ಪಿ.ವಾಸು ನಿರ್ದೇಶನದ ಸಿನಿಮಾಗಳನ್ನು ನೋಡಿ ಗೊತ್ತಿದ್ದವರನ್ನು, ‘ಆಯುಷ್ಮಾನ್‌ಭವ’ ಅಚ್ಚರಿಗೊಳಿಸುವುದೂ ಇಲ್ಲ, ನಿರಾಶೆಗೊಳಿಸುವುದೂ ಇಲ್ಲ. ಎಲ್ಲಾ ಪಿ.ವಾಸು ಶೈಲಿಯ ಸಿನಿಮಾಗಳ ಹಾಗೆ ಇದರಲ್ಲೂ ತಿರುವು-ಮುರುವುಗಳಿವೆ. ಸಿನಿಮಾ ಎಲ್ಲಿಯೋ ಶುರುವಾಗಿ, ಎಲ್ಲೆಲ್ಲಿಗೋ ಹೋಗಿ, ಹೊರಟ ಜಾಗಕ್ಕೊಮ್ಮೆ ಭೇಟಿ ಕೊಟ್ಟು , ಒಂದು ಹೊಸ ಕತೆಯನ್ನು ಹೇಳಿ ಕೊನೆಗೊಳ್ಳುತ್ತದೆ. ಸಂತೋಷ ತುಂಬಿದ ಮನೆಯಲ್ಲೊಂದು ವಿಷಾದ ಔಟ್‌ಹೌಸಲ್ಲಿ ಅವಿತು ಕೂತಿರುತ್ತದೆ. ಮನಶ್ಯಾಸ್ತ್ರವೂ ಮನೋರಂಜನೆಯೂ ಒಟ್ಟಾಗಿ ಕೆಲಸ ಮಾಡಿದಾಗ ಆಯಸ್ಸು ಜಾಸ್ತಿಯಾಗುತ್ತದೆ!
ಜೋಗಿ
ವಾಸು ಕತೆಗಳನ್ನು ಪಳಗಿಸುವುದರಲ್ಲಿ ಎತ್ತಿದ ಕೈ. ಪ್ರೇಕ್ಷಕನನ್ನು ಬೆರಗಾಗಿಸುವುದಕ್ಕೆ ಅವರು ಹೊಸ ಹೊಸ ಪಾತ್ರಗಳನ್ನು ಕರೆತರುತ್ತಾರೆ. ಹೊಸ ಹೊಸ ಜಾಗಗಳಿಗೆ ಕರೆದೊಯ್ಯುತ್ತಾರೆ. ಅಪರಾಧವಲ್ಲದ್ದನ್ನು ಅಪರಾಧವೆಂಬಂತೆ ಬಿಂಬಿಸಿ, ಅಪರಾಧಿಯ ಹುಡುಕಾಟಕ್ಕೆ ಪೊಲೀಸರನ್ನು ನೇಮಿಸಿ, ಮುಂದೇನಾಗುತ್ತದೆ ಎಂಬ ಕುತೂಹಲವನ್ನು ಚಾಲ್ತಿಯಲ್ಲಿಡುತ್ತಾರೆ. ಅದೇ ಹೊತ್ತಿಗೆ ತಾನು ಹೇಳುತ್ತಿರುವುದು ಸಾಂಸಾರಿಕ ಕತೆ ಎನ್ನುವುದನ್ನು ಅವರೂ ಮರೆಯುವುದಿಲ್ಲ, ಪ್ರೇಕ್ಷಕನಿಗೂ ಮರೆಸುವುದಿಲ್ಲ. ಹೀಗಾಗಿಯೇ ‘ಆಯುಷ್ಮಾನ್ ಭವ’ ಕೌಟುಂಬಿಕ ಥ್ರಿಲ್ಲರ್ ಆಗಿ ರಂಜನೆ ನೀಡುತ್ತದೆ.
