ಕೈ, ಕಾಲು ಸರಿ ಇಲ್ಲದೆ ನಡೆಯಲು ಆಗದ ತನ್ನ ಮಗನಿಗೆ ಹುಡುಗಿ ಹುಡುಕಲು ಹೋಗುವ ಅಪ್ಪ, ಅತ್ತ ಹೆತ್ತ ತಂದೆಯಿಂದಲೇ ವೇಶ್ಯಾ ವೃತ್ತಿಗೆ ತಳ್ಳಲ್ಪಟ್ಟಿರುವ ಅಂಧ ಹುಡುಗಿ. ಇವರಿಬ್ಬರು ಜತೆಯಾಗುವುದು ಅದೇ ವೇಶ್ಯಾವಾಟಿಕೆಯ ಅಡ್ಡೆಯಲ್ಲಿ.
ಆರ್ ಕೇಶವಮೂರ್ತಿ
ಆಕೆ ಮೈ ಮಾರಿಕೊಂಡು ಜೀವನ ಮಾಡುತ್ತಿರುವ ಅಂಧ ವೇಶ್ಯೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಲೇಬೇಕು ಎನ್ನುವ ಆತ ವೀಲ್‌ಚೇರ್ ಬಿಟ್ಟು ಏಳಲಾರ. ಅಂಧ ವೇಶ್ಯೆ, ಅಂಗವಿಕಲ ಯುವಕ ಇವರಿಬ್ಬರು ಜೋಡಿಯಾದರೆ ಹೇಗಿರುತ್ತದೆ ಎಂಬುದೇ ಒಂದು ಅಪರೂಪದ ಕಲ್ಪನೆ. ಇಂಥದ್ದೊಂದು ವಿಶೇಷ ಜೋಡಿಯ ಕತೆಯನ್ನು ‘ವೀರ್‌ಚೇರ್ ರೋಮಿಯೋ’ ಮೂಲಕ ಹೇಳಿದ್ದಾರೆ ನಿರ್ದೇಶಕ ನಟರಾಜ್. ದೈಹಿಕ ಚೇತರಿಕೆ ಇಲ್ಲದ ಪಾತ್ರಗಳ ಮೂಲಕ ಸಾಮಾನ್ಯವಾಗಿ ಗೋಳಿನ ಕತೆಗಳು ಅಥವಾ ಅವರ ಪರವಾಗಿ ನಡೆಯುವ ಕನಿಕರದ ಹೋರಾಟವನ್ನೇ ಹೆಚ್ಚಾಗಿ ನೋಡಿರುತ್ತೇವೆ.
ಆದರೆ, ಈ ಎರಡೂ ದಾರಿಗಳ ಆಚೆಗೆ ದೈಹಿಕ ಅಸಮರ್ಥ ಪ್ರೇಮಿಗಳ ಮೂಲಕ ಸಮರ್ಥವಾದ ಸಿನಿಮಾ ಕಟ್ಟಿರುವ ನಿರ್ದೇಶಕರ ಈ ಹೊಸ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗುತ್ತದೆ. ಕೈ, ಕಾಲು ಸರಿ ಇಲ್ಲದೆ ನಡೆಯಲು ಆಗದ ತನ್ನ ಮಗನಿಗೆ ಹುಡುಗಿ ಹುಡುಕಲು ಹೋಗುವ ಅಪ್ಪ, ಅತ್ತ ಹೆತ್ತ ತಂದೆಯಿಂದಲೇ ವೇಶ್ಯಾ ವೃತ್ತಿಗೆ ತಳ್ಳಲ್ಪಟ್ಟಿರುವ ಅಂಧ ಹುಡುಗಿ. ಇವರಿಬ್ಬರು ಜತೆಯಾಗುವುದು ಅದೇ ವೇಶ್ಯಾವಾಟಿಕೆಯ ಅಡ್ಡೆಯಲ್ಲಿ. ಕ್ಷಣಿಕ ಸುಖವನ್ನಾರಿಸಿ ಹೊರಟವನಿಗೆ ಅಗಲಿದರೂ ಅಳಿಸಲಾಗದ ಪ್ರೀತಿ ಬಯಸುತ್ತಾನೆ. ಆದರೆ, ದಿನಕ್ಕೊಬ್ಬರ ಜತೆ ಮೈ ಮರೆಯುವ ಹುಡುಗಿಯಿಂದ ಮರೆಯಲಾಗದಂತಹ ಪ್ರೀತಿ ಕೊಡಲು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾದಾಗ ಕತೆ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ.
