ನೆಟ್‌ಫ್ಲಿಕ್ಸ್ ಚಿತ್ರ ಕ್ರ್ಯೂ ರಿವ್ಯೂ: ಚಿನ್ನ ಕಳ್ಳ ಸಾಗಣೆಯಲ್ಲಿ ಫ್ಲೈಟ್ ಓನರೇ ಭಾಗಿ!

By Veena Rao  |  First Published Jun 8, 2024, 2:45 PM IST

ಚಿನ್ನ ಸಾಗಣೆ ಮೂಲ ಹುಡುಕಲು ಹೋದರೆ ರೋಮಾಚಂಕ ತಿರುವುಗಳಿರುತ್ತವೆ. ಎಲ್ಲಿಯಿಂದ ಇನ್ನೆಲ್ಲಿಗೂ ಕನೆಕ್ಟ್ ಆಗಿ, ಕಡೆಗೆ ನೋಡಿದರೆ ನಮ್ಮವರೇ ಇಂಥದ್ದೊಂದು ದಂಧೆಯಲ್ಲಿ ಬಾಗಿಯಾಗಿರುತ್ತಾರೆ. ಇಂಥ ಘಟನೆಯ ಕಥೆ ಇದು!


- ವೀಣಾ ರಾವ್, ಕನ್ನಡ ಪ್ರಭ

Crew  ಇತ್ತೀಚೆಗೆ ಬಿಡುಗಡೆಯಾದ ರಾಜೇಶ್ ಎ ಕೃಷ್ಣನ್ ನಿರ್ದೇಶನದ ಚಿತ್ರ. ನೆಟ್‌ಫ್ಲಿಕ್ಸ್ ನಲ್ಲಿ ಓಡುತ್ತಿದೆ. ಮುಖ್ಯ ಭೂಮಿಕೆಯಲ್ಲಿ ಟಬು, ಕರೀನಾ ಕಪೂರ್, ಕೃತಿಸನೋನ್, ಕುಲಭೂಷಣ್ ಖರಬಂದಾ, ರಾಜೇಶ್ ಶರ್ಮಾ, ಕಪಿಲ್ ಶರ್ಮಾ, ದಿಲ್‌ಜಿತ್ ದೋಸಾಂಜಿ ಇದ್ದಾರೆ.

ಗೀತಾ ಸೇಥಿ (ಟಬು), ಜಾಸ್ಮಿನ್ ಕೊಹ್ಲಿ (ಕರೀನಾ), ದಿವ್ಯಾರಾಣಾ (ಕೃತಿ ಸನೂನ್) ಈ ಮೂವರೂ ಕೊಹಿನೂರು ಏರ್ ಲೈನ್ಸ್ ಗಗನಸಖಿಯರು. ಈ ಮೂವರೂ ಪ್ರಾಣಸಖಿಯರು ಕೂಡಾ. ಒಬ್ಬರಿಗೊಬ್ಬರ ಕಷ್ಟ ಸುಖಗಳನ್ನು ಹಂಚಿಕೊಳ್ಳುವವರು, ಸಹಾಯ ನೆರವು ಪರಸ್ಪರ ನೀಡಿಕೊಳ್ಳುವಂತವರು, ತಮ್ಮ ಹೃದಯದ ಮಾತುಗಳನ್ನು ಮನೆ ಕಷ್ಟಗಳನ್ನು ಪರಸ್ಪರ ಹಂಚಿಕೊಂಡು ಸಲಹೆ ಪಡೆದುಕೊಳ್ಳುವವರು ಹೀಗೆ ಬಿಂದಾಸ್ ಜೀವನ. ಮೂವರೂ ಖುಷಿಖುಷಿಯಾಗಿ ಇರುತ್ತಾರೆ.