ಸಿನಿಮಾ ಒಪ್ಪಿಕೊಳ್ಳುತ್ತಿರುವುದು ಸಂಖ್ಯೆಗೋಸ್ಕರ ಅಲ್ಲ: ರಚಿತಾ
ಒಂದು ಅವಿಭಕ್ತ ಸುಖೀ ಕುಟುಂಬ. ಅಲ್ಲಿಗೆ ಕೆಲಸಕ್ಕೆ ಬಂದು ಸೇರುವ ಕಥಾನಾಯಕ ಕೃಷ್ಣ. ಆ ಮನೆ ಔಟ್‌ಹೌಸಿನಿಂದ ಕೇಳಿಬರುವ ಆಕ್ರಂದನ. ಅದರ ಹಿಂದೆ ಬೀಳುವ ನಾಯಕ, ಒಂಚೂರು ಸಂಗೀತ, ಒಂದಿಷ್ಟು ತಮಾಷೆ, ಸಾಕಷ್ಟು ಕಸರತ್ತುಗಳನ್ನೆಲ್ಲ ಬೆಸೆಯುತ್ತಾರೆ ವಾಸು. ಪ್ರೇಕ್ಷಕ ಕೇಳುವ ಎಲ್ಲ ಪ್ರಶ್ನೆಗಳಿಗೂ ಅವರಲ್ಲಿ ಉತ್ತರವಿದೆ. ಆಪ್ತಮಿತ್ರ ಚಿತ್ರದಲ್ಲಿರುವಂತೆ ಇಲ್ಲಿಯೂ ಮನೆ ತುಂಬ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ನಗಿಸಲಿಕ್ಕೆ ಕೆಲಸದಾಳು, ಅವನ ಜತೆಗೊಬ್ಬಳು, ನಿಗೂಢ ರಾತ್ರಿ, ಸುಂದರವಾದ ಫ್ಲಾಷ್‌ಬ್ಯಾಕುಗಳಲ್ಲಿ ಆಯುಷ್ಮಾನ್ ಭನ ಬೆಳೆಯುತ್ತಾ ಹೋಗುತ್ತದೆ.
ಹೇಳಿ ಕೇಳಿ ಇದು ಮೂವರು ಕಲಾವಿದರ ಅಪೂರ್ವ ಸಂಗಮದಲ್ಲಿ ರೂಪುಗೊಂಡಿರುವ ಸಿನಿಮಾ. ಶಿವರಾಜ್ ಕುಮಾರ್ ವಿನಯ ಮತ್ತು ವಿವೇಚನೆಯ ಉಲ್ಲಾಸದ ತರುಣನಾಗಿ ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತಾರೆ. ಮೌನ, ಕಣ್ಣಹೊರಳು ಮತ್ತು ಸಂಯಮಶೀಲತೆಯಲ್ಲಿ ಅವರು ಗೆಲ್ಲುತ್ತಾರೆ. ತಮ್ಮ ಪಾತ್ರವನ್ನೂ ಗೆಲ್ಲಿಸುತ್ತಾರೆ. ವಾಸು ಚಿತ್ರಗಳಲ್ಲಿ ಸಾಮಾನ್ಯವಾಗಿ ನಾಯಕಿಯ ಪಾತ್ರಪೋಷಣೆ ಸೊಗಸಾಗಿರುತ್ತದೆ. ಅದನ್ನು ರಚಿತಾ ರಾಮ್ ಅಷ್ಟೇ ಸೊಗಸಾಗಿ ನಿರ್ವಹಿಸಿದ್ದಾರೆ. ಅನಂತ್‌ನಾಗ್ ತುಂಟಾಟ, ಮೌನ, ವಿಷಾದ ಮತ್ತು ಅಸಹಾಯಕ ತಾತನ ಪಾತ್ರವನ್ನು ಜೀವಿಸಿದ್ದಾರೆ.
'ಆಯುಷ್ಮಾನ್‌ಭವ' ರಿಲೀಸ್ ಡೇಟ್ ಬದಲಾಗಿದಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಗೊಂದಲ!
ಇದು ಸಂಗೀತಪ್ರಧಾನ ಸಿನಿಮಾ. ಸಂಗೀತವೇ ಇಲ್ಲಿ ಔಷಧ. ಗುರುಕಿರಣ್ ತಮ್ಮ ಹಿನ್ನೆಲೆ ಸಂಗೀತ ಮತ್ತು ಎರಡು ಹಾಡುಗಳಲ್ಲಿ ಚಿತ್ರದ ಆಶಯಕ್ಕೆ ನೆರವಾಗಿದ್ದಾರೆ. ಪಿಕೆಎಚ್ ದಾಸ್ ನೆರಳು ಬೆಳಕಿನಾಟದಲ್ಲಿ ಬ್ರಿಲಿಯಂಟ್!
