Darbar Review: ತಮಾಷೆ ಜೊತೆ ವಿಷಾದ ಬೆರೆತ ರಾಜಕೀಯ ವಿಡಂಬನೆ

By Kannadaprabha News  |  First Published Jun 10, 2023, 9:26 AM IST

ಸತೀಶ್, ಜಾಹ್ನವಿ, ಕಾರ್ತಿಕ್, ಸಂತೋಷ್, ಅಶೋಕ್, ಸಾಧು ಕೋಕಿಲ, ನವೀನ್ ಪಡೀಲ್ ನಟನೆಯ ಸಿನಿಮಾ ರಿಲೀಸ್ ಆಗಿದೆ..


ರಾಜೇಶ್ ಶೆಟ್ಟಿ

ನಗು, ನೋವು, ಅಸಹನೆ, ಕೋಪ, ದುಃಖ, ಸಂತೋಷ, ಕುತೂಹಲ, ಆತಂಕ ಹೀಗೆ ಎಲ್ಲಾ ಭಾವಗಳನ್ನೂ ಉದ್ದೀಪಿಸುವ ಸಮಯ ಎಂದರೆ ಅದು ಚುನಾವಣೆ ಸಮಯ. ಚುನಾವಣೆ ರಾಜಕೀಯದಲ್ಲಿ ಸಭೆ ಇದೆ, ಮೆರವಣಿಗೆ ಇದೆ, ಹಣವಿದೆ, ವಸ್ತುಗಳ ಹಂಚಿಕೆ ಇದೆ, ಬೆನ್ನಿಗೆ ಇರಿಯುವ ವಂಚನೆ ಇದೆ, ಗೊತ್ತೇ ಆಗದ ದ್ರೋಹವಿದೆ. ಅವೆಲ್ಲವನ್ನೂ ಹಾಸ್ಯ ಬೆರೆತ ವಿಷಾದ ರೂಪದಲ್ಲಿ, ವಿಡಂಬನಾತ್ಮಕವಾಗಿ ಕಟ್ಟಿಕೊಟ್ಟಿರುವ ವಿಶಿಷ್ಟ ಸಿನಿಮಾ ದರ್ಬಾರ್.

Tap to resize

Latest Videos

ನಿರ್ದೇಶಕ ವಿ. ಮನೋಹರ್‌ ಮೊದಲಿನಿಂದಲೂ ವ್ಯಂಗ್ಯಕ್ಕೆ ಹೆಸರಾದವರು. ಅವರು ಮಾತಲ್ಲೇ ವ್ಯಂಗ್ಯದ ಸೂಜಿ ಅಡಗಿಸಿಟ್ಟಿರುತ್ತಾರೆ. ಸಮಯ ಸಂದರ್ಭಕ್ಕನುವಾಗಿ ಗೊತ್ತೇ ಆಗದಂತೆ ಚುಚ್ಚಿರುತ್ತಾರೆ. ಅವರ ಆ ಶೈಲಿ ಈ ಸಿನಿಮಾದಲ್ಲಿ ಮಿಳಿತಗೊಂಡಿದೆ. ಒಂದು ಪುಟ್ಟ ಹಳ್ಳಿಯ ರಾಜಕೀಯ ಚಿತ್ರಣ ಎಂದು ಹೇಳುತ್ತಲೇ ಆ ಕತೆಯನ್ನು ಅ‍ವರು ಸಾರ್ವತ್ರಿಕಗೊಳಿಸುತ್ತಾರೆ. ನೋಡುತ್ತಾ ನೋಡುತ್ತಾ ಅದು ಎಲ್ಲಾ ಹಳ್ಳಿಗಳ ಕತೆಯಾಗಿ ಬೆಳೆಯುತ್ತದೆ. ಅಷ್ಟರ ಮಟ್ಟಿಗೆ ಇದೊಂದು ಅಪರೂಪದ ಸಿನಿಮಾ.

MATTE MADUVE REVIEW: ನಟ, ನಟಿಯ ಲವ್ವು, ಲೈಫು ಮತ್ತು ಮೀಡಿಯಾ ಹೈಪು

ನಿರ್ದೇಶನ: ವಿ. ಮನೋಹರ್

ತಾರಾಗಣ: ಸತೀಶ್, ಜಾಹ್ನವಿ, ಕಾರ್ತಿಕ್, ಸಂತೋಷ್, ಅಶೋಕ್, ಸಾಧು ಕೋಕಿಲ, ನವೀನ್ ಪಡೀಲ್

ರೇಟಿಂಗ್: 3

ಅಭ್ಯರ್ಥಿಗಳು, ಮತದಾರರು, ಲಾಭಕ್ಕಾಗಿ ಹಂಬಲಿಸುವವರು, ಜೊತೆಯಲ್ಲಿದ್ದೇ ಇನ್ನೊಬ್ಬನಿಗೆ ಓಟು ಹಾಕುವವರು, ದೇವರ ಮೇಲೆ ಪ್ರಮಾಣ ಮಾಡಿಸಿಕೊಳ್ಳುವವರು ಈ ಎಲ್ಲರನ್ನೂ ನಗಿಸುತ್ತಲೇ ಕಾಲೆಳೆಯುತ್ತಾರೆ. ಕಾಲೆಳೆದಿದ್ದಾರೆ ಎಂದು ಗೊತ್ತಾಗುವಷ್ಟರಲ್ಲಿ ವಿಷಾದ ಆವರಿಸಿರುತ್ತದೆ. ಅಷ್ಟು ಸೊಗಸಾದ ನಿರೂಪಣೆ.

