
ಚಿತ್ರ: ಧಡಕ್-2
ಒಟಿಟಿ: ನೆಟ್‌ಫ್ಲಿಕ್ಸ್
ನಿರ್ದೇಶನ: ಶಾಜಿಯಾ ಇಕ್ಬಾಲ್
ತಾರಾಗಣ: ಸಿದ್ದಾಂತ್ ಚತುರ್ವೇದಿ, ತೃಪ್ತಿ ಧಿಮ್ರಿ
ಮೂಲಚಿತ್ರ: ಪೆಯುರುಮ್ ಪೆರುಮಾಳ್ (ತಮಿಳು)
ಜಾತಿಯ ಭೂತ ಕೊಲೆ ಮಾಡಿಸಲೂ ಹೇಸುವುದಿಲ್ಲ. ಅನ್ಯಜಾತೀಯ ಇಬ್ಬರು ಪ್ರೇಮಿಗಳ ಕತೆ ಹೇಳುವ ಧಡಕ್ ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ. ಈ ಕಾಲದಲ್ಲೂ ಜಾತಿಯ ಭೂತ ನಮ್ಮನ್ನು ಹೆದರಿಸುತ್ತದೆಯೇ? ಕಾಲ ಬದಲಾಗಿಲ್ಲವೇ? ಇವೆಲ್ಲ ಪ್ರಶ್ನೆಗಳು ನಮ್ಮನ್ನು ಕಾಡುತ್ತದೆ. ಜಾತಿಯ ವೈಷಮ್ಯವನ್ನು ಮೀರಿ ಆ ಪ್ರೇಮಿಗಳು ಹೇಗೆ ಒಂದಾದರು ಎಂದು ತಿಳಿಯಬೇಕಾದರೆ ಈ ಚಿತ್ರ ನೋಡಬೇಕು. ಕಥಾವಸ್ತು ತೀರ ಹೊಸದೇನೂ ಅಲ್ಲ. ಆದರೆ ಅದನ್ನು ಪ್ರಸ್ತುತ ಪಡಿಸಿರುವ ರೀತಿಯಲ್ಲಿ ಹೊಸತನ ಇದೆ. ನೀಲ್ ಆಗಿ ಸಿದ್ಧಾಂತ್ ವಿಧಿ ಆಗಿ ತೃಪ್ತಿ ಇವರಿಬ್ಬರ ಮುಗ್ಧ ಅಭಿನಯ ಮನಸೂರೆಗೊಳ್ಳುತ್ತದೆ.
ನೀಲ್ ಕೆಳ ಜಾತಿಯ ಹುಡುಗ. ಬುದ್ಧಿವಂತ ಆದರೆ ಬಡವ. ತನ್ನ ಜಾತಿಗೆ ಇರುವ ಮೀಸಲಾತಿಯ ಆಧಾರದಿಂದ ಲಾ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಳ್ಳುತ್ತಾನೆ. ಓದಿ ಲಾಯರ್ ಆಗಿ ತನ್ನ ಜಾತಿಗೆ ಏನಾದರೂ ಸಹಾಯ ಮಾಡಬೇಕೆಂದು ಅವನ ಹಾಗೂ ಅವನ ಅಮ್ಮನ ಆಸೆ. ವಿಧಿ ಅದೇ ಕಾಲೇಜಿನಲ್ಲಿ ಕಲಿಯುವ ಹುಡುಗಿ. ಮೇಲ್ಜಾತಿಯ ಮುಗ್ಧ ಮನಸ್ಸಿನ ಸ್ನಿಗ್ಧ ಸೌಂದರ್ಯದ ಬುದ್ಧಿವಂತೆ.
