BOSS Review: 'ಬಾಸ್' ಸಿನಿಮಾದಲ್ಲಿ ಇರೋದು ಯಾವ ಬಾಸ್‌? ಯಾವ ಕ್ರಿಕೆಟಿಗ..? ಕಥೆ ನೋಡಿ ನೀವೇ 'ಡಾಟ್' ಕನೆಕ್ಟ್ ಮಾಡ್ಕೊಳ್ಳಿ!

Published : Aug 07, 2026, 08:21 PM IST
Boss Movie

ಸಾರಾಂಶ

'ಬಾಸ್' ಸಿನಿಮಾ ಕೇವಲ ಮನರಂಜನೆಗಿಂತ ಹೆಚ್ಚಾಗಿ, ಸಮಾಜದಲ್ಲಿ ಸ್ಟಾರ್‌ಡಮ್ ಮತ್ತು ಕಾನೂನಿನ ನಡುವಿನ ಸಂಘರ್ಷವನ್ನು ಬಿಂಬಿಸುತ್ತದೆ. ದೊಡ್ಡ ಸೆಲೆಬ್ರಿಟಿಗಳ ಸುತ್ತ ಫ್ಯಾನ್ಸ್ ಮತ್ತು ವಿವಾದಗಳು ಹೇಗೆ ಸುತ್ತಿಕೊಳ್ಳುತ್ತವೆ ಎಂಬುದಕ್ಕೆ ಈ ಸಿನಿಮಾ ಒಂದು ಕೈಗನ್ನಡಿ. ನಿಜವಾಗಿಯೂ ಬಾಸ್ ಸಿನಿಮಾದಲ್ಲಿ ಏನಿದೆ?

BOSS MOVIE REVIEW:ಬಾಸ್ ಸಿನಿಮಾ ವಿಮರ್ಶೆ: ರಿಯಲ್ ಲೈಫ್ ವಿವಾದಕ್ಕೆ 'ರೀಲ್' ಟಚ್! ಇದು ಬರೀ ಸಿನಿಮಾವಲ್ಲ, ಸುಡುಸುಡುವ ಸುದ್ದಿಯ ದೃಶ್ಯರೂಪ!

ಇತ್ತೀಚೆಗೆ ಸಮಾಜದಲ್ಲಿ ಅತೀ ಹೆಚ್ಚು ಸದ್ದು ಮಾಡಿದ್ದು ಒಂದು ಕೊಲೆ ಕೇಸ್ ಮತ್ತು ಒಬ್ಬ 'ಬಾಸ್'. ಈಗ ಅದೇ ಹೆಸರಿನಲ್ಲಿ ಸಿನಿಮಾ ಬಂದಿದೆ ಎಂದರೆ ಕುತೂಹಲ ಗರಿಗೆದರುವುದು ಸಹಜ. 'ಬಾಸ್' (Boss) ಸಿನಿಮಾ ಇಂದು ತೆರೆಕಂಡಿದೆ. ಇದು ಕೇವಲ ಚಿತ್ರಮಂದಿರಕ್ಕೆ ಬಂದ ಸಿನಿಮಾವಲ್ಲ, ಬದಲಾಗಿ ಕೋರ್ಟ್ ಮೆಟ್ಟಿಲೇರಿ, ವಿವಾದಗಳ ಸುಳಿಯಲ್ಲಿ ಸಿಲುಕಿ, ಕೊನೆಗೆ ಜನರ ಮುಂದೆ ಬಂದಿರುವ ಒಂದು ಹಸಿಬಿಸಿಯ, ಸದ್ಯ ಚಾಲ್ತಿಯಲ್ಲಿರುವ ಕಥೆಯನ್ನು ಹೋಲುತ್ತದೆ ಎನ್ನಲಾಗುತ್ತಿದೆ.

ಸಿನಿಮಾ ಕತೆ ಇದು:-

ಚಿತ್ರದ ನಾಯಕ ತನುಷ್ ಓರ್ವ ಖ್ಯಾತ ಕ್ರಿಕೆಟಿಗ. ಮೈದಾನದಲ್ಲಿ ಬ್ಯಾಟ್ ಬೀಸಿದರೆ ಸಾಕು, ಗ್ಯಾಲರಿಯಲ್ಲಿ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಾರೆ. ಈತನಿಗೆ 'ಬಾಸ್' ಎಂಬ ಬಿರುದು. ಈ ಬಾಸ್‌ಗೆ ಶೀಲಾ ಗೌಡ (ವಂದಿತಾ) ಎಂಬ ಪ್ರೇಯಸಿ. ಎಲ್ಲವೂ ಸರಿಯಾಗಿ ಸಾಗುತ್ತಿರುವಾಗಲೇ ಎಂಟ್ರಿ ಕೊಡುತ್ತಾನೆ ಶಿವಸ್ವಾಮಿ (ಸಂದೀಪ್). ಈತ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುವ ಸಾಮಾನ್ಯ ಯುವಕನಾದರೂ, ಶೀಲಾಗೆ ಅಶ್ಲೀಲ ಸಂದೇಶ ಕಳುಹಿಸಿ ಕಾಟ ಕೊಡಲು ಶುರುಮಾಡುತ್ತಾನೆ. ಇಲ್ಲಿಂದ ಶುರುವಾಗುವುದೇ ಅಸಲಿ ಆಟ!

