
ಇದು ದಿವಾನ್ ಎಂಬ ಶ್ರೀಮಂತ ಮನೆತನದ ಏರಿಳಿತಗಳ ಕಥೆ. ರಾಮಾಯಣದ ಕಥೆಯನ್ನು ನೆನಪಿಸುತ್ತದೆ. ಕುಟುಂಬದ ಮಹತ್ವ, ಹೆಣ್ಣಿನ ಶೀಲದ ಪ್ರಶ್ನೆ, ತನ್ನನ್ನು ನಂಬಿದವರನ್ನು ರಕ್ಷಿಸಲು ಸಾವಿರಾರು ಮೈಲಿಗಳಿಂದ ವಾಯುವೇಗದಲ್ಲಿ ಬರುವ ಹನುಮ ಈ ಸಿನಿಮಾದ ಹೈಲೈಟ್.
ಇಂದು (ಪ್ರಿಯಾ ಹೆಗ್ಡೆ) ಹಳ್ಳಿಯ ಮುಗ್ಧ ಹುಡುಗಿ. ದೈವೇಚ್ಛೆಯಂತೆ ದಿವಾನ್ ಎಂಬ ಪ್ರತಿಷ್ಠಿತ ಕುಟುಂಬದ ಏಕೈಕ ಕುಡಿ ಭರತ್ (ವಿಜಯ ರಾಘವೇಂದ್ರ) ಜೊತೆ ಅವಳ ಮದುವೆ ಆಗುತ್ತದೆ. ಆರಂಭದಲ್ಲಿ ಇಂದು ಮತ್ತು ಭರತ್ ಬದುಕು ರೊಮ್ಯಾಂಟಿಕ್ ಆಗಿ ಒಳ್ಳೆಯವರಿಗೆ ಒಳ್ಳೆಯದೇ ಆಗಿ ಲೈಫ್ ಈಸ್ ಬ್ಯೂಟಿಫುಲ್ ಅಂತಿರುತ್ತದೆ. ಆಗ ಶತ್ರು ಬಗಲ್ ಮೆ ಹೈ ಸೀನ್.
ದಿವಾನ್ ಮನೆತನದ ಆಸ್ತಿಗಾಗಿ ಹೊಂಚು ಹಾಕುವ ಭರತ್ ಮಾವ ಕುಬೇರ ರೌಡಿಗಳ ಜೊತೆಗೆ ಸೇರಿ ಭರತ್ ಸಾಂಸಾರಿಕ ಬದುಕಿಗೆ ಹುಳಿ ಹಿಂಡುವ ಕೆಲಸ ಮಾಡುತ್ತಾನೆ. ಭರತ್ ಪತ್ನಿ ಇಂದು ಅಕ್ರಮ ಸಂಬಂಧ ಹೊಂದಿರುವಂತೆ ಬಿಂಬಿಸಿ ಭರತ್‌ನನ್ನು ಆಕೆಯಿಂದ ದೂರ ಮಾಡುತ್ತಾನೆ. ಅಷ್ಟೊತ್ತಿಗೆ ಇಂದು ಗರ್ಭಿಣಿ. ಈಕೆಯ ಬದುಕು ಮುಂದೇನಾಗುತ್ತದೆ, ದಿವಾನ್ ಕುಟುಂಬಕ್ಕೆ ಬಂದ ಸಮಸ್ಯೆ ಬಗೆಹರಿಯುವ ಬಗೆ ಹೇಗೆ ಎನ್ನುವ ಅಂಶ ದ್ವಿತೀಯಾರ್ಧದಲ್ಲಿದೆ.
ಚಿತ್ರ : ಶ್ರೀಮತಿ ಸಿಂಧೂರ
ನಿರ್ದೇಶನ : ಆರ್. ಅನಂತರಾಜು
ತಾರಾಗಣ: ವಿಜಯ ರಾಘವೇಂದ್ರ, ಪ್ರಿಯಾ ಹೆಗ್ಡೆ, ಮಾನಸಿ ಸುಧೀರ್, ಪ್ರಸನ್ನ ಬಾಗಿನ, ಗಣೇಶ್ ರಾವ್
80 - 90ರ ದಶಕದಲ್ಲಿ ಬರುತ್ತಿದ್ದ ಕೌಟುಂಬಿಕ ಸಿನಿಮಾಗಳನ್ನು ನೆನಪಿಸುವ ಕಥೆ. ಚಿತ್ರಕಥೆ, ಸಂಭಾಷಣೆಯಲ್ಲೂ ಆ ಸೊಗಡು ಇದೆ. ರಾಜೇಶ್ ರಾಮನಾಥ್ ಸಂಗೀತ ನೀಡಿರುವ ಹಾಡುಗಳು ಇಂಪಾಗಿವೆ. ಕೊನೆಯಲ್ಲಿ ದೇವರ ಕಥೆಯೂ ಸೇರಿಕೊಂಡು ಸಿನಿಮಾಕ್ಕೆ ಅತಿಮಾನುಷ ಶಕ್ತಿ ಬರುತ್ತದೆ. ಹಳ್ಳಿ ಹುಡುಗಿ ಮುಗ್ಧತೆ ಕೊಂಚ ಹೆಚ್ಚಾಯ್ತೇನೋ, ನಿರ್ದೇಶಕರು ಈ ಕಾಲದಲ್ಲೂ ನಿಂತು ಯೋಚನೆ ಮಾಡಬಹುದಿತ್ತು. ಒಟ್ಟಿನಲ್ಲಿ ಹಿಂದಿನ ಕಾಲದ ಸಾಂಸಾರಿಕ ಕಥೆಗಳ ನೆನಪಿನಲ್ಲಿ ಈ ಚಿತ್ರ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.