Family pack: ನಗಿಸುವ ಫ್ಯಾಮಿಲಿ ಚಿತ್ರ ಹೇಗಿದೆ?

Suvarna News   | Asianet News
Published : Feb 18, 2022, 06:14 PM IST
Family pack: ನಗಿಸುವ ಫ್ಯಾಮಿಲಿ ಚಿತ್ರ ಹೇಗಿದೆ?

ಸಾರಾಂಶ

ಫ್ಯಾಮಿಲಿ ಪ್ಯಾಕ್ ನಿಮ್ಮನ್ನು ತುಸು ನಗಿಸಿ ತುಸು ಸಂದೇಶ ನೀಡಲು ಯತ್ನಿಸುವ ಚಿತ್ರ.    

ಸಿನಿಮಾ: ಫ್ಯಾಮಿಲಿ ಪ್ಯಾಕ್
ಪಾತ್ರವರ್ಗ: ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ಅಚ್ಯುತಕುಮಾರ್, ಪದ್ಮಜಾರಾವ್
ನಿರ್ದೇಶನ: ಅರ್ಜುನ್ ಕುಮಾರ್ ಎಸ್.
ನಿರ್ಮಾಣ: ಪಿಆರ್‌ಕೆ ಪ್ರೊಡಕ್ಷನ್ಸ್
ರೇಟಿಂಗ್: 3.5/5

ಅವನು ಮುರಿದ ಮನೆಯಿಂದ ಬಂದವನು. ಅವಳಿಗೂ ತಂದೆಯಿಲ್ಲ. ಅವನು ತಂದೆಯ ಮನೆಯಲ್ಲಿ ಆರು ತಿಂಗಳು, ತಾಯಿಯ ಮನೆಯಲ್ಲಿ ಆರು ತಿಂಗಳು ಇರುವವನು. ಅವಳಿಗೆ ಸೋಶಿಯಲ್ ಮೀಡಿಯಾದ ಹುಚ್ಚು. ಒಂದು ಪೋಸ್ಟ್ ನಂಗೆ ಲೈಕೂ ಬರಲಿಲ್ಲ ಕಾಮೆಂಟೂ ಬರಲಿಲ್ಲ ಎಂದು ಕೊರಗುತ್ತಿರುತ್ತಾಳೆ. ಅವನು ಮೂರನೇ ಮದುವೆಯಾದ ತಂದೆ, ಸದಾ ಕಿರಿಕಿರಿ ಮಾಡುವ ತಾಯಿಯ ಬಳಿ ಏಗುತ್ತಾ ಇದೆಲ್ಲದರಿಂಧ ಪಾರಾಗುವ ಬಗೆ ಹೇಗೆ ಎಂದು ಚಿಂತಿಸುತ್ತಿರುತ್ತಾನೆ. ಮಧ್ಯೆ ಒಮ್ಮೆ ಆತ್ಮಹತ್ಯೆಗೂ ಪ್ರಯತ್ನಿಸುತ್ತಾನೆ. ಆಗ ಅವನನ್ನು ಉಳಿಸುವವನು ಮಂಜುನಾಥನೆಂಬ ನಡುಹರೆಯದ ಗಂಡಸು. ಇಂಥ ಅವನಿಗೂ ಅಂಥ ಅವಳಿಗೂ ಗೆಳೆತನ, ಪ್ರೇಮಾಂಕುರ. ನಡುವೆ ಒಂಧಿಷ್ಟು ಭಗ್ನಪ್ರೇಮ, ಕೆಲ ಅನಾಹುತ, ಒಂದೆರಡು ಸಾವು, ಒಂದು ಭೂತ, ಮತ್ತೊಂದಿಷ್ಟು ಭೂತಕಾಲ.

