
ಚಿತ್ರ: ಕಾಲಿಧರ್ ಲಾಪತಾ
ಒಟಿಟಿ: ಝೀ 5
ನಿರ್ದೇಶನ: ಮಧುಮಿತಾ
ತಾರಾಗಣ: ಅಭಿಷೇಕ್ ಬಚ್ಚನ್, ನಿಮ್ರತ್ ಕೌರ್, ಮೊಹಮ್ಮದ್ ಅಯೂಬ್, ದೈವಿಕ್ ಬಘೇಲಾ
ಎಂಥ ಸಂಬಂಧಗಳೂ ಕಾಲಕ್ರಮೇಣ ಮಾಸಿಹೋಗುತ್ತದೆ; ನಿರೀಕ್ಷೆಯೇ ಇಲ್ಲದಿದ್ದಾಗ ಸುಖವಾಗಿ ನಿದ್ದೆ ಬರುತ್ತದೆ; ಈರೀತಿ ಇನ್ನೂ ಅನೇಕ ಚೆಪ್ಪಾಳೆ ಗಿಟ್ಟಿಸುವ ಡೈಲಾಗುಗಳು ಈ ಚಿತ್ರದಲ್ಲಿ ಇವೆ.
ಕಾಲಿಧರ ಒಬ್ಬ ಮಧ್ಯ ವರ್ಗದ ಮಧ್ಯವಯಸ್ಸಿನ ವ್ಯಕ್ತಿ. ಚಿಕ್ಕಂದಿನಲ್ಲಿಯೇ ತಂದೆತಾಯಿಯನ್ನು ಕಳೆದುಕೊಂಡು ತಂಗಿ ತಮ್ಮಂದಿರನ್ನು ಬೆಳೆಸಿ ನೆಲೆಗಾಣಿಸುವ ಜವಾಬ್ದಾರಿಯಲ್ಲಿ ತನ್ನ ಮದುವೆ, ತನ್ನ ಖಾಸಗಿ ಬದುಕನ್ನೇ ಮರೆತುಬಿಟ್ಟ ದುರ್ದೈವಿ. ತನ್ನ ಸುಖ ಸಂತೋಷ ಎಲ್ಲವನ್ನೂ ಮರೆತು ಸಹೋದರರನ್ನು ನೆಲೆಗೆ ತರುವಷ್ಟರಲ್ಲಿ ಕಾಲೀಧರನಿಗೆ ಅರೆಮರೆವು ಶುರುವಾಗಿರುತ್ತದೆ. ಮಧ್ಯವಯಸ್ಸಿನ ಮರೆವು ಇರುವ ಕಾಲಿಧರ ಈಗ ತಮ್ಮಂದಿರಿಗೆ ಬೇಡ. ಆದರೆ ಆಸ್ತಿಯೆಲ್ಲ ಕಾಲಿಧರನ ಹೆಸರಲ್ಲಿ ಇದೆ. ಕಾಲಿಧರ ಸ್ವತಃ ತಾನೇ ಸಂಪಾದನೆ ಮಾಡಿದ್ದು ಆ ಆಸ್ತಿ. ಅವನಿಗೆ ಮದುವೆಯಿಲ್ಲ ಮಕ್ಕಳಿಲ್ಲ ಆಸ್ತಿ ತಮಗೇ ತಾನೇ ಎಂಬ ನಂಬಿಕೆ ತಮ್ಮಂದಿರದ್ದು. ಅಪಾರವಾಗಿ ಸಾಲ ಮಾಡಿಕೊಂಡಿರುವ ಅವರು ಕಾಲಿಯ ಆಸ್ತಿಯ ಕಣ್ಣು ಹಾಕಿದ್ದು ಅಸಹಜವೇನಲ್ಲ.
