ತಾಯಿಯನ್ನು ಪ್ರೀತಿಸುವವ ಕೊಲೆಗಾರನಾಗಲು ಸಾಧ್ಯವೇ ಇಲ್ಲ..!
- ಇನ್ಸ್‌ಸ್ಪೆಕ್ಟರ್ ಸೂರ್ಯ ಹಾಗೆ ಹೇಳಿ ಒಂದು ಇತ್ಯರ್ಥಕ್ಕೆ ಬರುವ ಹೊತ್ತಿಗೆ ಆ ಕತೆಗೆ ಇನ್ನೇನು ಕ್ಲೈಮ್ಯಾಕ್ಸ್.
ದೇಶಾದ್ರಿ ಹೊಸ್ಮನೆ
ಅಲ್ಲಿಗೆ ಪ್ರೇಕ್ಷಕನಲ್ಲೂ ಇದ್ದ ಆತಂಕ ದೂರ ವಾಗಿ, ಒಂದು ರೀತಿಯ ನಿರಾಳ ಭಾವ ಮೂಡುತ್ತದೆ. ಕೊನೆಗೂ ಆ ಮುಗ್ಧನ ಮೇಲಿನ ಕೊಲೆ ಆರೋಪ ಸುಳ್ಳಾಯಿತ್ತಲ್ಲ ಎನ್ನುವ ನೆಮ್ಮದಿ ಪ್ರೇಕ್ಷಕರದ್ದು. ಆದರೆ ಆ ಮುಗ್ಧ ಮನಸ್ಸು ಹುಡುಕಿ ಹೊರಟಿದ್ದು ತಾಯಿ ಪ್ರೀತಿಯನ್ನು. ಆ ಪ್ರೀತಿ ಕೊನೆಗಾದರೂ ಆತನಿಗೆ ಸಿಕ್ಕಿತಾ?
ಅಸಲಿಗೆ ಇದು ಅಮ್ಮನನ್ನು ಹುಡುಕಿ ಹೊರಟವರಕಥೆ. ಇಲ್ಲಿ ಕಥೆಯೂ ಇದೆ. ಕಣ್ಣೀರನ ವ್ಯಥೆಯೂ ಇದೆ. ನಡೆದಷ್ಟು ದೂರ ಭಾವುಕತೆಯಲ್ಲೇ ಸಾಗುವ ಪಯಣದಲ್ಲಿ ಮುಗ್ಧ ಮನಸ್ಸುಗಳಿವೆ. ಅಸಹಾಯಕ ಜೀವಗಳಿವೆ. ಭಾವುಕತೆಗೆ ದೂಡುವ ಅಂಶಗಳೂ ಇವೆ. ಅವೆಲ್ಲ ಜರ್ನಿಯಲ್ಲಿ ತೆರೆದುಕೊಳ್ಳುತ್ತವೆ. ಅಶು ಎಂಬ ಮುದ್ದಾದ ಹುಡುಗ.ಹನ್ನೆರೆಡು ವರ್ಷದಿಂದ ತನ್ನ ಹೆತ್ತವಳನ್ನು ನೋಡಿಲ್ಲ. ಅಮ್ಮ ಹೇಗಿದ್ದಾಳೆ, ಎಲ್ಲಿದ್ದಾಳೆ ಅನ್ನುವ ಕುತೂಹಲದಲ್ಲೇ ಒಂದು ದಿನ ಅಮ್ಮನ ಹುಡುಕಿ ಪಯಣ ಬೆಳೆಸುತ್ತಾನೆ.
ಸಾಗುವ ದಾರಿಯಲ್ಲಿ ನಡೆಯುವ ಆಕಸ್ಮಿಕ ಘಟನೆಗಳಲ್ಲಿ ಅವನೊಂದಿಗೆ ತಲೆ ಸರಿ ಇಲ್ಲದ ವ್ಯಕ್ತಿ ಜೊತೆಗೂಡುತ್ತಾನೆ. ಆತ ಮಹೇಶ್. ಆತನೂ ಅಮ್ಮನನ್ನು ಹುಡುಕಿ ಹೊರಟಿದ್ದಾನೆ. ಅವರಿಬ್ಬರ ಜೊತೆ ಪ್ರಿಯಕರ ಮಾಡಿದ ತಪ್ಪಿನಿಂದಾಗಿ, ಹೊಟ್ಟೆಪಾಡಿಗೆ ವೇಶ್ಯೆಯಾಗಲು ಹೊರ ಟ ಹುಡುಗಿಯೊಬ್ಬಳು ಸಾಥ್ ಕೊಡುತ್ತಾಳೆ. ಇದಕ್ಕೂ ಮುನ್ನ ಒಂದು ಕೊಲೆಯೂ ಆಗಿರುತ್ತೆ. ಆ ಆರೋಪ ಮಹೇಶ್ ಮೇಲಿರುತ್ತದೆ. ಅಮ್ಮನ್ನು ಹುಡುಕಿ ಹೊರಟ ಮಹೇಶ್, ಅವರನ್ನು ಹುಡುಕಿ ಹೊರಟ ಪೊಲೀಸರು.
