ಚಿತ್ರ ವಿಮರ್ಶೆ : ಮತ್ತೆ ಉದ್ಭವ

By Kannadaprabha News  |  First Published Feb 8, 2020, 12:07 PM IST

ಚಂದನವನದ ಸದ್ಯದ ಸೂತ್ರಗಳಾಚೆ ರಾಜಕೀಯ ವಿಡಂಬನೆಯನ್ನೇ ಚಿತ್ರದ ಪ್ರಧಾನ ಕತೆಯಾಗಿಸಿಕೊಂಡು ಬಂದ ಸಿನಿಮಾ ‘ಮತ್ತೆ ಉದ್ಭವ’. ಈ ಚಿತ್ರದ ವಿಮರ್ಶೆ ಇಲ್ಲಿದೆ ನೋಡಿ! 


ಚಿತ್ರ : ಮತ್ತೆ ಉದ್ಭವ

ತಾರಾಗಣ: ಪ್ರಮೋದ್‌, ಮಿಲನಾ ನಾಗರಾಜ್‌, ರಂಗಾಯಣ ರಘು, ಅವಿನಾಶ್‌, ಹನುಮಂತೇಗೌಡ, ಮೋಹನ್‌, ಸುಧಾ ಬೆಳವಾಡಿ, ಶುಭರಕ್ಷಾ

Tap to resize

Latest Videos

ನಿರ್ದೇಶನ: ಕೋಡ್ಲು ರಾಮಕೃಷ್ಣ, ಸಂಗೀತ: ವಿ. ಮನೋಹರ್‌

ಚಂದನವನದ ಸದ್ಯದ ಸೂತ್ರಗಳಾಚೆ ರಾಜಕೀಯ ವಿಡಂಬನೆಯನ್ನೇ ಚಿತ್ರದ ಪ್ರಧಾನ ಕತೆಯಾಗಿಸಿಕೊಂಡು ಬಂದ ಸಿನಿಮಾ ‘ಮತ್ತೆ ಉದ್ಭವ’. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ‘ಉದ್ಭವ’ ದ ಮುಂದುವರಿಕೆಯ ಕಥಾ ಹಂದರ. ಅಂದಿನ ಕತೆಯನ್ನು ವೃದ್ಧಿಸಿ ಇವತ್ತಿನ ಸಂದರ್ಭಕ್ಕೆ ಹೊಂದುವಂತೆ ಕಟ್ಟಿಕೊಡುವಲ್ಲಿ ‘ಶಕ್ತಿ ಮೀರಿ’ ಪ್ರಯತ್ನಿಸಿದ್ದಾರೆ ನಿರ್ದೇಶಕ ಕೋಡ್ಲು ರಾಮಕೃಷ್ಣ.

ಜನರ ನಂಬಿಕೆ, ಆಚರಣೆಗಳನ್ನೇ ಬಂಡವಾಳ ಮಾಡಿಕೊಂಡರೆ ಯಾರಾದರೂ ಸರಿ, ಅನಾಮತ್ತಾಗಿ ಎಷ್ಟುಬೇಕಾದರೂ ಕಾಸು ಮಾಡಬಹುದು ಎನ್ನುವುದು ಈ ಚಿತ್ರದ ಪ್ರಧಾನ ಎಳೆ. ಇದಕ್ಕೆ ನಮ್ಮ ಸುತ್ತಲ ಪ್ರಚಲಿತ ಘಟನೆಗಳೇ ಸರಕು.