ಒಮ್ಮೆ ಕಾಲಿಧರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ಇವರಿಗೆಲ್ಲ ಆಸ್ತಿ ತಮಗೆ ಬರೆಯದೆಯೇ ಅಣ್ಣ ಎಲ್ಲಿ ಸತ್ತುಹೋಗುತ್ತಾನೋ ಎಂದು ಭಯವಾಗುತ್ತದೆ. ಟೈಪ್ ಮಾಡಿದ ಕಾಗದದಲ್ಲಿ ಅರೆಮಂಪರಲ್ಲಿ ಇರುವ ಕಾಲಿಧರನ ಬೆರಳ ಮುದ್ರೆಯನ್ನು ಹಾಕಿಸಿಕೊಳ್ಳುತ್ತಾರೆ. ಈಗ ಕಾಲಿಧರನನ್ನು ಎಲ್ಲಿಯಾದರೂ ಒಯ್ದು ಬಿಟ್ಟು ಬಿಡಬೇಕು ಅವನ ಜವಾಬ್ದಾರಿ ಬೇಡ, ತಮ್ಮಂದಿರು ಕೂತು ಯೋಚಿಸಿ ಅಣ್ಣನನ್ನು ಕುಂಭಮೇಳದಲ್ಲಿ ಬಿಟ್ಟುಬರುವುದೆಂದು ತೀರ್ಮಾನಿಸುತ್ತಾರೆ. ತಂಗಿಗೆ ಹಿರಿಯಣ್ಣ ಪ್ರಿಯ. ಆದರೆ ಅವಳಿಗೆ ಪ್ರತಿಭಟಿಸುವ ಶಕ್ತಿ ಇಲ್ಲ. ಚಿಕ್ಕ ಅತ್ತಿಗೆಯ ಬಾಯಿಗೆ ಹೆದರುತ್ತಾಳೆ. ಆದರೆ ಒಂದಷ್ಟು ಹಣವನ್ನು ಕಾಲಿಧರನ ಜೇಬಿನಲ್ಲಿ ಯಾರಿಗೂ ತಿಳಿಯದಂತೆ ಇಡುತ್ತಾಳೆ.
ಅಣ್ಣನನ್ನು ಕರೆದುಕೊಂಡು ತಮ್ಮಂದಿರು ಕುಂಭಮೇಳಕ್ಕೆ ಬರುತ್ತಾರೆ. ನೀನು ಇಲ್ಲೇ ಕುಳಿತಿರು ನಾವು ನದಿಯಲ್ಲಿ ಮುಳುಗು ಹಾಕಿ ಬರುತ್ತೇವೆ ಎಂದು ಹೊರಟ ತಮ್ಮಂದಿರು ಬರುವುದೇ ಇಲ್ಲ. ತಮ್ಮಂದಿರಿಗಾಗಿ ಕಾಯುವ ಕಾಲಿಧರ ಎಷ್ಟೊತ್ತಾದರೂ ಬರದಾದಾಗ ಅಲ್ಲಿಯೇ ಹುಡುಕುತ್ತಾನೆ. ಅಲ್ಲಿ ಬಲ್ಲು ಎಂಬ ಒಬ್ಬ 8 ವರ್ಷದ ಹುಡುಗನ ಪರಿಚಯವಾಗತ್ತದೆ. ಬಲ್ಲು ಅನಾಥ. ಎಂಟು ವರ್ಷದ ಬಲ್ಲುಗೆ ಜೀವನಾನುಭವ ಅಪಾರ. ಅಲ್ಲಿ ಇಲ್ಲಿ ಚೂರುಪಾರು ಕೆಲಸ ಮಾಡಿ ದೇವಸ್ಥಾನಗಳಲ್ಲಿ ಕೊಡುವ ಊಟವನ್ನು ಮಾಡುತ್ತ ಜೀವನ ಮಾಡುತ್ತಿರುತ್ತಾನೆ. ಬಲ್ಲು ಮತ್ತು ಕಾಲಿ ಬಲುಬೇಗ ಸ್ನೇಹಿತರಾಗುತ್ತಾರೆ. ಯಾವಾಗಲೂ ಚಡಪಡಿಸುವಂತೆ ಇರುವ ಎಲ್ಲೋ ಕಳೆದು ಹೋದಂತೆ ಕಾಣುವ ಕಾಲಿಧರನನ್ನು ಕಂಡರೆ ಬಲ್ಲುವಿಗೆ ಕುತೂಹಲ. ಕಾಲಿಯ ಕತೆಯನ್ನು ಒಮ್ಮೆ ಕೇಳಿಸಿಕೊಳ್ಳುತ್ತಾನೆ. ತನ್ನ ತಮ್ಮಂದಿರೇ ತನ್ನುನ್ನು ಇಲ್ಲಿ ಬಿಟ್ಟು ಹೋದರು ಎಂದು ಕಾಲಿ ಹೇಳಿ ಸಂಕಟ ಪಟ್ಟಾಗ 'ಅರೆ ಭಾಯ್ ಸಬ್ ರಿಶ್ತೋಂಕೋ ಏಕ್ ಎಕ್ಸ್ ಪೈರಿ ಡೇಟ್ ಹೋತಾ ಹೈ ಭೂಲ್ ಜಾವ್ ಓ ಸಬಕೋ ತುಮಕೋ ಕ್ಯಾ ಚಾಹಿಯೇ ಐಸೆ ಜೀನಾ ಶುರು ಕರೋ' ಎಂದು ಹುರಿದುಂಬಿಸಿ ಸಮಾಧಾನ ಮಾಡುತ್ತಾನೆ. ದಿನ ಕಳೆದಂತೆ ಬಲ್ಲು ಮತ್ತು ಕಾಲಿಧರನ ಬಾಂಧವ್ಯ ನಿಕಟವಾಗುತ್ಥಾ ಹೋಗುತ್ತದೆ. ಬಲ್ಲು ಕಾಲಿಧರನನ್ನು ಖುಷಿಯಾಗಿ ಇಡುವ ಎಲ್ಲ ಪ್ರಯತ್ನ ಮಾಡುತ್ತಾನೆ. ಕಾಲಿ ಬಲ್ಲುವಿನ ಕಾಳಜಿ ವಹಿಸುತ್ತಾನೆ. ಇಬ್ಬರೂ ಒಬ್ಬರಿಗೊಬ್ಬರಾಗಿ ಜೀವಿಸಲು ಶುರು ಮಾಡುತ್ತಾರೆ.
ಇತ್ತ ಕಾಲಿಧರನನ್ನು ಕುಂಭಮೇಳದಲ್ಲಿ ಬಿಟ್ಟು ಬಂದ ತಮ್ಮಂದಿರ ಬಗ್ಗೆ ಊರಿನಲ್ಲಿ ಕಾಲಿಧರನ ಸ್ನೇಹಿತನಿಗೆ ಅನುಮಾನ ಬರುತ್ತದೆ. ಕಾಲಿಧರ್ ಸುರಕ್ಷಿತವಾಗಿ ಇದ್ದಾನೋ ಇಲ್ಲವೋ ಎಂಬ ಕಾತರ ತಮ್ಮಂದಿರ ಮೇಲೆ ಸಂಶಯ. ಕಾಲಿ ಅವನೆಲ್ಲ ಆಸ್ತಿಯನ್ನು ಗೆಳೆಯನ ಬಳಿ ಒತ್ತೆ ಇಟ್ಟಿರುತ್ತಾನೆ. ಆ ಗೆಳೆಯ ತಮ್ಮಂದಿರಿಗೆ ನೀವು ನಿಮ್ಮಣ್ಣನ್ನು ಕರೆದುಕೊಂಡು ಬನ್ನಿ ಅವನಿಗೇ ನಾನು ಆಸ್ತಿಯನ್ನು ಕೊಡುತ್ತೇನೆ ಎಂದು ಬಿಡುತ್ತಾನೆ. ತಮ್ಮಂದಿರು ಕಕ್ಕಾಬಿಕ್ಕಿ ಆಗುತ್ತಾರೆ. ಆಸ್ತಿಗಾಗಿ ಈಗ ಕಾಲಿಧರನನ್ನು ಹುಡುಕಲು ಹೊರಡುತ್ತಾರೆ. ಕುಂಭಮೇಳ ನಡೆದ ಊರಿನಲ್ಲಿ ಪೊಲೀಸ್ ಗೆ ದೂರು ಕೊಡುತ್ತಾರೆ. ದೂರು ತೆಗೆದುಕೊಂಡ ಪೊಲೀಸಿಗೆ ಈ ತಮ್ಮಂದಿರ ನಡವಳಿಕೆ ಬಗ್ಗೆ ಸಂಶಯ ಬರುತ್ತದೆ. ಪೊಲೀಸ್ ತಾನು ಪ್ರಾಮಾಣೀಕವಾಗಿ ಕಾಲಿಧರನನ್ನು ಹುಡುಕಲು ಪ್ರಯತ್ನ ಮಾಡುತ್ತಾನೆ.
