ಸ್ಯಾಂಡಲ್‌ವುಡ್ ಎವರ್‌ಗ್ರೀನ್ ಹ್ಯಾಂಡ್ಸಮ್ ನಟ ರಮೇಶ್ ಅರವಿಂದ್ 101 ನೇ ಸಿನಿಮಾ 'ಶಿವಾಜಿ ಸೂರತ್ಕಲ್' ರಿಲೀಸ್ ಆಗಿದೆ. ಈ ಚಿತ್ರದ ವಿಶೇಷತೆಗಳೇನು? ಚಿತ್ರ ನೋಡಿದ ಪ್ರೇಕ್ಷಕ ಹೇಳುವುದೇನು? ಇಲ್ಲಿದೆ ನೋಡಿ ವಿಮರ್ಶೆ.
-ಆರ್ ಕೇಶವಮೂರ್ತಿ
ದೆವ್ವ, ಪ್ರೇತ, ಆತ್ಮಗಳು ಇದ್ದಾವೋ, ಇಲ್ಲವೋ ಗೊತ್ತಿಲ್ಲ. ಆದರೆ, ಅವುಗಳೆಂದರೆ ಮನುಷ್ಯರಿಗೆ ಭಯ. ಆದರೂ ಈ ದೆವ್ವದ ಚಿತ್ರಗಳನ್ನು ಕಣ್ಣು ಮಿಟುಕಿಸದೆ ನೋಡುತ್ತೇವೆ. ಹಾಗೆ ಸಾವು, ಕೊಲೆ, ಕ್ರೈಮು ಬಗ್ಗೆಯೂ ನಮಗೆ ನಡುಕ. ಆದರೆ, ನ್ಯಾಷನಲ್ ಜಿಯೋಗ್ರಫಿಯಲ್ಲಿ ಹುಲಿಯೊಂದು ಜಿಂಕೆ ಮರಿಯನ್ನು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯಗಳನ್ನು ತದೇಕಚಿತ್ತರಾಗಿ ನೋಡುತ್ತೇವೆ.
undefined
ಕ್ರೈಮ್ ಧಾರಾವಾಹಿಗಳನ್ನು, ಕಾರ್ಯಕ್ರಮಗಳನ್ನು ಇನ್ನಿಲ್ಲದ ಆಸಕ್ತಿಯಿಂದ ನೋಡುತ್ತೇವೆ. ರಮೇಶ್ ಅರವಿಂದ್ ಅವರ ಈ ‘ಶಿವಾಜಿ ಸುರತ್ಕಲ್’ ಚಿತ್ರವೂ ಹಾಗೆ ಕುತೂಹಲಭರಿತ ನೋಡಿಸಿಕೊಳ್ಳುವ ಗುಣ ಇದೆ ಎಂದರೆ ಅದಕ್ಕೆ ಕಾರಣ ರಮೇಶ್ ಅರವಿಂದ್ ಅವರ ಸ್ಕ್ರೀನ್ ಅಪಿಯರೆನ್ಸ್. ಪತ್ತೆದಾರಿ ಕತೆ, ಸಿನಿಮಾಗಳನ್ನು ಇಷ್ಟಪಡುವವರಿಗೆ ‘ಶಿವಾಜಿ ಸುರತ್ಕಲ್’ನ ರಣಗಿರಿ ಸಸ್ಪೆನ್ಸ್ ಕ್ರೈಮ್ ಕತೆಯೂ ಇಷ್ಟವಾಗಬಹುದು.
