ಆತ ದೇಶದ ಪಾಲಿಗೆ ರಾಮ. ಶತ್ರುಗಳ ಕಣ್ಣಲ್ಲಿ ರಾವಣ. ಹೀಗೆ ರಾಮ- ರಾವಣ ವ್ಯಕ್ತಿತ್ವ ಒಬ್ಬ ಸೈನಿಕನಲ್ಲಿ ಇದ್ದರೆ ಏನಾಗುತ್ತದೆ ಎಂಬುದನ್ನು ಹೇಳುವ ಸಿನಿಮಾ ರಾಜತಂತ್ರ. ಅಂದರೆ ನಿವೃತ್ತಿ ಹೊಂದಿರುವ ಕ್ಯಾಪ್ಟನ್ ರಾಜತಂತ್ರಗಳು, ಶತ್ರುಗಳ ಜತೆ ಕೂತಲ್ಲೇ ಆಡುವ ಚದುರಂಗದ ಆಟವೇ ಚಿತ್ರಕತೆ ಬಂಡಿ ಎನ್ನಬಹುದು.
ಕೇಶವಮೂರ್ತಿ ಆರ್
ನಿವೃತ್ತಿ ಆದರೂ ತನ್ನ ಸೇವೆ ಮುಗಿದಿಲ್ಲ ಎಂದು ಸಮಾಜ ಘಾತಕರ ವಿರುದ್ಧ ಎದ್ದು ನಿಲ್ಲುವ ಸಾಹಸ ಮಾಡುತ್ತ ಹೋಗುವ ಮೂಲಕ ದೇಶ ಕಾಯೋದು ಅಂದರೆ ಕೇವಲ ಗಡಿಯಲ್ಲಿ ಮಾತ್ರವಲ್ಲ. ಗಡಿ ಒಳಗೂ ದೇಶ ಸೇವೆ ಮಾಡಬೇಕು ಎನ್ನುವ ಸಂದೇಶವನ್ನು ನೇರವಾಗಿ ತಲುಪಿಸುತ್ತಾರೆ ನಿರ್ದೇಶಕರು.
ಹೊಸ ವರ್ಷ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ರಾಜತಂತ್ರ!
ನಿವೃತ್ತ ಕ್ಯಾಪ್ಟನ್ ಒಬ್ಬ ಡ್ರಗ್ ಮಾಫಿಯಾ, ಭಯೋತ್ಪಾದನೆ ಚಟುವಟಿಕೆಗಳ ವಿರುದ್ಧ ಹೇಗೆ ಸಮರ ಸಾರುತ್ತಾನೆ ಎಂಬುದು ಚಿತ್ರದ ಕತೆ. ವಿಶೇಷ ಎಂದರೆ ಇಂತಹ ಪವರ್ ಫುಲ್ ಪಾತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರು ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತಾರೆ. ಮೊದಲ ಬಾರಿಗೆ ಅವರು ಇಂಥದ್ದೊಂದು ಪಾತ್ರವನ್ನು ನಿಭಾಯಿಸಿದ್ದಾರೆ.
ದೃಷ್ಟರನ್ನು ಮಟ್ಟ ಹಾಕಲು ದೇಹ ಬಲ ಇರಲೇಬೇಕು ಎನ್ನುವ ನಿಯಮವಿಲ್ಲ. ಬುದ್ಧಿಶಕ್ತಿ ಹಾಗೂ ತಂತ್ರಗಾರಿಕೆ ಇದ್ದರೆ ಎಂಥವರನ್ನು ಮಣಿಸಬಹುದು ಎನ್ನುವ ಕ್ಯಾಪ್ಟನ್ ರಾಜಾರಾಮ್ ಪಾತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಆಯಾಸಗೊಳ್ಳದಂತೆ ನಟಿಸಿದ್ದಾರೆ ಎಂಬುದೇ ಈ ಚಿತ್ರದ ಪ್ಲಸ್ ಪಾಯಿಂಟ್. ಡ್ರಗ್ ಮಾಫಿಯಾ, ಇದರಲ್ಲಿ ಯುವ ಸಮೂಹವನ್ನು ಸಿಲುಕಿಸುವುದು, ಅದರಿಂದ ಆಗುವ ಅನಾಹುತಗಳ ಸುತ್ತ ಚಿತ್ರದ ಮೊದಲ ಭಾಗ ಸಾಗುತ್ತದೆ. ವಿರಾಮದ ನಂತರ ಭಯೋತ್ಪಾದನೆ ವಿಷಯ ತೆರೆದುಕೊಂಡು ಡ್ರಗ್ ಮತ್ತು ಭಯೋತ್ಪಾದನೆ ಒಂದಕ್ಕೊಂದು ಹೇಗೆ ಸಂಬಂಧಿಸಿರುತ್ತದೆ ಎಂಬುದನ್ನು ನಿರ್ದೇಶಕರು ತುಂಬಾ ಜಾಣ್ಮೆಯಿಂದ ಸಾಬೀತು ಮಾಡಲು ಹೊರಡುತ್ತಾರೆ.
