ಜಗತ್ತಿನಲ್ಲಿ ಹಳೆಯ ಕತೆ ಎಂಬುದಿಲ್ಲ ಎಂಬ ಗಾಢನಂಬಿಕೆಯಿಂದ ನರೇಂದ್ರಬಾಬು ನಿರ್ದೇಶಿಸಿರುವ ಸಿನಿಮಾ ಅಮೃತವಾಹಿನಿ. ಇದೊಂದು ಅಪ್ಪಟ ಮೆಲೋಡ್ರಾಮ. ಕೆಟ್ಟಸೊಸೆ, ಅಸಹಾಯಕ ಮಗ, ಕೆಟ್ಟಹೆಂಡತಿ, ಗಂಡ ಹೆಂಡಿರ ಜಗಳ, ಹೆತ್ತವರನ್ನು ದೂರವಿಡುವ ಮಕ್ಕಳು- ಹೀಗೆ ಯಾವ ಕಾಲದ್ದೋ ಅನ್ನಿಸುವ ಯಾವ ಕಾಲಕ್ಕೂ ಸಲ್ಲುವ ಮನೋವ್ಯಾಪಾರದ ಕತೆಯನ್ನು ನಿರ್ದೇಶಕರು ಒಂದೂ ಮುಕ್ಕಾಲು ಗಂಟೆಯಲ್ಲಿ ನಿರೂಪಿಸಿದ್ದಾರೆ.
-ಮಿತ್ರಾ
ಈ ಚಿತ್ರದ ವಿಶೇಷ ಎಚ್ ಎಸ್ ವೆಂಕಟೇಶಮೂರ್ತಿ ಅಭಿನಯ. ಹಿರಿಯ ಕವಿಯೊಬ್ಬರಿಂದ ಈ ಪಾತ್ರ ಮಾಡಿಸಿದ್ದಕ್ಕೆ ವಿಶೇಷ ಕಾರಣವೂ ಇದೆ. ಅವರದು ಸಾಹಿತಿಯ ಪಾತ್ರ. ಅವರನ್ನು ಸಾಹಿತಿಗಳೇ ಅಂತಲೇ ಎಲ್ಲರೂ ಕರೆಯುತ್ತಿರುತ್ತಾರೆ. ಅವರು ಬರೆದ ಕೃತಿಯೇ ಎಲ್ಲರ ವಿಕೃತಿಯನ್ನು ತೊಡೆದು ಜಗತ್ತನ್ನು ಶುದ್ಧಗೊಳಿಸುತ್ತದೆ. ಇಂಥ ರೂಪಕಾತ್ಮಕವಾದ ಕತೆಯ ಕೇಂದ್ರದಲ್ಲಿ ಎಚ್ ಎಸ್ ವೆಂಕಟೇಶಮೂರ್ತಿ ಹುಮ್ಮಸ್ಸಿನಿಂದ, ತಮ್ಮ ಶಕ್ತಿಮೀರಿ ನಟಿಸಿದ್ದಾರೆ. ಮೌನದಲ್ಲಿ ಘನವಾಗಿಯೂ ಮಾತಿನಲ್ಲಿ ಮಿದುವಾಗಿಯೂ ಓಡಾಟದಲ್ಲಿ ಚುರುಕಾಗಿಯೂ ಯಾತನೆಯಲ್ಲಿ ಆರ್ದ್ರರಾಗಿಯೂ ಕಾಣಿಸಿಕೊಳ್ಳುವ ಸಾಹಿತಿಯ ಪಾತ್ರ ಅವರಿಗೆ ಒಪ್ಪಿದೆ.
ನೇರವಾಗಿ ಸಾಗುವ ನಿರೂಪಣೆ, ಸಾಧಾರಣ ಸಂಭಾಷಣೆ, ಸೊಗಸಾದ ಗೀತೆ, ಹಿತವಾದ ಹಿನ್ನೆಲೆ ಸಂಗೀತ ಇರುವ ಚಿತ್ರದ ಛಾಯಾಗ್ರಹಣವೂ ಸೊಗಸಾಗಿದೆ. ಪಾತ್ರಧಾರಿಗಳ ಪೈಕಿ ಪುಟ್ಟಹುಡುಗಿ ಋುತ್ವಿ ಗಮನ ಸೆಳೆಯುತ್ತಾಳೆ. ಮಿಕ್ಕಂತೆ ಶಿವಮೊಗ್ಗ ವೈದ್ಯ, ಸುಪ್ರಿಯಾ ಎಸ್ ರಾವ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಕತೆಯನ್ನು ಮತ್ತಷ್ಟುಚುರುಕಾಗಿ ನಿರೂಪಿಸಬಹುದಿತ್ತು. ಸಣ್ಣ ಕುಟುಂಬ, ವಿಘಟನೆ, ಏಕಾಂತ ಮತ್ತು ವೃದ್ಧಾಪ್ಯದ ಕಷ್ಟಗಳನ್ನು ಹೇಳುವ ಈ ಚಿತ್ರವನ್ನು ಹಿರಿಯರು ನೋಡಬೇಕು, ನಡುವಯಸ್ಕರು ನೋಡಲೇಬೇಕು, ಮಕ್ಕಳಿಗೆ ತೋರಿಸಬೇಕು.