ವಿಷಯ ಇಷ್ಟೆ. ರೆಸಾರ್ಟ್ವೊಂದರಲ್ಲಿ ಒಂದು ಕೊಲೆ ಆಗಿದೆ. ಕೊಲೆ ಆದವನು ಮಂತ್ರಿಯೊಬ್ಬನ ಮಗ. ಹೀಗಾಗಿ ಆ ಪ್ರಕರಣಕ್ಕೆ ಮಹತ್ವ ಬಂದಿದೆ. ಕೊಲೆಯ ತನಿಖೆಗೆ ಬರುವ ಪೊಲೀಸ್ ಅಧಿಕಾರಿ ಶಿವಾಜಿ ಸುರತ್ಕಲ್ ಅವರ ವೈಯಕ್ತಿಕ ಜೀವನದಲ್ಲೂ ಒಂದು ದುರಂತ ಆಗಿದೆ. ಈ ಅಧಿಕಾರಿ ಮನೆಯಲ್ಲಿ ಸಂಭವಿಸಿದ ನಿಗೂಢ ಸಾವು, ರೆಸಾರ್ಟ್ನಲ್ಲಿ ಆದ ಕೊಲೆಗೂ ಏನಾದರೂ ನಂಟು ಇದಿಯೇ ಎನ್ನುವ ಗುಮಾನಿ ಹುಟ್ಟು ಹಾಕುತ್ತಲೇ ಕತೆ ಸಾಗುತ್ತದೆ. ಈ ಒಂದು ಕೊಲೆಯ ಸುತ್ತ ಹನ್ನೊಂದು ಜನ ಅನುಮಾನಿತರು ಇದ್ದಾರೆ.
ಅವರಲ್ಲಿ ಮೊಗ್ಗಿನ ಜಡೆ ರಂಗನಾಯಕಿ ಕೂಡ. ಪ್ರತಿ ಹುಣ್ಣಿಮೆಯಂದು ಮೊಗ್ಗಿನ ಜಡೆ ರಂಗನಾಯಕಿ, ಹದಿಹರೆಯದ ಹುಡುಗರನ್ನು ಬಲಿ ತೆಗೆದುಕೊಳ್ಳುತ್ತದೆ ಎಂಬುದು ಇಲ್ಲಿ ಬರುವ ಮತ್ತೊಂದು ‘ರಂಗಿತರಂಗ’ ನೆರಳಿನ ಕತೆ. ಒಂದು ಕೊಲೆಯನ್ನು ಕಂಡು ಹಿಡಿಯಲು ಹೋಗಿ ನಾಲ್ಕು ಸಾವುಗಳನ್ನು ಪತ್ತೆ ಮಾಡುವ ಹೊತ್ತಿಗೆ ಸಿನಿಮಾ ಮುಕ್ತಾಯವಾಗುತ್ತದೆ. ಆದರೆ, ಆ ಮೂರನೇ ಕೊಲೆ ಯಾರದ್ದು ಎಂಬುದು ಚಿತ್ರದ ಅಸಲಿ ಕತೆ.
ಒಂದು ರೆಸಾರ್ಟ್, ಮೂರು ಪ್ಲಸ್ ಒಂದು ಕೊಲೆ, ಹನ್ನೊಂದು ಮಂದಿ ಆರೋಪಿತರು, ಇಬ್ಬರು ತನಿಖಾ ಅಧಿಕಾರಿಗಳು, ಒಬ್ಬ ಮಂತ್ರಿ ಇವಿಷ್ಟುಅಂಶಗಳಿಗೆ ಇಂಗ್ಲಿಷ್‌ನ ಕ್ರೈಮ್ ಕಾದಂಬರಿಯ ಸರಕು ಬೆಂಬಲವಾಗಿ ನಿಂತು, ಶಿವಾಜಿಯನ್ನು ಮುನ್ನಡೆಸುತ್ತದೆ. ಇಂಥ ಸಿನಿಮಾಗಳಲ್ಲಿ ಸಸ್ಪೆನ್ಸ್, ಕನ್ಫä್ಯಸ್ಗಳು ಇರಬೇಕು. ಆದರೆ, ಕತೆ ಹೇಳುವ ಸೂತ್ರಧಾರಿಯೇ ಗೊಂದಲಕ್ಕೆ ಒಳಗಾಗಬಾರದು.
