ಫ್ರೇಮಲ್ಲಿ ಕಾಣಿಸುವ, ಕಾಣಿಸದ ವಿವರಗಳ ಮೂಲಕ ಪ್ರೇಕ್ಷಕನ ಎದೆಗೆ ಸೇತುವೆ ಕಟ್ಟುತ್ತಾರೆ. ಹಳೇ ಕಾಲದ ಥಿಯೇಟರು, ಮಹಾನವಮಿಯ ಹುಲಿ ವೇಷಗಳ ಮೂಲಕ ಮಧ್ಯಮ ವರ್ಗದ ಬದುಕಿನ ನೆನಪುಗಳಿಗೆ ಕಿಡಿ ಹಚ್ಚುತ್ತಾರೆ.
ರಾಜೇಶ್ ಶೆಟ್ಟಿ
ಜನತಾ ಸಿಟಿ ಎಂಬ ಊರು. ಅಲ್ಲೊಂದು ಕಬ್ಬಿಣದ ಗೇಟಿನ ಮನೆ. ಬಿರುಕು ಬಿದ್ದಿರುವ ಗೋಡೆ. ಮಸಿ ಅಂಟಿರುವ ಅಡುಗೆ ಕೋಣೆ. ಬಣ್ಣ ಮಾಸಿದ ಫ್ರಿಜ್ಜು. ಅದರೊಳಗೆ ಆರೆಂಜ್ ಐಸ್‌ಕ್ಯಾಂಡಿಗಳ ಸಾಲು. ಆ ಫ್ರಿಜ್ಜಿನ ಮೇಲೆ ಹಳೆಯ ರೇಡಿಯೋ. ಮೆತ್ತಗಿನ ದನಿಯಲ್ಲಿ ರೆಟ್ರೋ ಹಾಡು. ಹೀಗೆ ಪರಮ್ ವಿವರಗಳಲ್ಲಿ ಕತೆ ಹೇಳುತ್ತಾರೆ. ಫ್ರೇಮಲ್ಲಿ ಕಾಣಿಸುವ, ಕಾಣಿಸದ ವಿವರಗಳ ಮೂಲಕ ಪ್ರೇಕ್ಷಕನ ಎದೆಗೆ ಸೇತುವೆ ಕಟ್ಟುತ್ತಾರೆ. ಹಳೇ ಕಾಲದ ಥಿಯೇಟರು, ಮಹಾನವಮಿಯ ಹುಲಿ ವೇಷಗಳ ಮೂಲಕ ಮಧ್ಯಮ ವರ್ಗದ ಬದುಕಿನ ನೆನಪುಗಳಿಗೆ ಕಿಡಿ ಹಚ್ಚುತ್ತಾರೆ. ಅಮ್ಮ, ತಮ್ಮ, ತಂಗಿಯನ್ನು ಪೊರೆಯಲು ಕಾಯಲು ಜೀವ ಸವೆಸುವ ಒಬ್ಬ ಹುಡುಗನನ್ನು ಪ್ರೀತಿಯಿಂದ ತೋರಿಸಿ ಮಧ್ಯಮ ವರ್ಗವನ್ನು ಹೊರಳಿ ನೋಡುವಂತೆ ಮಾಡುತ್ತಾರೆ.
