ಅಡ್ಡದಾರಿಯಲ್ಲಿ ಹಣ ಮಾಡಬೇಕು, ಬೆಂಗಳೂರಿನಂತಹ ನಗರದಲ್ಲಿ ರೌಡಿಗಳಾಗಬೇಕು, ಅಲ್ಲಿನ ಭೂಗತ ಲೋಕವನ್ನು ಆಳಬೇಕು ಎನ್ನುವ ಕನಸಿನೊಂದಿಗೆ ಹಳ್ಳಿಯಿಂದ ಬರುವ ಮೂವರು ಹುಡುಗರು ಮುಂದೆ ಏನಾಗುತ್ತಾರೆ?
ಆರ್.ಕೇಶವಮೂರ್ತಿ
ಇಂಥ ಕತೆ ನೂರೆಂಟು ಬಂದಿರಬಹುದು. ಆದರೆ, ಇಂಥ ಹುಡುಗರ ಅಂತ್ಯ ಹೇಗಿರುತ್ತದೆ ಎನ್ನುವ ವಿಚಾರದಲ್ಲಿ ನಿರ್ದೇಶಕ ಚಂದ್ರಹಾಸ್ ಹೊಸತನ ಕಾಯ್ದುಕೊಂಡಿದ್ದಾರೆ. ಇದೇ ‘ಕಾಗೆಮೊಟ್ಟೆ’ ಚಿತ್ರದ ಪ್ಲಸ್‌ಪಾಯಿಂಟ್.
ಕೊಳ್ಳೆಗಾಲದ ಕಡೆಯ ಮೂವರು ಹುಡುಗರು. ಮನೆಯಲ್ಲಿ ಹೇಳೋರು ಕೇಳೋರು ಇಲ್ಲದವರು. ಜೀವನದಲ್ಲಿ ದುಡ್ಡು ಮಾಡಬೇಕು. ಜತೆಗೆ ಬೆಂಗಳೂರಿನಲ್ಲಿ ಒಬ್ಬ ಡಾನ್ ಇದ್ದಾನೆ. ಅವನನ್ನು ಸಾಯಿಸಿ ಆ ಜಾಗದಲ್ಲಿ ತಾವು ಕೂರಬೇಕು ಎನ್ನುವ ಪಕ್ಕಾ ಪ್ಲಾನ್‌ನೊಂದಿಗೆ ಬೆಂಗಳೂರಿಗೆ ಬರುವ ಪಿಳ್ಳಾ, ಗೋವಿ ಮತ್ತು ಕೃಷ್ಣ ಪೊಲೀಸ್ ಹಿಟ್ ಲಿಸ್ಟ್‌ಗೆ ಸೇರುತ್ತಾರೆ. ತೀರಾ ಚಿಕ್ಕ ವಯಸ್ಸಿಗೆ ನೆತ್ತರು ಹರಿಸುತ್ತಾರೆ. ಕಾಸು ಕೊಟ್ಟರೆ ಯಾರನ್ನು ಬೇಕಾದರೂ ಕೊಲೆ ಮಾಡುವ ಇವರಲ್ಲೂ ಒಳ್ಳೆಯತನ ಇದೆ ಎಂದು ವೇಶ್ಯೆ ಪಾತ್ರದ ಮೂಲಕ ಹೇಳುತ್ತಾರೆ. ಕೊನೆಗೆ ದುಡ್ಡು, ಸ್ನೇಹ, ಪ್ರೀತಿ ಮತ್ತು ಭೂಗತ ಲೋಕ ಇವುಗಳ ಹಿಂದೆ ಹೋದವರು ಏನಾಗುತ್ತಾರೆ ಎನ್ನುವ ಸತ್ಯವನ್ನು ಚಿತ್ರದ ಕೊನೆಯಲ್ಲಿ ಹೇಳುತ್ತಾರೆ ನಿರ್ದೇಶಕರು. ಮೂರು ಪಾತ್ರಗಳ ಅಂತ್ಯವನ್ನು ಚಂದ್ರಹಾಸ್ ಅವರು ಊಹಿಸದ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಕಾಗೆ ಮೊಟ್ಟೆ ಹಿಡಿದು ಬಂದ ನಟ ಜಗ್ಗೇಶ್ ಹಿರಿಯ ಪುತ್ರ ಗುರು ರಾಜ್!ನಿರ್ದೇಶ: ಚಂದ್ರಹಾಸ್
ಛಾಯಾಗ್ರಹಣ: ಪಿ ಎಲ್ ರವಿ
ಸಂಗೀತ: ಶ್ರೀವತ್ಸ
ರೇಟಿಂಗ್ 3
ಅಬ್ಬರದ ಡೈಲಾಗ್‌ಗಳು, ಅದ್ದೂರಿ ಮೇಕಿಂಗ್‌ನ ಆಚೆಗೂ ಒಂದು ಸರಳವಾದ ಆ್ಯಕ್ಷನ್ ಮಾಸ್ ಕತೆಯನ್ನು ನೋಡಬಯಸುವವರಿಗೆ ‘ಕಾಗೆಮೊಟ್ಟೆ’ ರುಚಿಸುತ್ತದೆ. ಪಿ ಎಲ್ ರವಿ ಛಾಯಾಗ್ರಹಣ ಚಿತ್ರದ ತಾಂತ್ರಿಕತೆಗೆ ಬೆನ್ನೆಲುಬಾಗಿ ನಿಂತರೆ, ಹಿನ್ನೆಲೆ ಸಂಗೀತ ದೃಶ್ಯ ಸಂಯೋಜನೆಯ ಪ್ರಭಾವವನ್ನು ಹೆಚ್ಚಿಸುತ್ತದೆ. ಆ್ಯಕ್ಷನ್ ಸಿನಿಮಾಗಳಿಗೆ ತಾನು ಪರ್‌ಫೆಕ್ಟ್ ಎಂಬುದನ್ನು ಗುರುರಾಜ್ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಇವರ ಜತೆಗೆ ಪಿಳ್ಳಾ ಹಾಗೂ ಗೋವಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹೇಮಂತ್, ಮಾದೇಶ್ ಕೂಡ ಭರವಸೆ ಮೂಡಿಸಿದ್ದಾರೆ.