
ನಿರೀಕ್ಷೆಗೂ ಮೀರಿ ಮನರಂಜನೆ ಕೊಟ್ಟಿದ್ದ ಕಾಂತಾರ ಸಿನಿಮಾ, ದೇಶ-ವಿದೇಶದಾದ್ಯಂತ ಶಿಳ್ಳೆ-ಚಪ್ಪಾಳೆ ಪಡೆದು ಸಾವಿರಾರು ಕೋಟಿ ಬಾಚಿತ್ತು. ಈಗ ಈ ಕಾಂತಾರವನ್ನು ನೆನಪಿನಲ್ಲಿಟ್ಟುಕೊಂಡು ‘ಕಾಂತಾರ ಚಾಪ್ಟರ್ 1’ ಸಿನಿಮಾವನ್ನು ನೋಡಲೇಬೇಡಿ. ಈ ಎರಡು ಕಾಂತಾರಗಳ ಕಥೆ, ನಿರೂಪಣೆಯ ದಾಟಿ ಎಲ್ಲವೂ ವಿಭಿನ್ನ.
ಬಾಂಗ್ರಾ ರಾಜಮನೆತನ, ಕಾಂತಾರ ನೆಲದವರು, ಕಡಪದವರ ನಡುವೆ ಈ ಸಿನಿಮಾ ಕಥೆ ಸಾಗುತ್ತದೆ. ಇಲ್ಲೊಂದು ಐತಿಹಾಸಿಕ ಕತೆ ಶುರುವಾಗುತ್ತದೆ, ಧರ್ಮ-ಅಧರ್ಮದ ನಡುವೆ ಧರ್ಮ ಗೆಲ್ಲುತ್ತದೆ ಎಂದು ಹೇಳುವ ಪ್ರಯತ್ನ ಮಾಡಲಾಗಿದೆ. ಈ ಸಿನಿಮಾ ನಾಯಕ ಬರ್ಮೆ ಸುತ್ತ ಕಥೆ ಸಾಗುತ್ತದೆ, ಬರ್ಮೆ ಜನನದ ಕಾರಣ, ಶಿವನ ಹೂದೋಟದ ಮೇಲೆ ಕಣ್ಣಿಟ್ಟಿರುವವರಿಗೆ ಏನಾಗುತ್ತದೆ ಎಂದು ಗೊತ್ತಾಗೋಕೆ ಇಡೀ ಸಿನಿಮಾವನ್ನು ನೋಡಬೇಕು. ರಾಜಮನೆತನಕ್ಕೆ ಕಾಂತಾರ ಕಾಡು ಬೇಕು, ಕಾಂತಾರದ ಕಾಡಿನವರಿಗೆ ರಾಜಮನೆತನದ ನೇತೃತ್ವದಲ್ಲಿ ನಡೆಯುವ ವ್ಯಾಪಾರದಲ್ಲಿ ಭಾಗಿ ಆಗಬೇಕು. ಈ ಉದ್ದೇಶದ ಸುತ್ತವೇ ಕಾಂತಾರದ ಕಥೆ ತಿರುಗುತ್ತದೆ. ಗುಳಿಗ, ದೈವಗಳು, ರಾಜಮನೆತನ, ಸಾಂಭಾರು ಪದಾರ್ಥಗಳ ಮಾರಾಟ, ವಿದೇಶಿಗರು, ಬಂದರು, ವ್ಯಾಪಾರ ಎಲ್ಲವನ್ನು ಇಲ್ಲಿ ಹೇಳಲಾಗಿದೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ನಮ್ಮನ್ನು ಕುರ್ಚಿಯಲ್ಲೇ ಕೂರುವಂತೆ ಮಾಡುವುದು. ಇನ್ನೇನು ಕಥೆ ಹೀಗೆ ಹೋಗುತ್ತದೆ ಎಂದು ಭಾವಿಸುವಾಗ ಇನ್ನೊಂದು ಕತೆ, ಟ್ವಿಸ್ಟ್ ಸಿಗುವುದು. ಕನ್ನಡದಲ್ಲಿ ಅದ್ಭುತ ಸೆಟ್ ಹಾಕಿ, ದೊಡ್ಡ ತಾರಾಗಣದ ಜೊತೆಗೆ ದೈವಕ್ಕೆ ಅಪಚಾರ ಆಗದಂತೆ ಸಿನಿಮಾ ಮಾಡುವಲ್ಲಿ ರಿಷಬ್ ಶೆಟ್ಟಿ ಯಶಸ್ವಿಯಾಗಿದ್ದಾರೆ.