ದೇವರನ್ನೇ ಬಂಡವಾಳವಾಗಿಸಿಕೊಂಡ ತಂದೆ, ಪ್ರಳಯಾಂತಕ ತಂದೆಯನ್ನೇ ಯಮಾರಿಸುವ ಕಿರಾತಕ ಮಗ, ಅಕ್ರಮವಾಗಿ ಹಣ ಸಂಪಾದಿಸಿಕೊಂಡ ರಾಜಕಾರಣಿ, ಚಪಲ ತೀರಿಸಿಕೊಳ್ಳುವುದಕ್ಕಾಗಿಯೇ ಖಾವಿ ತೊಟ್ಟಸ್ವಾಮಿ, ರಾಜಕಾರಣಿಯಾದ ಪರಿಸರ ಪ್ರೇಮಿ ನಟಿ, ಚಾನೆಲ್‌ಗಳ ಪ್ರಚಾರ ವೈಖರಿ- ಇವೆಲ್ಲ ಈ ಚಿತ್ರದ ಪಾತ್ರಗಳು. ಕಣ್ಣೆದುರಿನ ಮುಖಗಳನ್ನು ಮಾರುವೇಷದಲ್ಲಿ ಸಿನಿಮಾಕ್ಕೆ ತಂದು ರಸವತ್ತಾಗಿ ರಂಜಿಸುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಚಿತ್ರ ವಿಮರ್ಶೆ : ದಿಯಾ

ಸಿನಿಮಾ ಶುರುವಾಗುವ ರೀತಿಯೇ ಮಜಾವಾಗಿದೆ. ಉದ್ಭವ ಗಣೇಶ ದೇವಸ್ಥಾನದ ಟ್ರಸ್ಟಿರಾಘವೇಂದ್ರ ರಾಯರು ( ರಂಗಾಯಣ ರಘು) ಆಸ್ಪತ್ರೆಯ ಹಾಸಿಗೆ ಮೇಲೆ ಕೋಮಾ ಸ್ಥಿತಿಯಲ್ಲಿದ್ದವರು, ಉದ್ಭವ ಗಣೇಶ ದೇವಸ್ಥಾನಕ್ಕೆ ಬರುತ್ತಿದ್ದಂತೆ ಎಲ್ಲವೂ ಸರಿ ಹೋದಂತೆ ಎದ್ದು ಕೂರುತ್ತಾರೆ. ಅಲ್ಲೇನೊ ಪವಾಡವೇ ನಡೆದು ಹೋಯಿತು ಎನ್ನುವಂತಹ ವಾತಾವರಣ ಸೃಷ್ಟಿಸುತ್ತಾರೆ. ಅಲ್ಲಿ ನಡೆದ ವಾಸ್ತವವೇ ಬೇರೆ. ಅದು ಅಪ್ಪ-ಮಗ ನಡೆಸಿದ ನಾಟಕ.

ಉದ್ಭವ ಗಣೇಶ ದೇವಸ್ಥಾನಕ್ಕೆ ಅಂಟಿದ ಕಳಂಕ ಹೋಗಲಾಡಿಸಿ, ಅಲ್ಲಿ ಭಕ್ತರನ್ನು ಸೆಳೆಯುವ ತಂತ್ರ. ಇದು ಒಂದು ಸಿನಿಮಾ ಸನ್ನಿವೇಶವಾಗದೆ, ನಮ್ಮ ಸುತ್ತ ನಡೆಯುವ ಯಾವುದೋ ಘಟನೆಯಂತೆ ಕಾಣುತ್ತದೆ. ಇಂತಹ ಹಲವು ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ. ರಾಜಕಾರಣಿಯೊಬ್ಬರು ಮೀನು ತಿಂದು ದೇವಸ್ಥಾನಕ್ಕೆ ಹೋದ ಪ್ರಕರಣ, ಅಕ್ರಮ ಹಣ ರಕ್ಷಣೆಗೆ ಮಠದ ಮೋರೆ ಹೋದ ಮತ್ತೊಬ್ಬ ರಾಜಕಾರಣಿ ಪ್ರಕರಣವೂ ಇಲ್ಲಿವೆ.