ತನಿಖೆಗೆ ಬರುವ ಅಧಿಕಾರಿ ಮಾನಸಿಕವಾಗಿ ತಾಳ ತಪ್ಪಿದ್ದಾರೆಯೇ, ಆ ರೆಸಾರ್ಟ್ನಲ್ಲಿ ಮೊಗ್ಗಿನ ಜಡೆ ರಂಗನಾಯಕಿಯ ಆತ್ಮ ದೆವ್ವದ ರೂದಪಲ್ಲಿ ತಿರುಗುತ್ತಿದೆ ಎನ್ನುವ ತಿರುವುಗಳ ಜತೆ ಭೂತ ಮತ್ತು ವರ್ತಮಾನದ ಈ ಎರಡೂ ದಾರಿಗಳನ್ನು ಒಟ್ಟಿಗೆ ಬಳಸಿಕೊಳ್ಳುವ ಸಾಹಸ ಮಾಡಿದ್ದಾರೆ ನಿರ್ದೇಶಕರು. ಒಂದು ರೀತಿಯಲ್ಲಿ ಇದು ದಾರಿಯಲ್ಲಿ ಹೋಗುತ್ತಿದ್ದ ರಿಸ್ಕ್ ಅನ್ನು ಮನೆಗೆ ಕರೆದು ಪಕ್ಕದಲ್ಲೇ ಕೂರಿಸಿಕೊಂಡಂತೆ! ಆದರೆ, ಇದನ್ನು ಜಾಣ್ಮೆಯಿಂದ ನಿಭಾಯಿಸುವುದು ರಮೇಶ್ ಅರವಿಂದ್ ವರ ಪಾತ್ರದ ಶೈಲಿ.
ಬೆಂಗಳೂರಿನ ತ್ಯಾಗರಾಜ ಕಾಲೋನಿಯಲ್ಲಿ ವಾಸಿಸುತ್ತಿದ್ದಾಗಲೇ ತೆರೆ ಮೇಲೂ ತ್ಯಾಗರಾಜನ ಪಟ್ಟಕ್ಕೇರಿದ್ದ ಆ ರಮೇಶ್ ಅರವಿಂದ್ ಇಲ್ಲಿ ಸಿಗುವುದಿಲ್ಲ. ‘ಕಾಲ್ ಮೀ ಶಿವಾಜಿ ಸುರತ್ಕಲ್’ ಎಂದು ಧ್ವನಿ ಏರಿಸಿ ಮಾತನಾಡುವ ಆ್ಯಂಗ್ರಿ ರಮೇಶ್ ಅರವಿಂದ್ ಆಗಾಗ ಬಂದು ಹೋಗುತ್ತಾರೆ. ಇದು ಚಿತ್ರದ ಹೊಸತನಕ್ಕೆ ಉದಾಹರಣೆ. ಹಿನ್ನೆಲೆ ಸಂಗೀತ ಹಾಗೂ ಛಾಯಾಗ್ರಾಹಣ ಕತೆಗೆ ಪೂರಕವಾಗಿ ಕೆಲಸ ಮಾಡಿವೆ. ರಮೇಶ್ ಅರವಿಂದ್ ಜತೆಗೆ ಪಿಡಿ ಸತೀಶ್, ರಘು ರಾಮಕೊಪ್ಪ, ಆರೋಹಿ ನಾರಾಯಣ್ ಅವರು ಗಮನ ಸೆಳೆಯುವಂತೆ ತಮ್ಮ ಪಾತ್ರಗಳನ್ನು ತೆರೆ ಮೇಲೆ ಸರಿ ತೂಗಿಸಿದ್ದಾರೆ.
- ತಾರಾಗಣ: ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ರಘು ರಾಮಕೊಪ್ಪ
ನಿರ್ದೇಶನ: ಆಕಾಶ್ ಶ್ರೀವತ್ಸ
ನಿರ್ಮಾಣ: ರೇಖಾ.ಕೆ.ಎನ್, ಅನೂಪ್ ಗೌಡ
ಸಂಗೀತ: ಜೂಡಾ ಸ್ಯಾಂಡಿ
ಛಾಯಾಗ್ರಹಣ: ಗುರುಪ್ರಸಾದ್
ರೇಟಿಂಗ್- ***