ಇಬ್ಬರೂ ಪರಿಚಯವಾಗಿ ಅವರ ಸ್ನೇಹ ಗಾಢವಾಗುತ್ತಾ ಅದರಲ್ಲಿ ಪ್ರೀತಿಯ ಹೂ ಅರಳುತ್ತದೆ. ವಿಧಿ ಮನೆಯಲ್ಲಿ ಅವಳ ತಂದೆ ಹಾಗೂ ಚಿಕ್ಕಪ್ಪ ಇಬ್ಬರೂ ಲಾಯರ್ಸ್. ವಿಧಿಯ ಚಿಕ್ಕಪ್ಪನ ಮಗ ರೋನಿ ಸಹ ಲಾ ಓದುತ್ತಿರುತ್ತಾನೆ. ವಿಧಿಗೆ ತಾಯಿ ಇಲ್ಲ, ಒಬ್ಬ ಅಕ್ಕ ಹಾಗೂ ತಂದೆ ಇರುತ್ತಾರೆ. ವಿಧಿಯ ಚಿಕ್ಕಪ್ಪ ಹಾಗೂ ಚಿಕ್ಕಪ್ಪನ ಮಗ ರೋನಿ ಕಟ್ಟಾ ಸಂಪ್ರದಾಯವಾದಿಗಳು. ಅವರಿಗೆ ತಮ್ಮ ಜಾತಿ ಎಲ್ಲಿಲ್ಲದ ಮೋಹ. ತಮ್ಮ ಜಾತಿಯ ಮೇಲರಿಮೆಗೆ ಅವರು ಯಾವ ಎಲ್ಲೆಯನ್ನು ಮೀರಲೂ ಸಿದ್ಧ. ವಿಧಿ ನೀಲ್ ಜೊತೆ ಆಪ್ತಳಾಗಿ ಇದ್ದಾಳೆಂದು ತಿಳಿದ ಕೂಡಲೇ ವಿಧಿಯ ಮನೆಯಲ್ಲಿ ಯುದ್ಧವೇ ಪ್ರಾರಂಭವಾಗುತ್ತದೆ. ವಿಧಿ ನೀಲ್ ಜೊತೆ ಸೇರಬಾರದು, ಮಾತಾಡಬಾರದು ಎಂಬ ಕಟ್ಟಳೆಗಳು ಶುರುವಾಗುತ್ತದೆ. ರೋನಿಯೂ ಕಾನೂನು ವಿದ್ಯಾರ್ಥಿಯಾದ್ದರಿಂದ ಕಾಲೇಜಿನಲ್ಲಿ ನಡೆಯುವ ಪ್ರತಿಯೊಂದು ವಿಷಯವೂ ಅವನ ಗಮನಕ್ಕೆ ಬಂದಿರುತ್ತದೆ. ತಂಗಿ ಮತ್ತು ನೀಲ್‌ನ ಸ್ನೇಹ ರೋನಿಗೆ ನುಂಗಲಾರದ ಬಿಸಿತುಪ್ಪ. ಈ ಸಿಡಿಮಿಡಿಯನ್ನು ಅವನು ನೀಲ್‌ನನ್ನು ಅವಮಾನಿಸುವ ಮೂಲಕ ತೀರಿಸಿಕೊಳ್ಳುತ್ತಿರುತ್ತಾನೆ. ನೀಲ್‌ನನ್ನು ಅವಮಾನಿಸುವ ಒಂದು ಸಣ್ಣ ಸಂದರ್ಭವನ್ನೂ ರೋನಿ ಬಿಟ್ಟು ಕೊಡುವುದಿಲ್ಲ.
ಈ ಮಧ್ಯೆ ವಿಧಿ ಅಕ್ಕನ ಮದುವೆ ನಿಶ್ಚಯವಾಗುತ್ತದೆ. ಮನೆಯವರ ವಿರೋಧದ ನಡುವೆಯೂ ವಿಧಿ ನೀಲ್‌ನನ್ನು ಮದುವೆಗೆ ಆಹ್ವಾನಿಸುತ್ತಾಳೆ. ವಿಧಿಯ ತಂದೆ ಸರಳ ಮನುಷ್ಯ. ಅವರ ಒಮ್ಮತದಿಂದಲೇ ನೀಲ್‌ನನ್ನು ಆಹ್ವಾನಿಸುತ್ತಾರೆ. ಆದರೆ ವಿಧಿಯ ಚಿಕ್ಕಪ್ಪ ಹಾಗೂ ರೋನಿಗೆ ನೀಲ್ ಮದುವೆಗೆ ಬಂದದ್ದು ಸರಿಯಾಗುವುದಿಲ್ಲ. ಅವರು ನೀಲ್ ಮದುವೆ ಮನೆಯಲ್ಲಿ ಊಟ ಮಾಡುವಾಗ ಅವಮಾನಿಸಿ ಥಳಿಸಿ ಅವನ ಮೇಲೆ ಮೂತ್ರ ವಿಸರ್ಜಿಸಿ, ಚಿತ್ರಹಿಂಸೆ ಕೊಡುತ್ತಾರೆ. ಇದನ್ನು ನೋಡಿ ಗಾಬರಿಯಾದ ವಿಧಿಯ ತಂದೆ ನೀಲ್‌ನನ್ನು ಸಮಾಧಾನಪಡಿಸಿ ಕಳಿಸಿಬಿಡುತ್ತಾನೆ. ಆದರೆ ವಿಧಿಯಿಂದ ದೂರವಿರು ಎಂದು ಹೇಳಲು ಮರೆಯುವುದಿಲ್ಲ. ತಮ್ಮನ ಮಗನಿಗೆ ನೀನು ಮಾಡಿದ್ದು ಸರಿಯಿಲ್ಲ ಎಂದೂ ಹೇಳುತ್ತಾನೆ. ವಿಧಿ ಆ ಸಮಯದಲ್ಲಿ ಆ ಸ್ಥಳದಲ್ಲಿ ಇರುವುದಿಲ್ಲವಾದ್ದರಿಂದ ಅವಳಿಗೆ ಇದೊಂದೂ ಗೊತ್ತಾಗುವುದೇ ಇಲ್ಲ.
