ಎಲ್ಲಿ ದೆವ್ವಗಳಿರುತ್ತವೋ ಅಲ್ಲಿ ನಗು ಬೋನಸ್ಸು. ಇಲ್ಲಿ ದೆವ್ವಗಳ ಜತೆ ಅತಿರಥ ಮಹಾರಥರೆಲ್ಲರೂ ಸೇರಿಕೊಂಡಿರುವು ದರಿಂದ ದೆವ್ವಗಳಿಗೆ ಬೆಲೆ ಕಡಿಮೆ. ಆದರೂ ಮರಿ ದೆವ್ವ, ಹಿರಿ ದೆವ್ವ, ಹೆಣ್ಣು ದೆವ್ವ, ಭಾರಿ ದೆವ್ವ ಹೀಗೆ ಬಗೆಬಗೆ ದೆವ್ವಗಳಿರುವುದರಿಂದ ಅವರವರ ಶಕ್ತಿಗನುಸಾರವಾಗಿ ನಗಿಸುತ್ತಾರೆ.
ರಾಜೇಶ್ ಶೆಟ್ಟಿ
ದ್ವಿತೀಯಾರ್ಧದಲ್ಲಿ ಅವರ ಕೈಗೆ ಸಿಕ್ಕ ಸಾಧು, ಕುರಿ, ಚಿಕ್ಕಣ್ಣ, ರವಿಶಂಕರ್ ಗೌಡ ಎಷ್ಟು ಮಜಾ ಕೊಡುತ್ತಾರೆ ಅಂದ್ರೆ ಸಿನಿಮಾದ ಆರಂಭದಲ್ಲೇ ಅವರನ್ನು ದೆವ್ವದ ಮನೆಯೊಳಕ್ಕೆ ಕಳುಹಿಸಬಾರದಿತ್ತೇ ಅನ್ನಿಸುತ್ತದೆ. ಆ ಲೆಕ್ಕ ನೋಡಿದರೆ ನಿರ್ದೇಶಕರು ಜಿಪುಣಾಗ್ರೇಸರ. ಮೊದಲಾರ್ಧ ದೆವ್ವದ ಆಟಾಟೋಪಕ್ಕಿಂತ ದೆವ್ವದ ಹೆಸರಲ್ಲಿ ಆಟ ಆಡುವವರದೇ ಹೆಚ್ಚು ಕಾಟ. ಏನು ಮಾಡೋದು, ಗೇಟು ದಾಟದೆ ಮನೆಯೊಳಗೆ ಹೋಗುವಂತಿಲ್ಲ.
ಶ್ರುತಿ ಹರಿಹರನ್ 'ಮನೆ ಮಾರಾಟಕ್ಕಿದೆ' ?
ಈ ಚಿತ್ರದಲ್ಲಿ ಇಂಟರೆಸ್ಟಿಂಗ್ ಪಾತ್ರಗಳಿವೆ. ಅದರಲ್ಲಿ ಒಂದು ರವಿಶಂಕರ್ ಅವರದು. ಆ ಪಾತ್ರಕ್ಕೆ ಕಿವಿ ಕೇಳಿಸುವುದಿಲ್ಲ. ಕಿವಿ ಕೇಳಿಸುವ ಸಾಧನ ಹಾಕಿಕೊಂಡರೆ ಮಾತ್ರ ಕೇಳಿಸುತ್ತದೆ. ಅವರು ಏನಾದರೂ ಭಯ ಪಡಿಸುವಂತಹದು ಪಕ್ಕದಲ್ಲಿ ನಡೆಯುತ್ತಿದೆ ಎಂದರೆ ಕಿವಿಯಿಂದ ಆ ಸಾಧನವನ್ನು ಪಟಕ್ಕನೆ ತೆಗೆದುಬಿಡುತ್ತಾರೆ. ಆರಂಭದಲ್ಲೆಲ್ಲಾ ನಮಗೂ ಅಂಥದ್ದೊಂದು ಅವಕಾಶ ಇರಬಾರದಿತ್ತೇ ಅನ್ನಿಸುತ್ತದೆ. ಹೋಗ್ತಾ ಹೋಗ್ತಾ ಕುಯ್ಯೋದು ಕಡಿಮೆ ಆಗಿ ನೇರ ವಿಷಯಕ್ಕೆ ಬರುತ್ತಾರೆ. ಆಗ ಶುರು ಆಟ.