ಚಿತ್ರ: ವೀಲ್‌ಚೇರ್ ರೋಮಿಯೋ
ತಾರಾಗಣ: ರಾಮ್ ಚೇತನ್, ಮಯೂರಿ, ಸುಚೇಂದ್ರ ಪ್ರಸಾದ್, ರಂಗಾಯಣ ರಘು, ಗಿರಿ
ನಿರ್ದೇಶನ: ನಟರಾಜ್
ರೇಟಿಂಗ್: 4
ಅಪ್ಪ- ಮಗ, ಬ್ರೋಕರ್, ನಾಯಕನ ಸ್ನೇಹಿತ, ನಾಯಕಿ ಮತ್ತು ಆಕೆಯ ಸಹಾಯಕಿ ಇಷ್ಟೇ ಪಾತ್ರಗಳ ಮೂಲಕ ಚಿಕ್ಕ ಕತೆಯಲ್ಲಿ ದೊಡ್ಡ ಕನಸನ್ನು ತೆರೆದಿಡಲಾಗಿದೆ. ರಂಗಾಯಣ ರಘು, ಗಿರಿ, ಸುಚೇಂದ್ರ ಪ್ರಸಾದ್, ರಾಮ್ ಚೇತನ್ ನಟಿಸುವುದಕ್ಕಿಂತ ಕತೆಯ ಭಾಗವಾಗಿದ್ದಾರೆ. ಮಯೂರಿ ಮುಗ್ಧತೆಯಿಂದಲೇ ಸೆಳೆಯುತ್ತಾರೆ. ಅಂದುಕೊಳ್ಳದ ತಿರುವುಗಳು, ಅನಿರೀಕ್ಷಿತ ಅವಘಡಗಳಿಂದಲೇ ಕೊನೆಯ ತನಕ ಸಿನಿಮಾ ನೋಡುವ ಕುತೂಹಲ ಕಾಯ್ದುಕೊಳ್ಳುತ್ತದೆ. ‘ನಮ್ಮೂರಲ್ಲಿ ಅರಳುವ ಹೂವುಗಳೆಲ್ಲ ದೇವರ ಮುಡಿ ಸೇರಲ್ಲ’ ಹಾಡು ಚಿತ್ರದ ತೂಕ ಹೆಚ್ಚಿಸುತ್ತದೆ.
Prarambha Film Review: ಪ್ರೇಮದ ಸೋಲು ಜೀವನದ ಅಂತ್ಯವಲ್ಲ
ಈ ಚಿತ್ರ ಪ್ರತಿ ದೃಶ್ಯದಲ್ಲೂ ಸಂಭಾಷಣೆಕಾರ ಗುರು ಕಶ್ಯಪ್ ಪ್ರತಿಭೆ ಕಾಣುತ್ತದೆ. ಅವರ ಪೆನ್ನಿನ ಬರವಣಿಗೆಗೆ ಪವರ್ ಜತೆಗೆ ಮನರಂಜನೆ ಕೂಡ ಇದೆ ಎಂಬುದನ್ನು ‘ವೀಲ್‌ಚೇರ್ ರೋಮಿಯೋ’ದಲ್ಲಿ ನೋಡಬಹುದು. ಕಾಡುವ ಕತೆಗೆ ಸಂಭಾಷಣೆಗಳು ಸಾರಥಿಯಂತೆ ಕೆಲಸ ಮಾಡಿವೆ. ಇವರಿಬ್ಬರ ಜುಗಲ್‌ಬಂದಿ ಇಡೀ ಚಿತ್ರವನ್ನು ನೋಡುಗರಿಗೆ ಹತ್ತಿರವಾಗಿಸುತ್ತದೆ. ಸಿನಿಮಾ ಮುಗಿಯುವ ತನಕ ನಗುತ್ತಲೇ ಇರುವ ಪ್ರೇಕ್ಷಕ, ಕೊನೆಯಲ್ಲಿ ಬರುವ ‘ನಿಮ್ಮ ನೆನಪಿನಲ್ಲಿ’ ಎನ್ನುವ ಶ್ರದ್ದಾಂಜಲಿ ಸಾಲುಗಳಿಂದ ಗುರು ಕಶ್ಯಪ್ ನೋ ಮೋರ್ ಎನ್ನುವ ಸತ್ಯ ಗೊತ್ತಾಗುತ್ತದೆ. ಹೀಗಾಗಿ ಮನರಂಜನೆ ಮತ್ತು ಕಾಡುವ ಕತೆ ಎರಡೂ ಜತೆಯಾಗಿ ಬಂದಿರುವುದು ಈ ಚಿತ್ರದ ಹೆಚ್ಚುಗಾರಿಕೆ.