ಪ್ರೀತಿ ಮಾತ್ರ ಕೊನೆಗೆ ಉಳಿಯುವುದು ಎಂಬ ಸಂದೇಶ ಸಾರುವ ನಿರ್ದೇಶಕರು ಕೆಜಿಎಫ್ ತಾತನ ಪಾತ್ರವನ್ನು ಅಸಹಾಯಕತೆಯಿಂದ ಒದ್ದಾಡಿಸುತ್ತಾರೆ. ಆ ಒದ್ದಾಟ ಅಯ್ಯೋ ಅನ್ನಿಸುವ ಒದ್ದಾಟ. ಈ ಅಪೂರ್ವ ಪ್ರೇಮಕತೆಯ ಜೊತೆ ಆನ್‌ಲೈನ್ ವಂಚನೆಯನ್ನು ನಿರ್ದೇಶಕರು ಸೇರಿಸಿದ್ದಾರೆ.
ರಾಜೇಶ್ ಶೆಟ್ಟಿ
ವೃದ್ಧ ದಂಪತಿಯ ಚಿರಂತನ ಪ್ರೀತಿ, ಜೂನಿಯರ್ ಆರ್ಟಿಸ್ಟ್‌ಗಳ ಕಷ್ಟ ಸುಖ, ಹಣದಾಸೆಗೆ ಮರುಳಾಗುವ ಮನುಷ್ಯರ ವಂಚನೆ, ಆನ್‌ಲೈನ್ ಮೂಲಕ ಮೋಸಕ್ಕೆ ಮುಂದಾಗುವ ದುರುಳತನ, ಏನೂ ಇಲ್ಲದವರ ಅಸಹಾಯಕತೆ ಮತ್ತು ಹಗುರಾಗುವುದಕ್ಕೆ ಕೊಂಚ ತಮಾಷೆ ಎಲ್ಲವನ್ನೂ ಧರಿಸಿಕೊಂಡಿರುವ ಭಾವುಕ ಕಥನ ಇದು. ಕೃಷ್ಣೋಜಿರಾಯರೇ ಇಲ್ಲಿ ಪ್ರಧಾನ ಪಾತ್ರಧಾರಿ. ಖುದ್ದು ಕೆಜಿಎಫ್ ತಾತನೇ ಆಗಿ ನಟಿಸಿದ್ದಾರೆ. ಅವರದು ಆದರ್ಶ ದಾಂಪತ್ಯ. ಹೆಂಡತಿಯನ್ನು ತೀರ್ಥಯಾತ್ರೆಗೆ ಕರೆದೊಯ್ಯಬೇಕೆಂದು ಒಂದು ನ್ಯಾನೋ ಕಾರು ತೆಗೆದುಕೊಂಡಿರುತ್ತಾರೆ.
ಅದಕ್ಕೊಬ್ಬ ಡ್ರೈವರ್ ಇಟ್ಟಿರುತ್ತಾರೆ. ಅಷ್ಟುಹೊತ್ತಿಗೆ ಆಕೆ ಕಾಯಿಲೆ ಬಿದ್ದು, ಔಷಧಿ ಮಾಡುವುದಕ್ಕೆ ಲಕ್ಷಾಂತರ ಹಣ ಬೇಕಾಗುವ ಅನಿವಾರ್ಯತೆ ಬಂದೊದಗುತ್ತದೆ. ಅಲ್ಲಿಗೆ ಸಿನಿಮಾದ ಮೂಲ ಕಥೆ ಆರಂಭ. ಅವರು ದುಡ್ಡು ಹೊಂಚಿಕೊಳ್ಳುತ್ತಾರಾ, ಅವರ ಪತ್ನಿ ಜೊತೆ ತೀರ್ಥಯಾತ್ರೆ ಹೋಗುತ್ತಾರಾ ಎಂಬ ಪ್ರಶ್ನೆ ಮುಂದಿನ ದೃಶ್ಯಗಳು ಉತ್ತರ ಕೊಡುತ್ತಾ ಹೋಗುತ್ತವೆ. ಈ ಮಧ್ಯೆ ಜೂನಿಯರ್ ಆರ್ಟಿಸ್ಟುಗಳ ಬವಣೆ, ಆನ್‌ಲೈನ್ ಮೋಸಗಳನ್ನು ಪೋಣಿಸಿದ್ದು ನಿರ್ದೇಶಕರ ಜಾಣ್ಮೆಗೆ ಪುರಾವೆ. ಅವರು ಕೆಜಿಎಫ್ ತಾತನನ್ನು ಕೆಜಿಎಫ್ ತಾತನ ಪಾತ್ರವನ್ನಾಗಿಯೇ ತೆರೆಗೆ ತಂದಿದ್ದಾರೆ.