Tap to resize

Latest Videos

ಗೀತಾ ಸೇಥಿ ಒಂದು ಕಾಲದ ಮಿಸ್ ಸಿಟಿ ಆಗಿದ್ದು ತನ್ನ ರೂಪದ ಬಗ್ಗೆ ಅವಳಿಗೆ ಹೆಮ್ಮೆ. ತನ್ನ ಗಂಡನ (ಕಪಿಲ್ ಶರ್ಮಾ) ಕೇಟರಿಂಗ್ ಬಿಸಿನೆಸ್ಸಿಗೆ ತನ್ನ ಸಂಪಾದನೆಯಿಂದ ಸಹಾಯ ಮಾಡುತ್ತಿರುತ್ತಾಳೆ. ಗಂಡ ಕೂಡ ಅವಳಿಗೆ ಬೆಂಬಲವಾಗಿ ನಿಲ್ಲುವಂಥ ಸಹೃದಯಿ. ಗೀತಾ ತನ್ನ ನಿರುದ್ಯೋಗಿ ತಮ್ಮ ಹಾಗೂ ಅವನ ಹೆಂಡತಿಯ ಜವಾಬ್ದಾರಿ ಸಹ ನಿಭಾಯಿಸಬೇಕಾಗಿರುತ್ತದೆ. ಗಂಡನ ಬೆಂಬಲ ಸಹಕಾರದಿಂದ ಎಲ್ಲವನ್ನೂ ನಡೆಸಿಕೊಂಡು ಹೋಗುತ್ತಿರುತ್ತಾಳೆ.

Silence 2 Movie Review: ನೈಟ್ ಕ್ಲಬ್‌ನಲ್ಲಿ ಹೆಣವಾದ ಕಾಲ್ ಗರ್ಲ್ ಕೊಲೆ ಜಾಡು ಹಿಡಿದು ಹೋದಾಗ?

ಜಾಸ್ಮಿನ್ ತಂದೆ ತಾಯಿ ವಿಚ್ಛೇದಿತರು. ಇಬ್ಬರ ಜೊತೆಯೂ ಇರಲು ಇಷ್ಟವಾಗದೆ ಜಾಸ್ಮಿನ್ ತನ್ನ ತಾತನ ಜೊತೆ ವಾಸಿಸುತ್ತಿರುತ್ತಾಳೆ. ತಾತನನ್ನು ಕಂಡರೆ ಬಹಳ ಪ್ರೀತಿ. ಆದರೆ ತಾತನ ಆರೈಕೆ, ಮನೆಯ ಖರ್ಚು ಎಲ್ಲವೂ ಇವಳದ್ದೇ ಆಗಿರುತ್ತದೆ. ಜಾಸ್ಮಿನ್ ಆಧುನಿಕ ಮನೋಭಾವದ ಹೆಣ್ಣು (Modern Though Woman). ಯಾವುದೇ ಸಂಬಂಧಗಳ ಗಹನತೆಯಲ್ಲಿ ನಂಬಿಕೆ ಇಲ್ಲ. ಆ ಕ್ಷಣದ ಐಹಿಕ ಭೋಗದಲ್ಲಷ್ಟೇ ಅವಳಿಗೆ ಆಸಕ್ತಿ. ತಾತ ಬಹಳ ಸಲ ಮದುವೆಯಾಗು ನಮ್ಮ ಕಷ್ಟ ಸುಖಕ್ಕೆ ಸಂಗಾತಿ ಬೇಕು ಎಂದು ಹೇಳುತ್ತಿದ್ದರೂ ಅದನ್ನು ಅಲಕ್ಷಿಸಿರುತ್ತಾಳೆ. ಐಷಾರಾಮಿ ಜೀವನ ಅವಳಿಗೆ ಪ್ರೀತಿ. ದುಬಾರಿ ವಸ್ತುಗಳು, ಐಫೋನ್, ವಿದೇಶಿ ಸುಗಂಧ, ಬ್ಯಾಗ್ಸ್ , ದುಬಾರಿ ಚಪ್ಪಲಿಗೆಳು ಇವುಗಳೇ ಅವಳ ಪ್ರಪಂಚ.