ಸಿನಿಮಾ ಶುರುವಾಗಿ ಒಂದಿಷ್ಟು ಸಮಯದ ಬಳಿಕ ರಿಷಬ್ ಶೆಟ್ಟಿ (ಬರ್ಮೆ) ಆಗಮನವಾಗುವುದು. ಈ ಸಿನಿಮಾಕ್ಕೆ ಕಥೆ, ನಿರ್ದೇಶನ ಮಾಡಿಕೊಂಡಿರುವ ರಿಷಬ್ ಶೆಟ್ಟಿ ಬೇರೆ ಸಿನಿಮಾಗಳ ಹೀರೋ ಇಂಟ್ರಡಕ್ಷನ್ ಥರ, ಇಲ್ಲಿ ತಮಗಾಗಿ ವಿಶೇಷ ಎಂಟ್ರಿ ಇಟ್ಟುಕೊಂಡಿಲ್ಲ. ಕಳೆದ ಮೂರು ವರ್ಷಗಳಿಂದ ಕಷ್ಟಪಟ್ಟಿರೋದು ಈ ಸಿನಿಮಾದಲ್ಲಿ ಗೊತ್ತಾಗುವುದು. ಸಾಹಸ ದೃಶ್ಯಗಳಂತೂ ನಿಜಕ್ಕೂ ಚೆನ್ನಾಗಿವೆ, ಅಷ್ಟೇ ಅಲ್ಲದೆ ಗುಳಿಗನ ಅಬ್ಬರವನ್ನು ಥಿಯೇಟರ್‌ನಲ್ಲಿಯೇ ನೋಡಬೇಕು. ಸಾಕಷ್ಟು ವಾವ್ ಎನಿಸುವಂತಹ ಸಾಹಸಮಯ ದೃಶ್ಯಗಳು ಕಾಣುತ್ತವೆ. ಗುಲ್ಶನ್ ದೇವಯ್ಯ ಅವರು ಕುಲಶೇಖರನ ಪಾತ್ರದಲ್ಲಿ ನಟಿಸಿಲ್ಲ, ಜೀವಿಸಿದ್ದಾರೆ. ಅಷ್ಟೇ ಅಲ್ಲದೆ ಮಲಯಾಳಂ ನಟ ಜಯರಾಮ್ ನಟನೆಯನ್ನು ಕೂಡ ಮರೆಯಬಾರದು.
ಇಲ್ಲಿ ರಾಣಿ ಕನಕವತಿಯಾಗಿ ಕಾಣಿಸಿಕೊಂಡಿರೋ ರುಕ್ಮಿಣಿ ವಸಂತ್ ಕಣ್ಣಿನಲ್ಲೇ ಅಭಿನಯ ಮಾಡಿದ್ದಾರೆ. ಅವರು ಇದ್ದಷ್ಟು ಹೊತ್ತು ಸ್ಕ್ರೀನ್ ವೈಭವವಾಗಿ ಕಾಣೋದರಲ್ಲಿ ಎರಡು ಮಾತಿಲ್ಲ. ಈ ಸಿನಿಮಾದಲ್ಲಿ ಕೇವಲ ಹೀರೋಯಿನ್ ಆಗಿಲ್ಲದೆ, ಕಥೆಯ ಭಾಗವೇ ಆಗಿರೋದು ವಿಶೇಷ. ಒಟ್ಟಿನಲ್ಲಿ ರುಕ್ಮಿಣಿ ವಸಂತ್‌ಗೆ ನಿಜಕ್ಕೂ ಅವರ ಭವಿಷ್ಯದ ಕರಿಯರ್ ಉಜ್ವಲವಾಗಲು ಒತ್ತು ಕೊಡುವ ಪಾತ್ರವಿದು.
ಹೃದಯಾಘಾತದಿಂದ ನಿಧನರಾದ ರಾಕೇಶ್ ಪೂಜಾರಿ ಇನ್ನೂ ನಮ್ಮ ನಿಮ್ಮಲ್ಲಿ ಇದ್ದಾರೆ ಎನಿಸುವ ಹಾಗೆ ನಟಿಸಿದ್ದಾರೆ. ರಿಷಬ್ ಶೆಟ್ಟಿ ಈ ಹಿಂದಿನ ಸಿನಿಮಾದಲ್ಲಿರುವ ಕಲಾವಿದರು ಈ ಚಿತ್ರದಲ್ಲಿ ಹಾಜರಿ ಹಾಕಿರೋದಂತೂ ಹೌದು. ರಿಷಬ್ ಶೆಟ್ಟಿ ನಟನೆ, ಅಜನೀಶ್ ಲೋಕನಾಥ್ ಸಂಗೀತ ಕೆಲವು ದೃಶ್ಯಗಳಲ್ಲಿ ಮ್ಯಾಜಿಕ್ ಮಾಡಿದೆ.
ಮೊದಲ ಭಾಗಕ್ಕೆ ಇನ್ನಷ್ಟು ಕತ್ತರಿ ಹಾಕಿ, ಮೊನಚು ಮಾಡಬಹುದಿತ್ತು. ಎರಡನೇ ಭಾಗಕ್ಕಿಂತ ಮೊದಲ ಭಾಗ ಸ್ವಲ್ಪ ತಾಳ್ಮೆ ಪರೀಕ್ಷೆ ಮಾಡುವುದು. ಕಾಂತಾರ ಸಿನಿಮಾ ನೋಡಿ ನಿರೀಕ್ಷೆ ಇಟ್ಟುಕೊಂಡವರಿಗೆ ಇದು ಬೇರೆ ಸಿನಿಮಾವನ್ನು ತೋರಿಸುವುದು. ಆದರೆ ಇದು ಕೂಡ ಕಾಂತಾರವೇ. ಗ್ರಾಫಿಕ್ಸ್ ಅಬ್ಬರ ಜಾಸ್ತಿಯಿದ್ರೂ ಕೂಡ, ಸಿನಿಮಾಕ್ಕೆ ತಕ್ಕಮಟ್ಟಿಗೆ ಹೊಂದಿಕೊಂಡಿದೆ. ಸಾಕಷ್ಟು ಕಡೆ ಲಾಜಿಕ್ ಇಲ್ಲ ಅಂತ ಅನಿಸಿದ್ರೂ ಕೂಡ, ಅಲ್ಲಿ ದೈವದ ಮ್ಯಾಜಿಕ್ ಇದೆ ಎಂದು ನಾವು ಭಾವಿಸಬೇಕು. ಈ ಎಲ್ಲ ಲೋಪ ದೋಷದ ಮಧ್ಯೆ ನಿಜಕ್ಕೂ ಇದು ಒಳ್ಳೆಯ ಪ್ರಯತ್ನ.
ರಿಷಬ್ ಶೆಟ್ಟಿ ಬರ್ಮೆಯಾಗಿ, ರುಕ್ಮಿಣಿ ವಸಂತ್ ಕನಕವತಿಯಾಗಿ ನಟಿಸಿದ್ದಾರೆ. ಅಂದಹಾಗೆ ಕಾಂತಾರ ಸಿನಿಮಾದಲ್ಲಿ ನಟಿಸಿದ ಕೆಲ ಕಲಾವಿದರು ಇಲ್ಲಿಯೂ ಹಾಜರಿ ಹಾಕಿದ್ದಾರೆ. ಅಚ್ಯುತ್ ಕುಮಾರ್ ಅವರು ಕೂಡ ಅತಿಥಿ ಪಾತ್ರ ಮಾಡಿದ್ದಾರೆ.
Rating: 4/5
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.