ತಾರಾಗಣ: ರಾಘವೇಂದ್ರ ರಾಜ್‌ಕುಮಾರ್, ದೊಡ್ಡಣ್ಣ, ನೀನಾಸಂ ಅಶ್ವತ್ಥ್, ರಂಜನ್ ಹಾಸನ್, ವಲ್ಲಬ್
ನಿರ್ದೇಶನ: ಪಿ ವಿ ಆರ್ ಸ್ವಾಮಿ ಗೊಗರದೊಡ್ಡಿ
ನಿರ್ಮಾಣ: ಜೆ ಎಂ ಪ್ರಹ್ಲಾದ್, ವಿಜಯ್ ಭಾಸ್ಕರ ಹರಪ್ಪನಹಳ್ಳಿ
ಸಂಗೀತ: ಸುರೇಶ್
ಚಿತ್ರದ ಹೆಸರಿಗೆ ತಕ್ಕಂತೆ ಒಂದಿಷ್ಟು ‘ತಂತ್ರ’ ಪ್ರಯೋಗಗಳು ಚಿತ್ರದ ವೇಗವನ್ನುಹೆಚ್ಚಿಸುವ ತಿರುವುಡಳಾಗುತ್ತವೆ. ನಿಗೂಢತೆ, ತಂತ್ರಗಳೇ ಚಿತ್ರದ ಬ್ಯಾಕ್ ಬೋನ್. ಕೆಲ ಕೊರತೆಗಳ ಆಚೆಗೂ ಡ್ರಗ್, ಭಯೋತ್ಪಾದನೆ, ರಾಜಕಾರಣ, ಭ್ರಷ್ಟಾಚಾರ, ಗಣಿಗಾರಿಕೆ, ಗೋಲ್ಡ್ ಹಾಗೂ ಗನ್ ಮಾಫಿಯಾ... ಹೀಗೆ ಹಲವು ವಿಷಯಗಳು ಚಿತ್ರದಲ್ಲಿ ಬಂದು ಹೋಗುತ್ತವೆ. ಎಲ್ಲವನ್ನೂ ನಿರ್ದೇಶಕರು ಚಿತ್ರಕ್ಕೆ ಪೂರಕವಾಗಿ ಬಳಸಿಕೊಂಡಿದ್ದಾರೆ. ಇಲ್ಲಿ ಬರುವ ಘಟನೆ ಹಾಗೂ ಸನ್ನಿವೇಶಗಳು ಪ್ರಸ್ತುತ ಬೆಳವಣಿಗೆಗಳನ್ನು ನೆನಪಿಸುತ್ತದೆ ಎಂಬುದು ಚಿತ್ರದ ದೊಡ್ಡ ಶಕ್ತಿ.
ರಾಘವೇಂದ್ರ ರಾಜ್‌ಕುಮಾರ್ 25ನೇ ಸಿನಿಮಾ 'ಆಡಿಸಿದಾತ' ಟೀಸರ್ ಬಿಡುಗಡೆ
ಚಿತ್ರದ ಹೈಲೈಟ್ ರಾಘವೇಂದ್ರ ರಾಜ್ ಕುಮಾರ್ ಅವರು. ನಿರ್ದೇಶಕರು ಸೃಷ್ಟಿಸಿರುವ ರಾಜಾರಾಮ್ ಪಾತ್ರವನ್ನು ತಮ್ಮ ಶಕ್ತಿ ಮೀರಿ ನಿಭಾಯಿಸಿದ್ದಾರೆ. ತಾಯಿಯ ಪಾತ್ರದಲ್ಲಿ ನಟಿ ಭವ್ಯಾ, ಭ್ರಷ್ಟ ರಾಜಕಾರಣಿಯಾಗಿ ದೊಡ್ಡಣ್ಣ, ಖಳನಟನಾಗಿ ನೀನಾಸಂ ಅಶ್ವತ್ಥ್ ಅಭಿನಯ ಮೆಚ್ಚುಗೆಗೆ ಪಾತ್ರವಾಗುತ್ತದೆ.
ನಿರ್ದೇಶನದ ಜತೆಗೆ ಕ್ಯಾಮೆರಾ ಕಣ್ಣಾಗಿ ಇಡೀ ಚಿತ್ರವನ್ನು ಹೊತ್ತು ಸಾಗುವುದು ನಿರ್ದೇಶಕ ಪಿ ವಿ ಆರ್ ಸ್ವಾಮಿ ಅವರು. ಇವರ ಶ್ರಮಕ್ಕೆ ಸಾಥ್ ನೀಡಿರುವುದು ನಿರ್ಮಾಪಕರಲ್ಲೊಬ್ಬರಾದ ಜೆ ಎಂ ಪ್ರಹ್ಲಾದ್ ಅವರ ಚಿತ್ರಕಥೆ ಹಾಗೂ ಸಾಹಿತ್ಯ. ಸುರೇಶ್ ಅವರ ಸಂಗೀತ ಕತೆಗೆ ಪೂರಕವಾಗಿದೆ. ಸಂದೇಶದ ಜತೆಗೆ ರೋಚಕತೆಯಿಂದ ಕೂಡಿದ ಸಿನಿಮಾ ನೋಡಿದ ಅನುಭವಕ್ಕೆ ಪ್ರೇಕ್ಷಕರು ಪಾತ್ರರಾಗುತ್ತಾರೆ.