ದಿವ್ಯಾ ರಾಣಾ ಚಿಕ್ಕಂದಿನಿಂದಲೂ ಸ್ಕೂಲ್ ಕಾಲೇಜಿನಲ್ಲಿ ಟಾಪರ್, ಆಟೋಟಗಳಲ್ಲಿ ಸೂಪರ್. ಅವಳ ಕನಸು ಪೈಲಟ್ ಆಗಬೇಕೆಂದು. ಪೈಲೆಟ್ ಗೆ ಬೇಕಾದ ವಿದ್ಯಾರ್ಹತೆಯೂ ಇರುತ್ತದೆ. ಆದರೆ ಪೈಲೆಟ್ ಆಗಿ ಸೆಲೆಕ್ಟ್ ಆಗದೆ ಗಗನಸಖಿಯಾಗುತ್ತಾಳೆ. ಇದಕ್ಕೆ ಮನೆಯ-ತಂದೆಯ ಹಣಕಾಸು ಸ್ಥಿತಿಯೂ ಕಾರಣವಾಗಿರುತ್ತದೆ. ಆದರೆ ಮನೆಯಲ್ಲಿ ತಾನು ಪೈಲಟ್ ಎಂದೇ ಹೇಳಿರುತ್ತಾಳೆ.

ಈ ಮೂವರೂ ಕೆಲಸ ಮಾಡುವ ಕೊಹಿನೂರ್ ಏರ್‌ಲೈನ್ಸ್ ಸಂಸ್ಥೆ ತೀವ್ರ ಹಣಕಾಸು ಸಂಕಷ್ಟದಲ್ಲಿ ಮುಳುಗಿದ್ದು ತನ್ನ ಸಿಬ್ಬಂದಿಗೆ ವೇತನ ಕೊಡಲೂ ಕಷ್ಟವಾಗಿರುತ್ತದೆ. ಎಷ್ಟೋ ತಿಂಗಳಿಂದ ವೇತನವನ್ನೇ ಪಾವತಿಸಿರುವುದಿಲ್ಲ. ಇದರಿಂದ ಈ ಮೂರೂ ಜನಕ್ಕೂ ಆರ್ಥಿಕ ಹೊಡೆತ ಬಿದ್ದಿರುತ್ತದೆ. ಮೂವರೂ ತಮ್ಮ ಕಷ್ಟಸುಖಗಳನ್ನು ಹಂಚಿಕೊಳ್ಳುತ್ಥಾ ವೇದನೆ ಪಡುತ್ತಾ ಅಂತೂ ಅದೇ ಏರ್‌ಲೈನ್ಸ್‌ನಲ್ಲೇ ಕೆಲಸ ಮಾಡುತ್ತಿರುತ್ತಾರೆ. ಬೇರೆ ಕಡೆ ಉದ್ಯೋಗಾವಕಾಶಗಳು ಇಲ್ಲದಿರುವುದರಿಂದ ಇರುವ ಕೆಲಸ ಬಿಡಲು ಭಯ. ಇಂದಲ್ಲ ನಾಳೆ ತಮ್ಮ ವೇತನ ಅಷ್ಟೂ ಪಾವತಿಸುತ್ತಾರೆ ಎಂಬ ನಂಬಿಕೆಯಲ್ಲಿ ಹೇಗೋ ಮನಸ್ಸು ಹೊಂದಿಸಿಕೊಂಡು ಕೆಲಸ ಮಾಡುತ್ತಿರುತ್ತಾರೆ.

ಹೀರಾಮಂಡಿ ವೆಬ್ ಸೀರಿಸ್: ವೇಶ್ಯೆಯರೂ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಜೀವ ತೆತ್ತಿದ್ದು