ಬಿಗಿಯಾದ ಕತೆ, ಎಲ್ಲೂ ಅಲುಗಾಡದ ಚಿತ್ರಕತೆ ಎಲ್ಲವೂ ಈ ಚಿತ್ರಕ್ಕೆ ಇಂಧನ. ಆದರೆ ಅದಕ್ಕೆ ಸುಧಾರಿತ ತಾಂತ್ರಿಕತೆಯದ್ದೇ ಕೊರತೆ. ಕೋಡ್ಲು ಒಂದೊಳ್ಳೆಯ ಕತೆಯನ್ನು ಸಿನಿಮಾವಾಗಿಸಿದ್ದಾರೆನ್ನುವುದನ್ನು ಮೆಚ್ಚಿಕೊಳ್ಳುವ ಪ್ರೇಕ್ಷಕನಿಗೆ, ನಿರ್ದೇಶನ ಶೈಲಿಯಲ್ಲಿ ಒಂದಷ್ಟುಹಳೆಯದೇ ವರಸೆ ಕಾಣುತ್ತದೆ. ಅದು ಪ್ರೇಕ್ಷಕನಲ್ಲಿ ನಿರ್ದೇಶಕರು ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಆಗಿದ್ದರೆ ಚೆನ್ನಾಗಿತ್ತು ಎಂದೆನಿಸುವುದು ಸಹಜ. ಈ ನಡುವೆಯೂ ಅವರನ್ನು ಮೆಚ್ಚಲೇಬೇಕಾದ ಅಂಶವೂ ಇದೆ.

ಚಿತ್ರ ವಿಮರ್ಶೆ: ಮಾಲ್ಗುಡಿ ಡೇಸ್

ವಿ.ಮನೋಹರ್‌ ಸಂಗೀತ ಮತ್ತು ಮೋಹನ್‌ ಛಾಯಾಗ್ರಹಣದಲ್ಲೂ ಅಷ್ಟಾಗಿ ಹೊಸತನ ಕಾಣದಿದ್ದರೂ, ಅದೆಲ್ಲವನ್ನು ಗೌಣವಾಗಿಸುವ ಶಕ್ತಿ ಕಲಾವಿದರ ಅಭಿನಯದಲ್ಲಿದೆ. ರಂಗಾಯಣ ರಘು ಇಡೀ ಚಿತ್ರವನ್ನು ನೋಡಿಸಿಕೊಂಡು ಹೋಗುವಂತೆ ನಟಿಸಿದ್ದಾರೆ. ನಾಯಕನಟ ಪ್ರಮೋದ್‌ ಕಾಮಿಡಿ ಜತೆಗೆ ಆ?ಯಕ್ಷನ್‌ ಸೀನ್‌ಗಳಲ್ಲೂ ಭರ್ಜರಿ ಮಿಂಚಿದ್ದಾರೆ. ನಟಿ ಮಿಲನಾ ನಾಗರಾಜ್‌ ಅವರಿಗೊಂದು ಚೇಂಜ್‌ ಒವರ್‌ ಸಿಕ್ಕಿದೆ.

ಹಿರಿಯ ಕಲಾವಿದರಾದ ಅವಿನಾಶ್‌, ಸುಧಾ ಬೆಳವಾಡಿ, ಹನುಮಂತೇ ಗೌಡರ ಮಾಗಿದ ನಟನೆಗೆ ಈ ಸಿನಿಮಾ ಕೂಡ ಆ?ಯಡ್‌ ಆಗಿದೆ. ಮೋಹನ್‌ ಹಾಗೂ ಶುಭ‘ ರಕ್ಷಾ ಅವರ ಸನ್ನಿವೇಶಗಳು ಕೊಂಚ ಅತೀ ಎನಿಸಿದರೂ, ಅದು ಕೆಲವರ ಅದು ಖಾವಿ ಮುಖವಾಡ ಕಳಚುತ್ತದೆ. ಒಂದು ಹೊಸ ಬಗೆಯ ಕತೆಯಾಗಿ ರಂಜಿಸುವ ಏಲ್ಲಾ ತಾಕತ್ತು ಹೊಂದಿರುವ ಈ ಚಿತ್ರವೂ, ಉದ್ಭವಕ್ಕಿಂತ ಭಿನ್ನವೇ ಹೌದು.

- ದೇಶಾದ್ರಿ ಹೊಸ್ಮನೆ 

click me!