ಆ ಕೊಲೆ ಮಾಡಿದ್ದು ಯಾರು? ಆ ಕೊಲೆ ಗೂ ಮಹೇಶ್ ಗೂ ಕನೆಕ್ಷನ್ ಏನು? ಉತ್ತರ ಚಿತ್ರದ ಲ್ಲಿದೆ. ನಿರ್ದೇಶಕ ರವಿತೇಜ, ಏನು ಹೇಳಬೇಕು, ಎಷ್ಟನ್ನು ಹೇಳಬೇಕೋ ಅಷ್ಟನ್ನೇ ಕತೆಯಾಗಿಸಿದ್ದಾರೆ. ಅಷ್ಟರಲ್ಲೇ ನಗು, ಅಳು ತುಂಬಿಸಿ, ಪ್ರೇಕ್ಷಕರನ್ನು ಭಾವುಕಗೊಳಿಸುತ್ತಾರೆ. ಕತೆಯನ್ನು ಹಿಗ್ಗಿಸುವ, ಕುಗ್ಗಿಸುವ ಮಿತಿ ಅವರಿಗೆ ಗೊತ್ತಿದ್ದರಿಂದ ಚಿತ್ರ ಆರಂಭದಿಂದ ಅಂತ್ಯದವರೆಗೂ ಕುತೂಹಲ ಕಾದಿರಿಸಿಕೊಂಡು ಸಾಗುತ್ತದೆ. ಸಣ್ಣಪುಟ್ಟ ಪಾತ್ರಗಳ ಮೂಲಕ ತಕ್ಕ ಮಟ್ಟಿಗೆ ಗುರುತಿಸಿಕೊಂಡಿದ್ದ ಮಹೇಶ್ ಸಿದ್ದು,ಈಗ ಪೂರ್ಣ ಪ್ರಮಾಣದ ನಟನಾಗಿದ್ದಾರೆ. ಹುಚ್ಚನಂತೆ ವರ್ತಿಸುವ ಅವರ ಪಾತ್ರ ಕಣ್ಣೀರು ತರಿಸುತ್ತದೆ.
ಆಶಿಕ್ ಆರ್ಯ ಕೂಡ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಅಪೇಕ್ಷಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮಾತೇ ಇರದ ಪಾತ್ರದಲ್ಲೂ ಆಶಾ ಭಂಡಾರಿ ಗಮನಸೆಳೆಯುತ್ತಾರೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಕುಮಾರ್ ನವೀನ್ ಕೂಡ ಫೋಕಸ್ ಆಗುತ್ತಾರೆ. ಉಳಿದಂತೆ ಬರುವ ಪಾತ್ರಗಳು ಸಿನಿಮಾ ಓಟಕ್ಕೆ ಹೆಗಲು ಕೊಟ್ಟಿವೆ. ಮಣಿಕಾಂತ್ ಕದ್ರಿ ಸಂಗೀತದ ಒಂದು ಹಾಡು ಪರವಾಗಿಲ್ಲ. ಸತೀಶ್ ಬಾಬು ಹಿನ್ನೆಲೆ ಸಂಗೀತಪೂರಕವಾಗಿದೆ. ಅಭಿಲಾಶ್ ಕ್ಯಾಮೆರಾದಲ್ಲಿ ಸಾಗುವ ದಾರಿ ಚೆನ್ನಾಗಿದೆ. ಗಟ್ಟಿ ಕತೆ, ಸೆಂಟಿಮೆಂಟ್ ಎಳೆಯ ಮೂಲಕ ಇಡೀ ಕತೆ ಆಪ್ತವಾಗುತ್ತದೆ.