ಒಮ್ಮೆ ಅವರು ವಿಮಾನದಲ್ಲಿ ಕರ್ತವ್ಯ ನಿರತರಾಗಿದ್ದಾಗ ಅವರ ಸೀನಿಯರ್ ಆಫಿಸರ್ ರಾಜವಂಶಿಗೆ ಹಠಾತ್ತಾಗಿ ಹೃದಯಾಘಾತವಾಗುತ್ತದೆ. ಗೀತಾ ಗಾಬರಿಯಿಂದ ಅವನಿಗೆ ಪ್ರಥಮ ಚಿಕಿತ್ಸೆ ನೀಡಲು ಅವನ ಕೋಟ್ ತೆಗೆದು ಶರ್ಟ್ ಸಡಿಲ ಮಾಡಿದಾಗ, ಒಳ ಅಂಗಿಯಲ್ಲಿ ಚಿನ್ನದ ಬಿಸ್ಕತ್ತುಗಳನ್ನು ಸರದಂತೆ ಸಾಲಾಗಿ ಹೊಲೆದಿರಲಾಗುತ್ತದೆ. ಇದನ್ನು ನೋಡಿದ ಈ ಮೂವರೂ ಗಗನಸಖಿಯರೂ ಆಘಾತಕ್ಕೆ ಒಳಗಾಗುತ್ತಾರೆ. ಇದೇ ಈ ಚಿತ್ರದ ಟರ್ನಿಂಗ್ ಪಾಯಿಂಟ್.  ರಾಜವಂಶಿ ತನ್ನ ಮೂಲಕವೇ ಚಿನ್ನವನ್ನು ಕಳ್ಳಸಾಗಾಣಿಕೆ ಮಾಡಿ ಹಣ ಸಂಪಾದನೆ ಮಾಡುತ್ತಿರುತ್ತಾನೆ. ಅವನಿಗೆ ಸಂಸ್ಥೆ ವೇತನ ಕೊಡುವುದೂ, ಕೊಡದೇ ಇರುವುದೂ ಗಣನೆಯೇ ಇರುವುದಿಲ್ಲ. ಪ್ರತಿ ಸಲದ ವಿಮಾನ ಪ್ರಯಾಣದಲ್ಲೂ ಅವನು ಚಿನ್ನವನ್ನು ಆಲ್ ಬುರ್ಜ್ ದೇಶಕ್ಕೆ ಸಾಗಿಸುತ್ತಿರುತ್ತಾನೆ. ಅದರೆ ಚಿನ್ನ ಅವನದಲ್ಲ. ಅವನು ಒಂದು ಸೇತುವೆ ಮಾತ್ರ. ಅವನ ಹಿಂದೆ ಬಹಳಷ್ಟು ದೊಡ್ಡ ಕೈಗಳು ಇರುತ್ತವೆ. ಕೊಹಿನೂರ್ ಸಂಸ್ಥೆಯ HR ಮುಖ್ಯಸ್ಥ ಮಿಟ್ಟಲ್ ಇದರ ಭಾಗಿದಾರ.

ಈ ಮೂವರೂ ಮಿಟ್ಟಲ್‌ನನ್ನು ಭೇಟಿಯಾಗಿ ಇನ್ನು ಮುಂದೆ ತಾವೇ ಈ ಕೆಲಸ ಮಾಡುವುದಾಗಿ ಹೇಳುತ್ತಾರೆ. ಮಿಟ್ಟಲ್ ಒಪ್ಪುತ್ತಾನೆ. ಆದರೆ ಬಿಸ್ಕೆಟ್ಸ್ ಬದಲಾಗಿ ಇವರು ಚಿನ್ನವನ್ನು ಚಾಕಲೇಟ್ ಬಾಲ್ಸ್ ರೀತಿ ಬದಲಿಸಿ ತಮ್ಮ ಲಗ್ಗೇಜಿನಲ್ಲಿ ಇರಿಸಿ ಸಾಗಿಸುತ್ತಿರುತ್ತಾರೆ. ಇದೇ ರೀತಿಯಲ್ಲಿ ವಿಮಾನದಲ್ಲಿ ಹೇರಳವಾಗಿ ಚಿನ್ನ ಕಳ್ಳ ಸಾಗಾಣೆ ಮಾಡುತ್ತಾರೆ. ಕಮಿಷನ್ ಮೂಲಕ ಕೈತುಂಬಾ ಹಣ ಸಂಪಾದಿಸುತ್ತಾರೆ. ಬೇಕಾದಷ್ಟು ಐಷಾರಾಮಿ ಖರ್ಚು ಮಾಡುತ್ತಾರೆ. ಇದೆಲ್ಲ ಸುಂಕದ ಅಧಿಕಾರಿಗಳ ಕಣ್ಣಿಗೆ ಬೀಳುವವವರೆಗೂ ಮಾತ್ರ. ಒಮ್ಮೆ ಸುಂಕದ ಅಧಿಕಾರಿಗಳಿಗೆ ಚಿನ್ನ ಕಳ್ಳಸಾಗಾಣಿಕೆಯಾಗುತ್ತಿದೆ ಎಂದು ತಿಳಿದಾಗ ಅವರ ತನಿಖೆ ಶುರುವಾಗಿ ಈ ಮೂವರು ಗಗನಸಖಿಯರ ಮೇಲೆ ಅವರ ದೃಷ್ಟಿ ಹರಿದಾಗ ಇವರು ಏನು ಮಾಡುತ್ತಾರೆ. ಇದೇ ಸಿನಿಮಾದ ರೋಚಕ ಘಟ್ಟ.

