
ಬಸ್ ಚಾಲಕನಾಗಬೇಕೆಂಬ ಆಸೆ- ಕನಸು ಕಟ್ಟಿಕೊಂಡಿರುವ ಚಿತ್ರದ ನಾಯಕ ಶಂಕರ. ಬಾಲ್ಯದಿಂದಲೂ ಇದ್ದ ಈ ಕನಸು ಕೊನೆಗೂ ಈಡೇರುತ್ತದೆ. ತನ್ನ ಅಪ್ಪನಂತೆಯೇ ಬಸ್ ಚಾಲಕನಾಗುತ್ತಾನೆ ಶಂಕರ. ಒಂದು ಘಟನೆಯ ಕಾರಣಕ್ಕೆ ಚಾಲಕನ ಸ್ಥಾನದಿಂದ ಬಸ್ ಮಾಲೀಕ ಕಂ ಚಾಲಕನಾದ ಮೇಲೆ ಶಂಕರನ ಜೀವನದಲ್ಲಿ ಏನೆಲ್ಲ ನಡೆಯುತ್ತವೆ ಎಂಬುದಕ್ಕೆ ಒಂದು ಭಯಾನಕ ರೂಟ್ ಜೊತೆಗೂಡುತ್ತದೆ. ಅದೇ ತೌಡುಗೋಳಿ ಊರಿನ ರಸ್ತೆ. ಭೂತ, ಪ್ರೇತಗಳಿಂದ ಆವರಿಸಿರುವ ಈ ರಸ್ತೆಯಲ್ಲಿ ಶಂಕರನ ಬಸ್‌ಗೆ ಎದುರಾಗುವ ನಿಗೂಢತೆಗಳು, ಸವಾಲುಗಳು ಮತ್ತು ಸಮಸ್ಯೆಗಳೇ ಕತೆ.
ಇದು ಕಾಮಿಡಿ ಸಿನಿಮಾ... ಹಾಗಾದರೆ ನಗಬೇಕೆ? ಅದನ್ನು ಪ್ರೇಕ್ಷಕರಿಗೇ ಬಿಡೋಣ. ಹಾರರ್ ಸಿನಿಮಾ ಎಂದಾದರೆ ದೆವ್ವಗಳ ಪ್ರವೇಶವೂ ಇದೆ, ಅವುಗಳ ಆರ್ಭಟವೂ ಇದೆ. ಆದರೆ ಸಿನಿಮಾ ಮುಗಿದ ಮೇಲೂ ಇದು ಕಾಮಿಡಿಯೋ, ಹಾರರ್ ಚಿತ್ರವೋ ಎಂಬ ಸಣ್ಣ ಗೊಂದಲವೊಂದು ಉಳಿಯುತ್ತದೆ. ಇಲ್ಲಿನ ದೆವ್ವಕ್ಕೆ ಮಾತು ಬರುವುದಿಲ್ಲ. ಇನ್ನು ಮಂಗಳೂರು ಭಾಷೆಯ ಸಂಭಾಷಣೆಗಳೇ ಹಾಸ್ಯ ಸೃಷ್ಟಿಸುತ್ತವೆ ಎಂಬ ನಿರೀಕ್ಷೆಯೂ ಎಲ್ಲ ಕಡೆ ಫಲ ಕೊಡುವುದಿಲ್ಲ.
ಚಿತ್ರದ ಕೆಲವು ದೃಶ್ಯಗಳು ಕೊಂಚ ನಿಧಾನವಾಗಿ ಸಾಗುತ್ತವೆ. ಚಿತ್ರಕತೆಯಲ್ಲೂ ಇನ್ನಷ್ಟು ಬಿಗಿತವಿದ್ದಿದ್ದರೆ ನಿರೂಪಣೆ ಹೆಚ್ಚು ಆಕರ್ಷಕವಾಗಿರುತ್ತಿತ್ತು ಅನ್ನಿಸುತ್ತದೆ. ಆದರೂ ಇವೆಲ್ಲದರ ನಡುವೆ ‘ಶಂಕರಾಭರಣ’ ತನ್ನದೇ ಆದ ರೀತಿಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಪ್ರಯತ್ನಿಸುತ್ತದೆ.
ಚಿತ್ರ: ಶಂಕರಾಭರಣ
ತಾರಾಗಣ: ಶೈನ್ ಶೆಟ್ಟಿ, ತನ್ವಿ ರಾಮ್, ತನ್ವಿ ರಾವ್, ಸಂಪತ್ ರಾಜ್, ದೀಪಕ್ ರೈ ಪಾಣಾಜೆ, ತನ್ವಿ ರಾಮ್, ಕೃತಿ ಶೆಟ್ಟಿ
ನಿರ್ದೇಶನ: ಸುಮಂತ್ ಭಟ್
ಕತೆಯ ಒಂದು ಸಾಲು ಭಿನ್ನವಾಗಿದೆ. ಮತ್ತು ಹೊಸದಾಗಿಯೂ ಇದೆ. ಇಡೀ ಚಿತ್ರವನ್ನು ಲವಲವಿಕೆಯಿಂದ ಮುನ್ನಡೆಸುವ ಶ್ರಮಜೀವಿಯಾಗಿ ಶೈನ್ ಶೆಟ್ಟಿ ಅವರು ಕಂಡು ಬರುತ್ತಾರೆ. ನಾಯಕನ ಅಕ್ಕನ ಪಾತ್ರಧಾರಿ ಕೃತಿ ಶೆಟ್ಟಿ, ಸಂಪತ್ ರಾಜ್ ಪಾತ್ರಗಳು ಗಮನ ಸೆಳೆಯುತ್ತವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.