Prarambha Film Review: ಪ್ರೇಮದ ಸೋಲು ಜೀವನದ ಅಂತ್ಯವಲ್ಲ

By Govindaraj S  |  First Published May 21, 2022, 3:20 AM IST

ಪ್ರೀತಿಯಲ್ಲಿ ಸೋತವರನ್ನು ಸಂತೈಸುವ ಆಶ್ರಯ ತಾಣಗಳನ್ನು ಈ ಚಿತ್ರದ ಮೂಲಕ ಹೇಳಿರುವುದು ಹೊಸದಾಗಿದೆ. ಸೋತ ಪ್ರೀತಿಯಲ್ಲಿ ನಕರಾತ್ಮಕ ಅಂಶಗಳನ್ನೇ ಹುಡುಕದೆ ಪಾಸಿಟಿವ್‌ ಆಗಿ ಯೋಚಿಸುವಂತೆ ‘ಪ್ರಾರಂಭ’ ಪ್ರೇರಣೆ ಆಗುತ್ತದೆ. 


ಆರ್‌. ಕೇಶವಮೂರ್ತಿ

ಸಾಮಾನ್ಯವಾಗಿ ಭಗ್ನ ಪ್ರೇಮಿಗಳ ಕತೆಯ ಬಹುತೇಕ ಚಿತ್ರಗಳು ದುರಂತ್ಯದಲ್ಲಿ ಅಂತ್ಯವಾಗಿರುವುದನ್ನೇ ನೋಡಿದ್ದೇವೆ. ಮೊದಲ ಪ್ರೀತಿ ಕಳೆದುಕೊಂಡ ಹುಡುಗ ದೇವದಾಸನಾಗಿ, ಹುಡುಗಿ ಅವನ ನೆನಪಿನಲ್ಲೇ ಮತ್ತೊಂದು ಮದುವೆಯಾಗುವ ಸಿನಿಮಾಗಳು ಕಾಮನ್‌. ಆದರೆ, ಭಗ್ನ ಪ್ರೀತಿಯಲ್ಲೂ ಒಳ್ಳೆಯದನ್ನೇ ಹೇಳುವ ನಿರ್ದೇಶಕರ ಸಾಹಸಕ್ಕೆ ‘ಪ್ರಾರಂಭ’ ಸಿನಿಮಾ ಸಾಕ್ಷಿಯಾಗಿದೆ. ಆ ಮೂಲಕ ಭಗ್ನ ಪ್ರೀತಿಯ ಕತೆಗಳಲ್ಲೂ ವಿಭಿನ್ನವಾಗಿ ನಿಲ್ಲುವ ಸಿನಿಮಾ ಎಂದುಕೊಳ್ಳಬಹುದು. ಅಂದರೆ ಯಾವುದೇ ಅದ್ದೂರಿ ಮತ್ತು ಆಡಂಬರ ಇಲ್ಲದೆ ಅತ್ಯಂತ ಸಹಜವಾಗಿ ಮೂಡುವ ಈ ಚಿತ್ರದ ಮೂಲಕ ಕಾಡುವಂತಹ ಪ್ರೇಮ ಕತೆಯನ್ನು ಕೊಟ್ಟಿದ್ದಾರೆ ನಿರ್ದೇಶಕ ಮನು ಕಲ್ಯಾಡಿ. 

Tap to resize

Latest Videos

ಪ್ರೀತಿಯಲ್ಲಿ ಸೋತವರನ್ನು ಸಂತೈಸುವ ಆಶ್ರಯ ತಾಣಗಳನ್ನು ಈ ಚಿತ್ರದ ಮೂಲಕ ಹೇಳಿರುವುದು ಹೊಸದಾಗಿದೆ. ಸೋತ ಪ್ರೀತಿಯಲ್ಲಿ ನಕರಾತ್ಮಕ ಅಂಶಗಳನ್ನೇ ಹುಡುಕದೆ ಪಾಸಿಟಿವ್‌ ಆಗಿ ಯೋಚಿಸುವಂತೆ ‘ಪ್ರಾರಂಭ’ ಪ್ರೇರಣೆ ಆಗುತ್ತದೆ. ಪ್ರೀತಿಯಲ್ಲಿ ಸೋಲು- ಗೆಲುವು ಏನೇ ಇದ್ದರೂ ಚಿತ್ರದ ಹೆಸರಿಗೆ ತಕ್ಕಂತೆ ಪ್ರತಿ ಪ್ರೇಮ ಕತೆಯಲ್ಲೂ ಹೊಸ ಪ್ರಾರಂಭ ಇರುತ್ತದೆ. ಅಂಥ ಪ್ರಾರಂಭಕ್ಕೆ ಪ್ರೇಮಿಯೊಬ್ಬ ಮುಖಾಮುಖಿ ಆಗುತ್ತ ಹೊಸ ದಾರಿಯನ್ನು ಕಂಡುಕೊಳ್ಳುವುದು ಈ ಚಿತ್ರದ ಪ್ಲಸ್‌ ಪಾಯಿಂಟ್‌. ನಾಯಕನ ಪೇಯಿಂಟಿಂಗ್‌ಗಳನ್ನು ಮೆಚ್ಚಿಕೊಳ್ಳುವ ನಾಯಕಿ. 