ಲಾ ಪತಾ ಲೇಡೀಸ್ ಮೂವಿ ರಿವ್ಯೂ: ಘೂಂಘಟ್ ಗೊಂದಲ, ಪ್ರೇಕ್ಷಕನಿಗೋ ನಿಲ್ಲದ ತಳಮಳ

ಸಿಕ್ಕಿ ಬಿದ್ದರೆ ಆಗೋ ಹಿಂಸೆ ಅಷ್ಟಿಷ್ಟಲ್ಲ:
ಸುಂಕ ಅಧಿಕಾರಿಗಳ ಕೈಗೆ ಸಿಕ್ಕು ವಿಚಾರಣೆ ಆಗುವಾಗ ಅನುಭವಿಸುವ ಹಿಂಸೆ, ಅವಮಾನ ಆ ಅಧಿಕಾರಿಗಳ ಕೆಕ್ಕರಿಸುವ ನೋಟ ಇವರಿಗೆ ತೀವ್ರ ಮುಜುಗರ ಉಂಟು ಮಾಡಿ ತಮ್ಮ ಆಯ್ಕೆ ಸರಿಯೋ ತಪ್ಪೋ ಎಂದು ಯೋಚಿಸುವಂತಾಗುತ್ತದೆ. ಅವರ ವಿಚಾರಣೆ ಎದುರಿಸಿ ಹೇಗೋ ಪಾರಾಗಿ ಹೊರಗೆ ಬಂದು ನಿಟ್ಟುಸಿರಿಡುತ್ತಾರೆ. ಆದರೆ ಒಂದು ದಿನ ಹಠಾತ್ತಾಗಿ ಕೊಹಿನೂರ್ ಏರ್‌ಲೈನ್ಸ್ ಮಾಲೀಕ ವಿಜಯ್ ವಾಲಿಯಾ ತಾನು ದೀವಾಳಿ ಎಂದು ಘೋಷಿಸಿ, ತನ್ನ ನೌಕರರಿಗೆ ಒಂದು ಬಿಡಿಗಾಸಿನ ಸಂಬಳವನ್ನೂ ಕೊಡದೆ ಆಲ್ ಬುರ್ಜ್‌ಗೇ ಪರಾರಿಯಾಗುತ್ತಾನೆ. ಅವನ ಜೊತೆ ಮಿಟ್ಟಲ್ ಕೂಡ ಇರುತ್ತಾನೆ. ಈಗ ಒಂದು ಬಿಡಿಗಾಸೂ ಇಲ್ಲದ ಈ ಸಂಸ್ಥೆಯ ನೌಕರರರು ಬೀದಿಪಾಲಾಗುತ್ತಾರೆ. ತಮ್ಮಿಂದಲೇ ಚಿನ್ನ ಕಳ್ಳಸಾಗಾಣಿಕೆ ಮಾಡಿಸಿ ಹೇರಳ ಹಣ ಸಂಪಾದಿಸಿ ಈಗ ಬಿಡಿಗಾಸನ್ನೂ ಕೊಡದೆ ದೀವಾಳಿಎಂದು ಘೋಷಿಸಿದ ತಮ್ಮ ಮಾಲಿಕ ವಿಜಯ್ ವಾಲೀಯಾನೇ ಈ ಕಳ್ಳಸಾಗಾಣಿಕೆ ಮುಖ್ಯಸ್ಥ ಎಂದು ತಿಳಿದ ಈ ಮೂವರೂ ಕೆರಳಿದ ಸಿಂಹಿಣಿಯರಾಗುತ್ತಾರೆ. ಇವರು ವಿಜಯ್ ಹಾಗೂ ಮಿಟ್ಟಲ್ ನ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸುತ್ತಾರೆ. ಹೇಗೆ ಸೇಡು ತೀರಿಸಿಕೊಳ್ಳುತ್ತಾರೆ? ಕಳ್ಳಸಾಗಾಣಿಕೆಯಾದ ಚಿನ್ನವನ್ನು ಮರಳಿ ಭಾರತಕ್ಕೆ ತಂದು ಸರ್ಕಾರಕ್ಕೆ ಒಪ್ಪಿಸುವಲ್ಲಿ ಸಫಲರಾಗುತ್ತಾರಾ? ನೀವೇ ಚಿತ್ರ ನೋಡಿ ಆ ರೋಚಕತೆಯನ್ನು ಅನುಭವಿಸಿ. ವಿಷಾದ ಹಾಗೂ ಹಾಸ್ಯ ಎರಡೂ ಹದವಾಗಿ ಮಿಳಿತವಾದ ಚಿತ್ರ.