ವಿಧಿಯ ಅಣ್ಣನಿಂದ ಅವಮಾನಕ್ಕೊಳಗಾಗಿ ಆಘಾತಗೊಳ್ಳುವ ನೀಲ್ ನಂತರ ವಿಧಿಯೊಡನೆ ಅಂತರ ಕಾಯ್ದುಕೊಳ್ಳುತ್ತಾನೆ. ಆದರೆ ಅವನ ಮನಸ್ಸಿನಲ್ಲಿ ವಿಧಿಯ ಮೇಲಿನ ಪ್ರೀತಿ ಕಡಿಮೆಯಾಗದಿದ್ದರೂ, ಆ ಪ್ರೀತಿಯನ್ನು ಆಳಕ್ಕೆ ತಳ್ಳಿ ತನ್ನ ಹಕ್ಕುಗಳಿಗಾಗಿ ಹೋರಾಡುತ್ತಾನೆ. ತರಗತಿಯಲ್ಲಿ ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳುವ ಬದಲು ಮುಂದಿನ ಬೆಂಚಿಗೆ ಬಂದು ಕೂರುತ್ತಾನೆ. ಆ ಬೆಂಚ್ ರೋನಿ ಕುಳಿತು ಕೊಳ್ಳುವ ಬೆಂಚ್ ಆಗಿರುತ್ತದೆ. ಇದಕ್ಕಾಗಿ ರೋನಿ ಹಾಗೂ ನೀಲ್ ನಡುವೆ ಲಟಾಪಟಿಯಾಗುತ್ತದೆ. ರೋನಿಯ ಅಶಿಸ್ತು, ಅವನ ಒರಟು ನಡವಳಿಕೆ ಕಾಲೇಜ್ ಆಡಳಿತಮಂಡಳಿ ಅವನನ್ನು ಸಸ್ಪೆಂಡ್ ಮಾಡಿಸುತ್ತದೆ. ನೀಲ್‌ಗೆ ಅವನ ತಂದೆಯನ್ನು ಕರೆದು ತರಲು ಹೇಳುತ್ತಾರೆ. ನೀಲ್ ತಂದೆ ಕಾಲೇಜಿಗೆ ಬಂದಾಗ ರೋನಿ ಮತ್ತು ಅವನ ಕಡೆಯವರು ನೀಲ್ ತಂದೆಗೂ ಅವಮಾನ ಮಾಡುತ್ತಾರೆ. ಇದು ನೀಲ್‌ನನ್ನು ಇನ್ನಷ್ಟು ರೊಚ್ಚಿಗೆಬ್ಬಿಸುತ್ತದೆ.
ನೀಲ್‌ನ ಮತ್ತೊಬ್ಬ ಸ್ನೇಹಿತ ಶೇಖರ್ ಅವನದೇ ಜಾತಿಯವನು. ತಮ್ಮ ಜಾತಿಗೆ ಮಾಡುವ ಅವಮಾನದಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದು ನೀಲ್‌ಗೆ ಆಘಾತ ತರುತ್ತದೆ. ರೋನಿ ನೀಲ್‌ನ ಮೇಲೆ ಬೆಳೆಸಿಕೊಳ್ಲುವ ದ್ವೇಷ ಯಾವ ಮಟ್ಟಕ್ಕೆ ಹೋಗುತ್ತದೆಂದರೆ ಶಂಕರ್ ಎಂಬ ಬಾಡಿಗೆ ಕೊಲೆಗಾರನನ್ನು ನೀಲ್ ಹತ್ಯೆ ಮಾಡಲು ನೇಮಿಸಿಕೊಳ್ಳೂತ್ತಾರೆ. ಈ ಶಂಕರ್ ಅಪ್ಪಟ ಜಾತೀಯವಾದಿಯೂ ಹೌದು. ಇವನು ಅಂತರಜಾತೀಯ ಪ್ರೇಮಿಗಳನ್ನು ವಿರೋಧಿಸಿ ಈ ಮೊದಲೇ ಕೆಲವು ಕೊಲೆಗಳನ್ನು ಮಾಡಿರುತ್ತಾನೆ. ತಾನು ಜಾತಿಯನ್ನು ಸ್ವಚ್ಛವಾಗಿಡಲು ಏನು ಬೇಕಾದರೂ ಮಾಡಲು ಸಿದ್ಧ ಎಂದು ಹೇಳುತ್ತಿರುತ್ತಾನೆ.