Film Review: ಲವ್ ಮಾಕ್ಟೇಲ್ 2

ಎಲ್ಲವನ್ನೂ ಸೇರಿಸಿ ಒಂದು ಡಬ್ಬದಲ್ಲಿ ಹಾಕಿ ಗಲಗಲ ಕಲೆಸಿ ಒಂದಿಷ್ಟು ರೊಮ್ಯಾನ್ಸು (Romance) ಮತ್ತೊಂದಿಷ್ಟು ಸಿಚುಯೇಶನಲ್ ಕಾಮಿಡಿಗಳು (Situational comedy) ಸೇರಿಸಿ ಪ್ರೇಕ್ಷಕರ ಮುಂದೆ ಇಟ್ಟರೆ ಅದೇ ಫ್ಯಾಮಿಲಿ ಪ್ಯಾಕ್ ಸಿನೆಮಾ, ಇದನ್ನೇ ಅಚ್ಚುಕಟ್ಟಾಗಿ ಫ್ಯಾಮಿಲಿಗೆ ಇಷ್ಟವಾಗುವಂತೆ ಪ್ಯಾಕ್ ಮಾಡಿಕೊಟ್ಟಿದ್ದಾರೆ ನಿರ್ದೇಶಕ ಅರ್ಜುನ್ ಕುಮಾರ್ ಎಸ್. ಸರಳವಾದ ಒಂದು ಕತೆಯನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ಹೇಳುವಲ್ಲಿ ಅವರು ಗೆದ್ದಿದ್ದಾರೆ. ಸಿನಿಮಾದ ಆರಂಭದಲ್ಲಿ ರಂಗಾಯಣ ರಘು ಅವರ ಭೂತದ ಪ್ರವೇಶದೊಂದಿಗೆ ಇದು ಹಾರರ್ ಕತೆ ಅನ್ನಿಸಬಹುದಾದರೂ, ಅದನ್ನು ಕಾಮಿಡಿಗೆ ಬಳಸುವಲ್ಲಿ ಯಶಸ್ವಿಯಾಗಿದ್ದಾರೆ. 

ತುಳು (Tulu) ಮತ್ತು ಕನ್ನಡದ (Kannada) ಕೆಲವು ಚಿತ್ರಗಳಲ್ಲಿ ನಟಿಸಿರುವ ಲಿಖಿತ್ ಶೆಟ್ಟಿ ಈ ಸಿನಿಮಾದಲ್ಲಿ ಹೀರೋ ಅಭಿ ಆಗಿ, ಲವರ್ ಬಾಯ್ (Love Boy) ಆಗಿ ಗಮನ ಸೆಳೆಯುತ್ತಾರೆ. ಫ್ಯಾಮಿಲಿ ಆಡಿಯೆನ್ಸ್ (Famly Audience) ಜೊತೆಗೆ ಮಾಸ್ ಸೆಳೆಯಲು ಒಂದಿಷ್ಟು ಫೈಟಿಂಗ್, ಡ್ಯುಯೆಟ್ ಸಾಂಗ್‌ಗಳನ್ನೂ ನಿರ್ದೇಶಕರು ಜೋಡಿಸಿದ್ದಾರೆ. ಲೈಕುಗಳಿಗಾಗಿ ಹಪಹಪಿಸುವ ನಾಯಕಿ ಭೂಮಿಕಾ ಆಗಿ ಅಮೃತಾ ಅಯ್ಯಂಗಾರ್ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇಬ್ಬರೂ ನಟನೆಯಲ್ಲಿ ಇನ್ನಷ್ಟು ಪಕ್ವ ಆಗಬೇಕಿದೆ.
 
ಪೋಷಕ ಪಾತ್ರಗಳಲ್ಲಿ (Parenting Roles) ಒಂದಿಬ್ಬರು ಪಳಗಿದ ನಟರು ಇರುವುದು ಈ ಚಿತ್ರವನ್ನು ಮತ್ತಷ್ಟು ಮೇಲಕ್ಕೆತ್ತಿದೆ. ಮೂರು ಮೂರು ಮದುವೆಯಾಗುವ, ಮಗನನ್ನು ಕಡೆಗಣಿಸುವ ತಂದೆಯಾಗಿ ಅಚ್ಯುತ್ ಕುಮಾರ್ ಅವರ ನಟನೆ ಹೈಲೈಟ್. ಅವರ ಮದುವೆ ಪ್ರಹಸನಗಳನ್ನು ತೆರೆಯ ಮೇಲೆ ನೋಡುವುದು ಮಜಾ ಕೊಡುತ್ತದೆ. ಸುಟ್ ಬಿಡ್ತೀನಿ ಎಂದು ಆಗಾಗ ಬಂದೂಕು ತೋರಿಸುವ ಸಿಹಿಕಹಿ ಚಂದ್ರು, ನಾಯಕಿಯ ತಾತನಾಗಿ ಸಾಕಷ್ಟು ಎಂಟರ್‌ಟೈನ್‌ಮೆಂಟ್ ಕೊಡುತ್ತಾರೆ.