ತನ್ನ ಪ್ರೇಯಸಿಗೆ ಕಿರುಕುಳ ನೀಡಿದವನನ್ನು ಸುಮ್ಮನೆ ಬಿಡಲು ಸಾಧ್ಯವೇ? ಬಾಸ್‌ನ ಆಪ್ತ ಜೀವನ್ ತನ್ನ ಗ್ಯಾಂಗ್ ಕಟ್ಟಿಕೊಂಡು ಶಿವಸ್ವಾಮಿಯನ್ನು ಕಿಡ್ನಾಪ್ ಮಾಡುತ್ತಾನೆ. ಬೆಂಗಳೂರಿನ ಒಂದು ನಿರ್ಜನ ಶೆಡ್‌ಗೆ ಕರೆತಂದು 'ಬಾಸ್' ಸ್ಟೈಲಿನಲ್ಲಿ ಟ್ರೀಟ್‌ಮೆಂಟ್ ಕೊಡಲಾಗುತ್ತದೆ. ಆದರೆ, ಆ ಹೊಡೆತದ ತೀವ್ರತೆಗೆ ಶಿವಸ್ವಾಮಿ ಪ್ರಾಣ ಬಿಡುತ್ತಾನೆ. ಅಲ್ಲಿಂದ ಮುಂದೆ ಪೊಲೀಸರ ಎಂಟ್ರಿ, ಹೆಣದ ವಿಲೇವಾರಿ, ಬಾಸ್‌ನ ಇಮೇಜ್‌ಗೆ ಬಿದ್ದ ಪೆಟ್ಟು - ಇವೆಲ್ಲವನ್ನೂ ಬೆಳ್ಳಿತೆರೆಯ ಮೇಲೆ ನೋಡಬೇಕು.

ನೋಡುಗನಿಗೆ ಅನಿಸುವುದೇನು?

ಈ ಸಿನಿಮಾ ನೋಡುವಾಗ ಪ್ರೇಕ್ಷಕನಿಗೆ ಸಿನಿಮಾ ನೋಡ್ತಿದ್ದೀನಾ ಅಥವಾ ಟಿವಿ ನ್ಯೂಸ್ ನೋಡ್ತಿದ್ದೀನಾ ಎಂಬ ಗೊಂದಲ ಬರುವುದು ಗ್ಯಾರಂಟಿ. ನಿರ್ದೇಶಕ ಲವ ಅವರು ಚಿತ್ರದ ಪಾತ್ರಗಳಿಗೆ ಕ್ರಿಕೆಟ್ ಹಿನ್ನೆಲೆ ಕೊಟ್ಟಿದ್ದರೂ, ಪ್ರತಿ ದೃಶ್ಯವೂ ಯಾವುದೋ ಪ್ರಕರಣವನ್ನೇ ನೆನಪಿಸುತ್ತದೆ. ಚಿತ್ರದ ಮೊದಲಾರ್ಧ (First Half) ಸಖತ್ ಸ್ಪೀಡ್ ಆಗಿದೆ. ಕಿಡ್ನಾಪ್ ಸೀನ್‌ಗಳು ಮತ್ತು ಶೆಡ್‌ನಲ್ಲಿ ನಡೆಯುವ ಹಲ್ಲೆಯ ದೃಶ್ಯಗಳು ನೋಡುಗರಲ್ಲಿ ನಡುಕ ಹುಟ್ಟಿಸುತ್ತವೆ.

ಆದರೆ, ದ್ವಿತೀಯಾರ್ಧಕ್ಕೆ ಬಂದಾಗ ಸಿನಿಮಾ ಸ್ವಲ್ಪ ಹಳಿತಪ್ಪುತ್ತದೆ. ಈಗಾಗಲೇ ನಾವು ನ್ಯೂಸ್ ಚಾನೆಲ್‌ಗಳಲ್ಲಿ ದಿನಗಟ್ಟಲೆ ನೋಡಿದ ವಿಷಯಗಳನ್ನೇ ಮತ್ತೆ ಸಿನಿಮಾದಲ್ಲಿ ನೋಡುತ್ತಿದ್ದೇವೆ ಅನ್ನಿಸಿ ಬೋರು ಎನಿಸಬಹುದು. ನಿರ್ದೇಶಕರು ಈ ಕಥೆಗೆ ಒಂದು ಹೊಸ ಟ್ವಿಸ್ಟ್ ಅಥವಾ ಕಾಲ್ಪನಿಕ ಅಂತ್ಯ ಕೊಟ್ಟಿದ್ದರೆ ಸಿನಿಮಾ ಇನ್ನು ಅದ್ಭುತವಾಗಿರುತ್ತಿತ್ತು. ಕ್ಲೈಮ್ಯಾಕ್ಸ್‌ನಲ್ಲಿ ಏನೋ ಒಂದು ಕಳೆದುಕೊಂಡ ಭಾವ ಕಾಡುತ್ತದೆ. ಅದರಲ್ಲೂ ಎಐ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿದ ಕೆಲವು ದೃಶ್ಯಗಳು ಅಷ್ಟೇನೂ ಪರಿಣಾಮಕಾರಿಯಾಗಿಲ್ಲ.

