ಒಂದು ಸಿನಿಮಾ ಅಂದ್ಮೇಲೆ ಫೈಟು, ಡ್ಯುಯೆಟ್, ರೊಮ್ಯಾನ್ಸ್ , ಸಂದೇಶ ಇತ್ಯಾದಿ ಇರಲೇಬೇಕು ಅನ್ನೋ ಸವಕಲು ಥಿಯರಿಯನ್ನು ಮುರಿದು ಹೊಸ ಅಲೆಯ ಸಿನಿಮಾಗಳು ಬರುತ್ತಿವೆ. ಆ ಪೈಕಿ ಗಟ್ಟಿಕತೆ ಇಟ್ಟುಕೊಂಡು ಬಂದಿರೋ ಆಫ್‌ಬೀಟ್ ಸಿನಿಮಾ ‘ಗಿಫ್ಟ್ ಬಾಕ್ಸ್’. ಈ ಒಂದು ಸಿನಿಮಾ ನಾಲ್ಕೈದು ಕತೆ ಹೇಳುತ್ತೆ. ಅಂದರೆ ಮೂಲ ಕತೆಗೆ ಸಂವಾದಿಯಾಗಿ ಅನೇಕ ಲೇಯರ್‌ಗಳು ಇದರಲ್ಲಿವೆ.
ಪ್ರಿಯಾ ಕೆರ್ವಾಶೆ
ಜನಸಾಮಾನ್ಯರ ಗಮನಕ್ಕೆ ಬಾರದೇ ನಡೆಯುವ ಜಗತ್ತೊಂದು ಇಲ್ಲಿ ತೆರೆದುಕೊಳ್ಳುತ್ತದೆ. ಅದು ಕ್ರೌರ್ಯದಲ್ಲೇ ಉಸಿರಾಡುವ ಜಗತ್ತು. ಅವಮಾನಕ್ಕೋ, ಬಡತನಕ್ಕೋ ನೈಟ್ ಬಸ್ ಹತ್ತಿ ಬೆಂಗಳೂರಿಗೆ ಬಂದಿಳಿಯುವ ನೂರಾರು ಹುಡುಗರಲ್ಲಿ ಶೇ.80 ರಷ್ಟುಜನರನ್ನು ತುಂಬು ಹೃದಯದಿಂದ ಸ್ವಾಗತಿಸೋದು ಈ ಜಗತ್ತೇ. ಇಲ್ಲಿ ಸಿಕ್ಕ ಹುಡುಗರಿಗೆ ಆಯ್ಕೆಗಳಿರಲ್ಲ. ಅವರೇ ಯಾರದೋ ಆಯ್ಕೆಗಳಾಗಿರುತ್ತಾರೆ. ಈ ಸಿನಿಮಾ ಒಮ್ಮೆ ಇಂಥದ್ದೊಂದು ಸುಳಿಯಲ್ಲಿ ಸಿಲುಕುವ ಅಮಾಯಕ ಹುಡುಗನ ಕತೆಯಂತೆ, ಇನ್ನೊಮ್ಮೆ ಕನಸಿಗೆ ಗರಿ ಮೂಡಿಸಿಕೊಳ್ಳಲು ತವಕಿಸುವ ಹುಡುಗಿಯರ ದುರಂತ ಬದುಕಿನಂತೆ, ಮತ್ತೊಮ್ಮೆ ಬದುಕಿನ ಗತಿಯಂತೆ .. ಬೇರೆ ಬೇರೆ ಆ್ಯಂಗಲ್‌ಗಳಿಂದ ಅರ್ಥವಾಗುತ್ತಾ ಹೋಗುತ್ತದೆ.
ಇಷ್ಟೆಲ್ಲ ಕ್ರೌರ್ಯಗಳಿದ್ದರೂ, ಎಲ್ಲೂ ಅದನ್ನು ವಿಜೃಂಭಿಸದೇ, ತಣ್ಣಗೆ ಕತೆ ಹೇಳುತ್ತಾ ಹೋಗೋದು ಈ ಸಿನಿಮಾದ ಶಕ್ತಿ. ಅನೇಕ ಕವಲುಗಳಲ್ಲಿ ಚಲಿಸೋ ಕತೆ ಕೆಲವೊಮ್ಮೆ ದಿಕ್ಕು ತಪ್ಪಿ ಸಾಗೋದೂ ಇದೆ. ಇದರಲ್ಲಿ ಊಹೆಗೆ ನಿಲುಕದ ಅಂಶಗಳಿಲ್ಲ. ಮುಂದೆ ಹೀಗಾಗಬಹುದು ಅಂತ ವೀಕ್ಷಕ ಕತೆಯನ್ನು ಮೊದಲೇ ಗೆಸ್‌ಮಾಡಬಹುದು. ಇದು ಬಹುಶಃ ಕತೆಯ ವೀಕ್‌ನೆಸ್. ಕೆಲವೊಮ್ಮೆ ಸುದೀರ್ಘ ದೃಶ್ಯಗಳು, ಏಕತಾನತೆ ಆಕಳಿಕೆ ತರಿಸಬಹುದು. ಕೊನೆಗೂ ಕತೆ ಓಪನ್ ಎಂಡಿಂಗ್ ಆಗಿಯೇ ಮುಗಿಯುತ್ತೆ. ಆ ಮೂಲಕ ಪ್ರೇಕ್ಷಕನ ಮನಸ್ಸಿನೊಳಗೆ ಬೆಳೆಯುತ್ತಾ ಹೋಗುತ್ತದೆ. ಅಚಾನಕ್ ಆಗಿ ಬಂದು ಅಷ್ಟೇ ಅಚಾನಕ್ ಆಗಿ ಹೋಗುವ ಭಿಕ್ಷುಕನ ಪಾತ್ರದಲ್ಲೂ ಒಂದು ಆಂತರಿಕ ಚಲನೆ ಕಾಣುತ್ತೆ.
ನಿರೂಪಣೆಯಲ್ಲಿ, ಫ್ರೇಮಿಂಗ್‌ನಲ್ಲಿ ಅಚ್ಚುಕಟ್ಟುತನವಿದೆ. ಮುಖ್ಯಪಾತ್ರ ಪಾರ್ಥನಿಂದ ಹಿಡಿದು ತುಳಸಿ, ಸುರಭಿ ಇತ್ಯಾದಿ ಮುಖ್ಯ ಪಾತ್ರಗಳ ರೂಪಾಂತರವನ್ನೂ ಚೆನ್ನಾಗಿ ತಂದಿದ್ದಾರೆ. ರಂಗಭೂಮಿಯ ಛಾಯೆ ಕೆಲವೊಂದು ಪಾತ್ರಗಳಲ್ಲಿ ಅನಾವಶ್ಯಕವಾಗಿ ಇಣುಕಿ ಡಿಸ್ಟರ್ಬ್ ಮಾಡುತ್ತವೆ. ಹೊಸ ಹುಡುಗರು ಒಬ್ಬರನ್ನೊಬ್ಬರು ಮೀರಿಸುವಂತೆ ಅಭಿನಯಿಸಿದ್ದಾರೆ. ವಸು ದೀಕ್ಷಿತ್ ಸಂಗೀತ ಕತೆಗೆ ತೀವ್ರತೆಯ ಸ್ಪರ್ಶ ಕೊಡುತ್ತೆ. ನಿರ್ದೇಶನದಲ್ಲಿ ರಘು ಎಸ್.ಪಿ ಅವರದು ಉತ್ತಮ ಪ್ರಯತ್ನ.