ಚಿತ್ರ: ನ್ಯಾನೋ ನಾರಾಯಣಪ್ಪ
ನಿರ್ದೇಶನ: ಕುಮಾರ್ ಎಲ್.
ತಾರಾಗಣ: ದಿ.ಕೃಷ್ಣೋಜಿ ರಾವ್, ಅನಂತ ಪದ್ಮನಾಭ, ಶೈಲೇಶ್, ಕಿಂಗ್ ಮೋಹನ್, ಕಾಕ್ರೋಚ್ ಸುಧಿ
ರೇಟಿಂಗ್: 3
ಆ ಮೂಲಕ ತೆರೆಯ ಮೇಲಿನ ಪಾತ್ರಕ್ಕೂ ತೆರೆಯಾಚೆಗಿನ ಜೀವಕ್ಕೂ ಸೇತುವೆ ಕಟ್ಟುತ್ತಾರೆ. ಪಾತ್ರ ಮಾತ್ರ ಇಲ್ಲಿ ತೆರೆಯಾಚೆಗಿನದು. ಆದರೆ ಕತೆ ಮಾತ್ರ ಕಾಲ್ಪನಿಕ. ವಿಷಾದ ಈ ಸಿನಿಮಾದ ಸ್ಥಾಯಿಭಾವ. ಅಲ್ಲದೇ ವೃದ್ಧ ದಂಪತಿಯ ಕಥನ ಕರುಳು ಕರಗಿಸುವಷ್ಟು ಭಾವುಕ ಮತ್ತು ದಾರುಣ. ಪ್ರೀತಿ ಮಾತ್ರ ಕೊನೆಗೆ ಉಳಿಯುವುದು ಎಂಬ ಸಂದೇಶ ಸಾರುವ ನಿರ್ದೇಶಕರು ಕೆಜಿಎಫ್ ತಾತನ ಪಾತ್ರವನ್ನು ಅಸಹಾಯಕತೆಯಿಂದ ಒದ್ದಾಡಿಸುತ್ತಾರೆ. ಆ ಒದ್ದಾಟ ಅಯ್ಯೋ ಅನ್ನಿಸುವ ಒದ್ದಾಟ. ಈ ಅಪೂರ್ವ ಪ್ರೇಮಕತೆಯ ಜೊತೆ ಆನ್‌ಲೈನ್ ವಂಚನೆಯನ್ನು ನಿರ್ದೇಶಕರು ಸೇರಿಸಿದ್ದಾರೆ.
Kasina Sara Review: ಮಣ್ಣಿಗೆ ಮರಳಿದ ವಿದ್ಯಾವಂತನ ಕತೆ
ಆ ಭಾಗ ನಗಿಸುತ್ತಲೇ ಥ್ರಿಲ್ಲರ್ ದಾರಿಗೆ ಪ್ರೇಕ್ಷಕನನ್ನು ಹೊರಳಿಸುತ್ತದೆ. ಹೊಸ ಹೊಸ ಪಾತ್ರಗಳು, ಹೊಸ ಹೊಸ ವಂಚನೆಯನ್ನು ಹೇಳುತ್ತಾ ಹೋಗುತ್ತದೆ. ಅದನ್ನು ಬಗೆಯುತ್ತಾ ಹೋದಂತೆ ಅದಕ್ಕೊಂದು ತಾರ್ಕಿಕ ಅಂತ್ಯ ಸಿಗುವುದಿಲ್ಲ. ಆದರೆ ಅದೊಂದು ಬಗೆಹರಿಯದ ಕಗ್ಗಂಟು ಎಂಬುದನ್ನು ಸೂಚ್ಯವಾಗಿ ತಿಳಿಸುತ್ತಾರೆ ನಿರ್ದೇಶಕರು. ಅಷ್ಟರ ಮಟ್ಟಿಗೆ ಅವರ ಪ್ರಯತ್ನ ಶ್ಲಾಘನೀಯ. ಕೃಷ್ಣೋಜಿ ರಾಯರು ಈ ಚಿತ್ರದ ಜೀವಾಳ. ಅವರೊಂದಿಗೆ ಅನಂತಪದ್ಮನಾಭ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಸಹಾಯಕತೆಗೆ ಸಿಲುಕಿ ಭಾರವಾಗುವ ಪ್ರೇಕ್ಷಕರನ್ನು ಹಗುರ ಮಾಡುತ್ತಾರೆ. ಒಟ್ಟಾರೆ ಇದೊಂದು ವಿಷಾದ ಹೊದ್ದಿರುವ ಮನರಂಜನಾತ್ಮಕ ಭಾವುಕ ಕಥನ.