ಕಾಲಿಧರ ಹಾಗೂ ಬಲ್ಲು ಇಬ್ಬರೂ ಒಬ್ಬರಿಗೊಬ್ಬರು ತಂದೆ ಮಗನಂತೆ ಪರಸ್ಪರ ಕಾಳಜಿ ಮಾಡುತ್ತ ಬದುಕುತ್ತಿರುತ್ತಾರೆ. ಬಲ್ಲು ನಾಟಕಗಳಲ್ಲೂ ಪಾತ್ರ ಮಾಡುತ್ತಿರುತ್ತಾನೆ. ಕಾಲಿಧರನಿಗೂ ಅದರಲ್ಲಿ ಪಾತ್ರ ಕೊಡಿಸುತ್ತಾನೆ. ಹೂವು ಆಟಿಕೆಗಳು ಇಂಥವನ್ನು ಮಾರುತ್ತಾ ಇಬ್ಬರೂ ಉಪಜೀವನ ಮಾಡುತ್ತಿರುತ್ತಾರೆ. ಕಾಲಿಧರನಿಗೆ ಬಿರಿಯಾನಿ ಎಂದರೆ ಬಲು ಇಷ್ಟ. ಆದರೆ ಹೋಟೆಲಿನಲ್ಲಿ ಒಂದು ಬಿರಿಯಾನಿಗೆ ನೂರು ರೂ. ಬೆಲೆ ಕೇಳಿದ ಕಾಲಿ ನಿರಾಶನಾಗಿ ಹೊರಗೆ ಬರುತ್ತಾನೆ. ಅವರಿರುವ ಊರು ಯಾತ್ರಾಸ್ಥಳವಾದ್ದರಿಂದ ಯಾತ್ರಿಕರು ಬರುತ್ತಿರುತ್ತಾರೆ. ಅವರ ಲಗ್ಗೇಜು ಹೊರುವುದು ಮುಂತಾದ ಕೆಲಸ ಮಾಡಿ ನೂರು ರೂ ಸಂಪಾದಿಸಿ ಹೋಟೆಲ್ಲಿಗೆ ಹೋಗಿ ಬಿರಿಯಾನಿ ತಿನ್ನುತ್ತಾನೆ. ಅವನು ಅದನ್ನು ರುಚಿಸಿಕೊಂಡು ತಿನ್ನುತ್ತಿರುವುದನ್ನು ನೋಡಿದ ಇನ್ನೂ ಕೆಲವರು ತಾವೂ ಬಿರಿಯಾನಿಯನ್ನೇ ಆರ್ಡರ್ ಮಾಡುತ್ತಾರೆ. ಹೋಟೆಲಿನವನ ವ್ಯಾಪಾರ ಇಮ್ಮಡಿಯಾಗುತ್ತದೆ. ಅವನು ಕಾಲಿಧರನ ಕೈಗುಣ ಹೊಗಳಿ ಕಾಲಿಧರನಿಗೆ ಬಿಟ್ಟಿ ಬಿರಿಯಾನಿ ಕೊಡಲು ಪ್ರಾರಂಭಿಸುತ್ತಾನೆ. ಇದನ್ನೇ ಉಪಯೋಗ ತೆಗೆದುಕೊಳ್ಳುವ ಬಲ್ಲು ತನಗೆ ಕಾಲಿಧರನಿಗೆ ಎರಡು ಬಿರಿಯಾನಿ ಹಾಗೂ ದಿನವೂ ನೂರು ರೂ ಬಕ್ಷೀಸು ಕೊಡಬೇಕೆಂದು ಹೋಟೆಲ್ ಮಾಲಿಕನನ್ನು ಒಪ್ಪಿಸುತ್ತಾನೆ. ಅಲ್ಲಿಗೆ ಒಂದು ಹೊತ್ತಿನ ಊಟದ ಖರ್ಚು ಉಳಿದು ನೂರು ರೂ ಕೂಡ ಸಿಗುತ್ತದೆ. ಬಲ್ಲು ಕಾಲಿಧರನ ಆಸೆಗಳನ್ನೆಲ್ಲ ಒಂದು ಲಿಸ್ಟ್ ಮಾಡಿರುತ್ತಾನೆ. ಹಣ ಕೂಡಿದಂತೆ ಆ ಆಸೆಗಳನ್ನು ಪೂರೈಸಿಕೊಳ್ಳುವ ಯೋಜನೆ.
ಒಮ್ಮೆ ಬಲ್ಲು ಕಾಲಿಧರನ ಹಳೆಯ ಪ್ರೇಮಿಯ ಬಗ್ಗೆ ವಿಚಾರಿಸುತ್ತಾನೆ. ಕಾಲಿಧರನಿಗೆ ಮೀರಾ ಎಂಬ ಪ್ರೇಮಿ ಇರುತ್ತಾಳೆ. ಅವಳನ್ನೇ ಮದುವೆ ಮಾಡಿಕೊಳ್ಳಬೇಕೆಂಬ ಆಸೆ ಕಾಲಿಧರನಿಗೆ. ಮೀರಾ ಬಿರಿಯಾನಿ ಬಹಳ ಚೆನ್ನಾಗಿ ಮಾಡುತ್ತಾಳೆ. ಮಾಡಿದಾಗಲೆಲ್ಲ ಅವನಿಗೆ ಕೊಡುತ್ತಾಳೆ. ಇಷ್ಟಪಟ್ಟು ತಿನ್ನುವ ಕಾಲಿಧರನನ್ನು ಕಂಡು ಅವಳಿಗೂ ಪ್ರೀತಿ ಅಕ್ಕರೆ. ಮನೆಯ ಜವಾಬ್ದಾರಿಗಳಿಂದ ಕಾಲಿಧರನಿಗೆ ಮೀರಾಳನ್ನು ಮದುವೆಯಾಗಲು ಸಾಧ್ಯವಾಗುವುದಿಲ್ಲ. ಆದರೆ ಮೀರಾ ಅವಿವಾಹಿತಳಾಗಿಯೇ ಉಳಿದಿರುತ್ತಾಳೆ. ಇದು ಕಾಲಿಧರನಿಗೆ ಗೊತ್ತಿಲ್ಲ. ಭಗ್ನ ಪ್ರೇಮಿಯಾಗಿ ಮೀರಾಳ ನೆನಪಲ್ಲೇ ದಿನದೂಡುವ ಕಾಲಿಧರ ಅವಳ ನೆನಪನ್ನು ತಾಜಾ ಆಗಿ ಇಟ್ಟುಕೊಳ್ಳಲು ಆಗಾಗ ಬಿರಿಯಾನಿ ತಿನ್ನುತ್ತಾನೆ.