ಕೌಟುಂಬಿಕ ಥ್ರಿಲ್ಲರ್‌ಗಳನ್ನು ಅದ್ಭುತವಾಗಿ ನಿರ್ದೇಶಿಸುತ್ತಿರುವ ಹೊಸಕಾಲದ ನಿರ್ದೇಶಕರ ಜೊತೆ ಸ್ಪರ್ಧೆಗೆ ನಿಂತಂತೆ ಕಾಣುವ ಪಿ.ವಾಸು, ಕೆಲವೊಂದು ಕಡೆ ತೀರಾ ಕ್ಲೀಷೆ ಎನ್ನಬಹುದಾದ ಸನ್ನಿವೇಶಗಳನ್ನೂ ಸೃಷ್ಟಿಸುತ್ತಾರೆ. ಉದಾಹರಣೆಗೆ ಸಾಧುಕೋಕಿಲ ಹದಿನೆಂಟು ಸಲ ಕಂಡಕಂಡವರ ಹತ್ತಿರ ಕಪಾಳಕ್ಕೆ ಹೊಡೆಸಿಕೊಳ್ಳುವುದು ಅನಾದಿಕಾಲದ ಹಾಸ್ಯ. ತನ್ನೊಂದಿಗೆ ಕೆಲಸ ಮಾಡುವ ಹುಡುಗಿಯ ಜೊತೆ ಅಸಭ್ಯವಾಗಿ ವರ್ತಿಸುವುದು ಚಿತ್ರಕ್ಕೆ ಅನಗತ್ಯ. ಜ್ಯೋತಿಷಿಯ ಜೊತೆಗಿನ ಸನ್ನಿವೇಶಗಳು ಕೂಡ ಪಳಯುಳಿಕೆಯೇ. ಎರಡು ಹೊಡೆದಾಟದ ದೃಶ್ಯಗಳನ್ನೂ ಸೇರಿಸಿದಂತೆ ಅಷ್ಟನ್ನೂ ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಎಸೆದಿದ್ದರೆ ಈ ಚಿತ್ರಕ್ಕೆ ವೇಗವೂ ಹೊಸತನವೂ ಪ್ರಾಪ್ತವಾಗುತ್ತಿತ್ತು.
ಒಳ್ಳೆಯ ಪಾತ್ರಗಳು ಸಿಕ್ಕರೆ ನಟನೆಯಲ್ಲೆ ಬ್ಯುಸಿ ಆಗುವೆ; ನಿಧಿ ಸುಬ್ಬಯ್ಯ
ಮಿಕ್ಕಂತೆ ರಮೇಶ್ ಭಟ್, ನಟರಂಗ ರಾಜೇಶ್, ಬಾಬು ಹಿರಣ್ಣಯ್ಯ, ರಂಗಾಯಣ ರಘು, ಸುಂದರ್ ವೀಣಾ, ವೀಣಾಸುಂದರ್, ನಿಧಿ ಸುಬ್ಬಯ್ಯ, ಅವಿನಾಶ್ ಮುಂತಾದವರಿಂದ ತುಂಬಿ ತುಳುಕುವ ಚಿತ್ರದಲ್ಲಿ ಯಶ್ ಶೆಟ್ಟಿಗೊಂದು ಗಮನ ಸೆಳೆಯುವ ಪಾತ್ರವಿದೆ. ಪಿ. ವಾಸು ಚಿತ್ರಗಳು ಯಾವತ್ತಿದ್ದರೂ ‘ಮಿನಿಮಮ್ ಎಂಟರ್‌ಟೇನ್‌ಮೆಂಟ್ ಗ್ಯಾರಂಟೀಡ್’ ವರ್ಗಕ್ಕೆ ಸೇರುತ್ತವೆ. ಇಲ್ಲೂ ಕೂಡ ಮನರಂಜನೆಗೆ ಮೋಸವಿಲ್ಲ. ಇಲ್ಲಿರುವ ಬೋನಸ್ ಎಂದರೆ ಅಪೂರ್ವ ವರ್ಚಸ್ಸಿನಿಂದ ನಳನಳಿಸುವ ಶಿವರಾಜ್ ಕುಮಾರ್ ಮತ್ತು ಅಪರೂಪದ ಪಾತ್ರದಲ್ಲಿ ಸೈ ಎನ್ನಿಸಿಕೊಂಡಿರುವ ರಚಿತಾ ರಾಮ್.