ಶಂಕರ್ ನೀಲ್‌ನನ್ನು ಅಟ್ಯಾಕ್ ಮಾಡಿದಾಗ ಬಹಳ ಕಷ್ಟದಿಂದ ಅವನಿಂದ ತಪ್ಪಿಸಿಕೊಳ್ಳುವ ನೀಲ್‌ಗೆ ಇದನ್ನು ಮಾಡಿಸಿದವರು ರೋನಿ ಎಂದು ಅರಿವಾಗಿ ರೋನಿಯ ಬೆನ್ನತ್ತುತ್ತಾನೆ. ರೋನಿಯ ಮನೆಯ ಮುಂದೆಯೇ ರೋನಿಯನ್ನು ಹಿಗ್ಗಾಮಗ್ಗಾ ಥಳಿಸುತ್ತಾನೆ. ಅಡ್ಡ ಬರುವ ವಿಧಿ ಹಾಗೂ ಅವಳ ತಂದೆಯನ್ನು ಬೈಯುತ್ತಾನೆ. ತನಗಾದ ಅವಮಾನ ಹಿಂಸೆ ಎಲ್ಲವನ್ನೂ ಕಕ್ಕಿಬಿಡುತ್ತಾನೆ. ಕೊನೆಗೆ ವಿಧಿಗೆ ಆದಿನ ಮದುವೆ ಮನೆಯಲ್ಲಿ ಏನಾಯಿತು ಎಂದೂ ಹೇಳಿ ಬಿಡುತ್ತಾನೆ. ವಿಧಿಗೆ ಆಘಾತವಾತ್ತದೆ. ಅವಳು ತಂದೆಯನ್ನೂ, ಚಿಕ್ಕಪ್ಪನನ್ನೂ ರೋನಿಯನ್ನೂ ಸರಿಯಾಗಿ ತರಾಟೆಗೆ ತೆಗೆದುಕೊಳುತ್ತಾಳೆ. ಅವರೆಲ್ಲರ ಮುಂದೆಯೇ ನೀಲ್‌ನನ್ನು ಅಪ್ಪಿಕೊಳುತ್ತಾಳೆ. ವಿಧಿಯ ತಂದೆ ಈ ಪ್ರೇಮಕ್ಕೆ ತನ್ನ ಒಪ್ಪಿಗೆ ಮುದ್ರೆ ಒತ್ತುತ್ತಾನೆ. ನೀಲ್ ಮತ್ತು ವಿಧಿ ಪ್ರೇಮ ತಡೆಯಿಲ್ಲದೆ ಮುಂದುವರೆಯುತ್ತದೆ. ಆದರೆ ನೀಲ್‌ನನ್ನು ಕೊಲೆ ಮಾಡಲು ಬಂದ ಶಂಕರ್ ತನ್ನ ಪ್ರಯತ್ನ ವಿಫಲವಾದದ್ದಕ್ಕೆ ಅಪಮಾನದಿಂದ ತಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಇಡೀ ಚಿತ್ರ ಸದ್ದಿಲ್ಲದೆ ನೋಡಿಸಿಕೊಂಡು ಹೋಗುತ್ತದೆ. ತೃಪ್ತಿ ಧಿಮ್ರಿ ಮುಂದಿನ ಸ್ಟಾರ್ ನಟಿ ಎಂಬ ಭರವಸೆ ಹುಟ್ಟಿಸುತ್ತಾಳೆ. ಸಿದ್ಧಾಂತ್ ಸಹ ಚೆಂದವಾಗಿ ಅಭಿನಯಿಸಿದ್ದಾನೆ. ಬಾಡಿಗೆ ಕಿಲ್ಲರ್ ಆಗಿ ಅಭಿನಯಿಸಿರುವ ಸೌರಬ್ ಸಚದೇವ್‌ನ ತಣ್ಣನೆಯ ಕ್ರೌರ್ಯ ಚಳಿ ಹುಟ್ಟಿಸುತ್ತದೆ. ಜಾತಿಯ ಹೆಸರಲ್ಲಿ ಇಲ್ಲಿ ಯಾರನ್ನೂ ಟೀಕಿಸಿಲ್ಲ ಹೀಯಾಳಿಸಿಲ್ಲ ಎಂಬುದನ್ನೂ ಗಮನಿಸಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.