಿದರೂ ಸಿನಿಮಾದ ಓಟ ಎಲ್ಲೂ ನಿಧಾನವಾಗುವುದಿಲ್ಲ. ಅಲ್ಲೊಂದು ಬ್ಲಾಸ್ಟು, ಇಲ್ಲೊಂದು ತಿರುವು, ಮಧ್ಯೆ ಒಂದು ಲವ್‌ ಸ್ಟೋರಿ ಸೇರಿ ಚಕಚಕನೆ ಸಾಗುವ ಕತೆಯಲ್ಲಿ ಸಕತ್‌ ಮಜಾ ಕೊಡುವುದು ರವಿಶಂಕರ್‌. ಸೆಕೆಂಡ್‌ ಹಾಫ್‌ ಪೂರ್ತಿ ಇರುವ ರವಿಶಂಕರ್‌ ಮತ್ತು ಸುದೀಪ್‌ ಜುಗಲ್‌ಬಂದಿ ನೋಡುವುದೇ ಸಂತೋಷ.

ಇಲ್ಲಿ ಕೆಟ್ಟದ್ದು ಅನ್ನಿಸುವ ಮಾತುಗಳಿಲ್ಲ. ಕಿರಿಕಿರಿ ಅನ್ನಿಸುವ ದೃಶ್ಯಗಳಿಲ್ಲ. ಪೋಲೆಂಡ್‌ ದರ್ಶನ ಭಾಗ್ಯ, ಅದ್ದೂರಿ ದೃಶ್ಯ ವೈಭವ ಇಲ್ಲಿನ ಹೆಚ್ಚುವರಿ ಲಾಭ. ನಿರ್ಮಾಪಕ ಸೂರಪ್ಪ ಬಾಬು ಮಾಡಿರುವ ಖರ್ಚು ಸಿನಿಮಾದಲ್ಲಿ ಕಾಣುತ್ತದೆ. ಇನ್ನು ಚಿತ್ರದ ದುಬಾರಿ ನಟ ಎಂದರೆ ರಂಗಾಯಣ ರಘು. ನಾಲ್ಕೇ ನಾಲ್ಕೇ ಡೈಲಾಗಿನಲ್ಲಿ ಅವರು ಭಾರತ, ಪೋಲೆಂಡ್‌ ಎಲ್ಲವೂ ಸುತ್ತಿ ಬರುತ್ತಾರೆ. ಕನ್ನಡಕ್ಕೆ ಮೊದಲ ಬಾರಿ ಬಂದಿರುವ ಆಫ್ತಾಬ್‌ ಶಿವದಾಸಿನಿ, ಶ್ರದ್ಧಾ ದಾಸ್‌, ಮಡೋನಾ ಸೆಬಾಸ್ಟಿಯನ್‌ ಅವರವರ ಪಾತ್ರದಲ್ಲಿ ನೀಟಾಗಿ ಘನತೆವೆತ್ತ ವ್ಯಕ್ತಿಗಳಂತೆ ಕಂಡು ಕತೆಗೂ ಸಿನಿಮಾಗೂ ನ್ಯಾಯ ಒದಗಿಸಿದ್ದಾರೆ.

ಕೋಟಿಗೊಬ್ಬ 3: ಅಭಿಮಾನಿಗಳಿಗೆ, ಅರ್ಜುನ್ ಜನ್ಯಾಗೆ thanks ಎಂದ ಕಿಚ್ಚ!

ಥಿಯೇಟರ್‌ಗೆ ಹೋಗಿ ಎಂಜಾಯ್‌ ಮಾಡುವ ಆಸೆ ಇರುವವರಿಗೆ ಬೇಕಾಗಿಯೇ ಮಾಡಿದಂತಹ ಸಿನಿಮಾ ಇದು. ಜಾಸ್ತಿ ಲಾಜಿಕ್‌ ಹುಡುಕದೆ ಶಿಳ್ಳೆ, ಚಪ್ಪಾಳೆಗಳ ಜೊತೆ ಸಿನಿಮಾ ಆಸ್ವಾದಿಸಿ ನಗುತ್ತಾ ಹೊರಬರುವಂತೆ ಮಾಡಬೇಕು ಎಂಬ ಉದ್ದೇಶಕ್ಕೆ ನಿರ್ದೇಶಕ ಶಿವಕಾರ್ತಿಕ್‌ ಪೂರ್ತಿ ಬದ್ಧರಾಗಿದ್ದಾರೆ. ಅದರಿಂದಲೇ ಕೋಟಿಗೊಬ್ಬ 3 ಸಿನಿಮಾ ನೋಡಬಲ್‌ ಸಿನಿಮಾಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ.

"

click me!