Yada Yadahi Review: ದ್ರೋಹದ ಕತೆಯ ಕೊನೆಗೆ ಸುದೀರ್ಘ ನಿಟ್ಟುಸಿರು

ಆರಂಭದಲ್ಲಿ ಕೊಂಚ ನಿಧಾನವಾಗಿ ಸಾಗುತ್ತದೆ. ನಿಧಾನ ಇರುವಷ್ಟು ಹೊತ್ತು ಮಂಡ್ಯ ಭಾಗದ ಹಳ್ಳಿಯ ಚಿತ್ರಣವನ್ನು ಸವಿಯಬಹುದಾಗಿದೆ. ಯಾವಾಗ ರಾಜಕೀಯ ವಿಚಾರ ಬರುತ್ತದೋ ಆಗ ಸಿನಿಮಾ ವೇಗ ಪಡೆದುಕೊಳ್ಳುತ್ತದೆ. ಒಂದೊಂದು ಪಾತ್ರಗಳೂ ವಿಶಿಷ್ಟವಾಗಿ ಬೆಳೆಯುತ್ತವೆ. ಪ್ರತೀ ಕಲಾವಿದರೂ ಪಾತ್ರವೇ ಆಗುತ್ತಾರೆ. ಆ ನಿಟ್ಟಿನಲ್ಲಿ ಈ ಸಿನಿಮಾ ಸಶಕ್ತ ಬರವಣಿಗೆಗೆ ನಿದರ್ಶನ.

ನಾಯಕ ಪಾತ್ರಧಾರಿ ಸತೀಶ್ ನಾಯಕನ ಪಾತ್ರದಲ್ಲಿ ಮೊದಲ ಬಾರಿ ನಟಿಸಿದ್ದರೂ ಅವರ ಫೈಟಿಂಗ್ ಚಾತುರ್ಯ, ನೃತ್ಯ ಪರಿಣತಿ ಅಮೋಘ. ಕತೆ, ಚಿತ್ರಕತೆ ಬರೆದು ಬರವಣಿಗೆ ಸಾಮರ್ಥ್ಯವನ್ನೂ ಪ್ರಚುರಪಡಿಸಿದ್ದಾರೆ. ಅಂತ್ಯದಲ್ಲಿ ಅ‍ವರ ಪಾತ್ರ ಸಾರುವ ಸಂದೇಶ ಶ್ಲಾಘನೀಯ. ಈ ಸಿನಿಮಾದ ಮತ್ತೊಂದು ಶಕ್ತಿ ಖಳ ಪಾತ್ರಧಾರಿ ಕಾರ್ತಿಕ್ ಅಭಿನಯ. ಪಾತ್ರದ ಮೇಲೆ ಜಿಗುಪ್ಸೆ ಹುಟ್ಟಿಸುವಂತೆ, ಬೆರಗಾಗುವಂತೆ ನಟಿಸಿ ಅಪಾರ ಭರವಸೆ ಮೂಡಿಸುತ್ತಾರೆ.

ಹಾಸ್ಯರೂಪದಲ್ಲಿ ಘಟನೆಗಳನ್ನು ನಿರೂಪಿಸುತ್ತಲೇ ಮತ್ತೇನನ್ನೋ ಹೊಳೆಯಿಸುವ ವಿಡಂಬನಾತ್ಮಕ ಸಿನಿಮಾ ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿತ್ತು. ಅದಕ್ಕೆ ಅಪವಾದ ಈ ಸಿನಿಮಾ. ವ್ಯಂಗ್ಯರೂಪದಲ್ಲಿ ವ್ಯವಸ್ಥೆಯನ್ನು ಆಡಿಕೊಂಡು ಮನರಂಜನೆಯ ಜೊತೆಗೆ ಚಿಂತನೆಗೆ ಹಚ್ಚುವ ಈ ಸಿನಿಮಾ ಗಟ್ಟಿದನಿಯಲ್ಲಿ ಬೊಬ್ಬೆ ಹೊಡೆಯುತ್ತಿರುವಾಗಲೇ ಪಿಸುಮಾತಲ್ಲಿ ಮತ್ತೇನನ್ನೋ ಹೇಳುವ ಪ್ರಯತ್ನವನ್ನೂ ಮಾಡುತ್ತಿರುತ್ತದೆ. ಹಾಗಾಗಿ ಇದೊಂದು ಗಮನಾರ್ಹ ಸಿನಿಮಾ.

click me!