ಮೂಲತಃ ಇದು ತೆಲುಗು ಮನೆ. ಕನ್ನಡದ ಕಿಟಕಿ, ಬಾಗಿಲು, ಸೋಫಾ ಇಟ್ಟು ಮನೆ ಮಾರಾಟಕ್ಕಿದೆ ಅಂತ ಬೋರ್ಡು ಹಾಕಿದ್ದಾರೆ. ಕಾನ್ಸೆಪ್ಟು, ಲಾಜಿಕ್ಕು ಅಂತೆಲ್ಲಾ ನೋಡಿದರೆ ಹೊಸತು ಅನ್ನುವುದೇನಿಲ್ಲ. ಆದರೆ ಮನೆಯನ್ನು ಅಚ್ಚುಕಟ್ಟಾಗಿ ಕಟ್ಟಿದ್ದಾರೆ. ಹೆವೀ ಡಬಲ್ ಮೀನಿಂಗ್ ಡೈಲಾಗುಗಳಿಲ್ಲ ಅನ್ನುವುದನ್ನು ಗುರುತಿಸಬೇಕಾದ ಕಾಲ ಇದು. ಅದಕ್ಕಾಗಿ ಮೆಚ್ಚುಗೆ. ನಿರ್ದೇಶಕರು ಇಲ್ಲಿ ತಾರಾಗಣ ಆಯ್ಕೆ ಮಾಡುವಾಗಲೇ ಅರ್ಧ ಗೆದ್ದಿದ್ದಾರೆ. ಕಲಾವಿದರು ಅದನ್ನು ಪೂರ್ತಿ ಮಾಡಿದ್ದಾರೆ. ಹಾಗಾಗಿ ಒಬ್ಬೊಬ್ಬರ ಹೆಸರನ್ನು ಹೇಳುವುದು ಅಷ್ಟೇನೂ ಸರಿಯಲ್ಲ.
ಮನೆ ಮಾರಾಟಕ್ಕಿದೆ ಟ್ರೇಲರ್‌ನಲ್ಲಿ ಕುಂತರೂ ಕಾಮಿಡಿ, ನಿಂತರೂ ಕಾಮಿಡಿ!
ಭಯ, ತಮಾಷೆ, ಸೆಂಟಿಮೆಂಟು, ರಿವೇಂಜು, ಮೋಸ, ಕೆಡುಕು, ಡ್ಯುಯೆಟ್ಟು ಎಲ್ಲವೂ ಇಲ್ಲಿದೆ. ಅದಿಲ್ಲ ಇದಿಲ್ಲ ಅನ್ನುವ ಹಾಗಿಲ್ಲ. ಪುಣ್ಯಕ್ಕೆ ಈ ಮನೆಯಲ್ಲಿ ಸಮಸ್ಯೆ ಇದೆ ಅಂತ ಹೇಳುವ
ಆಚಾರ್ಯರು, ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಮನೋವೈದ್ಯರು ಮಾತ್ರ ಇಲ್ಲ. ಅಷ್ಟರ ಮಟ್ಟಿಗೆ ಇದು ಹೊಸತಾಗಿದೆ. ಇಲ್ಲಿ ಅವರವರ ಸಮಸ್ಯೆಯನ್ನು ಅವರವರೇ ಪರಿಹರಿಸಿಕೊಳ್ಳುತ್ತಾರೆ. ಮನೆ ನಿರ್ಮಾಣ ಮಾಡಿದವರು ಆ ಮಟ್ಟಿಗೆ ಸೇಫ್.
ಮನೆಯಲ್ಲಿ ಅನವಶ್ಯಕ ಅನ್ನಿಸುವ ಐಟಮ್ಮುಗಳನ್ನು ಆಚೆ ಹಾಕಿದ್ದರೆ ಮನೆ ಇನ್ನೂ ಚೆನ್ನಾಗಿ ಕಾಣಿಸುತ್ತಿತ್ತು. ಬೇಡದ್ದನ್ನೆಲ್ಲಾ ತುಂಬಿಕೊಂಡರೆ ಮನೆ ಮತ್ತು ಮನಸ್ಸು ಎರಡೂ ಹಾಳು. ಸಿನಿಮಾಗೂ ಇದು ಅನ್ವಯ. ಉಳಿದಂತೆ ಒಂಚೂರು ಕಹಿ ಸಹಿಸಿಕೊಂಡರೆ ಮನೆಯ ತುಂಬಾ ನಗುವುಂಟು.