ಚಿತ್ರ: ಪ್ರಾರಂಭ

ತಾರಾಗಣ: ಮನು ರವಿಚಂದ್ರನ್‌, ಕೀರ್ತಿ ಕಲ್ಕರೆ, ಕಡ್ಡಿಪುಡಿ ಚಂದ್ರು, ಶಾಂಭವಿ ವೆಂಕಟೇಶ್‌

ನಿರ್ದೇಶನ: ಮನು ಕಲ್ಯಾಡಿ

ರೇಟಿಂಗ್‌: 3

ಇಬ್ಬರ ಸ್ನೇಹಕ್ಕೂ ಇದು ದಾರಿಯಾಗಿ ಈ ಸ್ನೇಹ ಪ್ರೀತಿಯಾಗುವ ಹೊತ್ತಿಗೆ ನಾಯಕಿಯ ಅಪ್ಪ ವಿರೋಧ ವ್ಯಕ್ತಪಡಿಸುತ್ತಾನೆ. ತಂದೆ ಮಾಡಿಟ್ಟ ಆಸ್ತಿಯಲ್ಲಿ ಜೀವನ ಸಾಗಿಸುವವನಿಗೆ ತನ್ನ ಮಗಳನ್ನು ಕೊಡಲ್ಲ ಎನ್ನುವ ತನ್ನ ಅಪ್ಪನ ಷರತ್ತಿಗೆ ಮಣಿದು ಹೆತ್ತವರು ತೋರಿಸಿದ ಹುಡುಗನ ಜತೆಗೆ ಮದುವೆಗೆ ಸಿದ್ಧವಾಗುತ್ತಾಳೆ ನಾಯಕಿ. ಇತ್ತ ನಾಯಕಿಯನ್ನು ಕರೆದುಕೊಂಡು ಹೋಗಲು ಬರುವ ನಾಯಕನಿಗೆ ಆ್ಯಕ್ಸಿಡೆಂಟ್‌ ಆಗುತ್ತದೆ. ಈ ಕಡೆ ನಾಯಕಿ ಮದುವೆ ಆಗುತ್ತಾಳೆಯೇ, ಮದುವೆ ಆದರೂ ಮುಂದೆ ಏನಾಗುತ್ತದೆ, ನಾಯಕ ಮತ್ತು ನಾಯಕಿ ಇಬ್ಬರು ಜತೆಯಾಗುತ್ತಾರೆಯೇ ಎಂಬುದು ಚಿತ್ರದ ಕತೆ.

Raaji Film Review: ಅಂತಃಕರಣದ ಹೆಣ್ಣೋಟ

ಚಿತ್ರದ ಮೊದಲ ಭಾಗ ಹುಡುಗಿಯ ಪ್ರೀತಿ ಮತ್ತು ಆಕೆಯ ನೆನಪುಗಳಲ್ಲೇ ಮುಗಿಯುವ ನಾಯಕನ ಕತೆ, ವಿರಾಮದ ನಂತರ ಕಾಡುವ ಮತ್ತು ನೋಡುಗರಿಗೂ ನೆನಪಿಟ್ಟುಕೊಳ್ಳುವ ಕತೆ ತೆರೆದುಕೊಳ್ಳುತ್ತದೆ. ಪ್ರಜ್ವಲ್‌ ಪೈ ಸಂಗೀತದಲ್ಲಿ ಎರಡು ಹಾಡುಗಳು, ಸುರೇಶ್‌ ಬಾಬು ಅವರ ಕ್ಯಾಮೆರಾ ಬೆಳಕು ನಿರ್ದೇಶಕ ಮನು ಕಲ್ಯಾಡಿ ಅವರ ಸಾಹಸಕ್ಕೆ ಸಾಥ್‌ ನೀಡುತ್ತವೆ. ಭಗ್ನ ಪ್ರೇಮಿಯಾಗಿ ಮನು ರವಿಚಂದ್ರನ್‌ ನಟನೆ ಹೆಚ್ಚು ಇಷ್ಟವಾಗುತ್ತದೆ. ತೆರೆ ಮೇಲೆ ಮನು ರವಿಚಂದ್ರನ್‌ ಹಾಗೂ ಕೀರ್ತಿ ಕಲ್ಕೆರೆ ಜೋಡಿ ಮುದ್ದಾಗಿದೆ. ಪ್ರೇಮದಲ್ಲಿ ಸೋತರೆ ಅದೇ ಜೀವನದ ಅಂತ್ಯವಲ್ಲ ಎನ್ನುವ ಈ ಚಿತ್ರವನ್ನು ಒಮ್ಮೆ ನೋಡಬಹುದು.

click me!