ಕಲಾವಿದರ ಪರ್ಫಾಮೆನ್ಸ್:

ನಟ ತನುಷ್ ಶಿವಣ್ಣ ಅವರು ಕಟ್ಟುಮಸ್ತಾದ ದೇಹದೊಂದಿಗೆ 'ಬಾಸ್' ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಂದಿತಾ ಅವರು ಶೀಲಾ ಗೌಡ ಪಾತ್ರದಲ್ಲಿ ಭರವಸೆ ಮೂಡಿಸುತ್ತಾರೆ. ಆದರೆ ಈ ಚಿತ್ರದ ಅಸಲಿ ಹೀರೋ ಎಂದರೆ ಶಿವಸ್ವಾಮಿ ಪಾತ್ರಧಾರಿ ಸಂದೀಪ್ ನೀನಾಸಂ. ಕಿರುಕುಳ ನೀಡುವ ಕಾಮುಕನಾಗಿ ಮತ್ತು ಜೀವಭಯದಲ್ಲಿ ನರಳುವ ಯುವಕನಾಗಿ ಅದ್ಭುತವಾಗಿ ನಟಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ವಿಜೇಶ್ ಲೀ ಅವರ ಗಾಂಭೀರ್ಯ ಮೆಚ್ಚುವಂತಿದೆ.

ಫೈನಲ್ ಒಪಿನಿಯನ್:

'ಬಾಸ್' ಸಿನಿಮಾ ಕೇವಲ ಮನರಂಜನೆಗಿಂತ ಹೆಚ್ಚಾಗಿ, ಸಮಾಜದಲ್ಲಿ ಸ್ಟಾರ್‌ಡಮ್ ಮತ್ತು ಕಾನೂನಿನ ನಡುವಿನ ಸಂಘರ್ಷವನ್ನು ಬಿಂಬಿಸುತ್ತದೆ. ದೊಡ್ಡ ಸೆಲೆಬ್ರಿಟಿಗಳ ಸುತ್ತ ಫ್ಯಾನ್ಸ್ ಮತ್ತು ವಿವಾದಗಳು ಹೇಗೆ ಸುತ್ತಿಕೊಳ್ಳುತ್ತವೆ ಎಂಬುದಕ್ಕೆ ಈ ಸಿನಿಮಾ ಒಂದು ಕೈಗನ್ನಡಿ. ರಿಯಲ್ ಲೈಫ್ ಇನ್ಸಿಡೆಂಟ್‌ಗಳ ಬಗ್ಗೆ ಆಸಕ್ತಿ ಇರುವವರು, ಒಂದು ಕೊಲೆ ಕೇಸ್ ಎಂಬ ಕಲ್ಪನೆಯನ್ನು ದೃಶ್ಯರೂಪದಲ್ಲಿ ನೋಡಲು ಇಚ್ಛಿಸುವವರು ಈ ಸಿನಿಮಾ ನೋಡಬಹುದು. ಒಟ್ಟಾರೆಯಾಗಿ ಹೇಳಬೇಕೆಂದರೆ: ಇದು 'ನ್ಯೂಸ್' ಮತ್ತು 'ಸಿನಿಮಾ' ನಡುವಿನ ಒಂದು ಕುತೂಹಲಕಾರಿ ಪ್ರಯೋಗ! ಇದು ಯಾರ ಕಥೆಗೆ ಸಂಬಂಧಿಸಿದ ಸಿನಿಮಾ ಎಂಬ ನಿರ್ಧಾರ ನಿಮಗೇ ಬಿಟ್ಟಿದ್ದು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜಾಲಿ ಸಿನಿಮಾ ವಿಮರ್ಶೆ: ಹುಡುಗಿಯಲ್ಲಿ ಅಮ್ಮನನ್ನು, ಹುಡುಗನಲ್ಲಿ ತಂದೆಯನ್ನು ಕಂಡ ಪ್ರೀತಿಯ ಕಥೆ!
ಶ್ರೀಮತಿ ಸಿಂಧೂರ ಸಿನಿಮಾ ವಿಮರ್ಶೆ: ಕುಟುಂಬ, ನಂಬಿಕೆ ಮತ್ತು ಹನುಮನ ಶಕ್ತಿಯ ಕಥೆ ಹೇಗಿದೆ?