ಅನೇಕ ಟ್ವಿಸ್ಟು ಸತ್ಯಕ್ಕೆ ದೂರವಾದ ಸಂಗತಿಗಳಿದ್ದರೂ ಟಬು, ಕರೀನಾ ಮತ್ತು ಕೃತಿಯ ಲವಲವಕೆಯ ಅಭಿನಯ ಮನ ಸೆಳೆಯುತ್ತದೆ. ಈ ಮೂವರೇ ಚಿತ್ರದ ಹೀರೋಗಳು. ಇವರ ಸಿಟ್ಟು ಸೆಡವು ಅಸಹಾಯಕತೆ, ಹಠ, ಪ್ರೀತಿ (Love), ಎಲ್ಲವೂ ಪ್ರೇಕ್ಷಕನಿಂದ ಚಪ್ಪಾಳೆ ಗಿಟ್ಟಿಸುತ್ತದೆ. ಮೂವರೂ ಪೈಪೋಟಿಯಿಂದ ನಟಿಸಿದ್ದಾರೆ. ಮೂವರೂ ತಮ್ಮ ದೇಹ ಸೌಂದರ್ಯವನ್ನು ಧಾರಾಳವಾಗೇ ಪ್ರದರ್ಶಿಸಿದ್ದರೂ, ಎಲ್ಲಿಯೂ ಅಶ್ಲೀಲತೆಯ ಸೋಂಕಿಲ್ಲ. ಚಿತ್ರ ಎಲ್ಲ ವಯೋಮಾನದವರೂ ಕೂತು ನೋಡಬಹುದಾದ ಫ್ಯಾಮಿಲಿ ಮೆಲೋಡ್ರಾಮ. ಗಗನಸಖಿಯರಿಗೂ ಕಷ್ಟಗಳು ಇರುತ್ತವೆ, ಆಗಸದಲ್ಲಿ ಹಾರಾಡಿದರೆ ಮಾತ್ರ ಅವರು ಸುಖವಾಗಿದ್ದಾರೆ ಎಂದರ್ಥವಲ್ಲ ಎಂದು ನಮಗರ್ಥವಾಗುತ್ತದೆ.

click me!