ಒಮ್ಮೆ ಕಾಲಿಧರನನ್ನು ಪುಸಲಾಯಿಸಿ ಬಲ್ಲು ಮೀರಾಳ ವಿಳಾಸ ತಿಳಿದುಕೊಂಡು ಅವನನ್ನು ಮೀರಾಳ ಮನೆಗೆ ಕರೆತರುತ್ತಾನೆ. ಮೀರಾಳಿಗೆ ಕಾಲಿಧರನನ್ನು ನೋಡಿ ಶಾಕ್ ಆಗುತ್ತದೆ. ಇಬ್ಬರೂ ಹಳೆಯ ನೆನಪುಗಳಲ್ಲಿ ಕಳೆದುಹೋಗುತ್ತಾರೆ. 'ಊಟಕ್ಕೆ ಏನು ಮಾಡಲಿ' ಎಂದರೆ 'ಬಿರಿಯಾನಿ ಮಾಡು' ಎನ್ನುತ್ತಾನೆ. 'ನೀನು ದೂರವಾದ ಮೇಲೆ ನಾನು ಬಿರಿಯಾನಿ ತಿನ್ನುವುದನ್ನೇ ಬಿಟ್ಟಿದ್ದೇನೆ' ಎನ್ನುವ ಅವಳು ಆ ದಿನ ಖುಷಿಯಿಂದ ಕಾಲಿಧರನಿಗೆ ಹಾಗೂ ಬಲ್ಲುವಿಗೆ ಬಿರಿಯಾನಿ ಮಾಡಿ ಬಡಿಸುತ್ತಾಳೆ.
ಇತ್ತ ಕಾಲಿಧರನಿಗಾಗಿ ತಮ್ಮಂದಿರ ಒತ್ತಡ ಜೋರಾಗುತ್ತದೆ. ಪೊಲೀಸ್ (ಮೊಹಮದ್ ಅಯೂಬ್) ಹುಡುಕಾಟ ತೀವ್ರವಾಗುತ್ತದೆ. ನಾಟಕದ ವೇಷದಲ್ಲಿ ಇದ್ದ ಕಾಲಿಧರ ಒಮ್ಮೆ ಪೊಲೀಸಿಗೆ ಸಿಕ್ಕರೂ ತಪ್ಪಿಸಿಕೊಳ್ಳುತ್ತಾನೆ. ಆ ಊರಿನ ಮಾಸ್ತರರೊಬ್ಬರು ಬಲ್ಲುವನ್ನು ಒಂದು ಬೋರ್ಡಿಂಗ್ ಶಾಲೆಯಲ್ಲಿ ಓದಿಸುವ ಬಗ್ಗೆ ಕಾಲಿಧರನ ಬಳಿ ಮಾತನಾಡುತ್ತಾರೆ. ಇಂದೋರ್ ನಲ್ಲಿ ಇರುವ ಆ ಶಾಲೆಯನ್ನು ಯಾರೋ ಒಬ್ಬ ಸಂತರು ನಡೆಸುತ್ತಿರುತ್ತಾರೆ. ಮೊದಲಿಗೆ ಬಲ್ಲು ಕಾಲಿಯನ್ನು ಬಿಟ್ಟು ಹೋಗಲು ಒಪ್ಪುವುದೇ ಇಲ್ಲ. ಆದರೆ ಕಾಲಿಧರ ವಿದ್ಯೆಯ ಮಹತ್ವವನ್ನು ಬಲ್ಲುವಿಗೆ ಹೇಳಿ ಒಪ್ಪಿಸುತ್ತಾನೆ. ಬಲ್ಲು ಒಲ್ಲದ ಮನಸ್ಸಿನಿಂದಲೇ ಕಣ್ಣೀರು ಹಾಕುತ್ತಾ ಇಂದೋರಿನ ವಸತಿ ಶಾಲೆಗೆ ಹೋಗುತ್ತಾನೆ.