ಗಂಗೂಬಾಯಿ ಕಥಿವಾಡಿ ಮಾತ್ರವಲ್ಲ, ಬಿಡುಗಡೆ ಮುನ್ನ ವಿವಾದದಲ್ಲಿ ಸಿಲುಕಿದ ಸಿನಿಮಾ!

ಪದ್ಮಜಾರಾವ್ ಮತ್ತು ನಟ ಶಿವರಾಂ ಅವರದ್ದು ಸಹಜವಾದ ನಟನೆ. ಪರಮಾತ್ಮನಾಗಿ ಸಾಧು ಕೋಕಿಲ ಕೆಲವೇ ದೃಶ್ಯಗಳಲ್ಲಿ ಬಂದರೂ ತೆರೆಯನ್ನು ಉಡೀಸ್ ಮಾಡಿ ಹೊಟ್ಟೆತುಂಬ ನಗಿಸಿ ಹೋಗುತ್ತಾರೆ. ರಂಗಾಯಣ ರಘು ಅವರು ನಿರ್ವಹಿಸಿರುವ ಮಂಜುನಾಥನ ಪಾತ್ರ ಸಿನಿಮಾದ ಟರ್ನಿಂಗ್ ಪಾಯಿಂಟ್. ಇಡೀ ಸಿನಿಮಾವನ್ನು ಅವರು ಆವರಿಸಿಕೊಳ್ಳುತ್ತಾರೆ. ಅವರ ಪಾತ್ರದಲ್ಲಿ ಚಿತ್ರವನ್ನು ಮುಂದಕ್ಕೆ ಒಯ್ಯುವ ಸಸ್ಪೆನ್ಸ್ ಇದೆ. 

2014ರಲ್ಲಿ ಬಂದ ಇದೇ ನಾಯಕ ನಟ ಲಿಖಿತ್ ಶೆಟ್ಟಿ (Likthith Shetty) ಮತ್ತು ನಿರ್ದೇಶಕ ಅರ್ಜುನ್ ಕುಮಾರ್‌ ಕಾಂಬಿನೇಷನ್‌ನಲ್ಲಿ 'ಸಂಕಷ್ಟಕರ ಗಣಪತಿ' ಸಿನಿಮಾ ಬಂದು ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಬಾರಿ ನಟ ಹಾಗೂ ನಿರ್ದೇಶಕರಬ್ಬರೂ ಹೆಚ್ಚು ಮಾಗಿದಂತಿದೆ. ಈ ಸಲವೂ ಇಬ್ಬರೂ ಕಾಮಿಡಿಯನ್ನೇ ಆರಿಸಿಕೊಂಡಿದ್ದಾರಾದರೂ, ಮೊದಲಿನದರ ಕಚ್ಚಾತನ ಇದರಲ್ಲಿ ಇಲ್ಲ. ಸಿನಿಮಾದ ಕತೆಯನ್ನು ಅರ್ಜುನ್ಕುಮಾರ್ ಹೆಣೆದಿದ್ದಾರೆ. ಸಂಭಾಷಣೆ ಮಾಸ್ತಿ ಅವರ ಲೇಖನಿಯಿಂದ ಮೂಡಿಬಂದಿದ್ದು, ಸೈ ಎನಿಸಿಕೊಳ್ಳುವಂತಿದೆ. ಹಿನ್ನೆಲೆ ಸಂಗೀತ (Background Music) ಗುನುಗಿಕೊಳ್ಳುವಂತಿದೆ- ಗುರುಕಿರಣ್  (Gurukiran) ಅವರ ಕೆಲಸ ಎದ್ದು ಕಾಣುತ್ತದೆ. ಶ್ರೀಶ ಕುದುವಳ್ಳಿ ಮತ್ತು ಉದಯ್ ಲೀಲಾ ಛಾಯಾಗ್ರಹಣದಲ್ಲಿ ಅಚ್ಚುಕಟ್ಟುತನ ಮೆರೆದಿದ್ದಾರೆ. ಅಮೆಜಾನ್ ಪ್ರೈಮ್‌ನಲ್ಲಿ (Amazon Prime) ಚಿತ್ರವಿದೆ.

ಕೋಟಿಗಟ್ಟಲೇ ಮೌಲ್ಯದ ಎರಡೆರಡು ಅಪಾರ್ಟ್‌ಮೆಂಟ್‌ ಕೊಂಡ ಕಾಜೋಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?