undefined
ಇದು ಕೋಟಿ ಸಿನಿಮಾದ ಶಕ್ತಿ. ಕಳ್ಳತನ ಮಾಡಲಾರೆ, ಮೋಸ ಮಾಡಲಾರೆ ಎಂದು ಸರಾಗವಾಗಿ ಸಾಗುತ್ತಿರುವ ಬದುಕನ್ನು ಕದಡುವುದಕ್ಕೆ ಸಂಚುಕೋರರು ಬರುತ್ತಾರೆ. ಅವರು ಗೆಲ್ಲುತ್ತಾರೋ ಕೋಟಿ ಗೆಲ್ಲುತ್ತಾನೋ ಎಂಬುದು ಕೋಟಿಯ ಕತೆಯ ಮುಕ್ತಾಯ. ಆ ಅಂತ್ಯದವರೆಗೆ ಪರಮ್ ಪ್ರೇಕ್ಷಕನನ್ನು ಕರೆದೊಯ್ಯುವ ದಾರಿ ಬಣ್ಣಗಳದ್ದು. ಪ್ರತಿಯೊಂದು ದೃಶ್ಯವೂ ಚೆಂದದ ಬಣ್ಣ. ಒಂದೊಂದೇ ಚುಕ್ಕಿ ಇಡುತ್ತಾ ಸಹನೆಯಿಂದ ಚಿತ್ರ ಬಿಡಿಸುತ್ತಾರೆ. ಕೋಟಿ ಆವರಿಸಿಕೊಳ್ಳುವುದಕ್ಕೆ ತಾಳ್ಮೆಯಿಂದ ಕಾಯಬೇಕು. ಒಮ್ಮೆ ಕೋಟಿ ಆವರಿಸಿಕೊಂಡು ಬಿಟ್ಟರೆ ಹಾಗೇ ಮನಸ್ಸಲ್ಲಿ ಕೂತು ಬಿಡುತ್ತಾನೆ. ಭವಿಷ್ಯ ಮೊದಲೇ ಗೊತ್ತಾಗುವಂತಿರುವ ಚಿತ್ರಕತೆಯುಳ್ಳ ಕತೆಯನ್ನು ಆಹ್ಲಾದಕರ ವಿವರಗಳ ಮೂಲಕ ಕಟ್ಟಿಕೊಟ್ಟಿರುವುದು ಪರಮ್ ಹೆಚ್ಚುಗಾರಿಕೆ.
ಚಿತ್ರ: ಕೋಟಿ
ನಿರ್ದೇಶನ: ಪರಮ್
ತಾರಾಗಣ: ಧನಂಜಯ್, ಮೋಕ್ಷಾ ಕುಶಾಲ್, ರಮೇಶ್ ಇಂದಿರಾ, ತಾರಾ, ಪೃಥ್ವಿ ಶಾಮನೂರು, ತನುಜಾ
ರೇಟಿಂಗ್: 3
ಮಧ್ಯಮ ವರ್ಗದ ಹುಡುಗನ ಅಸಹಾಯಕತೆ, ಭರವಸೆ, ಆಕ್ರೋಶವನ್ನು ಸಶಕ್ತವಾಗಿ ದಾಟಿಸಿರುವ ಧನಂಜಯ್ ಚಿತ್ರರಂಗದ ನಿಜವಾದ ಆಸ್ತಿ. ರಮೇಶ್ ಇಂದಿರಾ ಎಂಬ ನಟನಾ ಪ್ರತಿಭೆಯ ಹೊಳಪು ಇಲ್ಲಿ ಮತ್ತಷ್ಟು ಹೆಚ್ಚುಗೊಂಡಿದೆ. ಮೋಕ್ಷಾ ಚೆಂದ ಕಾಣಿಸುತ್ತಾರೆ. ಹೊಸ ಹೇರ್‌ಸ್ಟೈಲಿನಲ್ಲಿ ಕಾಣಿಸಿರುವ ತಾರಾ ಅಭಿನಯ ಕಣ್ಣಂಚನ್ನು ಒದ್ದೆ ಮಾಡಿಸುವಷ್ಟು ಸೊಗಸು. ಡಿಓಪಿ ಅರುಣ್ ಬ್ರಹ್ಮನ್ ಅವರ ಕೆಲವು ಫ್ರೇಮ್‌ಗಳು ಪೇಂಟಿಂಗ್‌ನಷ್ಟು ಸುಂದರ. ಹಳೆಯ ಹಾಡಿನಿಂದ ಆರಂಭವಾಗುವ ಸಿನಿಮಾ ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ ಎಂಬ ಹಾಡಿನಿಂದ ಕೊನೆಯಾಗುತ್ತದೆ. ಅದರ ಮಧ್ಯೆ ಕಾಣಿಸುವ ಅನೇಕ ಚಿತ್ರಗಳು, ಭಾವಗಳು ಹಾಗೆಯೇ ಉಳಿದು ಬಿಡುತ್ತದೆ. ಕೋಟಿ ಗೆಲ್ಲುವುದು ಆ ಭಾವಗಳಲ್ಲಿಯೇ.