ಒಬ್ಬಂಟಿಯಾದ ಕಾಲಿಧರ ಒಂದು ದಿನ ಪೊಲೀಸನಿಗೆ ಸಿಕ್ಕುಬಿದ್ದು, ತಮ್ಮಂದಿರು ಬಂದು ಕಾಲಿಧರನನ್ನು ತಮ್ಮಊರಿಗೆ ಕರೆದೊಯ್ಯುತ್ತಾರೆ. ಅಲ್ಲಿ ಕಾಲಿಧರ ತನ್ನ ಆಸ್ತಿಯನ್ನು ನಾಲ್ಕು ಭಾಗ ಮಾಡಿ ಒಂದು ಭಾಗವನ್ನು ತಮ್ಮಂದಿರ ಸಾಲಕ್ಕೆ, ಒಂದು ಭಾಗ ತಂಗಿಗೆ, ಒಂದು ಭಾಗ ಮೀರಾಗೆ ಮತ್ತು ನಾಲ್ಕನೆಯ ಭಾಗ ಬಲ್ಲುವಿಗೆ ಬರೆದು ಉಯಿಲು ರಿಜಿಸ್ಟರ್ ಮಾಡಿಸುತ್ತಾನೆ. ತಮ್ಮಂದಿರು ಕಕ್ಕಾಬಿಕ್ಕಿ ಆಗುತ್ತಾರೆ. ಎಷ್ಟು ಕೇಳಿಕೊಂಡರೂ ಕಾಲಿಧರ ಅಲ್ಲಿ ನಿಲ್ಲುವುದಿಲ್ಲ. ತಾನಿದ್ದ ಯಾತ್ರಾಸ್ಥಳಕ್ಕೆ ಮರಳಿ ಬಂದು ನಾಟಕಗಳಲ್ಲಿ ಪಾತ್ರ ಮಾಡುವುದನ್ನು ಮುಂದುವರೆಸುತ್ತಾನೆ. ಆಗಾಗ ಮೀರಳನ್ನು ಭೇಟಿಮಾಡುತ್ತಿರುತ್ತಾನೆ.
ಇಡೀ ಸಿನಿಮಾ ನಮ್ಮನ್ನು ತನ್ನ ವಶದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಬಲ್ಲುವಿನ ಚುರುಕುತನ, ಮುಗ್ಧತೆ ಆಗಾಗ ಅವನ ಬಾಯಿಂದ ಉದುರುವ ಡೈಲಾಗುಗಳು ಚಪ್ಪಾಳೆ ಗಿಟ್ಟಿಸುತ್ತದೆ. ಕಾಲಿಧರನಾಗಿ ಅಭಿಷೇಕ್ ಬಚ್ಚನ್ ಪ್ರಬುದ್ಧ ಅಭಿನಯ ನೀಡಿದ್ದಾರೆ. ಕಾಲಿಧರನ ಮುಗ್ಧತೆ ಅಸಹಾಯಕತೆಯನ್ನು ತಮ್ಮಲ್ಲಿ ಆವಾಹಿಸಿಕೊಂಡು ನಟಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಅಯೂಬ್ ದು ಸಹ ಚೆಂದದ ನಟನೆ. ಮೀರಳಾಗಿ ನಿಮ್ರತ್ ಕೌರ್ ಹಿತಮಿತ ಅಭಿನಯ. ಕಾಲಿಧರ ಹಾಗೂ ಬಲ್ಲು ಸಮಾನ ಅವಕಾಶದಲ್ಲಿ ಕಾಣಿಸಿಕೊಳ್ಳುತ್ತಾರೆ. ಏನೂ ಅನಗತ್ಯ ಮಸಾಲೆ-ಫೈಟ್ ಇಲ್ಲದ ಸರಳ ಸುಂದರ ಚಿತ್ರ. ಬಹುಕಾಲ ಮನದಲ್ಲಿ ನಿಲ್ಲುತ್ತದೆ. ಅಭಿಷೇಕ್ ಅಭಿನಯವೇ ಚಿತ್ರದ ಜೀವಾಳ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.